ಬಜೆಟ್ ನಲ್ಲಿ ರಾಜಧಾನಿ ಬೆಂಗಳೂರಿಗೆ ಬಂಪರ್ ಕೊಡಗೆ: ನಮ್ಮ ಮೆಟ್ರೋ ಗೆ ಸಿದ್ದರಾಮಯ್ಯ ನೀಡಿದ್ದೇನು? | Karnataka Budget 2023: Key Highlights for Namma Metro in Kannada

Karnataka

oi-Reshma P

|

Google Oneindia Kannada News

ಬೆಂಗಳೂರು, ಜುಲೈ 07: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ದಾಖಲೆಯ 14ನೇ ಬಜೆಟ್‌ ಅನ್ನು ಮಂಡಿಸಿದ್ದು, ನಮ್ಮ ಮೆಟ್ರೋ ಹಾಗೂ ಇಂದಿರಾ ಕ್ಯಾಂಟೀನ್‌ ಗಳ ಅಭಿವೃದ್ದಿಗೆ ಹೊಸ ಹೊಸ ಯೋಜನೆಯನ್ನ ರೂಪಿಸಿದ್ದಾರೆ.

2022-23ನೇ ಸಾಲಿಗೆ 45,000 ಕೋಟಿ ರೂ.ಗಳ ಅಪೂರ್ಣ ಕಾಮಗಾರಿಗಳ ಮತ್ತು ಬಾಕಿ ಮೊತ್ತದ ಹೊರೆಯನ್ನು ಹಿಂದಿನ ಸರ್ಕಾರ ನಮ್ಮ ಸರ್ಕಾರದ ಮೇಲೆ ಹೊರೆಸಿರುತ್ತದೆ. ಪ್ರಸ್ತುತ ಇರುವ ಆಯವ್ಯಯದ ಮಿತಿಯಲ್ಲಿ ಬಾಕಿ ಹೊರೆಯನ್ನು ತೀರಿಸಲು ಕನಿಷ್ಠ 6-8 ವರ್ಷಗಳ ಕಾಲಾವಕಾಶದ ಅಗತ್ಯತೆ ಇರುತ್ತದೆ. ಇದು ಅವರ ಅಶಿಸ್ತು ಮತ್ತು ಅವಿವೇಚನೆಗೆ ಹಿಡಿದ ಕನ್ನಡಿಯಾಗಿರುತ್ತದೆ. ಆದಾಗ್ಯೂ, ನಮ್ಮ ಸರ್ಕಾರ ನಗರಗಳ ಅಭಿವೃದ್ಧಿಗಾಗಿ ಅಗತ್ಯವಿರುವ ಎಲ್ಲಾ ಕ್ರಮಗಳನ್ನು ಕೈಗೊಳ್ಳಲಿದೆ.

Karnataka Budget 2023

ಬೆಂಗಳೂರು ನಗರದ ಮೂಲಸೌಕರ್ಯ ಅಭಿವೃದ್ಧಿಗಾಗಿ ಅಮೃತ ನಗರೋತ್ಥಾನ, ಹೈಡೆನ್ಸಿಟಿ ಕಾರಿಡಾರ್, ವೈಟ್‌ ಟಾಪಿಂಗ್‌ ರಸ್ತೆ, ತ್ಯಾಜ್ಯ ನಿರ್ವಹಣೆ, ರಾಜಕಾಲುವೆಗಳ ತೆರವು ಮತ್ತು ದುರಸ್ತಿ, ರಸ್ತೆ ಗುಂಡಿ ಮುಚ್ಚುವುದು ಮತ್ತಿತರ ಹಲವಾರು ಪ್ರಗತಿಯಲ್ಲಿರುವ ಯೋಜನೆಗಳಿಗೆ ಪ್ರಸ್ತುತ 12,000 ಕೋಟಿ ರೂ.ಗಳಿಗೂ ಹೆಚ್ಚು ಮೊತ್ತ ವ್ಯಯಿಸಲಾಗುತ್ತಿದೆ. ಇದಲ್ಲದೆ ಸಂಚಾರ ದಟ್ಟಣೆ ನಿವಾರಣೆಗಾಗಿ 30,000 ಕೋಟಿ ರೂ.ಗಳಿಗೂ ಹೆಚ್ಚಿನ ಅಂದಾಜು ವೆಚ್ಚದಲ್ಲಿ ನಮ್ಮ ಮೆಟ್ರೋ ಹಾಗೂ ಬೆಂಗಳೂರು ಉಪನಗರ ರೈಲು ಯೋಜನೆ ಜಾರಿಗೊಳಿಸಲಾಗುತ್ತಿದೆ.

ʻಬ್ರಾಂಡ್‌ ಬೆಂಗಳೂರುʼ ಪರಿಕಲ್ಪನೆಯು ಬೆಂಗಳೂರು ನಗರದ ನಿವಾಸಿಗಳ ಸುರಕ್ಷತೆ ಹಾಗೂ ಅನುಕೂಲವನ್ನು ಕೇಂದ್ರಬಿಂದುವಾಗಿಸಿದೆ. ಈ ಪರಿಕಲ್ಪನೆಯು ನಗರದ ಸಂಚಾರ ವ್ಯವಸ್ಥೆ, ಪರಿಸರ, ಘನತ್ಯಾಜ್ಯ ನಿರ್ವಹಣೆ, ಸಾರ್ವಜನಿಕ ಸ್ಥಳಗಳ ಸದ್ಬಳಕೆ, ಸಾರ್ವಜನಿಕರ ಆರೋಗ್ಯ, ಪ್ರಾಣಿಗಳ ಆರೋಗ್ಯ, ಜನಸ್ನೇಹಿ ಇ-ಆಡಳಿತ, ನೀರಿನ ಭದ್ರತೆ ಹಾಗೂ ಪ್ರವಾಹ ನಿರ್ವಹಣೆ – ಈ ಒಂಬತ್ತು ಸವಾಲುಗಳನ್ನು ಯಶಸ್ವಿಯಾಗಿ ಎದುರಿಸುವ ಮೂಲಕ ಬೆಂಗಳೂರನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ಏರಿಸುವುದು ನಮ್ಮ ಗುರಿಯಾಗಿದೆ.

ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿನ 20 ತ್ಯಾಜ್ಯ ನೀರು ಸಂಸ್ಕರಣಾ ಘಟಕಗಳನ್ನು ಮೇಲ್ದರ್ಜೆಗೇರಿಸಲು 1,411 ಕೋಟಿ ರೂ. ಮೊತ್ತದ ಯೋಜನೆಗಳಿಗೆ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಸ್ವಂತ ಸಂಪನ್ಮೂಲದಿಂದ ಅನುಷ್ಠಾನಗೊಳಿಸಲು ಅನುಮೋದನೆ ನೀಡಿದ್ದು, ಮಾರ್ಚ್‌ 2026 ರೊಳಗೆ ಪೂರ್ಣಗೊಳಿಸಲು ಯೋಜಿಸಲಾಗಿದೆ. ಈ ಯೋಜನೆಗಳ ಮೂಲಕ ಬೆಂಗಳೂರಿನಲ್ಲಿ ಸುಸ್ಥಿರ ಜಲ ಮತ್ತು ಪರಿಸರ ಸಂರಕ್ಷಣೆಯಾಗಲಿದೆ.

Karnataka Budget 2023

ನೈಋತ್ಯ ರೈಲ್ವೇ ಇಲಾಖೆಯವರು ಬೈಯ್ಯಪ್ಪನಹಳ್ಳಿ ಪ್ರದೇಶದಲ್ಲಿ ನಿರ್ಮಿಸಿರುವ ಸರ್‌ ಎಂ.‌ ವಿಶ್ವೇಶ್ವರಯ್ಯ ಟರ್ಮಿನಲ್ ಅನ್ನು ತಲುಪಲು ಸರಿಯಾದ ಮೆಟ್ರೋ ಮತ್ತು ರಸ್ತೆಗಳ ಸಂಪರ್ಕ ಇಲ್ಲದೇ ಇರುವುದರಿಂದ ಲಕ್ಷಾಂತರ ಪ್ರಯಾಣಿಕರಿಗೆ ಅನಾನುಕೂಲ ಹಾಗೂ ಸಂಚಾರ ದಟ್ಟಣೆಗೆ ಕಾರಣವಾಗಿದೆ. ಈ ಸಮಸ್ಯೆಯ ನಿವಾರಣೆಗಾಗಿ 263 ಕೋಟಿ ರೂ.ಗಳ ವೆಚ್ಚದಲ್ಲಿ ಒಂದು ಹೊಸ ಮೇಲ್ಸೇತುವೆಯನ್ನು ನಿರ್ಮಿಸಲಾಗುವುದು.

ಪದೇ ಪದೇ ದುರಸ್ತಿಗೆ ಮರುಕಳಿಸುವ ವೆಚ್ಚವನ್ನು ತಪ್ಪಿಸಲು ನಗರದ ರಸ್ತೆಗಳನ್ನು ವೈಟ್‌ ಟಾಪಿಂಗ್‌ ಮಾಡಲು ಕ್ರಿಯಾ ಯೋಜನೆ ರೂಪಿಸಲಾಗಿದೆ. ನಮ್ಮ ಸರ್ಕಾರದಿಂದ 2016-17 ಮತ್ತು 2017-18ರಲ್ಲಿ ವೈಟ್‌ ಟಾಪಿಂಗ್‌ ರಸ್ತೆಗಳಾಗಿ ಅಭಿವೃದ್ಧಿಪಡಿಸಲಾದ 190 ಕಿ.ಮೀ. ರಸ್ತೆಗಳು ಇಂದಿಗೂ ಅತ್ಯುತ್ತಮ ಸ್ಥಿತಿಯಲ್ಲಿವೆ. ತದನಂತರ, ಹಿಂದಿನ ಸರ್ಕಾರ ಯಾವುದೇ ವೈಟ್‌ ಟಾಪಿಂಗ್‌ ಯೋಜನೆಯನ್ನು ಕೈಗೊಂಡಿರುವುದಿಲ್ಲ. ಈ ಯೋಜನೆಯನ್ನು ಪುನರಾರಂಭಿಸಿ 2023-24ನೇ ಸಾಲಿನಲ್ಲಿ 800 ಕೋಟಿ ರೂ. ವೆಚ್ಚದಲ್ಲಿ 100 ಕಿ.ಮೀ. ಉದ್ದದ ಮುಖ್ಯ ರಸ್ತೆಗಳನ್ನು ವೈಟ್‌ ಟಾಪ್ ರಸ್ತೆಗಳಾಗಿ‌ ಅಭಿವೃದ್ಧಿಪಡಿಸಲಾಗುವುದು.

ಬೆಂಗಳೂರು ನಗರದಲ್ಲಿರುವ ಹೆಚ್ಚಿನ ಸಂಚಾರ ದಟ್ಟಣೆಯನ್ನು ಹೊಂದಿರುವ 192 ಕಿ.ಮೀ. ಉದ್ದದ ವಿವಿಧ 12 ಪ್ರಮುಖ ರಸ್ತೆಗಳನ್ನು ಹೈ ಡೆನ್ಸಿಟಿ ಕಾರಿಡಾರ್‌ಗಳೆಂದು (High Density Corridor) 2016ರಲ್ಲಿ ಗುರುತಿಸಲಾಗಿರುತ್ತದೆ. ಈ ಪೈಕಿ 92 ಕಿ.ಮೀ. ಉದ್ದದ ರಸ್ತೆಗಳನ್ನು ಈಗಾಗಲೇ ಅಭಿವೃದ್ಧಿಪಡಿಸಲಾಗಿದೆ. 2023-24ನೇ ಸಾಲಿನಲ್ಲಿ 83 ಕಿ.ಮೀ. ಉದ್ದದ ರಸ್ತೆಗಳನ್ನು 273 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗುವುದು.

Karnataka Budget 2023

ಬೆಂಗಳೂರು ನಗರದಲ್ಲಿ ಹೆಚ್ಚುತ್ತಿರುವ ಸಂಚಾರ ದಟ್ಟಣೆ ನಿವಾರಣೆಗಾಗಿ ರೂಪಿಸಿರುವ ಬೆಂಗಳೂರು ಪೆರಿಫೆರಲ್‌ ರಿಂಗ್‌ ರಸ್ತೆ ನಿರ್ಮಾಣ ಪ್ರಕ್ರಿಯೆಯು ಕಳೆದ 15 ವರ್ಷಗಳಿಂದ ನೆನೆಗುದಿಗೆ ಬಿದ್ದಿದೆ. ಈ ಯೋಜನೆಗೆ ಎದುರಾದ ತಾಂತ್ರಿಕ ಅಡಚಣೆಗಳನ್ನು ನಿವಾರಿಸಲು ಸರ್ವೋಚ್ಛ ನ್ಯಾಯಾಲಯದಿಂದ ದಿನಾಂಕ: 25.11.2021 ರಂದು ಅನುಮತಿ ದೊರಕಿದೆ. ಇದೀಗ ನಮ್ಮ ಸರ್ಕಾರವು ಎಲ್ಲಾ ಕಾನೂನಾತ್ಮಕ ಸಮಸ್ಯೆಗಳನ್ನು ಬಗೆಹರಿಸಿಕೊಂಡು ತ್ವರಿತವಾಗಿ ಯೋಜನೆಯನ್ನು ಜಾರಿಗೊಳಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು.

ಸುಮಾರು 5.7 ಲಕ್ಷ ಪ್ರಯಾಣಿಕರು ದಿನಂಪ್ರತಿ ಸಂಚರಿಸುವ 70 ಕಿ.ಮೀ. ಉದ್ದದ ಸಂಪರ್ಕ ಜಾಲವನ್ನು ಹೊಂದಿರುವ ನಮ್ಮ ಮೆಟ್ರೋ ರಾಷ್ಟ್ರದಲ್ಲಿಯೇ ಎರಡನೇ ಅತೀ ದೊಡ್ಡ ಮೆಟ್ರೋ ಸೇವೆಯಾಗಿರುತ್ತದೆ. 2024ರ ಅಂತ್ಯದ ವೇಳೆಗೆ ಬೈಯಪ್ಪನಹಳ್ಳಿಯಿಂದ ಕೃಷ್ಣರಾಜಪುರದವರೆಗೆ, ಕೆಂಗೇರಿಯಿಂದ ಚಲ್ಲಘಟ್ಟದವರೆಗೆ, ನಾಗಸಂದ್ರದಿಂದ ಮಾದಾವರದವರೆಗೆ, ಆರ್‌.ವಿ ರಸ್ತೆಯಿಂದ ಬೊಮ್ಮಸಂದ್ರದವರೆಗೆ ಒಟ್ಟು 27 ಕಿ.ಮೀ.ಗಳ ನೂತನ ಮಾರ್ಗಗಳನ್ನು ಪ್ರಾರಂಭಿಸಲಾಗುವುದು. ಮುಂದಿನ ಮೂರು ವರ್ಷಗಳಲ್ಲಿ ಈಗಿರುವ 70 ಕಿ.ಮೀ.ನ ಸಂಪರ್ಕಜಾಲವನ್ನು 176 ಕಿ.ಮೀ.ಗೆ ವಿಸ್ತರಿಸುವ ಮೂಲಕ ಮೆಟ್ರೊ ಕಾರ್ಯಾಚರಣೆಯ ಸಂಪರ್ಕ ಜಾಲವನ್ನು ಎರಡೂವರೆ ಪಟ್ಟು ಹೆಚ್ಚಿಸಲಾಗುವುದು. ಪ್ರಗತಿಯಲ್ಲಿರುವ ಏರ್‌ಪೋರ್ಟ್‌ ಲೈನ್‌ ಕಾಮಗಾರಿಯನ್ನು ಪೂರ್ಣಗೊಳಿಸಿ 2026 ರಲ್ಲಿ ಕಾರ್ಯಾರಂಭ ಮಾಡಲಾಗುವುದು.

ಇದಲ್ಲದೇ, ಮೆಟ್ರೋ 3ನೇ ಹಂತದಡಿ ಅಂದಾಜು 16,328 ಕೋಟಿ ರೂ. ವೆಚ್ಚದಲ್ಲಿ ಕೆಂಪಾಪುರದಿಂದ ಜೆ.ಪಿ. ನಗರ 4ನೇ ಹಂತದವರೆಗಿನ ಮತ್ತು ಹೊಸಹಳ್ಳಿಯಿಂದ ಕಡಬಗೆರೆವರೆಗಿನ ಪಶ್ಚಿಮ ಓ.ಆರ್‌.ಆರ್‌. ಮಾರ್ಗವನ್ನು ಒಳಗೊಳ್ಳುವಂತಹ 45 ಕಿ.ಮೀ. ಉದ್ದದ ಮಾರ್ಗದ ವಿಸ್ತೃತ ಯೋಜನಾ ವರದಿಯನ್ನು ಕೇಂದ್ರ ಸರ್ಕಾರಕ್ಕೆ ಅನುಮೋದನೆಗಾಗಿ ಸಲ್ಲಿಸಲಾಗಿದೆ. ಅಷ್ಟೇ ಅಲ್ಲದೆ, 15,000 ಕೋಟಿ ರೂ. ಅಂದಾಜು ವೆಚ್ಚದ, ಹೆಬ್ಬಾಳದಿಂದ ಸರ್ಜಾಪುರದವರೆಗಿನ 37 ಕಿ.ಮೀ. ಉದ್ದದ ಯೋಜನೆಯನ್ನು ಪ್ರಸಕ್ತ ಸಾಲಿನಲ್ಲಿ ಕೇಂದ್ರ ಸರ್ಕಾರಕ್ಕೆ ಅನುಮೋದನೆಗಾಗಿ ಸಲ್ಲಿಸಲಾಗುವುದು.

 Namma Metro: ಬೆಂಗಳೂರಿಗೆ ಮರಳದ ಕಾರ್ಮಿಕರು: ಮೆಟ್ರೋ ಕಾಮಗಾರಿಗಳಲ್ಲಿ ವಿಳಂಬ- ಕಾರಣವೇನು? ಎಲ್ಲಿ ಅನಾನುಕೂಲ ತಿಳಿಯಿರಿ Namma Metro: ಬೆಂಗಳೂರಿಗೆ ಮರಳದ ಕಾರ್ಮಿಕರು: ಮೆಟ್ರೋ ಕಾಮಗಾರಿಗಳಲ್ಲಿ ವಿಳಂಬ- ಕಾರಣವೇನು? ಎಲ್ಲಿ ಅನಾನುಕೂಲ ತಿಳಿಯಿರಿ

ಬೆಂಗಳೂರು ನಗರದ ಸುಗಮ ಸಂಚಾರಕ್ಕೆ ಪೂರಕವಾಗಿ ರೂಪಿಸಲಾಗಿರುವ ಬೆಂಗಳೂರು ಉಪ ನಗರ ರೈಲು ಯೋಜನೆಯನ್ನು ಜಾರಿಗೊಳಿಸಲು ಡಬಲ್‌ ಇಂಜಿನ್‌ ಎಂದು ಹೇಳಿಕೊಳ್ಳುವ ಹಿಂದಿನ ಸರ್ಕಾರವು ವಿಫಲವಾಗಿದೆ. ಈ ಯೋಜನೆಯ ಒಟ್ಟು ಮೊತ್ತ 15,767 ಕೋಟಿ ರೂ.ಗಳಾಗಿದ್ದು, ಕೇಂದ್ರ ಸರ್ಕಾರದ ಪಾಲು 3,242 ಕೋಟಿ ರೂ.ಗಳು, ರಾಜ್ಯ ಸರ್ಕಾರದ ಪಾಲು 5,087 ಕೋಟಿ ರೂ.ಗಳು ಮತ್ತು ಸಾಲದ (ಬಾಹ್ಯ ಮೂಲಗಳಿಂದ) ಮೊತ್ತ 7,438 ಕೋಟಿ ರೂ.ಗಳಾಗಿರುತ್ತದೆ. ಸದರಿ ಯೋಜನೆಗೆ ಈವರೆಗೂ ಕೇಂದ್ರ ಸರ್ಕಾರವು 500 ಕೋಟಿ ರೂ.ಗಳನ್ನು ಬಿಡುಗಡೆ ಮಾಡಿದ್ದು, ರಾಜ್ಯ ಸರ್ಕಾರದಿಂದ 660 ಕೋಟಿ ರೂ.ಗಳನ್ನು ಬಿಡುಗಡೆ ಮಾಡಲಾಗಿರುತ್ತದೆ. ಪ್ರಸ್ತುತ ಸಾಲಿನಲ್ಲಿ ಈ ಯೋಜನೆಗೆ ರಾಜ್ಯ ಸರ್ಕಾರವು 1,000 ಕೋಟಿ ರೂ.ಗಳನ್ನು ಒದಗಿಸಲಾಗಿದೆ.

English summary

Karnataka Budget 2023 for Namma Metro: Know about Karnataka Budget 2023 Highlights for Namma Metro. Check New reforms & schemes announced for the Namma Metro in Karnataka Budget 2023

Story first published: Friday, July 7, 2023, 19:04 [IST]

Source link