Karnataka
oi-Naveen Kumar N
ಬೆಂಗಳೂರು, ಜೂನ್ 25: ಮಹಿಳೆಯರಿಗೆ ಉಚಿತ ಪ್ರಯಾಣ ನೀಡುವ ಶಕ್ತಿ ಯೋಜನೆ ಜಾರಿಯಾಗಿದ್ದು, ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ಆದರೆ ಮಹಿಳೆಯರ ಜೊತೆ ಸಾರಿಗೆ ಸಿಬ್ಬಂದಿ ಕೆಲವು ಕಡೆ ಅನುಚಿತವಾಗಿ ವರ್ತಿಸುತ್ತಿದ್ದಾರೆ ಎಂದು ವರದಿಯಾದ ನಂತರ ಸಾರಿಗೆ ಇಲಾಖೆ ಎಚ್ಚೆತ್ತಿದ್ದು ಸಿಬ್ಬಂದಿಗೆ ಎಚ್ಚರಿಕೆ ನೀಡಿದೆ.
ಮಹಿಳಾ ಪ್ರಯಾಣಿಕರ ಜೊತೆ ಸೌಜನ್ಯದಿಂದ ವರ್ತಿಸಿ ಎಂದು ಕೆಎಸ್‌ಆರ್‌ಟಿಸಿ ಬಸ್‌ಗಳ ಕಂಡಕ್ಟರ್‌ಗಳು ಮತ್ತು ಚಾಲಕರಿಗೆ ಸೂಚನೆ ನೀಡಿದ್ದು, ಅನುಚಿತವಾಗಿ ವರ್ತಿಸಿದರೆ ಕಠಿಣ ಕ್ರಮ ತೆಗೆದುಕೊಳ್ಳುವುದಾಗಿ ಎಚ್ಚರಿಕೆ ನೀಡಿದೆ.
ಇತ್ತೀಚೆಗೆ ಮಹಿಳಾ ಸಿಬ್ಬಂದಿಯೇ ಮಹಿಳಾ ಪ್ರಯಾಣಿಕರ ಮೇಲೆ ಹಲ್ಲೆ ಮಾಡಿದ್ದ ವಿಡಿಯೋ ಭಾರಿ ವೈರಲ್ ಆಗಿತ್ತು. ಕೆಎಸ್‌ಆರ್ ಟಿಸಿ ಸಿಬ್ಬಂದಿ ಅನುಚಿತವಾಗಿ ವರ್ತಿಸುತ್ತಿದ್ದಾರೆ ಎನ್ನುವ ದೂರುಗಳು ಕೇಳಿಬಂದಿದ್ದವು. ವಿಡಿಯೋ ವೈರಲ್ ಆಗುತ್ತಿದ್ದಂತೆ ಜನಾಕ್ರೋಶ ಕೂಡ ಹೆಚ್ಚಾಗಿತ್ತು ಈಗ ಸಾರಿಗೆ ಇಲಾಖೆ ಈ ಸೂಚನೆ ನೀಡಿದೆ.
ಕೆಎಸ್‌ಆರ್‌ಟಿಸಿ ಮುಚ್ಚುವ ಸ್ಥಿತಿ ನಿರ್ಮಾಣವಾಗಿದೆ: ಸರ್ಕಾರದ ವಿರುದ್ಧ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ವಾಗ್ದಾಳಿ
ರಾಜ್ಯಾದ್ಯಂತ ಹಲವು ಘಟನೆಗಳು ವರದಿ
ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ, ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (ಎನ್‌ಡಬ್ಲ್ಯುಕೆಆರ್‌ಟಿಸಿ) ಬಸ್ ಕಂಡಕ್ಟರ್ ಹುಬ್ಬಳ್ಳಿಯಿಂದ ಬಂದ ಬಸ್‌ನಲ್ಲಿ ವೃದ್ಧ ಮಹಿಳೆಗೆ ಕಪಾಳಮೋಕ್ಷ ಮಾಡಿದ್ದಾರೆ. ಬಸ್ ನಿಗಮದ ಸಿಬ್ಬಂದಿಗಳು ಪ್ರಯಾಣಿಕರೊಂದಿಗೆ ವಾಗ್ವಾದ ಮತ್ತು ವಾಗ್ವಾದಕ್ಕಿಳಿಯುವುದು ಹೊಸದೇನಲ್ಲ, ಶಕ್ತಿ ಯೋಜನೆ ಪ್ರಾರಂಭವಾದ ನಂತರ ಇಂತಹ ಘಟನೆಗಳು ಹೆಚ್ಚಾಗುತ್ತಿವೆ.
ಇತ್ತೀಚೆಗಷ್ಟೇ ತುಮಕೂರಿನ ಕೊರಟಗೆರೆಯ ನಾಗೇನಹಳ್ಳಿ ಗೇಟ್‌ನಿಂದ ಬಸ್ ಹತ್ತಲು ಬಸ್ ನಿಲ್ಲಿಸಲು ಯತ್ನಿಸುತ್ತಿದ್ದ ಮಹಿಳೆಯರ ಗುಂಪಿನ ಮೇಲೆ ಕೆಎಸ್‌ಆರ್‌ಟಿಸಿ ಚಾಲಕನೊಬ್ಬ ಬೆದರಿಸುವ ರೀತಿಯಲ್ಲಿ ಬಸ್ ಚಲಾಯಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಇದರ ಬೆನ್ನಲ್ಲೇ ಚಾಲಕನ ವರ್ತನೆಗೆ ವ್ಯಾಪಕ ಟೀಕೆ ವ್ಯಕ್ತವಾಗಿತ್ತು.
ಇಂತಹ ಘಟನೆಗಳ ವಿರುದ್ಧ ಕೆಎಸ್‌ಆರ್‌ಟಿಸಿ ಕಳೆದ ವಾರ ಸುತ್ತೋಲೆ ಹೊರಡಿಸಿದ್ದು, ಪ್ರಯಾಣಿಕರೊಂದಿಗೆ ಸೌಜನ್ಯದಿಂದ ವರ್ತಿಸದಿದ್ದರೆ ಬಸ್ ಚಾಲಕರು ಮತ್ತು ಕಂಡಕ್ಟರ್‌ಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದೆ.
ಸಿಬ್ಬಂದಿ ತಮ್ಮ ಕೆಲಸವನ್ನು ಸಮರ್ಥವಾಗಿ ನಿರ್ವಹಿಸಬೇಕು ಮತ್ತು ಪ್ರಯಾಣಿಕರಿಗೆ ದೂರುಗಳು ಬರದಂತೆ ನೋಡಿಕೊಳ್ಳಬೇಕು ಎಂದು ಸುತ್ತೋಲೆಯಲ್ಲಿ ಸೂಚಿಸಲಾಗಿದೆ. ಪ್ರತಿ ಬಸ್ ನಿಲ್ದಾಣದಲ್ಲಿ ಬಸ್‌ಗಳನ್ನು ನಿಲ್ಲಿಸುವಂತೆ ಮತ್ತು ಮಹಿಳಾ ಪ್ರಯಾಣಿಕರನ್ನು ತಪ್ಪಿಸದಂತೆ ಸಿಬ್ಬಂದಿಗೆ ಸೂಚಿಸಲಾಗಿದೆ. ವೃದ್ಧೆಗೆ ಕಪಾಳಮೋಕ್ಷ ಮಾಡಿದ ಕಂಡಕ್ಟರ್‌ಗೆ ಶೋಕಾಸ್ ನೋಟಿಸ್ ಜಾರಿ ಮಾಡಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಪ್ರಯಾಣಿಕರು ಕೂಡ ಸಿಬ್ಬಂದಿಗೆ ಸಹಕಾರ ನೀಡಬೇಕು
ಇನ್ನು ಮಹಿಳೆ ಜೊತೆ ಅನುಚಿತವಾಗಿ ವರ್ತಿಸಿದ್ದಾರೆ ಎಂದು ಆರೋಪಿಸಿ ಚಳ್ಳಕೆರೆಯಲ್ಲಿ ಬಸ್ ನಿರ್ವಾಕನನ್ನು ಥಳಿಸಲಾಗಿತ್ತು. ಆದರೆ ಇದಕ್ಕೆ ಸ್ಪಷ್ಟನೆ ನೀಡಿದ್ದ ಸಾರಿಗೆ ಇಲಾಖೆ ಮಹಿಳೆಯೇ ಬಸ್ ನಿರ್ವಾಹಕನ ವಿರುದ್ಧ ಅನುಚಿತವಾಗಿ ವರ್ತಿಸಿದ್ದರು ಎಂದು ಸ್ಪಷ್ಟನೆ ನೀಡಿದೆ. ಪ್ರಯಾಣಿಕರ ಸಂಖ್ಯೆ ಹೆಚ್ಚಳವಾಗಿರುವುದರಿಂದ ಸಿಬ್ಬಂದಿ ಮೇಲಿನ ಒತ್ತಡ ಕೂಡ ಹೆಚ್ಚಾಗಿದ್ದು, ಪ್ರಯಾಣಿಕರು ಕೂಡ ಸಾರಿಗೆ ಸಿಬ್ಬಂದಿ ಜೊತೆ ಶಾಂತಿಯಿಂದ ವರ್ತಿಸಬೇಕಿದೆ.
English summary
Despite clear instructions to conductors and drivers of KSRTC buses to behave courteously with passengers, especially women, there are instances of conductors hitting passengers.
Story first published: Sunday, June 25, 2023, 17:40 [IST]