ಪ್ರತಿ ತಿಂಗಳು ಸಚಿವರು, ಶಾಸಕರ ಸಭೆ ಕರೆಯುತ್ತೇನೆ, ಸುಳ್ಳಿನ ಕಾರ್ಖಾನೆಗೆ ಬಿಜೆಪಿಗೆ ದಾಳ ಆಗಬೇಡಿ: ಸಿದ್ದರಾಮಯ್ಯ ಎಚ್ಚರಿಕೆ | BJP Is A Factory Of Lies And They Create Lies Said Siddaramaiah

Karnataka

oi-Reshma P

|

Google Oneindia Kannada News

ಬೆಂಗಳೂರು ಜು26: ಬಿಜೆಪಿ ಪರಿವಾರ ಸುಳ್ಳಿನ ಕಾರ್ಖಾನೆ. ಮೊದಲು ಸುಳ್ಳನ್ನು ಸೃಷ್ಟಿಸುತ್ತಾರೆ. ಬಳಿಕ ಆ ಸುಳ್ಳನ್ನು ತಮ್ಮ ಸುಳ್ಳಿನ ಪತಿವಾರದ ಮೂಲಕ ಹರಡಿಸುತ್ತಾರೆ. ಕೊನೆಗೆ ಅದೇ ಸುಳ್ಳಿನ ಮೇಲೆ ಮಾಧ್ಯಮಗಳಲ್ಲಿ ಚರ್ಚೆ ಆಗುವಂತೆ ಮಾಡುತ್ತಾರೆ ಈ ಬಗ್ಗೆ ಎಚ್ಚರದಿಂದಿರಿ ಎಂದು ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಎಚ್ಚರಿಸಿದರು.

ಸುಳ್ಳಿನ ಕಾರ್ಖಾನೆಯ ಕಾರ್ಮಿಕರು ಸುಳ್ಳನ್ನು ಸೃಷ್ಟಿಸಿ, ಅದನ್ನು ಸತ್ಯ ಎನ್ನುವಂತೆ ಬಿಂಬಿಸುತ್ತಾರೆ. ಇದಕ್ಕಾಗಿ ಅವರು ವಿಪರೀತ ಖರ್ಚು ಮಾಡುತ್ತಾರೆ. ಇದನ್ನೆಲ್ಲಾ ನಾವು ಸರಿಯಾಗಿ ಅರ್ಥ ಮಾಡಿಕೊಂಡು ಜವಾಬ್ದಾರಿಯಿಂದ ವರ್ತಿಸಬೇಕು ಸಿದ್ದರಾಮಯ್ಯ ಅವರು ಹೇಳಿದರು.

bjp-is-a-factory-of-lies

ಹೊಸ ಸರ್ಕಾರ ಬಂದ ಬಳಿಕ ನಮ್ಮ ಎದುರಿಗೆ ತಕ್ಷಣಕ್ಕೆ ರಾಜ್ಯದ ಆರ್ಥಿಕತೆಯನ್ನು ಸರಿದಾರಿಗೆ ತರುವ ದೊಡ್ಡ ಜವಾಬ್ದಾರಿ ಇತ್ತು. ಜತೆಗೆ ಆಯವ್ಯಯ ರೂಪಿಸುವ ಹೊಣೆಗಾರಿಕೆಯೂ ಇತ್ತು. ಹಾಗೂ ಹೊಸ ಸರ್ಕಾರವಾದ್ದರಿಂದ ಜಂಟಿ ಅಧಿವೇಶನವನ್ನೂ ಕರೆಯಬೇಕಿತ್ತು. ಹೊಸ ಶಾಸಕರಿಗೂ ತಮ್ಮ ಅಭಿಪ್ರಾಯ, ನಿಲುವನ್ನು ವ್ಯಕ್ತಪಡಿಸಲು ಅವಕಾಶ ಆಗಬೇಕು ಎನ್ನುವ ಕಾರಣದಿಂದ ಮೂರು ವಾರ ಮೊದಲ ಅಧಿವೇಶನವನ್ನು ನಡೆಸಿದೆವು ಎಂದರು.

ಈ ಆಯವ್ಯಯ ಅತ್ಯಂತ ಮಹತ್ವದ್ದಾಗಿತ್ತು. ಐದು ಗ್ಯಾರಂಟಿಗಳನ್ನು ಜಾರಿ ಮಾಡಲು 58 ಸಾವಿರ ಕೋಟಿ ರೂಪಾಯಿ ಬೇಕು ಎಂದು ಅಂದಾಜಿಸಲಾಗಿತ್ತು. ಹೀಗಾಗಿ ಈ ಆಯವ್ಯಯವನ್ನು ಅತ್ಯಂತ ಎಚ್ಚರಿಕೆಯಿಂದ ರೂಪಿಸುವುದಕ್ಕಾಗಿ, ಜತೆಗೆ ಐದು ಗ್ಯಾರಂಟಿಗಳಿಗೆ ಹಣ ಮೀಸಲಿಡುವ ಅಗತ್ಯವೂ ಇತ್ತು. ಆದ್ದರಿಂದ ನಾನೇ ಸ್ವತಃ ಬಜೆಟ್ ಸಿದ್ಧತೆಗೆ ಕೂರುವುದು ಅನಿವಾರ್ಯವಾಗಿತ್ತು. ಈ ಎಲ್ಲಾ ಕಾರಣಗಳಿಂದ ನಾನು ಇತರೆ ಸಂಗತಿಗಳ ಕಡೆಗೆ ಗಮನ ಕೊಡಲು ಸಾಧ್ಯ ಆಗಲಿಲ್ಲ ಎಂದರು.

 ಒಳಮೀಸಲಾತಿ ಜಾರಿಗೊಳಿಸುವುದಾಗಿ ಸುಳ್ಳು ಭರವಸೆ ನೀಡಿದ್ದು ಯಾಕೆ?: ಕೇಂದ್ರಕ್ಕೆ ಸಿದ್ದರಾಮಯ್ಯ ಪ್ರಶ್ನೆ ಒಳಮೀಸಲಾತಿ ಜಾರಿಗೊಳಿಸುವುದಾಗಿ ಸುಳ್ಳು ಭರವಸೆ ನೀಡಿದ್ದು ಯಾಕೆ?: ಕೇಂದ್ರಕ್ಕೆ ಸಿದ್ದರಾಮಯ್ಯ ಪ್ರಶ್ನೆ

ಅಧಿವೇಶನದ ನಡುವೆ ರಾಷ್ಟ್ರ ಮಟ್ಟದ ವಿರೋಧ ಪಕ್ಷಗಳ ನಾಯಕರ ಸಭೆಯನ್ನು ನಡೆಸಿದೆವು. ಈ ಸಭೆ ಮುಗಿಯುತ್ತಿದ್ದಂತೆ ನಮ್ಮ ವರಿಷ್ಠರು ಶಾಸಕರು ಮತ್ತು ಸಚಿವರ ಜತೆ ಸಭೆ ನಡೆಸಲು ತೀರ್ಮಾನಿಸಿದ್ದರು. ಈ ಎರಡೂ ಕಾರಣಗಳಿಂದ ಶಾಸಕಾಂಗ ಸಭೆ ಕರೆಯುವುದು ತಡವಾಗಿದೆ ಎಂದರು.

ಬಿಜೆಪಿಯ ದುರಾಡಳಿತ, ಬೆಲೆ ಏರಿಕೆ, ಹಣದುಬ್ಬರದಿಂದ ನಾಡಿನ ಜನತೆ ಹೈರಾಣಾಗಿ ಅವರ ಬದುಕು ದುಸ್ತರವಾಗಿತ್ತು. ಹೀಗಾಗಿ ಐದು ಗ್ಯಾರಂಟಿಗಳ ಮೂಲಕ ನಾಡಿನ ಜನತೆಯ ಸಂಕಷ್ಟಗಳಿಗೆ ಸ್ಪಂದಿಸಲು ನಾವು ಮುಂದಾದೆವು. ಇಡಿ ದೇಶದಲ್ಲಿ ಇಷ್ಟೊಂದು ದೊಡ್ಡ ಮಟ್ಟದ , ದೊಡ್ಡ ಮೊತ್ತದ ಜನ ಸ್ಪಂದನೆಯ ಯೋಜನೆಗಳನ್ನು ಜಾರಿಗೊಳಿಸಿದ್ದು ನಮ್ಮ ಕಾಂಗ್ರೆಸ್ ಸರ್ಕಾರ.

ನಮ್ಮ ಗ್ಯಾರಂಟಿ ಯೋಜನೆಗಳನ್ನು ನಮ್ಮ ನಾಡಿನ ಶೇ 97 ಕ್ಕೂ ಹೆಚ್ಚು ಮಂದಿ ಸ್ವಾಗತಿಸಿ, ಸಂಭ್ರಮಿಸಿದ್ದಾರೆ. ಸಮಾಧಾನ ಪಟ್ಟಿದ್ದಾರೆ. ಈ ಬಗ್ಗೆ ಮಾಧ್ಯಮಗಳಲ್ಲೆಲ್ಲಾ ವರದಿ ಮಾಡಿವೆ. ಇದು ಪ್ರತಿಯೊಬ್ಬ ಕಾಂಗ್ರೆಸ್ ಶಾಸಕರು, ಕಾರ್ಯಕರ್ತರು, ಬೆಂಬಲಿಗರು ಮತ್ತು ಅಭಿಮಾನಿಗಳು ಎದೆ ಎತ್ತಿ ಹೆಮ್ಮೆ ಪಡುವ ಸಂದರ್ಭ ಎಂದು ಸಂತಸ ವ್ಯಕ್ತಪಡಿಸಿದರು.

ನಮ್ಮ ಐದು ಗ್ಯಾರಂಟಿಗಳು ಎಲ್ಲಾ ಜಾತಿ, ಎಲ್ಲಾ ಧರ್ಮ, ಎಲ್ಲಾ ವರ್ಗಗಳ ಬದುಕಿಗೂ ಸ್ಪಂದಿಸಿವೆ. ಇದು ಬಿಜೆಪಿ ಪರಿವಾರಕ್ಕೆ ನಡುಕ ಹುಟ್ಟಿಸಿದೆ. ಹೀಗಾಗಿ ನಾಡಿನ ಜನರ ಗಮನವನ್ನು ಬೇರೆಡೆಗೆ ಸೆಳೆಯಲು ವಿಪರೀತ ಸುಳ್ಳುಗಳನ್ನು, ನಕಲಿ ವಿಡಿಯೊಗಳನ್ನು ಸೃಷ್ಟಿಸುತ್ತಾರೆ. ಶಾಸಕರೊಬ್ಬರ ಹೆಸರಿನಲ್ಲಿ ನಕಲಿ ಪತ್ರ ಸೃಷ್ಟಿಸಿ, ಸುದ್ದಿ ಮಾಡಿಸಿದ್ದು ಈ ಕುತಂತ್ರದ ಭಾಗವೇ ಆಗಿದೆ.

ಈಗ ಶಾಸಕರೇ ಆ ಪತ್ರ ತಮ್ಮದಲ್ಲ ಎಂದು ಸ್ಪಷ್ಟನೆ ನೀಡಿದ್ದಾಗಿದೆ. ವಿಪರ್ಯಾಸ ಅಂದರೆ ಸತ್ಯ ಏನು ಎಂದು ಗೊತ್ತಾಗುವುದರೊಳಗೆ ಅವರು ಸುಳ್ಳನ್ನು ವ್ಯಾಪಕವಾಗಿ ಹರಡಿದ್ದಾರೆ.ಕರ್ನಾಟಕ ರಾಜ್ಯದ ಜನತೆ ಈ ವಿಧಾನಸಭಾ ಚುನಾವಣೆಯಲ್ಲಿ ನೀಡಿರುವ ತೀರ್ಪು ಇಡಿ ದೇಶದ ರಾಜಕಾರಣಕ್ಕೆ ಗೇಮ್ ಚೇಂಜರ್ ಎನ್ನುವ ವಿಶ್ಲೇಷಣೆಗಳು ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಾಧ್ಯಮಗಳಲ್ಲಿ ವ್ಯಕ್ತವಾಗಿದೆ.

ಹೀಗಾಗಿ ಸುಳ್ಳಿನ‌ ಸರಮಾಲೆಗಳ ಮೂಲಕ ಅವರು ಐದು ಗ್ಯಾರಂಟಿಗಳ ಯಶಸ್ಸು ಮತ್ತು ಜನರ ಗಮನವನ್ನು ಬೇರೆಡೆಗೆ ಸೆಳೆಯುತ್ತಾರೆ. ಈ ಬಗ್ಗೆ ಪ್ರತಿಯೊಬ್ಬ ಶಾಸಕರೂ ಎಚ್ಚರದ ಸ್ಥಿತಿಯಲ್ಲಿದ್ದು ಅವರ ಸುಳ್ಳುಗಳಿಗೆ ನೀವೂ ದಾಳ ಆಗಬೇಡಿ, ಎಂದು ಎಚ್ಚರಿಸಿದರು.

ಶಾಸಕರ ಸಭೆ ನಡೆಸುತ್ತೇನೆ

ಆಡಳಿತಾತ್ಮಕ ಒತ್ತಡಗಳ ನಡುವೆಯೂ ನಾನು ತಿಂಗಳಿಗೊಮ್ಮೆ ಜಿಲ್ಲಾವಾರು ಶಾಸಕರ ಸಭೆ ಕರೆಯುತ್ತೇನೆ. ಕ್ಷೇತ್ರದ ಕುಂದು ಕೊರತೆಗಳ ಬಗ್ಗೆ ಚರ್ಚಿಸುತ್ತೇನೆ. ಸರ್ಕಾರದಿಂದ ತುರ್ತಾಗಿ ಆಗಬೇಕಿರುವ ಕೆಲಸಗಳು ಸಮರ್ಪಕವಾಗಿ ಆಗುವಂತೆ ನೋಡಿಕೊಳ್ಳುತ್ತೇನೆ. ಏನೇ ಅಸಮಾಧಾನಗಳಿದ್ದರೂ ನೇರವಾಗಿ ನನಗೆ ಹೇಳಿ, ಪಕ್ಷದ ವೇದಿಕೆಯಲ್ಲಿ ಚರ್ಚಿಸಿ ಎಂದು ತಿಳಿ ಹೇಳಿದರು.

English summary

Congress Government: Chief Minister Siddaramaiah Said That BJP Is A Factory Of Lies And They Create Lies

Story first published: Thursday, July 27, 2023, 22:29 [IST]

Source link