International
oi-Malathesha M
ಇಸ್ಲಾಮಾಬಾದ್: ಪಾಕಿಸ್ತಾನದಲ್ಲಿ ಪ್ರಜಾಪ್ರಭುತ್ವ ಇದ್ದರೂ ಹೆಸರಿಗೆ ಮಾತ್ರ ಎನ್ನುವಂತಾಗಿದೆ. ಏಕೆಂದರೆ ಅಲ್ಲಿ ಪಾಕಿಸ್ತಾನ ಸೇನೆಯದ್ದೇ ಆಟ, ಅದನ್ನ ಬಿಟ್ಟು ಐಎಸ್ಐ ಮಾಡಿಸಿದ್ದೇ ರೂಲ್ಸ್ ಎನ್ನುವ ಆರೋಪ ಇದೆ. ಆರೋಪಕ್ಕೆ ಬಲ ನೀಡುವಂತೆ ಪಾಕಿಸ್ತಾನದ ರಾಜಕಾರಣಿಗಳು ಕೂಡ ವರ್ತಿಸುತ್ತಿದ್ದಾರೆ. ಭ್ರಷ್ಟಾಚಾರದ ಪ್ರಕರಣದಲ್ಲಿ ಬಚಾವ್ ಆಗಲು ಪಾಕ್ ಸರ್ಕಾರ ಮಾಡಿದ್ದು ಏನು ಗೊತ್ತಾ? ಮುಂದೆ ಓದಿ.
ಅಂದಹಾಗೆ ಚುನಾಯಿತ ಸದಸ್ಯರ ಅನರ್ಹತೆ ಅವಧಿಯನ್ನು ಗರಿಷ್ಠ 5 ವರ್ಷಕ್ಕೆ ಸೀಮಿತಗೊಳಿಸುವ ಮಸೂದೆ ಪಾಕಿಸ್ತಾನ ಸಂಸತ್ ಅಂಗೀಕರಿಸಿದೆ. ಈ ಮೂಲಕ ಯಾವುದೇ ಜನಪ್ರತಿನಿಧಿ ಅಥವಾ ರಾಜಕಾರಣಿಯನ್ನ ಜೀವಿತಾವಧಿವರೆಗೂ ಅನರ್ಹ ಮಾಡಲು ಅವಕಾಶ ಇರುವುದಿಲ್ಲ. ‘ಕೋರ್ಟ್ ತೀರ್ಪಿನ ಪ್ರಕಾರ ಜನಪ್ರತಿನಿಧಿ ಅನರ್ಹಗೊಂಡಲ್ಲಿ, ತೀರ್ಪು ಪ್ರಕಟವಾದ ದಿನದಿಂದ ಒಟ್ಟಾರೆ 5 ವರ್ಷಕ್ಕೆ ಅನರ್ಹತೆ ಅನ್ವಯಿಸಲಿದೆ. ಕಾಯ್ದೆ ಪ್ರಕಾರ ಅನರ್ಹತೆ ಅವಧಿ ಐದು ವರ್ಷಗಳನ್ನು ಮೀರುವಂತಿಲ್ಲ’ ಎಂದು ಹೊಸ ಮಸೂದೆ ತರಲಾಗಿದೆ. ಈ ಮೂಲಕ ಪಾಕಿಸ್ತಾನದಲ್ಲಿ ಮುಂದೆ ಭ್ರಷ್ಟ ರಾಜಕಾರಣಿಗಳನ್ನ ರಕ್ಷಿಸಲು ಹುನ್ನಾರ ನಡೆದಿದೆ ಎಂಬ ಆರೋಪ ಕೇಳಿಬಂದಿದೆ.
ಇಮ್ರಾನ್ ಖಾನ್ ವಿರುದ್ಧ ಮತ್ತೆ ಮಸಲತ್ತು?
ಹೌದು, ಈಗಾಗಲೇ ಇಮ್ರಾನ್ ಖಾನ್ ವಿರುದ್ಧ ನೂರಾರು ಕೇಸ್ ಇವೆ. ಇದರಲ್ಲಿ ಭ್ರಷ್ಟಾಚಾರ ಪ್ರಕರಣ ಕೂಡ ಇವೆ. ಆದರೆ ಇದೀಗ ಪರೋಕ್ಷವಾಗಿ ಇಮ್ರಾನ್ ವಿರುದ್ಧ ಮಸಲತ್ತು ಮಾಡಲು ಈ ರೀತಿಯ ಕಾನೂನು ತಿದ್ದುಪಡಿ ತರಲಾಗಿದೆ ಅನ್ನೋ ಆರೋಪ ಕೇಳಿಬಂದಿದೆ. ಹೇಗೆಂದರೆ ಸದ್ಯಕ್ಕೆ ಲಂಡನ್ನಲ್ಲಿ ಇರುವ ಮಾಜಿ ಪ್ರಧಾನಿ ನವಾಜ್ ಷರೀಫ್ ದೇಶಕ್ಕೆ ಹಿಂದಿರುಗಿ ಚುನಾವಣೆಯ ಪ್ರಕ್ರಿಯೆಯಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸುವುದು ಹೊಸ ಮಸೂದೆ ಉದ್ದೇಶ. ಈ ಕಾರಣಕ್ಕೆ ಹಾಲಿ ಸರ್ಕಾರ ಇಮ್ರಾನ್ ವಿರುದ್ಧ ಮಸಲತ್ತು ಮಾಡಿದೆ ಎಂದು ವಿರೋಧಪಕ್ಷಗಳು ಟೀಕಿಸಿವೆ.
ಸುಪ್ರೀಂಕೋರ್ಟ್ ಆದೇಶಕ್ಕೂ ಬೆಲೆ ಇಲ್ವಾ?
ಪಾಕಿಸ್ತಾನದಲ್ಲಿ ಅರಾಜಕತೆ ಮುಗಿಲು ಮುಟ್ಟಿದೆ. ಅದ್ರಲ್ಲೂ ನವಾಜ್ ಷರೀಫ್ ವಿರುದ್ಧ ಐವರು ಸದಸ್ಯರ ಸುಪ್ರೀಂಕೋರ್ಟ್ ಪೀಠ 2017ರಲ್ಲಿ ಅನರ್ಹತೆ ತೀರ್ಪು ನೀಡಿತ್ತು. ಈ ತೀರ್ಪಿನ ಪ್ರಕಾರ ಜೀವಿತಾವಧಿವರಗೆ ನವಾಜ್ ಷರೀಫ್ ಚುನಾವಣಾ ಪ್ರಕ್ರಿಯೆಯಲ್ಲಿ ಭಾಗವಹಿಸುವಂತಿರಲಿಲ್ಲ. ಆದ್ರೆ ಈಗ ದೇಶಕ್ಕೆ ಮರಳಲು ಕೋರ್ಟ್ ನವಾಜ್ ಷರೀಫ್ಗೆ 4 ವಾರಗಳ ವಿನಾಯಿತಿ ನೀಡಿದೆ. ಹೀಗಾಗಿ ಹೊಸ ತಿದ್ದುಪಡಿ ತಂದು, ಮತ್ತೊಮ್ಮೆ ನವಾಜ್ ಷರೀಫ್ ಪಾಕಿಸ್ತಾನಕ್ಕೆ ಬರಲು ವ್ಯವಸ್ಥೆಯನ್ನು ಮಾಡುತ್ತಿದೆ ಪಾಕ್ ಸರ್ಕಾರ ಎಂಬ ಆರೋಪ ಇದೆ. ಈ ನಡುವೆ ಇಮ್ರಾನ್ ಖಾನ್ ಬೆಂಬಲಿಗ ಪಡೆ ಈ ಎಲ್ಲಾ ಬೆಳವಣಿಗೆ ನೋಡಿ ಮತ್ತಷ್ಟು ರೊಚ್ಚಿಗೆದ್ದಿದೆ.
ಇಬ್ಬರ ನಡುವೆ ಸಿಕ್ಕಾಪಟ್ಟೆ ವೈರತ್ವ!
ಶತ್ರುಗಳಂತೆ ಕಚ್ಚಾಡಿದ್ದ ಇಮ್ರಾನ್ ಹಾಗೂ ನವಾಜ್ ಶರೀಫ್ ಪಾಕಿಸ್ತಾನ ರಾಜಕೀಯದಲ್ಲಿ ಬದ್ಧ ವೈರಿಗಳು. ದೇಶಬಿಟ್ಟು ಹೊರಗಿರುವ ನವಾಜ್ ಶರೀಫ್ ಮತ್ತೆ ಪಾಕಿಸ್ತಾನಕ್ಕೆ ಎಂಟ್ರಿ ಕೊಡೋದು ಗ್ಯಾರಂಟಿ ಆಗಿದೆ. ಪಾಕಿಸ್ತಾನ ಪಿಎಂ ಶೆಹಬಾಜ್ ಶರೀಫ್ ಪಾಕಿಸ್ತಾನ್ ಮುಸ್ಲಿಂ ಲೀಗ್ ನವಾಜ್ ಪಕ್ಷದ ಸಾಮಾನ್ಯ ಮಂಡಳಿ ಸಭೆ ನಡೆಸುವಾಗ ಈ ಬಗ್ಗೆ ಸುಳಿವು ನೀಡಿದ್ದಾರೆ. ಪಕ್ಷದ ಮುಂದಾಳತ್ವ ವಹಿಸಲು ಹಿರಿಯ ಸಹೋದರ ನವಾಜ್ ಶರೀಫ್ ದೇಶಕ್ಕೆ ಮರಳುವುದನ್ನ ಕಾಯುತ್ತಿದ್ದೇನೆ ಎಂದಿದ್ದಾರೆ ಪಾಕಿಸ್ತಾನ ಹಾಲಿ ಪ್ರಧಾನಿ ಶೆಹಬಾಜ್ ಶರೀಫ್. ಈ ಮೂಲಕ ಪಾಕಿಸ್ತಾನದಲ್ಲಿ ಮತ್ತೆ ಇಮ್ರಾನ್ ಖಾನ್ ಅರೆಸ್ಟ್ ಆಗೋದು ಪಕ್ಕಾ ಎನ್ನಲಾಗ್ತಿದೆ (Imran Khan Arrest).
ನವಾಜ್ ಶರೀಫ್ ಈಗ ಎಲ್ಲಿ?
ಪಾಕಿಸ್ತಾನದ ರಾಜಕಾರಣಿಗಳು ಅದೆಷ್ಟು ಭ್ರಷ್ಟರು ಅಂದ್ರೆ, ಪಾಕಿಸ್ತಾನದ ಬಹುತೇಕ ಮಾಜಿ ಪ್ರಧಾನಿಗಳಿಗೆ ಜೈಲಿನ ದರ್ಶನ ಆಗಿದೆ. ಹೀಗೆ ನವಾಜ್ ಶರೀಫ್ ಕೂಡ ಜೈಲೂಟ ತಿಂದು, ಬೇರೆ ದೇಶದಲ್ಲಿ ವಾಸಿಸುತ್ತಿದ್ದಾರೆ. 2019ರಿಂದ ಲಂಡನ್ನಲ್ಲಿರುವ ಮಾಜಿ ಪ್ರಧಾನಿ ನವಾಜ್, ಪನಾಮಾ ಪೇಪರ್ಸ್ ಹಗರಣದ ಹಿನ್ನೆಲೆ ಪಾಕ್ಗೆ ಮರಳಿದರೂ ರಾಜಕೀಯ ಪಕ್ಷಗಳ ನೇತೃತ್ವ ವಹಿಸಲು ಆಗುವುದಿಲ್ಲ. ಆದರೆ ಇದನ್ನು ಮರುಪರಿಶೀಲಿಸಲು ಶೆಹಬಾಜ್ ಶರೀಫ್ ಅನುಮತಿ ನೀಡಿದ್ದಾರೆ. ಈ ಮೂಲಕ ಪಾಕ್ ಸುಪ್ರೀಂಕೋರ್ಟ್ನಲ್ಲಿ ತಮ್ಮ ವಿರುದ್ಧದ ತೀರ್ಪು ಪ್ರಶ್ನಿಸಲು ನವಾಜ್ ಷರೀಫ್ಗೆ ಒಟ್ಟು 60 ದಿನಗಳ ಕಾಲವಕಾಶ ಸಿಕ್ಕಂತಾಗಿದೆ.
English summary
Pakistan Senate passed a bill to ensure no parliamentarian is disqualified for lifetime.
Story first published: Monday, June 19, 2023, 15:19 [IST]