ದಾವಣಗೆರೆ ಲೋಕಸಭಾ ಕ್ಷೇತ್ರದ ಟಿಕೆಟ್ ಮೇಲೆ ರೇಣುಕಾಚಾರ್ಯ ಕಣ್ಣು: ಜಿ.ಎಂ.ಸಿದ್ದೇಶ್ವರ್‌ಗೆ ಸೆಡ್ಡು ಹೊಡೆದ್ರಾ ಮಾಜಿ ಸಚಿವರು? | If party gives me opportunity, I will contest to Lok Sabha elections Says M.P.Renukacharya

Davanagere

lekhaka-Yogaraja G H

By ದಾವಣಗೆರೆ ಪ್ರತಿನಿಧಿ

|

Google Oneindia Kannada News

ದಾವಣಗೆರೆ, ಜುಲೈ, 13: ನಾನು ಸಂಸದ ಜಿ.ಎಂ. ಸಿದ್ದೇಶ್ವರ ವಿರುದ್ಧ ಇಲ್ಲ. ಪಕ್ಷ ಅವಕಾಶ ಕೊಟ್ಟರೆ ಸ್ಪರ್ಧೆ ಮಾಡುತ್ತೇನೆ ಎಂದು ಹೇಳುವ ಮೂಲಕ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಲೋಕಸಭಾ ಚುನಾವಣೆ ಮೇಲೆ ಕಣ್ಣಿಟ್ಟಿರುವುದು ಸ್ಪಷ್ಟವಾಗುತ್ತಿದೆ. ಪದೇ ಪದೇ ಈ ಮಾತು ಪ್ರಸ್ತಾಪ ಮಾಡುವ ಮೂಲಕ ಕುತೂಹಲದ ನಡೆ ಇಡಲಾರಂಭಿಸಿದ್ದಾರೆ. ಸಿದ್ದೇಶ್ವರ ಹಾಗೂ ರೇಣುಕಾಚಾರ್ಯ ಇಬ್ಬರೂ ಸಹ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪರ ಅತ್ಯಾಪ್ತರು ಎಂಬುದು ಇನ್ನೂ ವಿಶೇಷವಾಗಿದೆ.

ನಾನು ಸಿದ್ದೇಶಣ್ಣನ ವಿರುದ್ಧ ಅಲ್ಲ. ಪಕ್ಷ ಅವಕಾಶ ಮಾಡಿಕೊಟ್ಟರೆ ಸ್ಪರ್ಧೆ ಮಾಡುತ್ತೇನೆ. ಎಸ್.ಎ. ರವೀಂದ್ರನಾಥ್ ಅವರ ಆರೋಗ್ಯ ವಿಚಾರಿಸಲು ಬಂದಿದ್ದೇನೆ. ಅವಕಾಶ ಸಿಕ್ಕರೆ ಸ್ಪರ್ಧೆ ಮಾಡಲು ಸಿದ್ಧನಿದ್ದೇನೆ, ಆದರೆ ಪಕ್ಷ ಒಪ್ಪಬೇಕು. ಲಾಬಿ ಮಾಡುವುದಿಲ್ಲ. ಸಿದ್ದೇಶ್ವರಣ್ಣ ಹಿರಿಯರಿದ್ದಾರೆ. ದಾವಣಗೆರೆ – ಚಿತ್ರದುರ್ಗ ಜಿಲ್ಲೆಯಾಗಿದ್ದಾಗಿನಿಂದಲೂ ರವೀಂದ್ರನಾಥ್ ಅವರು ಪಕ್ಷ ಕಟ್ಟಿದ್ದಾರೆ. ಹಾಗಾಗಿ, ಅವರ ಆರೋಗ್ಯ ಮತ್ತು ಲೋಕಸಭೆ ಚುನಾವಣೆ ಬಗ್ಗೆ ಚರ್ಚೆ ಮಾಡಿದ್ದೇನೆ ಎಂದು ತಿಳಿಸಿದರು.

Davanagere

ದಾವಣಗೆರೆ ತಾಲೂಕಿನ ಶಿರಮಗೊಂಡನಹಳ್ಳಿಯಲ್ಲಿ ಎಸ್.ಎ. ರವೀಂದ್ರನಾಥ್ ಅವರನ್ನು ಭೇಟಿ ಮಾಡಿದ ಬಳಿಕ ಮಾಧ್ಯಮದವರ ಜೊತೆ ಮಾತನಾಡಿದ ರೇಣುಕಾಚಾರ್ಯ, ಪಕ್ಷ ಅವಕಾಶ ಕೊಡಲಿ, ರವೀಂದ್ರನಾಥ್ ಅವರನ್ನು ಭೇಟಿ ಮಾಡಿ ನನ್ನ ಭಾವನೆಗಳನ್ನು ವ್ಯಕ್ತಪಡಿಸಿದ್ದೇನೆ. ಸಹಕಾರ ಕೋರಿದ್ದೇನೆ. ಪಕ್ಷ ಅವಕಾಶ ಮಾಡಿಕೊಟ್ಟರೆ ಸ್ಪರ್ಧೆಗೆ ಸಿದ್ಧ. ದಾವಣಗೆರೆ ಲೋಕಸಭೆಗೆ 8 ವಿಧಾನಸಭಾ ಕ್ಷೇತ್ರಗಳು ಬರುತ್ತವೆ. ಎಲ್ಲಾ ಕ್ಷೇತ್ರಗಳಿಂದಲೂ ಕಾರ್ಯಕರ್ತರು, ಮುಖಂಡರು ಕರೆ ಮಾಡಿ ಮಾತನಾಡುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ನನ್ನ ಹೆಸರು ನಮೂದಿಸುತ್ತಿದ್ದಾರೆ ಎಂದರು.

ಬೇಗ ಅಭ್ಯರ್ಥಿ ಘೋಷಿಸಲಿ

ಜಿ.ಎಂ. ಸಿದ್ದೇಶ್ವರಣ್ಣ ಹಿರಿಯರಿದ್ದಾರೆ. ಅವರು ಸ್ಪರ್ಧೆ ಮಾಡುತ್ತೇನೆ ಎಂದಿದ್ದಾರೆ. ಜಿ.ಎಂ. ಸಿದ್ದೇಶ್ವರ್ ಕಣಕ್ಕಿಳಿದರೆ ಗೆಲುವಿಗೆ ಶ್ರಮಿಸುತ್ತೇನೆ. ಆದಷ್ಟು ಬೇಗ ಅಭ್ಯರ್ಥಿ ಯಾರೆಂಬುದನ್ನು ಘೋಷಿಸಬೇಕು. ವಿಧಾನಸಭೆ ಚುನಾವಣೆಗೆ ತಡ ಮಾಡಿದಂತೆ ಇಲ್ಲಿ ಮಾಡಬಾರದು ಎಂದು ಹೇಳಿದರು.

ರಾಜ್ಯಾಧ್ಯಕ್ಷರ ಬದಲಾವಣೆಯಾಗಲಿ

ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ, ಲೋಕಸಭೆ ಚುನಾವಣೆ ಮುಂದಿನ ದಿನಗಳಲ್ಲಿ ಬರಲಿವೆ. ಈಗಿನಿಂದಲೇ ಸಿದ್ಧತೆ ಮಾಡಿಕೊಳ್ಳಬೇಕಿದೆ. ಹಾಗಾಗಿ, ಬಿಜೆಪಿ ರಾಜ್ಯಾಧ್ಯಕ್ಷರು ಹೊಸಬರು ಆಗಬೇಕು. ಕೆಳಮನೆ, ಮೇಲ್ಮನೆಯಲ್ಲಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಹೋರಾಡಬೇಕಿದೆ. ಈ ನಿಟ್ಟಿನಲ್ಲಿ ಆದಷ್ಟು ಬೇಗ ಆಯ್ಕೆಯಾಗಬೇಕು. ಇದು ರೇಣುಕಾಚಾರ್ಯ ಒತ್ತಾಯವಲ್ಲ, ನಾಡಿನ ಬಿಜೆಪಿ ಕಾರ್ಯಕರ್ತರು ಹಾಗೂ ಜನರ ಒತ್ತಾಸೆಯಾಗಿದೆ. ಪಕ್ಷದ ನಾಯಕರು ಆದಷ್ಟು ಬೇಗ ನೇಮಕ ಮಾಡುತ್ತಾರೆ ಎಂಬ ವಿಶ್ವಾಸವಿದೆ ಎಂದರು.

ಇದು ಆಪರೇಷನ್ ಮಾಡಿದ ಸಿಡಿ ತರ ಅಲ್ಲ; ಪೆನ್ ಡ್ರೈವ್ ಖಾಲಿ ಇಲ್ಲ: ಕೈ ಪಡೆ ವಿರುದ್ದ ಕುಮಾರಸ್ವಾಮಿ ಕಿಡಿಇದು ಆಪರೇಷನ್ ಮಾಡಿದ ಸಿಡಿ ತರ ಅಲ್ಲ; ಪೆನ್ ಡ್ರೈವ್ ಖಾಲಿ ಇಲ್ಲ: ಕೈ ಪಡೆ ವಿರುದ್ದ ಕುಮಾರಸ್ವಾಮಿ ಕಿಡಿ

ತಪ್ಪು ಮಾಡಿಲ್ಲ, ನೋಟಿಸ್‌ಗೆ ಉತ್ತರ ಕೊಡಲ್ಲ

ನಾನು ಪಕ್ಷದ ಮುಖಂಡರು ಹಾಗೂ ಪಕ್ಷದ ವಿರುದ್ದ ಮಾತನಾಡಿಲ್ಲ. ತಪ್ಪು ಮಾಡಿದ್ದರೆ ನೊಟೀಸ್‌ಗೆ ಉತ್ತರ ಕೊಡಬೇಕು. ತಪ್ಪೇ ಮಾಡದಿದ್ದರೆ ಏನೂ ಅಂತಾ ಉತ್ತರಿಸಬೇಕು. ಹಾಗಾಗಿ, ನೋಟಿಸ್‌ಗೆ ಉತ್ತರಿಸುವ ಪ್ರಮೇಯವೇ ಎದುರಾಗದು. ಕಾಂಗ್ರೆಸ್ ಅಧಿಕಾರಕ್ಕೆ ಬರಲು ನಮ್ಮ ಸ್ವಯಂಕೃತ ಅಪರಾಧವೇ ಕಾರಣ ಎಂದರು.

2013, 2023ರಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದದ್ದು ಹೋರಾಟದಿಂದಲ್ಲ. ನಮ್ಮ ತಪ್ಪುಗಳಿಂದ. ರಾಜ್ಯಾಧ್ಯಕ್ಷರ ಬದಲಾವಣೆ ಆಗಬೇಕು ಎಂಬುದು ನನ್ನ ಅಭಿಪ್ರಾಯ ಅಲ್ಲ. ಪಕ್ಷದ ಕಾರ್ಯಕರ್ತರು ಹಾಗೂ ಮುಖಂಡರ ಒತ್ತಾಯವಾಗಿದೆ. ಅವರ ಭಾವನೆಗಳನ್ನು ನಾನು ವ್ಯಕ್ತಪಡಿಸಿದ್ದೇನೆ ಅಷ್ಟೇ ಎಂದರು.

ಬಿ.ಎಸ್. ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಯಾರು ಏನೆಲ್ಲಾ ಮಾತನಾಡಿದರು, ಪಕ್ಷ, ಸ್ವಪಕ್ಷದ ನಾಯಕರ ವಿರುದ್ಧ ಏನೆಲ್ಲಾ ಟೀಕೆ, ಆರೋಪ ಮಾಡಿದರು ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಅವರಿಗೆ ಯಾಕೆ ಆಗ ನೋಟಿಸ್ ಕೊಡಲಿಲ್ಲ ಎಂದು ರೇಣುಕಾಚಾರ್ಯ ಪ್ರಶ್ನಿಸಿದರು.

ಕಾಂಗ್ರೆಸ್ ಸೇರಲ್ಲ, ಬಿಜೆಪಿ ಬಿಡಲ್ಲ

ನಾನು ಯಾವುದೇ ಕಾರಣಕ್ಕೂ ಬಿಜೆಪಿ ಪಕ್ಷ ಬಿಡುವುದಿಲ್ಲ. ಪಕ್ಷವು ನನಗೆ ಎಲ್ಲವನ್ನೂ ನೀಡಿದೆ. ನಾನು ಕಾಂಗ್ರೆಸ್ ಸೇರುತ್ತೇನೆ ಎಂಬುದಾಗಿ ನನ್ನ ರಾಜಕೀಯ ವಿರೋಧಿಗಳು ಅಪಪ್ರಚಾರ ನಡೆಸುತ್ತಿದ್ದಾರೆ. ಕಾಂಗ್ರೆಸ್ ಸೇರುವ ಪ್ರಶ್ನೆಯೇ ಇಲ್ಲ. ಯಾರ ಜೊತೆ ನಾನು ಮಾತನಾಡಿಲ್ಲ. ನಾನು ಪಕ್ಷಕ್ಕಾಗಿ ಜೈಲಿಗೂ ಸಹ ಹೋಗಿಬಂದಿದ್ದೇನೆ ಎಂದು ಸ್ಪಷ್ಟಪಡಿಸಿದರು.

ಜೈನಮುನಿ ಹತ್ಯೆ ಪ್ರಕರಣವನ್ನು ಸಿಬಿಐಗೆ ವಹಿಸಿ

ಜೈನಮುನಿ ಹತ್ಯೆ ಪ್ರಕರಣ ಖಂಡನೀಯ. ಬರ್ಬರ ಹತ್ಯೆ ನಡೆದಿರುವುದು ದೇಶದ ಪ್ರತಿಯೊಬ್ಬರಿಗೂ ಆಘಾತ ತಂದಿದೆ. ಈ ಪ್ರಕರಣವನ್ನು ಸಿಬಿಐಗೆ ವಹಿಸಲೇಬೇಕು. ಸ್ಥಳೀಯ ಪೊಲೀಸರ ಮೇಲೆ ಅಪನಂಬಿಕೆ ಎಂಬುದಲ್ಲ. ಸರಿಯಾದ ರೀತಿಯಲ್ಲಿ ತನಿಖೆಯಾಗಬೇಕಾದರೆ ಸಿಬಿಐಗೆ ವಹಿಸಿದರೆ ಮಾತ್ರ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗುತ್ತದೆ. ಆ ನಿಟ್ಟಿನಲ್ಲಿ ತನಿಖೆ ಸಾಗಬೇಕು. ವಿಳಂಬ ಧೋರಣೆ ಮಾಡಬಾರದು. ಈಗಾಗಲೇ ಪಕ್ಷವು ಈ ಬಗ್ಗೆ ಹೋರಾಟ ನಡೆಸಿದೆ ಎಂದು ಹೇಳಿದರು.

ಕಾಂಗ್ರೆಸ್ ಪ್ರತಿಭಟನೆಗೆ ಅರ್ಥವಿಲ್ಲ

ರಾಹುಲ್ ಗಾಂಧಿಗೆ ರಾಜಕೀಯದಲ್ಲಿ ಪ್ರಬುದ್ಧತೆ ಇಲ್ಲ. ಮಾತಿನಿಂದ ಮಾನನಷ್ಟ ಮೊಕದ್ದಮೆ ಏನೂ ಆಗುವುದಿಲ್ಲ. ಕಾನೂನು ಪ್ರತಿಯೊಬ್ಬರಿಗೂ ಒಂದೇ. ಕಾಂಗ್ರೆಸ್ ಪ್ರತಿಭಟನೆಗೆ ಅರ್ಥವೇ ಇಲ್ಲ. ದೇಶದಲ್ಲಿ ಕಾಂಗ್ರೆಸ್‌ಗೆ ನಾಯಕತ್ವ ಎಲ್ಲಿದೆ?. ಪ್ರತಿಭಟನೆ ಮಾಡಲಿ ಬೇಡವೆಂದವರು ಯಾರು? ಆದರೆ, ಕಾನೂನು ಗೌರವಿಸಬೇಕಲ್ವಾ? ಕಾನೂನಿಗಿಂತ ಯಾರೂ ದೊಡ್ಡವರಲ್ಲ. ತಪ್ಪು ಮಾಡಿದವರಿಗೆ ಶಿಕ್ಷೆಯಾಗಲೇಬೇಕು ಎಂದು ಹೇಳಿದರು.

ವೇಣುಗೋಪಾಲ್ ನಾಯ್ಕ್ ಹತ್ಯೆ ಪ್ರಕರಣದಲ್ಲಿ ಬಿಜೆಪಿ ಸದಸ್ಯರ ತಮ್ಮನನ್ನು ಬಂಧಿಸಲಾಗಿದೆಯಲ್ವಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಯಾರೇ ತಪ್ಪು ಮಾಡಿದ್ದರೂ ಕಠಿಣ ಶಿಕ್ಷೆಯಾಗಲೇಬೇಕು. 31 ವರ್ಷದ ಯುವಕನನ್ನು ಕೊಂದು ಹಾಕಲಾಗಿದೆ. ಕಾನೂನು ಮತ್ತು ಸುವ್ಯವಸ್ಥೆ ರಾಜ್ಯದಲ್ಲಿ ಹದಗೆಟ್ಟಿದೆ ಎಂದರು.

ಸಮರ್ಥ ನಾಯಕತ್ವ ಬೇಕು

ವೀರಶೈವ ಲಿಂಗಾಯತ, ಹಾಲುಮತ ಸಮಾಜ, ಒಕ್ಕಲಿಗ ಸಮಾಜ, ಎಸ್‌, ಎಸ್‌ಟಿ, ಹಿಂದುಳಿದ ವರ್ಗಗಳು ಒಪ್ಪುವಂತಹವರು. ಹಾಗೂ ಎಲ್ಲರನ್ನೂ ಸರಿದೂಗಿಸಿಕೊಂಡು ಹೋಗುವ ನಾಯಕನು ರಾಜ್ಯಾಧ್ಯಕ್ಷರಾಗಬೇಕು. ಸಮರ್ಥ ನಾಯಕತ್ವ ಇರುವವರನ್ನು ಆಯ್ಕೆ ಮಾಡಬೇಕು ಎಂಬುದು ಎಲ್ಲರ ಅಭಿಲಾಷೆ ಎಂದರು.

English summary

If party gives me opportunity, I will contest to Lok Sabha elections Says Foemrer minister M.P.Renukacharya in Shiramagondanahalli

Story first published: Thursday, July 13, 2023, 18:11 [IST]

Source link