ನೀನೇ ಸಾಕಿದ ಗಿಣಿ.. ಹದ್ದಾಗಿ ಕುಕ್ಕಿತಲ್ಲೋ..: ಸ್ನೇಹಿತನಿಂದಲೇ ಬೆನ್ನಿಗೆ ಚೂರಿ ಹಾಕಿಸಿಕೊಂಡ ರಷ್ಯಾ ಅಧ್ಯಕ್ಷ ಪುಟಿನ್! | Why Russian Wagner group soldiers attacked their own country

International

oi-Malathesha M

|

Google Oneindia Kannada News

ಮಾಸ್ಕೋ: ಬೆನ್ನಿಗೆ ಚೂರಿ ಹಾಕೋದು ಅಂದ್ರೆ ಇದೇ ಅಲ್ವಾ? ಹತ್ತಾರು ವರ್ಷಗಳಿಂದಲೂ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಜೊತೆ ಇದ್ದು, ಸ್ನೇಹ ಗಳಿಸಿದ್ದ ವ್ಯಕ್ತಿ ಇಂದು ರಷ್ಯಾ ಸೇನೆಗೆ ಕಂಟಕವಾಗಿದ್ದಾನೆ. ನೇರವಾಗಿ ರಷ್ಯಾದ ರೋಸ್ಟೊವ್‌ ನಗರಕ್ಕೆ ನುಗ್ಗಿರುವ ಪುಟಿನ್ ಬಲಗೈ ಬಂಟ, ಕಥೆ ಮುಗಿಸುವ ಎಚ್ಚರಿಕೆ ನೀಡಿದ್ದಾನೆ. ಹಾಗಾದ್ರೆ ದಿಢೀರ್ ಈ ಘಟನೆ ನಡೆದಿದ್ದು ಹೇಗೆ? ಇಲ್ಲಿದೆ ಸಂಪೂರ್ಣ ಮಾಹಿತಿ.

ರಷ್ಯಾ & ಉಕ್ರೇನ್ ಯುದ್ಧ ಶುರುವಾಗಿ ಇನ್ನೇನು 500 ದಿನಗಳು ತುಂಬಲಿವೆ. ಆದರೆ ಈ ಹೊತ್ತಲ್ಲೇ ರಷ್ಯಾ ಒಳಗೆ ಬೆಂಕಿ ಹೊತ್ತಿಕೊಂಡಿದೆ. ದಿಢೀರ್ ರಷ್ಯಾದ ಖಾಸಗಿ ಸೇನೆ ಸ್ವಂತ ದೇಶದ ವಿರುದ್ಧ ತಿರುಗಿಬಿದ್ದಿದೆ. ಅಲ್ಲದೆ ರಷ್ಯಾ ಸೇನೆಯ ಪ್ರಧಾನ ಕಚೇರಿ ಇರುವ ಜಾಗಕ್ಕೆ ನುಗ್ಗಿ ಬರುತ್ತಿದೆ. ಹೀಗಾಗಿ ರಷ್ಯಾದ ಗಲ್ಲಿ ಗಲ್ಲಿಗಳನ್ನೂ ಬಂದ್ ಮಾಡಿ, ದಂಗೆ ಎದ್ದಿರುವ ಖಾಸಗಿ ಸೇನೆ ಒಳಗೆ ಬರದಂತೆ ರಷ್ಯಾ ಸೇನೆ ಕಟ್ಟೆಚ್ಚರ ವಹಿಸಿದೆ. ಈ ಮಧ್ಯೆ ಪಾಶ್ಚಿಮಾತ್ಯ ರಾಷ್ಟ್ರಗಳು ಅಂದರೆ ಅಮೆರಿಕ ಮತ್ತು ನ್ಯಾಟೋ ಪಡೆಗಳ ಕುಮ್ಮಕ್ಕಿನಿಂದ ದಾಳಿ ನಡೆದಿದೆ ಎಂದು ರಷ್ಯಾ ಆರೋಪಿಸಿದೆ. ಆದರೆ ಕಥೆ ಬೇರೆನೆ ಇದೆ, ದಿಢೀರ್ ರಷ್ಯಾ ಖಾಸಗಿ ಸೇನೆ ರೊಚ್ಚಿಗೇಳಲು ಅದೊಂದು ವಿಚಾರ ಕಾರಣವಾಗಿದೆ (Russia Ukraine War).

soldiers attacked their own country

ರಷ್ಯಾದಲ್ಲಿ ಖಾಸಗಿ ಸೇನೆಯ ಕಿತಾಪತಿ ಏನು?

ವ್ಯಾಗ್ನರ್ ಗುಂಪು ಅಥವಾ ರಷ್ಯಾದ ಖಾಸಗಿ ಸೈನಿಕ ಪಡೆ ಸಾಕಷ್ಟು ಬಲವಾಗಿದೆ. ಪುಟಿನ್‌ರ ಅಧಿಕಾರ ಅವಧಿಯಲ್ಲಿ ಈ ಖಾಸಗಿ ಸೇನೆ ಸ್ಥಾಪನೆ ಆಗಿದ್ದು. ಯೆವ್ಗೆನಿ ಪ್ರಿಗೊಝಿನ್ ಅಂದ್ರೆ ಹಲವು ದಶಕಗಳಿಂದ ವ್ಲಾದಿಮಿರ್ ಪುಟಿನ್ ಜೊತೆಗೇ ಇರುವ ಈ ವ್ಯಕ್ತಿಯೇ ಖಾಸಗಿ ಸೇನೆ ಮುಖ್ಯಸ್ಥ. ಆದರೆ ಇತ್ತೀಚೆಗೆ ಉಕ್ರೇನ್ ವಿರುದ್ಧದ ಯುದ್ಧದ ವಿಚಾರದಲ್ಲಿ ಪ್ರಿಗೊಝಿನ್‌ಗೆ ಸಿಕ್ಕಾಪಟ್ಟೆ ಕೋಪ ಬಂದಿತ್ತು. ಅದೇ ಕೋಪಕ್ಕೆ ಈಗ ರಷ್ಯಾ ಬಲಿಯಾಗುವ ಸಂದರ್ಭವೂ ಬಂದಿದೆ. ಉಕ್ರೇನ್ ಯುದ್ಧದಲ್ಲಿ ತಮ್ಮ ಖಾಸಗಿ ಸೇನೆಯ ಸೈನಿಕರು ಸಾಯುತ್ತಿರುವುದೇ ಯೆವ್ಗೆನಿ ಪ್ರಿಗೊಝಿನ್ ಕೋಪ ಕೆಂಡವಾಗುವಂತೆ ಮಾಡಿದೆ.

ಅಮೆರಿಕ & ನ್ಯಾಟೋ ಒಕ್ಕೂಟಕ್ಕೆ ಪುಟಿನ್ ಪಂಚ್ ಹೇಗಿದೆ ನೋಡಿ!ಅಮೆರಿಕ & ನ್ಯಾಟೋ ಒಕ್ಕೂಟಕ್ಕೆ ಪುಟಿನ್ ಪಂಚ್ ಹೇಗಿದೆ ನೋಡಿ!

ಖಾಸಗಿ ಸೈನಿಕರನ್ನು ಬಲಿ ಹಾಕಿದ ಪುಟಿನ್?

ದಿನಕ್ಕೊಂದು ವಿಡಿಯೋ ಮಾಡಿ ರಷ್ಯಾ ನಾಯಕರ ವಿರುದ್ಧ ಆಕ್ರೋಶ ಹೊರಹಾಕುತ್ತಿದ್ದ ಯೆವ್ಗೆನಿ ಪ್ರಿಗೊಝಿನ್. ಇಷ್ಟೆಲ್ಲಾ ನಡೆದರೂ ರಷ್ಯಾ ಸೇನೆ ಯೆವ್ಗೆನಿ ಪ್ರಿಗೊಝಿನ್ ಮಾತನ್ನ ನಿರ್ಲಕ್ಷ್ಯ ಮಾಡಿತ್ತು. ಅದರ ಪರಿಣಾಮ ಇದೀಗ ಅನುಭವಿಸುವಂತಾಗಿದೆ. ರಷ್ಯಾ ಸೇನೆಯ ಅಧಿಕಾರಿಗಳು ಖಾಸಗಿ ಸೇನೆಗೆ ಸರಿಯಾಗಿ ಬುಲೆಟ್, ಬಾಂಬ್ ಕೊಡ್ತಿಲ್ಲ. ಸೂಕ್ತ ಸೌಲಭ್ಯ ಸಿಗದೆ ವ್ಯಾಗ್ನರ್ ಗುಂಪು ಅಥವಾ ಖಾಸಗಿ ಸೈನಿಕರು ಸಾಯುತ್ತಿದ್ದಾರೆ. ಇಷ್ಟಾದರೂ ರಷ್ಯಾ ಸೇನೆ ತಲೆಕೆಡಿಸಿಕೊಂಡಿಲ್ಲ ಅನ್ನೋ ಆರೋಪ ಮಾಡುತ್ತಿದ್ದ ಯೆವ್ಗೆನಿ ಪ್ರಿಗೊಝಿನ್. ಇದು ಸಾಲದು ಎಂಬಂತೆ ಮೊನ್ನೆ ಮೊನ್ನೆ ಉಕ್ರೇನ್ ಡ್ಯಾಂ ಸ್ಫೋಟಗೊಂಡ ನಂತರ, ಸಾಕಷ್ಟು ಖಾಸಗಿ ಸೈನಿಕರು ಸತ್ತಿದ್ದರು ಎಂದು ಆರೋಪಿಸಲಾಗಿತ್ತು. ಈ ಎಲ್ಲಾ ಆಕ್ರೋಶ ಇದೀಗ ಭುಗಿಲೆದ್ದು ಬೆಂಕಿ ಉಂಡೆಯಾಗಿದೆ.

ಪುಟಿನ್ ಕೊಲೆಗೆ ನಡೆದಿದೆಯಾ ಮಹಾ ಸಂಚು?

ಹೀಗೆ ನೇರವಾಗಿ ರಷ್ಯಾ ಒಳಗೆ ನುಗ್ಗಿರುವ ಖಾಸಗಿ ಸೇನೆ ಮುಖ್ಯಸ್ಥ ಯೆವ್ಗೆನಿ ಪ್ರಿಗೊಝಿನ್ ನೇತೃತ್ವದ ಗುಂಪು, ಯಾವ ಕ್ಷಣದಲ್ಲಿ ಬೇಕಾದರೂ ರಾಜಧಾನಿಗೆ ನುಗ್ಗಬಹುದು. ಹೀಗಾಗಿ ಪುಟಿನ್ ಜೀವಕ್ಕೆ ಅಪಾಯ ಎದುರಾಗಿದೆ ಎನ್ನಲಾಗಿದೆ. ಕಳೆದ ತಿಂಗಳಷ್ಟೇ ಪುಟಿನ್ ಮನೆ ಮೇಲೆ ಡ್ರೋನ್ ಮೂಲಕ ಬಾಂಬ್ ಹಾಕಿ ಕೊಲೆಗೂ ಯತ್ನಿಸಲಾಗಿತ್ತು. ಈಗ ನೋಡಿದರೆ ಮತ್ತೊಮ್ಮೆ ಅಂತಹದ್ದೇ ಕೃತ್ಯಕ್ಕೆ ಪ್ರಯತ್ನಗಳು ಸಾಗಿವೆ ಎನ್ನಲಾಗುತ್ತಿದೆ. ಹೀಗಾಗಿ ರಷ್ಯಾ ರಾಜಧಾನಿ ಮಾಸ್ಕೋಗೆ ಸಂಪರ್ಕ ಕಲ್ಪಿಸುವ ಗಲ್ಲಿ ಗಲ್ಲಿಗಳನ್ನೂ ಲಾಕ್ ಮಾಡಿದೆ ರಷ್ಯಾ ಸೇನೆ. ಹಾಗೇ ಪುಟಿನ್ ಅವರನ್ನೂ ರಹಸ್ಯ ಸ್ಥಳಕ್ಕೆ ಸ್ಥಳಾಂತರ ಮಾಡಲಾಗಿದೆ. ಕ್ರೆಮ್ಲಿನ್ ಸಮೀಪದಲ್ಲೇ ಪುಟಿನ್‌ಗೆ ಅತ್ಯಧಿಕ ಭದ್ರತೆ ಇರುವ ಬಂಕರ್ ಇದೆ.

ಇಲ್ಲಿ ಆಂತರಿಕ ಕಲಹ, ಅಲ್ಲಿ ಭೀಕರ ದಾಳಿ!

ಒಂದ್ಕಡೆ ರಷ್ಯಾ ಒಳಗೆ ಬೆಂಕಿ ಹೊತ್ತಿಕೊಂಡಿದೆ ಹಾಗೇ ಇನ್ನೊಂದು ಕಡೆ ಉಕ್ರೇನ್ ಮೇಲೆ ಭೀಕರ ದಾಳಿ ಕೂಡ ಆರಂಭವಾಗಿದೆ. ರಷ್ಯಾ ಖಾಸಗಿ ಸೇನೆ ಶತ್ರುಪಡೆ ಉಕ್ರೇನ್‌ನ ಬಿಟ್ಟು ತನ್ನ ಸ್ವಂತ ದೇಶದ ಮೇಲೆಯೇ ದಾಳಿ ಮಾಡುತ್ತಿರುವ ಸಂದರ್ಭದಲ್ಲಿ, ರಷ್ಯಾ ಸೇನೆ ತನ್ನ ದಾಳಿ ಇನ್ನಷ್ಟು ತೀವ್ರಗೊಳಿಸಿದೆ. ಇದೆಲ್ಲದರ ಹಿನ್ನೆಲೆ ಅಪಾರ ಪ್ರಮಾಣದ ಸಾವು ನೋವು ಸಂಭವಿಸಿದೆ. ರಷ್ಯಾ ಹಾರಿಸಿದ ಕ್ಷಿಪಣಿ ಉಕ್ರೇನ್ ಬಸ್‌ಗೆ ಬಡಿದಿದೆ ಎಂದು ಆರೋಪಿಸಿದೆ ಉಕ್ರೇನ್ ಸೇನೆ. ಹಾಗೇ ಕೆಲ ಮೂಲಗಳ ಪ್ರಕಾರ, ಉಕ್ರೇನ್ ಸೇನೆ ಹೆಚ್ಚಿನ ಪ್ರಮಾಣದಲ್ಲಿ ರಷ್ಯಾ ಗಡಿಯ ಕಡೆಗೆ ನುಗ್ಗಿ ಬರುತ್ತಿದೆ ಎನ್ನಲಾಗಿದೆ. ರಷ್ಯಾದ ಆಂತರಿಕ ಕಲಹದ ಲಾಭ ಪಡೆಯಲು ಈ ಮೂಲಕ ಯತ್ನಿಸುತ್ತಿರುವ ಆರೋಪ ಕೇಳಿಬಂದಿದೆ.

ರಷ್ಯಾದಲ್ಲಿ ಎಲ್ಲೆಲ್ಲಿ ಭದ್ರತೆ ಹೆಚ್ಚಳ?

ದಕ್ಷಿಣ ರಷ್ಯಾದ ರೋಸ್ಟೊವ್ ಮತ್ತು ಲಿಪೆಟ್ಸ್ಕ್ ಭದ್ರತೆ ಬಲಪಡಿಸಿದ್ದಾರೆ. ರೋಸ್ಟೊವ್‌ನಲ್ಲಿ, ಅಧಿಕಾರಿಗಳು ತಮ್ಮ ಮನೆಗಳನ್ನು ತೊರೆಯದಂತೆ ನಿವಾಸಿಗಳಿಗೆ ಸೂಚಿಸಿದ್ದಾರೆ. ಈ ನಡುವೆ, ದೇಶದ ಮಿಲಿಟರಿ ನಾಯಕತ್ವ ಉರುಳಿಸಲು ಬೇಕಾಗಿರುವ ಎಲ್ಲಾ ಕ್ರಮ ತೆಗೆದುಕೊಳ್ಳುವುದಾಗಿ ರಷ್ಯಾ ಖಾಸಗಿ ಸೇನೆ ಪ್ರತಿಜ್ಞೆ ಮಾಡಿದೆ. ಈ ಕಾರಣಕ್ಕೆ ಸೂಕ್ಷ್ಮ ಸ್ಥಳಗಳಲ್ಲಿ ರಷ್ಯಾ ಅಲರ್ಟ್ ಆಗಿದೆ. ಇನ್ನು ಅನಿವಾರ್ಯ ಪರಿಸ್ಥಿತಿಯಲ್ಲಿ ತನ್ನ ಪರಮಾಣು ಅಸ್ತ್ರಗಳನ್ನು ರಷ್ಯಾ ಸೇನೆ ಹೊರ ತೆಗೆದರೂ ಅಚ್ಚರಿ ಪಡಬೇಕಿಲ್ಲ. ಈಗಾಗಲೇ ರಷ್ಯಾ ತನ್ನ ಪರಮಾಪ್ತ ರಾಷ್ಟ್ರವಾದ ಬೆಲಾರಸ್ ಗಡಿಯಲ್ಲಿ ಅಂದರೆ ಉಕ್ರೇನ್ ಗಡಿಯ ಸಮೀಪದಲ್ಲೇ ಪಮಾಣು ಅಸ್ತ್ರಗಳನ್ನು ಸಿದ್ಧವಾಗಿ ನಿಲ್ಲಿಸಿದೆ.

ಘಟನೆ ಹಿಂದೆ ಯಾರ ಕೈವಾಡವಿದೆ?

ರಷ್ಯಾ ಖಾಸಗಿ ಸೇನೆ ಬಂಡಾಯದ ಹಿಂದೆ ಪಾಶ್ಚಿಮಾತ್ಯ ರಾಷ್ಟ್ರಗಳ ಕೈವಾಡವಿದೆ ಎಂಬ ಆರೋಪ ರಷ್ಯಾ ನಾಯಕರದ್ದು. ಅಮೆರಿಕ ಮತ್ತು ನ್ಯಾಟೋ ಸದಸ್ಯ ರಾಷ್ಟ್ರಗಳ ಕುತಂತ್ರ ಇಂತಹ ಪರಿಸ್ಥಿತಿ ಸೃಷ್ಟಿ ಮಾಡಿದೆ ಎಂಬ ಆರೋಪ ಕೇಳಿಬರುತ್ತಿದೆ. ಆದರೆ ಈ ಆರೋಪ ಕೇಳಿಬಂದರೂ ಈವರೆಗೆ ಪಾಶ್ಚಿಮಾತ್ಯ ರಾಷ್ಟ್ರಗಳಿಂದ ಪ್ರತಿಕ್ರಿಯೆ ಹೊರಬಿದ್ದಿಲ್ಲ. ಹಲವು ದಿನಗಳಿಂದ ಹೊತ್ತಿದ್ದ ಬೆಂಕಿಯನ್ನ ಆದಷ್ಟು ತಣ್ಣಗಾಗಿಸಿದ್ದರೆ ಎಲ್ಲಾ ಸರಿಹೋಗುತ್ತಿತ್ತು. ಆದರೆ ಈ ಬಗ್ಗೆ ಕ್ರಮ ಕೈಗೊಳ್ಳದೆ ರಷ್ಯಾ ನಾಯಕರು ಮತ್ತು ರಷ್ಯಾ ಸೇನೆ ಮುಖ್ಯಸ್ಥರು ಸುಮ್ಮನಿದ್ದ ಕಾರಣ ಪರಿಸ್ಥಿತಿ ಕೈಮೀರಿ ಹೋಗಿದೆ. ಹೀಗಾಗಿ ರಷ್ಯಾ ಸೇನೆ & ಖಾಸಗಿ ಸೇನೆ ನಡುವೆ ಭೀಕರ ಕಾಳಗ ನಡೆಯುವ ಭೀತಿ ಎದುರಾಗಿದೆ. ಆದರೆ ಸಂಪೂರ್ಣ ಉತ್ತರಕ್ಕಾಗಿ ಕೆಲ ಸಮಯ ಕಾಯಬೇಕಿದೆ.

English summary

Why Russian Wagner group soldiers attacked their own country.

Story first published: Saturday, June 24, 2023, 15:22 [IST]

Source link