Chikkaballapur
lekhaka-Mohan Kumar D
ಚಿಕ್ಕಬಳ್ಳಾಪುರ, ಜುಲೈ 30: ಸುಧಾಕರ್ ಅವರು ಕಾಂಗ್ರೆಸ್‌ಗೆ ದ್ರೋಹ ಮಾಡಿ ಬಿಜೆಪಿ ಸೇರಿದ್ದಾರೆ. ಈಗ ಮತ್ತೆ ಪಕ್ಷೇತರರಾಗಿ ಚುನಾವಣೆಗೆ ಸ್ಪರ್ಧೆ ಮಾಡೋಣ ಎಂದು ಹೇಳುತ್ತಿದ್ದಾರೆ. ಯಾಕೆ ಸುಧಾಕರ್‌ಗೆ ಬಿಜೆಪಿ ಟಿಕೆಟ್ ನೀಡುವುದಿಲ್ಲವೇ ಎಂದು ಶಾಸಕ ಪ್ರದೀಪ್ ಈಶ್ವರ್ ವ್ಯಂಗ್ಯವಾಡಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಂದಿನ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಟಿಕೆಟ್ ಕೇಳಲು ಮಾಜಿ ಸಚಿವ ಡಾ.ಕೆ.ಸುಧಾಕರ್ ನಮ್ಮ ಪಕ್ಷದ ಹಿರಿಯ ನಾಯಕರನ್ನು ಭೇಟಿ ಮಾಡಿರುವುದು ನಿಜ. ಆದರೆ ನಾವು ಅವರನ್ನು ಸೇರಿಸಿಕೊಳ್ಳುವುದಕ್ಕೆ ರೆಡಿಯಿಲ್ಲ ಎಂದು ಪ್ರದೀಪ್ ಈಶ್ವರ್ ತಿಳಿಸಿದರು.
ಪ್ರದೀಪ್ ಈಶ್ವರ್ ಮುಖ ನೋಡಿ 5,000 ವೋಟು ಬರಲ್ಲ ಎಂಬ ಮಾಜಿ ಶಾಸಕರ ಹೇಳಿಕೆ ಪ್ರತಿಕ್ರಿಯಿಸಿದ ಪ್ರದೀಪ್, ಸ್ವಗ್ರಾಮದಲ್ಲಿಯೇ ಸುಧಾಕರ್‌ಗೆ ಗೌರವ ಇಲ್ಲ. ನಂದು ಪೇರೇಸಂದ್ರ, ನಿಮ್ಮದು ಪೇರೇಸಂದ್ರ ಯಾಕೆ ನಿಮಗೆ ಕಡಿಮೆ ವೋಟು ಬಂತು? ನನಗೆ 1,700 ವೋಟು ಬಂದಿದೆ. ನಿಮಗೆ ಕೇವಲ 600 ವೋಟ್ ಮಾತ್ರ ಬಂದಿದೆ. ಅದಕ್ಕೆ ಅಧಿಕಾರ ಇದ್ದಾಗ ತಗ್ಗಿಬಗ್ಗಿ ನಡೆಯಬೇಕು ಎಂದು ತಿಳಿಸಿದರು.
ಎರಡು ತಿಂಗಳ ಹಿಂದೆಯಷ್ಟೇ ಚುನಾವಣೆಯಲ್ಲಿ ನಿಮ್ಮನ್ನ ಸೋಲಿಸಿದ್ದೇನೆ. ಮತ್ತೆ ಯಾಕೆ ಬರಬೇಕು. ನೀವು ಬೇರೆ ಕ್ಷೇತ್ರದಿಂದ ಸ್ಪರ್ಧೆ ಮಾಡಿದರೆ ಮುಂದಿನ ಬಾರಿ ವಿಧಾನಸೌಧಕ್ಕೆ ಬರುತ್ತೀರಾ. ಇಲ್ಲವಾದರೆ ಚಿಕ್ಕಬಳ್ಳಾಪುರದಿಂದಲೇ ಸ್ಪರ್ಧೆಸಿದರೆ ಮತ್ತೆ 5 ವರ್ಷ ಕಷ್ಟಪಡಬೇಕಾಗುತ್ತೆ ಎಂದರು.
ಪ್ರದೀಪ್ ಈಶ್ವರ್ ಬೆಂಬಲಿಗರು ಹಲ್ಲೆಗೆ ಯತ್ನಿಸಿ ಪ್ರಾಣ ಬೆದರಿಕೆ ಹಾಕಿ ದೌರ್ಜನ್ಯ ನಡೆಸಿದ್ದಾರೆ ಎಂಬ ಸುಧಾಕರ್ ಆರೋಪಕ್ಕೆ ಪ್ರತಿಕ್ರಿಯಿಸಿದ ಶಾಸಕರು, ನಮ್ಮ ಹುಡುಗರು ಹಲ್ಲೆ ಮಾಡಿದ್ದಾರೆ. ದಾಳಿ ಮಾಡಿದ್ದಾರೆ ಅನ್ನೋದಕ್ಕೆ ಪ್ರೂಫ್ ತೋರಿಸಿ. ನಿಮ್ಮದೇ ಕಾರ್ಯಕರ್ತನನ್ನು ಜೈಲಿಗೆ ಕಳುಹಿಸಿದವರು ನೀವು. ಈಗ ಅವನನ್ನೇ ಜೊತೆಗೆ ಕೂರಿಸಿಕೊಂಡು ಆರೋಪ ಮಾಡುತ್ತಿರುವುದು ಎಷ್ಟರ ಮಟ್ಟಿಗೆ ಸರಿ ಎಂದು ಟೀಕಿಸಿದರು.
ಸುಧಾಕರ್ ನಂಬಿಕೊಂಡು ಹೋದರೆ ಕಾರ್ಯಕರ್ತರಿಗೆ ಚಿಪ್ಪೆ ಗತಿ. ನೀವು ನೋಡದೇ ಇರೋ ಸುಧಾಕರ್ ನಾನು ನೋಡಿದ್ದೇನೆ. ಸುಧಾಕರ್ ಬೆಂಬಲಿಗರು ಕಾನೂನು ಕೈಗೆ ಎತ್ತಿಕೊಂಡರೆ ತಕ್ಕ ಪಾಠ ಕಲಿಸುವುದು ಗೊತ್ತಿದೆ. ಬಾಲ ಬಿಚ್ಚಿದರೆ ಕಟ್ ಮಾಡೋದು ಗೊತ್ತಿದೆ ಎಂದು ಮಾಜಿ ಸಚಿವ ಡಾ.ಕೆ.ಸುಧಾಕರ್ ಅವರ ಬೆಂಬಲಿಗರಿಗೆ ಶಾಸಕ ಪ್ರದೀಪ್ ಈಶ್ವರ್ ಎಚ್ಚರಿಕೆ ನೀಡಿದರು.
ನಾನು ಒಬ್ಬ ಶಾಸಕ, ಇಲ್ಲಿಯವರೆಗೂ ಗನ್ ಮ್ಯಾನ್ ಇಟ್ಟುಕೊಂಡಿಲ್ಲ. ಅವರು ಶಾಸಕರಿದ್ದಾಗ ಎಸ್ಕಾರ್ಟ್ ಪೊಲೀಸರನ್ನು ಬಳಸುತ್ತಿದ್ದರು. ಆದರೆ ನಾನು ಎಲ್ಲಿ ಬಂದರೂ ಪೊಲೀಸರಿಗೂ ಹೇಳಲ್ಲ. ಬುಲೆಟ್‌ಗೆ ಏಕೆ ಗನ್ ಎಂದು ಉತ್ತರಿಸಿದ ಅವರು, ಸುಧಾಕರ್ ಅವರ ಪಾಡಿಗೆ ಬೆಂಗಳೂರಿನಲ್ಲಿ ಚೆನ್ನಾಗಿ ಇರುತ್ತಾರೆ. ನಾನು ನನ್ನ ಪಾಡಿಗೆ ಚೆನ್ನಾಗಿರುತ್ತೇನೆ. ಸುಧಾಕರ್-ಪ್ರದೀಪ್ ಈಶ್ವರ್ ಮಧ್ಯೆ ಬೆಂಬಲಿಗರು ಗಲಾಟೆ ಮಾಡಿಕೊಳ್ಳಬೇಡಿ. ನಿಮ್ಮ ಹೆಂಡತಿ ಮಕ್ಕಳ ಕಣ್ಣಲ್ಲಿ ನೀರು ಹಾಕಿಸಬೇಡಿ ಎಂದು ಮನವಿ ಮಾಡಿದರು.
English summary
I have seen Sudhakar which you have not seen says Chikkaballapur MLA Pradeep Eshwar Know more,
Story first published: Sunday, July 30, 2023, 12:45 [IST]