Karnataka
oi-Shankrappa Parangi
ಬೆಳಗಾವಿ, ಜೂನ್ 25: ವಿಧಾನಸಭೆಯಲ್ಲಿ ಬಿಜೆಪಿಗೆ ಸೋಲಾಗಿರಬಹುದು. ಆದರೆ ಲೋಕಸಭಾ ಚುನಾವಣೆಯೇ ಬೇರೆ. ಹೀಗಾಗಿ ಎದುರಾದ ಸೋಲು ಮರೆತ ನಾಯಕರು, ಕಾರ್ಯಕರ್ತರೆಲ್ಲರೂ ಸೇರಿ 2024ರಲ್ಲಿ ದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಮತ್ತೆ ಗೆಲ್ಲಿಸಲು ಶ್ರಮಿಸೋಣ ಎಂದು ಕಾರ್ಯಕರ್ತರನ್ನು ಉದ್ದೇಶಿಸಿ ಬಸವರಾಜ ಬೊಮ್ಮಾಯಿ ಹೇಳಿದರು.
ಭಾನುವಾರ ಬೆಳಗಾವಿ ನಗರ ಮತ್ತು ಗ್ರಾಮಾಂತರ ಜಿಲ್ಲಾ ಕಾರ್ಯಕರ್ತರ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ಕೇಂದ್ರದಲ್ಲಿ ಮತ್ತೊಮ್ಮೆ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ತರಬೇಕಿದೆ. ಮತ್ತೆ ಮೋದಿಯವರನ್ನು ಪ್ರಧಾನಿ ಮಾಡಲು ಕಾರ್ಯಕರ್ತರು ಸಂಕಲ್ಪ ಮಾಡಬೇಕು. ನರೇಂದ್ರ ಮೋದಿ ಬಂದ ಮೇಲೆ ಸ್ವಚ್ಛ, ದಕ್ಷ ಆಡಳಿತ ನೀಡಿದ್ದಾರೆ.
Anna Bhagya: ಪಡಿತರಿಗೆ ಸಿಹಿ ಸುದ್ದಿ: ರಾಜ್ಯಕ್ಕೆ ಅಕ್ಕಿ ನೀಡಲು 3 ಸಂಸ್ಥೆಗಳ ತಾತ್ವಿಕ ಒಪ್ಪಿಗೆ: 1 ವಾರದಲ್ಲಿ ಸ್ಪಷ್ಟ ಚಿತ್ರಣ
ಬಿಜೆಪಿ ಅಧಿಕಾರದಲ್ಲಿ ದೇಶದಲ್ಲಿ 12 ಕೋಟಿ ಶೌಚಾಲಯ ನಿರ್ಮಾಣಗೊಂಡಿವೆ. ಪ್ರತಿ ಮನೆಗೆ ನೀರು ಕೊಡುವ ಬಗ್ಗೆ ಪ್ರಧಾನಿ ಹೇಳಿದ್ದರು. 40 ಲಕ್ಷ ಮನೆಗಳಿಗೆ ರಾಜ್ಯದಲ್ಲಿ ನೀರು ಕೊಡಲಾಗಿದೆ. ರೈತರು, ವಿದ್ಯಾರ್ಥಿಗಳಿಗೆ ಹಲವು ಕಾರ್ಯ ಮಾಡಿದ್ದೇವೆ. ದೇಶವು ಪ್ರಧಾನಿ ನರೇಂದ್ರ ಮೋದಿ ಆಡಳಿತದಲ್ಲಿ ಸುರಕ್ಷಿತವಾಗಿದೆ. ಪಾಕಿಸ್ತಾನದ ಸೊಕ್ಕು ಅಡಗಿಸಿದ್ದು ಪ್ರಧಾನಿ ನರೇಂದ್ರ ಮೋದಿ ಎಂದು ಸಾಧನೆ ಹೇಳಿಕೊಂಡರು.
ಇತ್ತೀಚೆಗೆ ಪಟ್ನಾದಲ್ಲಿ ನಡೆದ ತೃತೀಯ ರಂಗದ (ಮೈತ್ರಿಕೂಟ/ವಿಪಕ್ಷ) ನಾಯಕರ ಸಭೆಯಲ್ಲಿ ದೇಶದ ಉದ್ಧಾರ ಬಗ್ಗೆ ಚರ್ಚೆಯೇ ಆಗಿಲ್ಲ. ನರೇಂದ್ರ ಮೋದಿಯನ್ನು ಹೇಗೆ ಸೋಲಿಸಬೇಕು. ರಾಹುಲ್ ಗಾಂಧಿಗೆ ಮದುವೆ ಮಾಡುವ ಬಗ್ಗೆ ಚರ್ಚೆ ಆಗಿದೆ. ಪ್ರಧಾನಿ ಮೋದಿ ಸೋಲ್ಲಲ್ಲ, ರಾಹುಲ್ ಗಾಂಧಿ ಮದುವೆ ಆಗಲ್ಲ ಎಂದು ಬೊಮ್ಮಾಯಿ ವ್ಯಂಗ್ಯವಾಡಿದರು.
ಮೋದಿ ಎದುರಿಸಲು ವಿಪಕ್ಷದಲ್ಲಿ ಒಬ್ಬ ನಾಯಕ ಇಲ್ಲ
ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ರಾಜ್ಯದಲ್ಲಿ 25 ಸ್ಥಾನಗಳನ್ನು ಮತ್ತೆ ಗೆಲ್ಲುತ್ತೇವೆ. ಕಾರಣ ವಿರೋಧ ಪಕ್ಷದಲ್ಲಿ ಒಬ್ಬರೂ ಸಹ ಪ್ರಧಾನಿ ವಿರುದ್ಧ ನಿಂತು ಎದುರಿಸುವ ನಾಯಕರಿಲ್ಲ ಎಂದು ಬೊಮ್ಮಾಯಿ ಲೇವಡಿ ಮಾಡಿದರು.
ವಿಧಾನಸಭೆ ಚುನಾವಣೆ ಸೋಲಿಗೆ ನಾನೇ ಹೊಣೆ ಈಗಾಗಲೇ ತಿಳಿಸಿದ್ದೇನೆ. ಪ್ರಾಮಾಣಿಕ ಕೆಲಸ ಮಾಡಿ ಕ್ಷೇತ್ರದ ಅಭಿವೃದ್ಧಿ ಮಾಡಿದ್ದೇವೆ. ಉತ್ತರ ಕರ್ನಾಟಕ ನೀರಾವರಿ ಯೋಜನೆಗಳಿಗೆ ಐದು ಸಾವಿರ ಕೋಟಿ ಅನುದಾನ ಕೊಟ್ಟಿದ್ದೇನೆ. ಕಿತ್ತೂರು ಕರ್ನಾಟಕ ಅಭಿವೃದ್ಧಿ ಮಂಡಳಿ ಸ್ಥಾಪನೆಯ ಘೋಷಣೆ ಮಾಡಿದ್ದೇವೆ. ನಮ್ಮ ಅಭಿವೃದ್ಧಿ ಕಾರ್ಯ ಜನರಿಗೆ ತಲುಪಿಸುವುದರಲ್ಲಿ ನಾವು ವಿಫಲ ಆಗಿದ್ದೇವೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.
ಗ್ಯಾರಂಟಿಗಳಿಂದ ದುಸ್ಥಿತಿ ನಿರ್ಮಾಣ: ಬೊಮ್ಮಾಯಿ ಭವಿಷ್ಯ
ಕಾಂಗ್ರೆಸ್ ಸರ್ಕಾರದ ಆಸೆ, ಆಮಿಷಗಳಿಂದ ಏನಾಗಲಿದೆ ಎಂಬುದು ಗೊತ್ತಾಗಲಿದೆ. KSRTC ಮುಚ್ಚುವ ಸ್ಥಿತಿ ನಿರ್ಮಾಣ ಆಗಿದೆ. ಡಿಸೇಲ್ ಇಲ್ಲದೇ ಬಸ್ ಗಳು ನಿಲ್ಲುವ ಸ್ಥಿತಿ ನಿರ್ಮಾಣ ಆಗಲಿದೆ. ಕರ್ನಾಟಕ ಕತ್ತಲಲ್ಲಿ ಮುಳುಗುವ ಸ್ಥಿತಿ ನಿರ್ಮಾಣ ಆಗಲಿದೆ. ಚುನಾವಣೆಗೆ ಮೊದಲು ಎಲ್ಲವೂ ಫ್ರೀ ಅಂತ ಹೇಳಿ ಗ್ಯಾರಂಟಿಗೆ ಕಂಡಿಷನ್ ಹಾಕಿದ್ದು ಯಾಕೆ? ಒಂದೇ ತಿಂಗಳಲ್ಲಿ ಸರ್ಕಾರ ಜನಪ್ರಿಯತೆ ಕಳೆದು ಕೊಂಡಿದ್ದು ಇದೇ ಮೊದಲು ಎಂದು ಹೇಳಿದರು.
ರಾಜ್ಯದಲ್ಲಿ ಮಳೆ ಇಲ್ಲ, ಜಲಾಶಯಗಳಲ್ಲಿ ನೀರು ಇಲ್ಲ ಈ ಬಗ್ಗೆ ಇವರಿಗೆ ಚಿಂತನೆ ಇಲ್ಲ. ಕೇಂದ್ರ ಸರ್ಕಾರ ಅಕ್ಕಿ ಕೊಟ್ಟಿಲ್ಲ ಎಂದು ಪ್ರತಿಭಟನೆ ಮಾಡಲು ಕಾಂಗ್ರೆಸ್ ನವರಿಗೆ ಯಾವ ನೈತಿಕತೆ ಇದೆ. ಸರ್ಕಾರದಲ್ಲಿದ್ದುಕೊಂಡು ಇವರು ಪ್ರತಿಭಟನೆ ಮಾಡುತ್ತಿದ್ದಾರೆ. ಅಕ್ಕಿ ಖರೀದಿಯಲ್ಲಿ ಹುನ್ನಾರ ಆಗಿದೆ, ಏನಾಗಿದೆ ಎಂಬುದು ನನಗೆ ಗೊತ್ತು.
ಕೆಲವೇ ದಿನಗಳಲ್ಲಿ ಇವರ ಬಣ್ಣ ಬಯಲಾಗಲಿದೆ. ನಮ್ಮ ಸರ್ಕಾರದ ಮೇಲೆ ಗೂಬೆ ಕೂರಿಸುವ ಕೆಲಸ ಮಾಡಿದ್ದರು. ಈಗ ಪರ್ಸೆಂಟೇಜ್ ಫಿಕ್ಸ್ ಆಗುತ್ತಿದೆ. ಯಾವ ಯಾವ ಮಂತ್ರಿ ಗುತ್ತಿಗೆದಾರನಿಗೆ ಕರೆದು ಏನ್ ಹೇಳಿದ್ದಾರೆ ಎನ್ನುವುದು ಗೊತ್ತು. ದೆಹಲಿ ಕಾಂಗ್ರೆಸ್ ನವರಿಗೆ ಈಗ ಕರ್ನಾಟಕ ಎಟಿಎಂ ಆಗಿದೆ. ಎಲ್ಲ ಕಡೆಗಳ ಪರ್ಸಂಟೇಜ್ ಫಿಕ್ಸ್ ಆಗುತ್ತಿವೆ ಎಂದು ಆರೋಪಿಸಿದರು.
ಸುಮಾರು 30 ವರ್ಷಗಳಿಂದ ನಾನು ರಾಜಕಾರಣದಲ್ಲಿ ಇದ್ದೇನೆ. ಯಾರ ಜೊತೆಗೂ ನಾನು ರಾಜೀ ರಾಜಕಾರಣ ಮಾಡಿಲ್ಲ. ಮನೆಗೆ ಬಂದವರನ್ನು ಸ್ವಾಗತ ಮಾಡುವುದು ನಮ್ಮ ಪರಂಪರೆ. ನಾನೇನೂ ಯಾರನ್ನೂ ಮನೆಯೊಳಗಿನ ರೂಂಗೆ ಕರೆದುಕೊಂಡು ಹೋಗಿ ಮಾತನಾಡಿಲ್ಲ. ಕಾಂಗ್ರೆಸ್ ನಾಯಕರು ಜೊತೆಗಿನ ಎಲ್ಲ ಮಾತುಕತೆಗಳು ಬಹಿರಂಗವಾಗಿಯೇ ನಡೆಯುತ್ತವೆ ಎಂದು ಅವರು ಸ್ಪಷ್ಟಪಡಿಸಿದರು.
ಬಿಜೆಪಿಯೇ ನನ್ನ ತಂದೆ-ತಾಯಿ, ಬಿಜೆಪಿ ಕಾರ್ಯಕರ್ತರು ನನ್ನ ಸಹೋದರ-ಸಹೋದರಿಯರು. ನಾನು ಸಿಎಂ ಆಗಿದ್ದಾಗ ಪಕ್ಷ, ಕಾರ್ಯಕರ್ತರ ಆಶಯದಂತೆ ಗೋಹತ್ಯೆ, ಮತಾಂತರ ನಿಷೇಧ ಕಾಯ್ದೆ ಜಾರಿಗೆ ತಂದಿದ್ದೇನೆ. ಸಿಎಂ ಆಗಿದ್ದಾಗ ಕಾರ್ಯಕರ್ತರ ಹಿತ ಕಾದಿದ್ದೇನೆ, ಮುಂದೆಯೂ ಕಾರ್ಯಕರ್ತರ ಹಿತ ಕಾಯುವೆ, ದೇಶ, ಧರ್ಮ ರಕ್ಷಣೆಗೆ ನಾನು ಸದಾ ಜಾಗೃತನಾಗಿ ಕೆಲಸ ಮಾಡುತ್ತೇನೆ ಎಂದು ಹೇಳಿದರು.
English summary
Belagavi: Let’s win the Prime Minister again, there is no leader in the opposition against Modi, slams Basavaraj Bommai.
Story first published: Sunday, June 25, 2023, 19:04 [IST]