India
oi-Naveen Kumar N
ಭಾರತದಲ್ಲಿ ಮದುವೆ ಅಂದರೆ ಸಂಭ್ರಮ, ಎರಡು ಕುಟುಂಬಗಳು, ಸಂಬಂಧಿಕರು, ಸ್ನೇಹಿತರು ಒಟ್ಟಾಗಿ ಭಾಗವಹಿಸಿ ನಡೆಸುವ ಸಾಂಪ್ರದಾಯಿಕ ಆಚರಣೆ. ಗಂಡು-ಹೆಣ್ಣು ಗಂಡ-ಹೆಂಡತಿಯಾಗಿ ಜೀವನ ಪೂರ್ತಿ ಜೊತೆಯಾಗಿ ಬಾಳಲು ನಿರ್ಧರಿಸುವ ಮಹತ್ವದ ಸಮಯ. ಹಲವು ಸಂದರ್ಭಗಳಲ್ಲಿ ಕ್ಷುಲ್ಲಕ ಕಾರಣಕ್ಕಾಗಿ ಮದುವೆಗಳು ಮುರಿದು ಬೀಳುವುದನ್ನು ನಾವು ಕೇಳಿದ್ದೇವೆ.
ಕೆಲವು ಘಟನೆಗಳಲ್ಲಿ ಊಟ ಸರಿ ಇಲ್ಲವೆಂದು, ವರ ದಕ್ಷಿಣೆ ಕೊಟ್ಟಿಲ್ಲವೆಂದು, ವರದಕ್ಷಿಣೆ ಕೇಳಿದ್ದಕ್ಕಾಗಿ ಕೂಡ ಮದುವೆಗಳು ಮುರಿದುಬಿದ್ದಿವೆ. ಆದರೆ, ಇಲ್ಲೊಂದು ವಿಚಿತ್ರ ಘಟನೆ ನಡೆದಿದೆ. ಪ್ರಧಾನಿ ಹೆಸರು ಗೊತ್ತಿಲ್ಲದ ಕಾರಣಕ್ಕೆ ಯುವಕನೊಬ್ಬ ಹಸೆಮಣೆ ಏರುವ ಅವಕಾಶ ಕಳೆದುಕೊಂಡಿದ್ದಾರೆ.
ಹೌದು, ಉತ್ತರಪ್ರದೇಶದಲ್ಲಿ ಈ ಘಟನೆ ನಡೆದಿದೆ ಎಂದು ವರದಿಯಾಗಿದೆ. ಮದುವೆಯಾಗುವ ಹುಡುಗನಿಗೆ ಭಾರತದ ಪ್ರಧಾನಿ ಹೆಸರು ಹೇಳಲು ಬರದ ಕಾರಣ ಮದುವೆ ಮುರಿದು ಬಿದ್ದಿದೆ. ಅದೇ ಮುಹೂರ್ತದಲ್ಲಿ ವರನ ತಮ್ಮನ ಜೊತೆ ಹುಡುಗಿ ಸಪ್ತಪದಿ ತುಳಿದಿದ್ದಾಳೆ.
ಏನಿದು ಘಟನೆ? ಆಗಿದ್ದಾದರು ಏನು?
ಉತ್ತರ ಪ್ರದೇಶದ ಗಾಜಿಪುರ ಜಿಲ್ಲೆಯ ಸೈದ್‌ಪುರ ಪೊಲೀಸ್ ಠಾಣೆ ವ್ಯಾಪ್ತಿಯ ನಾಸಿರ್‌ಪುರ ಗ್ರಾಮದಲ್ಲಿ ಜೂನ್ 11 ರಂದು ಈ ಘಟನೆ ನಡೆದಿದೆ. ವರನ ಹೆಸರು ಶಿವಶಂಕರ್, ವಧುವಿನ ಹೆಸರು ರಂಜನಾ. ಆರು ತಿಂಗಳ ಹಿಂದೆ ಇವರಿಬ್ಬರ ಮದುವೆ ನಿಶ್ಚಯವಾಗಿತ್ತು, ಜೂನ್ 11ರಂದು ಇಬ್ಬರ ಮದುವೆ ದಿನಾಂಕ ನಿಗದಿ ಮಾಡಲಾಗಿತ್ತು. ಆರು ತಿಂಗಳಿನಿಂದ ಇಬ್ಬರೂ ಮೊಬೈಲ್‌ನಲ್ಲಿ ಸಾಕಷ್ಟು ಮಾತನಾಡಿಕೊಂಡಿದ್ದಾರೆ. ಜೂನ್ 11ರಂದು ಮದುವೆ ಕಾರ್ಯ ಆರಂಭವಾಗಿದೆ.
ಅಮೆರಿಕಾದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಷಣ ಬಹಿಷ್ಕರಿಸುತ್ತಿರುವ ರಶೀದಾ ತ್ಲೈಬ್ ಮತ್ತು ಇಲ್ಹಾನ್ ಒಮರ್ ಯಾರು?
ಆದರೆ, ಮರುದಿನ ಬೆಳಗ್ಗೆ ಮದುವೆ ಸಂಪ್ರದಾಯ ನಡೆಯುತ್ತಿರುವ ಸಂದರ್ಭದಲ್ಲಿ ಹುಡುಗಿಯ ಅಣ್ಣಂದಿರು, ವರನಿಗೆ ತಮಾಷೆಯಾಗಿ ದೇಶದ ಪ್ರಧಾನಿ ಯಾರು ಎಂದು ಪ್ರಶ್ನೆ ಮಾಡಿದ್ದಾರೆ. ಆದರೆ ವರ ಶಿವಶಂಕರ್ ಅವರ ಪ್ರಶ್ನೆಗೆ ಉತ್ತರ ನೀಡದೆ ತಡಬಡಾಯಿಸಿದ್ದಾನೆ, ಇದರಿಂದ ಅನುಮಾನಗೊಂಡ ಹುಡುಗಿಯ ಅಣ್ಣಂದಿರು ಇನ್ನಷ್ಟು ಪ್ರಶ್ನೆಗಳನ್ನು ಕೇಳಿದ್ದಾರೆ. ಆದರೆ, ಕೊನೆಯದಾಗಿ ವಧು ರಂಜನಾ ಹುಡುಗನನ್ನು ಮಾನಸಿಕ ಅಸ್ವಸ್ಥ ಎಂದು ಕರೆದಿದ್ದಾಳೆ.
ವಧು ತನ್ನ ಮಗನನ್ನು ಮಾನಸಿಕ ಅಸ್ವಸ್ಥ (ಗತಿಮಾನ್) ಎಂದು ಕರೆದಳು, ಮತ್ತು ಕಿರಿಯ ಮಗ (ವರನ ಸಹೋದರ)ನಿಗೆ ಬಂದೂಕು ತೋರಿಸಿ ಬೆದರಿಕೆ ಹಾಕಿ ಮದುವೆ ಮಾಡಿಕೊಂಡರು ಎಂದು ವರ ಶಿವಶಂಕರ್ ತಂದೆ ಆರೋಪಿಸಿದ್ದಾರೆ. ಚಿಕ್ಕ ಮಗನಿಗೆ ಇನ್ನೂ ಮದುವೆ ವಯಸ್ಸು ಕೂಡ ಆಗಿರಲಿಲ್ಲ, ಆದರೂ ವಧು ರಂಜನಾ ಬಲವಂತವಾಗಿ, ಬಂದೂಕು ತೋರಿಸಿ ಬೆದರಿಸಿ ಮದುವೆಯಾಗಿದ್ದಾಳೆ ಎಂದು ಆರೋಪ ಮಾಡಲಾಗಿದೆ.
ಮದುವೆಯನ್ನು ವರನ ಕಡೆಯವರು ಒಪ್ಪಿಕೊಳ್ಳದೇ ಇದ್ದರು, ಹುಡುಗಿಯನ್ನು ಮನೆಗೆ ಕರೆದುಕೊಂಡು ಹೋಗಬೇಕು ಎಂದು ಪೋಷಕರು ವರನ ಮನೆಗೆ ಬಂದು ಒತ್ತಾಯಿಸುತ್ತಿದ್ದಾರೆ ಎಂದು ಬಾಲಕನ ತಂದೆ ಪೊಲೀಸರಿಗೆ ಮನವಿ ಮಾಡಿದ್ದಾರೆ. ಪ್ರಕರಣ ಈಗ ಪೊಲೀಸ್ ಠಾಣೆ ಮೆಟ್ಟಿಲೇರಿದೆ.
English summary
In a peculiar incident during a wedding ceremony in Ghazipur district, Uttar Pradesh, the groom was unable to answer a basic question about the Prime Minister of India. As a result, the bride’s family deemed him mentally unfit and arranged for their daughter to marry the groom’s younger brother instead.
Story first published: Thursday, June 22, 2023, 13:19 [IST]