International
oi-Malathesha M
ಮಾಸ್ಕೋ: ನಿನ್ನೆ ಇಡೀ ಜಗತ್ತು ರಷ್ಯಾ ಕಡೆ ಕಣ್ಣಿಟ್ಟು ಕೂತಿತ್ತು. ದಿಢೀರ್ ಖಾಸಗಿ ಸೇನೆ ತನ್ನ ದೇಶದ ವಿರುದ್ಧವೇ ತಿರುಗಿಬಿದ್ದಿತ್ತು. ರಷ್ಯಾ ಹೊತ್ತಿ ಉರಿಯುವಾಗಲೇ ಪುಟಿನ್ ಶತ್ರು ಪಡೆ ಅಲರ್ಟ್ ಆಗಿ ಹೊಸ ದಾಳ ಉರುಳಿಸಲು ಸಜ್ಜಾಗಿತ್ತು. ಆದ್ರೆ ನೋಡ ನೋಡುತ್ತಲೇ ಎಲ್ಲಾ ಉಲ್ಟಾ ಆಗಿದೆ. ಕ್ರಾಂತಿ ಮಾಡೋದಕ್ಕೆ ಬಂದ ಖಾಸಗಿ ಸೇನೆಯ ಕ್ರಾಂತಿಕಾರಿಗಳು ಸೈಲೆಂಟ್ ಆಗಿ ವಾಪಸ್ ಹೋಗಿದ್ದಾರೆ.
ಉಕ್ರೇನ್ ವಿರುದ್ಧ ಯುದ್ಧ ಸಾರಿರುವ ರಷ್ಯಾಗೆ ಇದು ಮಾಡು ಇಲ್ಲವೆ ಮಡಿ ಹೋರಾಟ. ಹೀಗಾಗಿ ಗೆಲುವಿನ ಮಂತ್ರ ಜಪಿಸುತ್ತಾ ಪುಟಿನ್ ಪಡೆಗಳು ಯುದ್ಧ ಮಾಡುತ್ತಿವೆ. ರಷ್ಯಾದ ಖಾಸಗಿ ಸೇನೆ ಕೂಡ ಯುದ್ಧದಲ್ಲಿ ರಷ್ಯಾ ಪರವಾಗಿ ಹೋರಾಟ ನಡೆಸುತ್ತಿದೆ. ಅದರಲ್ಲೂ ಉಕ್ರೇನ್‌ನ ಹಲವು ನಗರಗಳನ್ನ ವಶಕ್ಕೆ ಪಡೆಯುವಲ್ಲಿ ರಷ್ಯಾ ಸೇನೆಗೆ ಇದೇ ಖಾಸಗಿ ಪಡೆ ಸಹಾಯ ಮಾಡಿತ್ತು. ಆದರೆ ರಷ್ಯಾದ ಖಾಸಗಿ ಸೇನೆಯ ಮುಖ್ಯಸ್ಥ ಯೆವ್ಗೆನಿ ಪ್ರಿಗೊಝಿನ್ ನೇತೃತ್ವದಲ್ಲಿ ನಿನ್ನೆ ದಿಢೀರ್ ದಂಗೆ ಭುಗಿಲೆದಿತ್ತು. ಇನ್ನೇನು ರಷ್ಯಾ ರಾಜಧಾನಿ ಮಾಸ್ಕೋ ರಕ್ತಪಾತಕ್ಕೆ ಸಜ್ಜಾಗಿದೆ ಎನ್ನುವಷ್ಟುರಲ್ಲಿ ಪುಟಿನ್ ಉರುಳಿಸಿದ ಅದೊಂದು ದಾಳ ಇಡೀ ದಂಗೆಯನ್ನೇ ಸೈಲೆಂಟ್ ಮಾಡಿಬಿಟ್ಟಿದೆ. ಹಾಗಾದ್ರೆ ಏನದು ಪುಟಿನ್ ತಂತ್ರ? ಸಂಪೂರ್ಣ ಮಾಹಿತಿ ಇಲ್ಲಿ ತಿಳಿಯಿರಿ (Russia Ukraine War).
ಸಂಕಟ ಬಂದಾಗ ಸಹಾಯಕ್ಕೆ ಬಂದ ಸ್ನೇಹಿತ!
ಹೌದು, ರಷ್ಯಾಗೆ ಮತ್ತೊಮ್ಮೆ ಬೆಲಾರಸ್ ದೇಶ ಸಹಾಯ ಮಾಡಿದೆ. ವ್ಲಾದಿಮಿರ್ ಪುಟಿನ್ ಜೊತೆ ಅತ್ಯುತ್ತಮ ಸಂಬಂಧ ಹೊಂದಿರುವ ಬೆಲಾರಸ್ ಅಧ್ಯಕ್ಷ, ಪುಟಿನ್ ಮಾತನ್ನ ಮೀರಿ ಏನನ್ನೂ ಮಾಡಲ್ಲ. ಕೆಲ ದಿನಗಳ ಹಿಂದಷ್ಟೇ ರಷ್ಯಾ ತನ್ನ ಪಮಾಣು ಅಸ್ತ್ರಗಳನ್ನ ಕೂಡ ಬೆಲಾರಸ್ ಗಡಿಗೆ ಕಳುಹಿಸಿತ್ತು. ಆ ಮೂಲಕ ಉಕ್ರೇನ್ ವಿರುದ್ಧ ಪರಮಾಣು ಯುದ್ಧವನ್ನು ಮಾಡುವ ಬಗ್ಗೆ ಎಚ್ಚರಿಕೆ ನೀಡಿತ್ತು ರಷ್ಯಾ. ಈ ಘಟನೆ ನಡೆದು ಒಂದೆರಡು ವಾರಗಳಲ್ಲೇ ರಷ್ಯಾ ಆಂತರಿಕ ದಂಗೆ ಎದುರಿಸಿತ್ತು. ಪರಿಸ್ಥಿತಿ ಹೀಗಿರುವಾಗಲೇ ಮತ್ತೊಮ್ಮೆ ಬೆಲಾರಸ್‌ನ ಅಧ್ಯಕ್ಷ ಅಲೆಕ್ಸಾಂಡರ್ ಲುಕಾಶೆಂಕೊ, ರಷ್ಯಾ ಅಧ್ಯಕ್ಷ ಪುಟಿನ್ ನೆರವಿಗೆ ಬಂದಿದ್ದಾನೆ. ಈಗ ದಂಗೆ ಎದ್ದಿರುವ ಖಾಸಗಿ ಸೇನೆಗೆ ಬುದ್ಧಿ ಹೇಳಿದ್ದು ಇದೇ ಬೆಲಾರಸ್ ಅಧ್ಯಕ್ಷ!
ರಷ್ಯಾ ಬಿಟ್ಟು ಬೆಲಾರಸ್ ಕಡೆಗೆ ಓಟ!
ಅಂದಹಾಗೆ ರಷ್ಯಾ ಖಾಸಗಿ ಸೇನೆ ಬಹುತೇಕ ಎಲ್ಲಾ ಪ್ರದೇಶಗಳನ್ನೂ ತನ್ನ ವಶಕ್ಕೆ ಪಡೆದು ಭಯ ಹುಟ್ಟಿಸಿತ್ತು. ರಷ್ಯಾ ರಾಜಧಾನಿ ಮಾಸ್ಕೋ ಕೂಡ ಖಾಸಗಿ ಸೇನೆ ವಶಕ್ಕೆ ಹೋಗುವ ಎಲ್ಲಾ ಸಾಧ್ಯತೆ ದಟ್ಟವಾಗಿತ್ತು. ಪರಿಸ್ಥಿತಿ ಹೀಗಿದ್ದಾಗ ಬೆಲಾರಸ್ ಅಧ್ಯಕ್ಷ ಖುದ್ದು ಮುಂದೆ ಬಂದು ಪರಿಸ್ಥಿತಿ ತಣ್ಣಗಾಗಿಸುವ ಮಾತು ಕೊಟ್ಟಿದ್ದ. ಹೀಗೆ ರಷ್ಯಾ ಖಾಸಗಿ ಸೇನೆ ಮುಖ್ಯಸ್ಥ ಯೆವ್ಗೆನಿ ಪ್ರಿಗೊಝಿನ್ ಜೊತೆ ಮಾತುಕತೆ ನಡೆಸಿದ್ದ. ರಷ್ಯಾ ಸೇನೆಯಿಂದ ಜೀವ ಭಯದಲ್ಲಿ ನಲುಗಿದ್ದ ಯೆವ್ಗೆನಿ ಪ್ರಿಗೊಝಿನ್‌ಗೆ ಧೈರ್ಯ ತುಂಬಿದ್ದ. ಕೊನೆಗೆ ಬೇಡಿಕೆ ಮುಂದಿಟ್ಟು, ಆ ಬೇಡಿಕೆಗೆ ರಷ್ಯಾ ಒಪ್ಪಿದ ನಂತರ ಖಾಸಗಿ ಸೇನೆ ಮುಖ್ಯಸ್ಥ ತನ್ನ ಸೈನಿಕರನ್ನೆಲ್ಲಾ ವಾಪಸ್ ಕರೆದಿದ್ದಾನೆ. ಮಾಸ್ಕೋದಿಂದ 200 ಕಿ.ಮೀ. ದೂರದಿಂದಲೇ ತನ್ನ ಖಾಸಗಿ ಸೇನೆ ವಾಪಸ್ ಕರೆಸಿಕೊಂಡಿದ್ದಾನೆ.
ಸೋತು ಗೆದ್ದ ವ್ಲಾದಿಮಿರ್ ಪುಟಿನ್
ಇದಕ್ಕೆ ಅಲ್ವಾ ಹೇಳೋದು ರಾಜತಾಂತ್ರಿಕ ನಡೆ ಅಂತಾ? ಅಂದಹಾಗೆ ರಷ್ಯಾದ ನಿನ್ನೆ ಸ್ಥಿತಿ ನೋಡಿದರೆ ಯಾರೇ ಆಗಲಿ ಭಯ ಪಡುವಂತಿತ್ತು. ಯಾವ ಕ್ಷಣದಲ್ಲಿ ಏನಾಗುತ್ತೋ? ಈ ದಂಗೆ ಇಡೀ ರಷ್ಯಾವನ್ನ ಬಲಿಪಡೆದು ರಕ್ತಪಾತ ಮಾಡುತ್ತಾ? ಅನ್ನೋ ಅನುಮಾನ ಕೂಡ ಕಾಡುತ್ತಿತ್ತು. ಆದ್ರೆ ಪುಟಿನ್ ಮಾತ್ರ ಪ್ಲ್ಯಾನ್ ಬಿ ಸಿದ್ಧಮಾಡಿ ಇಟ್ಟುಕೊಂಡಿದ್ದರು. ಹೀಗಾಗಿ ಮೊದಲು ರಾಜಧಾನಿ ಮಾಸ್ಕೋ ಬಿಟ್ಟು ಹೊರಹೋಗಿ ರಹಸ್ಯ ಸ್ಥಳದಲ್ಲಿ ಸೇನಾಧಿಕಾರಿಗಳ ಸಭೆ ನಡೆಸಿದ್ದರು. ನಂತರ ಬೆಲಾರಸ್ ಅಧ್ಯಕ್ಷನನ್ನ ಮುಂದೆ ಬಿಟ್ಟು, ಖಾಸಗಿ ಸೇನೆಯನ್ನು ಹಿಡಿತಕ್ಕೆ ತಂದರು. ಅಲ್ಲದೆ ಖಾಸಗಿ ಸೇನೆ ಮುಖ್ಯಸ್ಥನ ವಿರುದ್ಧ ಇದ್ದ ತಲೆದಂಡ ಆದೇಶ ಹಿಂಪಡೆದರು. ಹಾಗೇ ರಕ್ಷಣೆಗಾಗಿ ಯೆವ್ಗೆನಿ ಬೆಲಾರಸ್‌ಗೆ ಹೋಗಲು ಅನುಮತಿಸಿ, ಬೀಸುವ ದೊಣ್ಣೆಯಿಂದ ಪಾರಾಗಿದ್ದಾರೆ.
ಖಾಸಗಿ ಫೈಟ್ ಶುರುವಾಗಿದ್ದು ಏಕೆ?
ವ್ಯಾಗ್ನರ್ ಗುಂಪು ಅಥವಾ ರಷ್ಯಾ ಖಾಸಗಿ ಸೈನಿಕ ಪಡೆ ರಷ್ಯಾದ ಸರ್ಕಾರಿ ಸೇನಾ ಪಡೆಯಷ್ಟೇ ಬಲವಾಗಿದೆ. ಪುಟಿನ್‌ರ ಅಧಿಕಾರ ಅವಧಿಯಲ್ಲಿ ಈ ಖಾಸಗಿ ಸೇನೆ ಸ್ಥಾಪನೆ ಆಗಿದ್ದು. ಯೆವ್ಗೆನಿ ಪ್ರಿಗೊಝಿನ್ ಅಂದ್ರೆ ಹಲವು ದಶಕಗಳಿಂದ ವ್ಲಾದಿಮಿರ್ ಪುಟಿನ್ ಜೊತೆಗೇ ಇರುವ ಈ ವ್ಯಕ್ತಿಯೇ ಖಾಸಗಿ ಸೇನೆ ಮುಖ್ಯಸ್ಥ. 2014ರಲ್ಲಿ ಪುಟಿನ್ ಅನುಮತಿ ಪಡೆದು ರಷ್ಯಾದಲ್ಲಿ ಖಾಸಗಿ ಸೇನೆ ಸ್ಥಾಪನೆ ಮಾಡಿದ್ದ. ಆದರೆ ಇತ್ತೀಚೆಗೆ ಉಕ್ರೇನ್ ವಿರುದ್ಧ ಯುದ್ಧದ ವಿಚಾರದಲ್ಲಿ ಪ್ರಿಗೊಝಿನ್ ಮತ್ತು ರಷ್ಯಾ ರಕ್ಷಣಾ ಸಚಿವನ ನಡುವೆ ಫೈಟ್ ಶುರುವಾಗಿತ್ತು. ಈ ಕಿತ್ತಾಟ ಜೋರಾಗಿದ್ದು ಒಬ್ಬರ ಮೇಲೊಬ್ಬರು ಆರೋಪ, ಪ್ರತ್ಯಾರೋಪ ಮಾಡುತ್ತಿದ್ದರು. ಅದರಲ್ಲೂ ಉಕ್ರೇನ್‌ನ ಯುದ್ಧದಲ್ಲಿ ತನ್ನ ಖಾಸಗಿ ಸೇನೆಯ ಸೈನಿಕರು ಸಾಯುತ್ತಿದ್ದಿದ್ದು ಯೆವ್ಗೆನಿ ಪ್ರಿಗೊಝಿನ್ ಪಿತ್ತ ನೆತ್ತಿಗೇರಿಸಿತ್ತು.
ಖಾಸಗಿ ಸೈನಿಕರಿಗೆ ಮೋಸ ಮಾಡಿತ್ತಾ ರಷ್ಯಾ?
ಹೀಗಾಗಿ ದಿನಕ್ಕೊಂದು ವಿಡಿಯೋ ಮಾಡಿ ರಷ್ಯಾ ನಾಯಕರ ವಿರುದ್ಧ ಆಕ್ರೋಶ ಹೊರಹಾಕ್ತಿದ್ದ ಯೆವ್ಗೆನಿ ಪ್ರಿಗೊಝಿನ್. ಇಷ್ಟೆಲ್ಲ ನಡೆದರು ರಷ್ಯಾ ಸೇನೆ ಯೆವ್ಗೆನಿ ಪ್ರಿಗೊಝಿನ್ ಬಗ್ಗೆ ನಿರ್ಲಕ್ಷ್ಯ ಮಾಡಿತ್ತು. ರಷ್ಯಾ ಸೇನೆ ಅಧಿಕಾರಿಗಳು ಖಾಸಗಿ ಸೇನೆಗೆ ಸರಿಯಾಗಿ ಬುಲೆಟ್, ಬಾಂಬ್ ಸಪ್ಲೈ ಮಾಡ್ತಿಲ್ಲ. ಸೂಕ್ತ ಸೌಲಭ್ಯ ಸಿಗದೆ ವ್ಯಾಗ್ನರ್ ಗುಂಪು ಅಥವಾ ಖಾಸಗಿ ಸೈನಿಕರು ಯುದ್ಧದಲ್ಲಿ ಸಾಯುತ್ತಿದ್ದಾರೆ. ಇಷ್ಟಾದರೂ ರಷ್ಯಾ ತಲೆಕೆಡಿಸಿಕೊಂಡಿಲ್ಲ ಅನ್ನೋ ಆರೋಪ ಮಾಡುತ್ತಿದ್ದ ಯೆವ್ಗೆನಿ ಪ್ರಿಗೊಝಿನ್. ಇದು ಸಾಲದು ಎಂಬಂತೆ ಮೊನ್ನೆ ಮೊನ್ನೆ ಬೇಕು ಅಂತಲೇ ರಷ್ಯಾದ ಸೇನೆ, ಖಾಸಗಿ ಸೈನಿಕರ ಮೇಲೆ ಮಿಸೈಲ್ ದಾಳಿ ಮಾಡಿದೆ ಅನ್ನೋ ಆರೋಪ ಮಾಡಿದ್ದ. ಕ್ಷಿಪಣಿ ದಾಳಿಯಲ್ಲಿ ಹಲವು ಖಾಸಗಿ ಸೈನಿಕರು ಸತ್ತ ನಂತರ ದಂಗೆ ಎದ್ದು ತನ್ನ ದೇಶದ ಒಳಗೆ ನುಗ್ಗಿದ್ದ.
ಒಟ್ನಲ್ಲಿ ಏನೆಲ್ಲಾ ನಡೆದರೂ ವ್ಲಾದಿಮಿರ್ ಪುಟಿನ್ ಸೇಫ್ ಆಗಿದ್ದಾರೆ. ಅದರಲ್ಲೂ ರಷ್ಯಾ ಖಾಸಗಿ ಸೇನೆಯನ್ನ ಸಮಾಧಾನ ಮಾಡಲು ಪುಟಿನ್ ರಣತಂತ್ರ ಬಳಸಿದ್ದಾರೆ. ಬೆಲಾರಸ್ ಅಧ್ಯಕ್ಷ ಮತ್ತೊಮ್ಮೆ ತನ್ನ ಪುಟಿನ್ ಪರ ಪ್ರೀತಿ ತೋರಿಸಿದ್ದಾರೆ. ಹಾಗೇ ರಷ್ಯಾದಲ್ಲಿ ದಂಗೆ ಎದ್ದು, ಏನೋ ಆಗಿಬಿಡುತ್ತೆ ಅಂತಾ ಕಾಯುತ್ತಿದ್ದ ಶತ್ರುಗಳಿಗೂ ಶಾಕ್ ಸಿಕ್ಕಿದೆ. ಬಹುತೇಕ ಖಾಸಗಿ ಸೇನೆ ರಷ್ಯಾ ಬಿಟ್ಟು ಹೊರಹೋಗಿದೆ ಎನ್ನಲಾಗುತ್ತಿದೆ. ಮತ್ತೊಂದ್ಕಡೆ ಈ ಘಟನೆ ರಷ್ಯಾ ಸೇನೆಗೂ ಪಾಠ ಕಲಿಸಿದ್ದು, ಈ ಮೂಲಕ ಉಕ್ರೇನ್ ವಿರುದ್ಧ ಪುಟಿನ್ ಬೇರೊಂದು ತಂತ್ರಕ್ಕೆ ಮುಂದಾಗಿರುವ ಮಾತು ಕೇಳಿಬರುತ್ತಿದೆ.
English summary
Vladimir Putin succeeded to take control on Wagner group coup.
Story first published: Sunday, June 25, 2023, 13:00 [IST]