Karnataka
oi-Ravindra Gangal
ಬೆಂಗಳೂರು, ಜೂನ್ 24: ಕರ್ನಾಟಕ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಮಾಜಿ ಸಚಿವ ವಿ ಸೋಮಣ್ಣ ಬಹಿರಂಗವಾಗಿಯೇ ಲಾಬಿ ನಡೆಸಿದ್ದಾರೆ. ವಿಧಾನಸಭೆ ಚುನಾವಣೆಯಲ್ಲಿ ಸೋತ ನಂತರ ಬಿಜೆಪಿಯನ್ನು ಬಲಪಡಿಸಲು ನಾನೇ ಸೂಕ್ತ ಎಂದು ಹೇಳಿದ್ದಾರೆ. ಈ ಕುರಿತಾಗಿ ಬಿಜೆಪಿ ರಾಷ್ಟ್ರಾಧ್ಯಕ್ಕ ಜೆಪಿ ನಡ್ಡಾ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಪತ್ರವನ್ನೂ ಬರೆದಿದ್ದಾರೆ.
ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಸ್ಥಾನಕ್ಕೆ ಹಲವರ ಹೆಸರುಗಳು ಹರಿದಾಡುತ್ತಿರುವಾಗಲೇ ಸೋಮಣ್ಣನವರು ಬೇಡಿಕೆ ಇಟ್ಟಿದ್ದು ಭಾರೀ ಚರ್ಚೆಗೆ ಗ್ರಾಸವಾಗಿದೆ. ಇದು ಬಿಜೆಪಿ ರಾಜ್ಯ ನಾಯಕರ ಕಣ್ಣರಳಿಸುವಂತೆ ಮಾಡಿದೆ.
ಈಗಾಗಲೇ ನಳೀನ್ ಕುಮಾರ್ ಕಟೀಲ್ ಅವರು ಸೋಲಿನ ಹೊಣೆ ಹೊತ್ತು ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿರುವುದಾಗಿ ಹೇಳಿದ್ದಾರೆ.
ಈ ಹಿನ್ನೆಲೆಯಲ್ಲಿ ಪಕ್ಷವನ್ನು ಮುನ್ನಡೆಸುವ ಆಕಾಂಕ್ಷೆ ಕುರಿತು ಪಕ್ಷದ ಮುಖಂಡರಿಗೆ ಪತ್ರ ಬರೆದಿರುವುದಾಗಿ ಸೋಮಣ್ಣ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ನನ್ನನ್ನು ಅಧ್ಯಕ್ಷನನ್ನಾಗಿ ಮಾಡಿದ ನಂತರದ ನೂರು ದಿನಗಳಲ್ಲಿ ನನ್ನನ್ನು ಪರೀಕ್ಷಿಸಿ ಎಂದು ವರಿಷ್ಠರಲ್ಲಿ ಕೇಳಿದ್ದೇನೆ. ನಾನು ಪಕ್ಷದ ಕಾರ್ಯಚಟುವಟಿಕೆಯಲ್ಲಿ ವ್ಯಾಪಕವಾದ ಬದಲಾವಣೆಗಳನ್ನು ತರುತ್ತೇನೆ ಎಂಬುದಾಗಿ ನನಗೆ ವಿಶ್ವಾಸವಿದೆ. ವಿಶೇಷವಾಗಿ ಪಕ್ಷದ ಕಾರ್ಯಕರ್ತರಲ್ಲಿ ನೈತಿಕ ಸ್ಥೈರ್ಯ ತುಂಬುವ ಅಗತ್ಯವಿದೆ ಎಂದು ಸೋಮಣ್ಣ ಹೇಳಿದ್ದಾರೆ.
ತಮಗೆ ರಾಜಕಾರಣದಲ್ಲಿ 45 ವರ್ಷಗಳ ಅನುಭವವಿದೆ. ಹಿರಿತನದ ದೃಷ್ಟಿಯಿಂದ ತಮಗೆ ಅಧ್ಯಕ್ಷ ಸ್ಥಾನ ನೀಡಬೇಕೆಂದು ತಿಳಿಸಿದ್ದಾರೆ.
ಈಗಾಗಲೇ ಕೇಳಿಬಂದಿವೆ ಹಲವರ ಹೆಸರು
ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಹಲವರು ಲಾಬಿ ನಡೆಸುತ್ತಿದ್ದಾರೆ. ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಮಾಜಿ ಉಪಮುಖ್ಯಮಂತ್ರಿಗಳಾದ ಆರ್.ಅಶೋಕ, ಡಾ.ಸಿ.ಎನ್.ಅಶ್ವತ್ಥನಾರಾಯಣ್, ಮಾಜಿ ಸಚಿವ ವಿ.ಸುನೀಲ್ ಕುಮಾರ್, ಕೇಂದ್ರದ ಮಾಜಿ ಸಚಿವ ಬಸನಗೌಡ ಪಾಟೀಲ್ ಯತ್ನಾಳ್, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಅವರ ಹೆಸರು ಹೇಳಿಬಂದಿದೆ. ಇವರೊಂದಿಗೆ ಸೋಮಣ್ಣ ಬಹಿರಂಗ ಲಾಬಿ ನಡೆಸಿದ್ದು, ಪಕ್ಷದಲ್ಲಿ ತಳಮಳ ಸೃಷ್ಟಿ ಮಾಡಿದೆ.
‘ಬಲಿಪಶು’ ದಾಳ ಉರುಳಿಸಿದ ಸೋಮಣ್ಣ
ಬಿಜೆಪಿಗೆ ಬಂದು 15 ವರ್ಷಗಳಾದವು. ನಾನು ಪಕ್ಷಕ್ಕಾಗಿ ಅತ್ಯಂತ ಪ್ರಾಮಾಣಿಕತೆಯಿಂದ ಕೆಲಸ ಮಾಡಿದ್ದೇನೆ. ಹೈಕಮಾಂಡ್‌ನ ಆಶಯಗಳನ್ನು ನಾನು ಎಂದಿಗೂ ಕಡೆಗಣಿಸಿಲ್ಲ. ಗೋವಿಂದರಾಜ್‌ನಗರದಿಂದ ವರುಣಾ, ಚಾಮರಾಜನಗರಕ್ಕೆ ಕ್ಷೇತ್ರವನ್ನು ಬದಲಾಯಿಸುವಂತೆ ಅವರು ಕೇಳಿದಾಗಲೂ ನಾನು ಅದನ್ನು ಚಾಚೂ ತಪ್ಪದೇ ನಿರ್ವಹಿಸಿದೆ. ವರುಣಾ ಮತ್ತು ಚಾಮರಾಜನಗರ ಎರಡು ಕಡೆಗೂ ಸೋತೆ. ಈ ಹಿನ್ನೆಲೆಯಲ್ಲಿ ನನಗೆ ರಾಜ್ಯಾಧ್ಯಕ್ಷ ಸ್ಥಾನವನ್ನಾದರೂ ನೀಡಬೇಕು ಎಂದು ಹೇಳಿದ್ದಾರೆ.
ನಾನು ಒಂದು ವೇಳೆ ಅಧ್ಯಕ್ಷನಾದರೆ, 100 ದಿನಗಳಲ್ಲಿ ರಾಜ್ಯದಾದ್ಯಂತ ವಿವಿಧ ಮಠಗಳು, ಲಾಭೋದ್ದೇಶವಿಲ್ಲದವರು ಧಾರ್ಮಿಕ ಮುಖಂಡರನ್ನು ಭೇಟಿ ಮಾಡುತ್ತೇನೆ. ಜೊತೆಗೆ 224 ವಿಧಾನಸಭಾ ಕ್ಷೇತ್ರಗಳಲ್ಲಿ ವ್ಯಾಪಕವಾಗಿ ಪ್ರವಾಸ ಮಾಡುತ್ತೇನೆ ಎಂದು ಸೋಮಣ್ಣ ತಿಳಿಸಿದ್ದಾರೆ.
ಬಿಎಲ್ ಸಂತೋಷ್ ಬಣದಲ್ಲಿ ತಳಮಳ
ರಾಜ್ಯಾಧ್ಯಕ್ಷ ಸ್ಥಾನಕ್ಕೆ ಸೋಮಣ್ಣನವರು ಬಹಿರಂಗವಾಗಿ ಲಾಬಿ ನಡೆಸುತ್ತಿರುವ ಹಿನ್ನೆಲೆಯಲ್ಲಿ ಹಲವು ಚರ್ಚೆಗಳು ಹುಟ್ಟಿಕೊಂಡಿವೆ. ವಿ ಸೋಮಣ್ಣನವರನ್ನು ಕಡೆಗಣಿಸಿದರೆ ಲಿಂಗಾಯತರು ಮತ್ತಷ್ಟು ಕೋಪಗೊಳ್ಳುಬಹುದು ಎಂಬ ಮಾತುಗಳು ಕೇಳಿಬಂದಿವೆ. ಈಗ ರಾಜ್ಯಾಧ್ಯಕ್ಷ ಸ್ಥಾನಕ್ಕಾಗಿ ಲಾಬಿ ನಡೆಸುತ್ತಿರುವವರಲ್ಲಿ ಬಹುತೇಕರು ಬಿಎಲ್ ಸಂತೋಷ್ ಬಣದವರು. ಇದರಿಂದ ಬಿಜೆಪಿಯಲ್ಲಿ ಹಲವು ಮಹತ್ವದ ಬೆಳವಣಿಗೆಗೆ ಕಾರಣವಾಗಿದೆ.
English summary
Why do V Somanna Demanding for BJP State Presidency with High command: Is he playing victim card to gain high command sympathy | Know more at Oneindia Kannada,
Story first published: Saturday, June 24, 2023, 13:21 [IST]