Bengaluru
oi-Madhusudhan KR

ಬೆಂಗಳೂರು, ಜುಲೈ, 07: ಎಚ್.ಡಿ.ಕುಮಾರಸ್ವಾಮಿ ಅವರು ತೋರಿಸಿರುವ ಪೆನ್‌ಡ್ರೈವ್ ಬಗ್ಗೆ ಬೆಂಗಳೂರಿನಲ್ಲಿ ಪ್ರತಿಕ್ರಿಯಿಸಿದ ಡಿಸಿಎಂ ಡಿ.ಕೆ.ಶಿವಕುಮಾರ್, ನಾವು ಬಹಳಷ್ಟು ಡ್ರೈವ್ ನೋಡಿದ್ದೇವೆ. ನಾನು ಕಿವಿಯಲ್ಲಿ ಕೇಳಿದ್ದನ್ನು ನಂಬುವುದಿಲ್ಲ. ಕಣ್ಣಾರೆ ನೋಡಿದ್ದನ್ನು ಮಾತ್ರ ನಂಬುತ್ತೇನೆ. ಅವರ ಬಳಿ ದಾಖಲೆ ಇದ್ದರೆ ಬಹಿರಂಗಪಡಿಸಲಿ” ಎಂದು ಸವಾಲೆಸೆದರು.
ಎಚ್.ಡಿ.ಕುಮಾರಸ್ವಾಮಿ ಅವರ ಆರೋಪದ ಬಗ್ಗೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿ, ಅಣ್ಣ-ತಮ್ಮನ ಬಗ್ಗೆ ಮಾತನಾಡದೆ, ಬೇರೆ ಯಾರ ಬಗ್ಗೆ ಮಾತನಾಡುತ್ತಾರೆ? ನನ್ನ ಮೇಲೆ ಅವರಿಗೆ ಪ್ರೀತಿ ಹೆಚ್ಚು. ಹೀಗಾಗಿ ಮಾತನಾಡುತ್ತಾರೆ. ನಾನು ಬಹಳ ಸಂತೋಷದಿಂದ ಅವರ ಮಾತನ್ನು ಸ್ವೀಕರಿಸುತ್ತೇನೆ. ಅವರ ದೊಡ್ಡ ಅನುಭವ, ಜ್ಞಾನ ಭಂಡಾರವನ್ನು ನನ್ನ ಬದುಕಿನಲ್ಲಿ ಅಳವಡಿಸಿಕೊಳ್ಳುತ್ತೇನೆ ಎಂದು ತಿಳಿಸಿದರು.

ಇದೇ ವೇಳೆ ಆಪರೇಶನ್ ಕಮಲದ ಬಗ್ಗೆ ಇಂದಿನ ಸಭೆಯಲ್ಲಿ ಚರ್ಚೆ ಆಯಿತೇ ಎಂದು ಕೇಳಿದಾಗ, ಇಲ್ಲದಿರುವ ವಿಚಾರ ಸೃಷ್ಟಿಸಬೇಡಿ. ಜನರೇ ಈಗಾಗಲೇ ಆಪರೇಶನ್ ಮಾಡಿದ್ದಾರೆ ಎಂದರು.
ನಮ್ಮ ನಾಯಕ ರಾಹುಲ್ ಗಾಂಧಿ ಅವರ ಮೇಲೆ ಮಾನನಷ್ಟ ಮೊಕದ್ದಮೆ ದಾಖಲು ಮಾಡಿದ್ದಲ್ಲದೆ, ತೀರ್ಪಿನ ಅನ್ವಯ ಅವರನ್ನು ಸಂಸತ್ ಸದಸ್ಯ ಸ್ಥಾನದಿಂದ ಅನರ್ಹಗೊಳಿಸಿದ್ದಾರೆ. ಈ ಬಿಜೆಪಿ ಕುತಂತ್ರವನ್ನು ಖಂಡಿಸಿ ಇಂದು ಮಧ್ಯಾಹ್ನ 3 ಗಂಟೆಗೆ ಮಹಾತ್ಮ ಗಾಂಧಿ ಅವರ ಪ್ರತಿಮೆ ಬಳಿ ಕಾಂಗ್ರೆಸ್ ಶಾಸಕರೆಲ್ಲ ಪ್ರತಿಭಟನೆ ಮಾಡುತ್ತೇವೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಬೆಂಗಳೂರಿನಲ್ಲಿ ಎಚ್ಚರಿಕೆ ನೀಡಿದ್ದಾರೆ.
ರಾಹುಲ್ ಗಾಂಧಿ ಅವರ ರಾಜಕೀಯ ಬೆಳವಣಿಗೆ ತಡೆಯಲು ಬಿಜೆಪಿ ಕುತಂತ್ರ ನಡೆಸಿದ್ದು, ಇದನ್ನು ನಾವು ಖಂಡಿಸುತ್ತೇವೆ. ರಾಹುಲ್ ಗಾಂಧಿ ಅವರು ದೇಶದ ಬಡವರ ಧ್ವನಿಯಾಗಿ, ಬೆಲೆ ಏರಿಕೆ ಮತ್ತು ನಿರುದ್ಯೋಗದ ವಿರುದ್ಧ ಹೋರಾಟ ಮಾಡುತ್ತಿದ್ದಾರೆ. ಆದರೆ ಬಿಜೆಪಿ ನಾಯಕರು ಈ ಹೋರಾಟವನ್ನು ಹತ್ತಿಕ್ಕುವ ಪ್ರಯತ್ನಕ್ಕೆ ಮುಂದಾಗಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ದೇಶದ ಐಕ್ಯತೆ ಹಾಗೂ ಶಾಂತಿ ಸ್ಥಾಪನೆಗೆ ಭಾರತವನ್ನು ಒಗ್ಗೂಡಿಸಲು ಮುಂದಾಗಿರುವ ನಮ್ಮ ನಾಯಕ ರಾಹುಲ್ ಗಾಂಧಿ ಅವರ ವಿರುದ್ಧ ಬಿಜೆಪಿ ಸಂಚು ರೂಪಿಸುತ್ತಿದೆ. ದೇಶದ ಎಲ್ಲಾ ವಿರೋಧ ಪಕ್ಷದ ನಾಯಕರು ರಾಹುಲ್ ಗಾಂಧಿ ಅವರ ಬೆನ್ನಿಗೆ ನಿಲ್ಲುತ್ತೇವೆ. ರಾಹುಲ್ ಗಾಂಧಿ ಅವರ ಹೋರಾಟವನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ಬಿಜೆಪಿ ಕುತಂತ್ರಕ್ಕೆ ಜನ ಸೂಕ್ತ ಉತ್ತರ ನೀಡುತ್ತಾರೆ ಎಂದರು.
ಹಾಗೆಯೇ ಮೈಸೂರು, ಬೆಳಗಾವಿ, ಧಾರವಾಡ ಸೇರಿದಂತೆ ವಿಭಾಗೀಯ ಕೇಂದ್ರಗಳಲ್ಲಿ ಕಾರ್ಯಕರ್ತರಿಗೆ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವಂತೆ ಕರೆ ನೀಡುತ್ತಿದ್ದೇನೆ. ಮತ್ತು ಬೆಂಗಳೂರು ಕಾರ್ಯಕರ್ತರು ಕಾಂಗ್ರೆಸ್ ಭವನದ ಗಾಂಧಿ ಪ್ರತಿಮೆ ಬಳಿ ಪ್ರತಿಭಟನೆ ಮಾಡಲು ತಿಳಿಸಿದ್ದೇವೆ ಎಂದರು.
ಶಾಸಕಾಂಗ ಪಕ್ಷದ ಸಭೆಯಲ್ಲಿ ಯಾವ ವಿಚಾರ ಚರ್ಚೆ ಆಗಿದೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ನಾವು ಚುನಾವಣೆಗೂ ಮುನ್ನ ನೀಡಿರುವ ಗ್ಯಾರಂಟಿ ಯೋಜನೆಗಳ ಜಾರಿಗೆ ಪಣ ತೊಟ್ಟಿದ್ದೇವೆ. ಈಗಾಗಲೇ ಅನ್ನಭಾಗ್ಯ, ಗೃಹಜ್ಯೋತಿ, ಶಕ್ತಿ ಯೋಜನೆ ಜಾರಿ ಮಾಡಿದ್ದೇವೆ. ಜುಲೈ 14ರಿಂದ ಗೃಹಲಕ್ಷ್ಮೀ ಯೋಜನೆಗೆ ನೋಂದಣಿ ಆರಂಭಿಸಲಾಗುವುದು. ನಾವು ಐದು ಗ್ಯಾರಂಟಿ ಯೋಜನೆಗಳನ್ನು ಈ ವರ್ಷವೇ ಜಾರಿ ಮಾಡುತ್ತೇವೆ ಎಂದು ಭರವಸೆ ನೀಡಿದರು.
ನಮ್ಮ ಕಾರ್ಯಕರ್ತರು ಜನರಿಗೆ ಎಲ್ಲಾ ಯೋಜನೆಗಳ ಬಗ್ಗೆ ತಿಳಿಸಬೇಕು. ನಮ್ಮ ಯೋಜನೆಗಳು ಎಲ್ಲಾ ಜಾತಿ, ಧರ್ಮ, ವರ್ಗದವರಿಗೆ ತಲುಪಬೇಕು. ವಿಧಾನಸಭೆ ಹಾಗೂ ಪರಿಷತ್‌ನಲ್ಲಿ ನಮ್ಮ ಯೋಜನೆಗಳಿಗೆ ಬಿಜೆಪಿ ನಾಯಕರು ಪ್ರಚಾರ ನೀಡುತ್ತಿರುವುದಕ್ಕೆ ಧನ್ಯವಾದಗಳು. ನಮ್ಮ ಕೈಯಲ್ಲಿ ಮಾಡಲಾಗದ ಕೆಲಸವನ್ನು ಇವರು ಮಾಡುತ್ತಿದ್ದಾರೆ. ಹಾಗೆಯೇ ಸಂತೋಷದಿಂದ ಕೆಲವು ಸಲಹೆಗಳನ್ನು ಕೂಡ ನೀಡುತ್ತಿದ್ದಾರೆ ಎಂದು ತಿಳಿಸಿದರು.
English summary
DCM D.K.Shivakumar reaction on H.D.Kumaraswamy Pendrive politics in Bengaluru.
Story first published: Friday, July 7, 2023, 12:54 [IST]