2025ರ ಐಪಿಎಲ್ ಮುಕ್ತಾಯದ ಹಂತಕ್ಕೆ ಬಂದು ನಿಂತಿದೆ. ಇದೀಗ ಯಾರು ಪರ್ಪಲ್ ಕ್ಯಾಪ್ ಗೆಲ್ಲಬಹುದು ಎಂಬುದು ಕ್ರಿಕೆಟ್ ಅಭಿಮಾನಿಗಳ ದೊಡ್ಡ ಪ್ರಶ್ನೆಯಾಗಿದೆ. ಘಟಾನುಘಟಿಗಳೇ ಪರ್ಪಲ್ ಕ್ಯಾಪ್ ರೇಸ್ನಲ್ಲಿದ್ದಾರೆ.
ಪರ್ಪಲ್ ಕ್ಯಾಪ್ ಗೆಲ್ಲಲ್ಲು ಪೈಪೋಟಿಯಲ್ಲಿದ್ದಾರೆ ಘಟಾನುಘಟಿಗಳು; ಆರ್ಸಿಬಿ ಬೌಲರ್ಗೂ ಇದೇ ಅವಕಾಶ (AFP)
18ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಗುಂಪು ಹಂತದ ಪಂದ್ಯಗಳು ಮುಕ್ತಾಯಗೊಂಡಿವೆ. ಇನ್ನೇನಿದ್ದರೂ ಪ್ಲೇಆಫ್ ಹೋರಾಟ. ಮೇ 29ರಿಂದಲೇ ಈ ಪಂದ್ಯಗಳು ಆರಂಭವಾಗಲಿವೆ. ಈ 70 ಲೀಗ್ ಪಂದ್ಯಗಳ ಬಳಿಕ ಚೆನ್ನೈ ಸೂಪರ್ ಕಿಂಗ್ಸ್ ಸ್ಪಿನ್ನರ್ ನೂರ್ ಅಹ್ಮದ್ 24 ವಿಕೆಟ್ಗಳೊಂದಿಗೆ ಪರ್ಪಲ್ ಕ್ಯಾಪ್ ಪಡೆದಿದ್ದಾರೆ. ಆದರೆ, ಸಿಎಸ್ಕೆ ಪ್ಲೇಆಫ್ ತಲುಪದ ಕಾರಣ ನೂರ್ ಅಹ್ಮದ್ ಅವರ ಬಳಿಯೇ ಪರ್ಪಲ್ ಕ್ಯಾಪ್ ಉಳಿಯುವುದು ಅಸಾಧ್ಯವಾಗಿದೆ. ಏಕೆಂದರೆ ಈ ಕ್ಯಾಪ್ ಪಡೆಯಲು ಇನ್ನೂ ಐವರು ರೇಸ್ನಲ್ಲಿದ್ದಾರೆ. ಸದ್ಯಕ್ಕೀಗ ಪರ್ಪಲ್ಕ್ಯಾಪ್ ರೇಸ್ನಲ್ಲಿ ಇರುವವರು ಯಾರು? ಇಲ್ಲಿದೆ ಪಟ್ಟಿ.
1. ಪ್ರಸಿದ್ಧ್ ಕೃಷ್ಣ (23 ವಿಕೆಟ್)
ಗುಜರಾತ್ ಟೈಟಾನ್ಸ್ ವೇಗಿ ಪ್ರಸಿದ್ಧ್ ಕೃಷ್ಣ 23 ವಿಕೆಟ್ಗಳೊಂದಿಗೆ ಅತಿ ಹೆಚ್ಚು ವಿಕೆಟ್ ಪಡೆದವರ ಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದ್ದಾರೆ. ಅಗ್ರಸ್ಥಾನಿ ನೂರ್ ಅಹ್ಮದ್ ಮತ್ತು ತನ್ನ ನಡುವೆ ಕೇವಲ ಒಂದು ವಿಕೆಟ್ ಅಂತರವಿದೆ. ಇದೀಗ ಜಿಟಿ ಎಲಿಮಿನೇಟರ್ನಲ್ಲಿ ಮೇ 30ರಂದು ಮುಂಬೈ ಇಂಡಿಯನ್ಸ್ ವಿರುದ್ಧ ಎಲಿಮಿನೇಟರ್ ಪಂದ್ಯವನ್ನು ಆಡಲಿದೆ. ಪ್ರಸಿದ್ಧ್ ಕೃಷ್ಣ ಪರ್ಪಲ್ ಕ್ಯಾಪ್ ರೇಸ್ನಲ್ಲಿ ತಮ್ಮ ಸ್ಥಾನ ಬಲಪಡಿಸಲು 3 ಅವಕಾಶಗಳಿವೆ. ಎಲಿಮಿನೇಟರ್ನಲ್ಲಿ ಗೆದ್ದರೆ ಎರಡನೇ ಕ್ವಾಲಿಫೈಯರ್ಗೆ ಅರ್ಹತೆ ಪಡೆಯುತ್ತಾರೆ. ಅಲ್ಲಿಯೂ ಗೆದ್ದರೆ ಫೈನಲ್ಗೆ ಹೋಗಲಿದೆ. ಒಂದು ವೇಳೆ ಈ ಮೂರು ಪಂದ್ಯ ಗೆದ್ದರೆ ಪ್ರಸಿದ್ಧ್ ಕೃಷ್ಣ ಇನ್ನಷ್ಟು ವಿಕೆಟ್ ಉರುಳಿಸುವ ಸಾಧ್ಯತೆ ಇದೆ. ಹಾಗಾಗಿ ಕರ್ನಾಟಕದ ಆಟಗಾರ ಪರ್ಪಲ್ ಕ್ಯಾಪ್ ಗೆಲ್ಲುವ ನಿರೀಕ್ಷೆ ಇದೆ.
2. ಟ್ರೆಂಟ್ ಬೌಲ್ಟ್ (19 ವಿಕೆಟ್)
ಮುಂಬೈ ಇಂಡಿಯನ್ಸ್ನ ಟ್ರೆಂಟ್ ಬೌಲ್ಟ್ ಈ ಆವೃತ್ತಿಯಲ್ಲಿ ಅದ್ಭುತ ಪ್ರದರ್ಶನ ನೀಡಿದ್ದಾರೆ. ಅವರು ಪವರ್ಪ್ಲೇನಲ್ಲಿ ಬ್ಯಾಟರ್ಗಳ ವಿಕೆಟ್ ಬೇಟೆಯಾಡಿದ್ದಾರೆ. ಪರ್ಪಲ್ ಕ್ಯಾಪ್ ಪಡೆಯಲು ಅವರು 5 ವಿಕೆಟ್ ದೂರದಲ್ಲಿದ್ದಾರೆ. ಪ್ರಸ್ತುತ 19 ವಿಕೆಟ್ ಉರುಳಿಸಿರುವ ಬೋಲ್ಟ್ ಅವರಿಗೂ ಮುಂದೆ 3 ಪಂದ್ಯಗಳನ್ನು ಆಡುವ ಅವಕಾಶ ಇದೆ. ಎಲಿಮಿನೇಟರ್ನಲ್ಲಿ ಗುಜರಾತ್ ಟೈಟಾನ್ಸ್ ತಂಡವನ್ನು ಎದುರಿಸಲಿದೆ.
3. ಜೋಶ್ ಹೇಜಲ್ವುಡ್ (18 ವಿಕೆಟ್)
ಗಾಯದಿಂದಾಗಿ ಕಳೆದ ಕೆಲವು ಪಂದ್ಯಗಳಿಂದ ಹೊರಗುಳಿದಿದ್ದರೂ ರಾಯಲ್ ಚಾಲೆಂಜರ್ಸ್ ಬೆಂಗಳೂರಿನ ಜೋಶ್ ಹೇಜಲ್ವುಡ್ ಪರ್ಪಲ್ ಕ್ಯಾಪ್ ರೇಸ್ನಲ್ಲಿ 4ನೇ ಸ್ಥಾನದಲ್ಲಿದ್ದಾರೆ. 10 ಪಂದ್ಯಗಳಲ್ಲಿ ಒಟ್ಟು 18 ವಿಕೆಟ್ ಪಡೆದಿದ್ದು, ಅವರು ಒಂದು ವೇಳೆ 4 ಪಂದ್ಯ ಆಡಿದ್ದರೆ, ಬಹುಶಃ ಅವರ ಹೆಸರು ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿರುತ್ತಿತ್ತು. ಆರ್ಸಿಬಿ ಫ್ಯಾನ್ಸ್ಗೆ ಒಳ್ಳೆಯ ಸುದ್ದಿಯೆಂದರೆ ಹೇಜಲ್ವುಡ್ ಈಗ ಫಿಟ್ ಆಗಿದ್ದಾರೆ. ಆರ್ಸಿಬಿಗೆ ತಂಡಕ್ಕೆ ಮೊದಲ ಪ್ರಶಸ್ತಿ ಗೆಲ್ಲಿಸಿಕೊಡುವುದರ ಜೊತೆಗೆ ಪರ್ಪಲ್ ಕ್ಯಾಪ್ ಗೆದ್ದುಕೊಳ್ಳುವುದರ ಕಡೆಗೆ ಗಮನ ಹರಿಸಿದ್ದಾರೆ.
4. ಅರ್ಷದೀಪ್ ಸಿಂಗ್ (18 ವಿಕೆಟ್)
ಈ ಋತುವಿನಲ್ಲಿ ಪಂಜಾಬ್ ಕಿಂಗ್ಸ್ ಪರ ಅತ್ಯಂತ ಯಶಸ್ವಿ ಬೌಲರ್ ಅರ್ಷದೀಪ್ ಸಿಂಗ್ 14 ಪಂದ್ಯಗಳಲ್ಲಿ 18 ವಿಕೆಟ್ ಕಿತ್ತಿದ್ದಾರೆ. ಪವರ್ಪ್ಲೇ ಹೊರತಾಗಿ ಅರ್ಷದೀಪ್ ಡೆತ್ ಓವರ್ಗಳಲ್ಲಿ ತಮ್ಮ ಅದ್ಭುತ ಯಾರ್ಕರ್ ಮೂಲಕ ಬ್ಯಾಟರ್ಗಳಿಗೆ ಮೋಡಿ ಮಾಡುತ್ತಿದ್ದಾರೆ. ಮೊದಲ ಪ್ಲೇಆಫ್ನಲ್ಲಿ ಆರ್ಸಿಬಿ ವಿರುದ್ಧ ಪಂಜಾಬ್ ಕಿಂಗ್ಸ್ ಕಣಕ್ಕಿಳಿಯಲಿದೆ. ಇಲ್ಲಿ ಗೆದ್ದರೆ, ನೇರವಾಗಿ ಫೈನಲ್ ಪ್ರವೇಶಿಸಲಿದೆ. ಒಂದು ವೇಳೆ ಸೋತರೆ 2ನೇ ಕ್ವಾಲಿಫೈಯರ್ನಲ್ಲಿ ಎಲಿಮಿನೇಟರ್ ವಿಜೇತರೊಂದಿಗೆ ಆಡಲಿದೆ. ಅಲ್ಲೂ ಗೆದ್ದರೆ ಮತ್ತೆ ಫೈನಲ್ಗೆ ಅರ್ಹತೆ ಪಡೆದುಕೊಳ್ಳಲಿದೆ. ಹೀಗಾಗಿ ಅರ್ಷದೀಪ್ಗೆ ಮತ್ತಷ್ಟು ವಿಕೆಟ್ ಪಡೆಯುವ ನಿರೀಕ್ಷೆಯಿದೆ.
5. ಜಸ್ಪ್ರೀತ್ ಬುಮ್ರಾ (17 ವಿಕೆಟ್)
ಮುಂಬೈ ಇಂಡಿಯನ್ಸ್ ವೇಗಿ ಜಸ್ಪ್ರೀತ್ ಬುಮ್ರಾ 17 ವಿಕೆಟ್ಗಳೊಂದಿಗೆ ಏಳನೇ ಸ್ಥಾನದಲ್ಲಿದ್ದಾರೆ. ಗಾಯದಿಂದಾಗಿ, ಅವರು ಋತುವಿನ ಮೊದಲ 4 ಪಂದ್ಯಗಳನ್ನು ಆಡಲು ಸಾಧ್ಯವಾಗಲಿಲ್ಲ. ಆದಾಗ್ಯೂ, ಬುಮ್ರಾ ಈಗ ಹಳೆಯ ಲಯದಲ್ಲೇ ಕಾಣಿಸಿಕೊಂಡಿದ್ದಾರೆ. ಮುಂಬೈ ಇಂಡಿಯನ್ಸ್ ಫೈನಲ್ ತಲುಪಿದರೆ, ಬುಮ್ರಾ ಪರ್ಪಲ್ ಕ್ಯಾಪ್ ವಶಪಡಿಸಿಕೊಳ್ಳುವ ಸಾಧ್ಯತೆಯೂ ಹೆಚ್ಚಿದೆ.