ದರ ಏರಿಕೆ, ಮುಂಗಾರು ಕೊರತೆ: ಅರಣ್ಯ ಕೃಷಿ ಚಟುವಟಿಕೆಗೆ ಭಾರೀ ಹಿನ್ನೆಡೆ | Agroforestry Activities Setback Due To Monsoon Delayed

Agriculture

lekhaka-Srinivasa K

By ಮಂಡ್ಯ, ಪ್ರತಿನಿಧಿ

|

Google Oneindia Kannada News

ಮಂಡ್ಯ, ಜುಲೈ 03: ಮುಂಗಾರು ಪೂರ್ವ ಹಾಗೂ ಮುಂಗಾರು ಮಳೆ ಕೊರತೆಯಿಂದ ಜಿಲ್ಲೆಯಲ್ಲಿ ಕೃಷಿ ಚಟುವಟಿಕೆಗೆ ಹಿನ್ನಡೆ ಉಂಟಾಗಿರುವುದಲ್ಲದೆ, ಅರಣ್ಯ ಕೃಷಿಯೂ ಮಂಕಾಗಿದೆ. ಇದರ ಜೊತೆಗೆ ಅರಣ್ಯ ಇಲಾಖೆಯ ವಿತರಿಸಲಾಗುವ ಗಿಡಗಳ ಬೆಲೆಯೂ ಹೆಚ್ಚಳವಾಗಿರುವುದರಿಂದ ಗಿಡಗಳಿಗೆ ಬೇಡಿಕೆಯೇ ಇಲ್ಲದಂತಾಗಿದೆ.

ಕಳೆದ ವರ್ಷ ಕಡಿಮೆ ಬೆಲೆಗೆ ಸಿಗುತ್ತಿದ್ದರಿಂದ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಗಿಡಗಳನ್ನು ಕೊಂಡೊಯ್ಯುತ್ತಿದ್ದರು. ಇದರಿಂದ ಅರಣ್ಯ ಇಲಾಖೆಯಿಂದ ವಿತರಿಸಲಾಗುವ ಗಿಡಗಳಿಗೆ ಭಾರೀ ಬೇಡಿಕೆ ಎದುರಾಗಿತ್ತು. ಆದರೆ, ಈ ವರ್ಷ ಇಲಾಖೆ ಗಿಡಗಳಿಗೆ ಬೆಲೆಯನ್ನು ಹೆಚ್ಚಳ ಮಾಡಿರುವುದರಿಂದ ರೈತರು ಗಿಡಗಳನ್ನು ಕೊಳ್ಳುವುದಕ್ಕೆ ಆಸಕ್ತಿ ತೋರಿಸುತ್ತಿಲ್ಲ.

 Agroforestry Activities Setback Due To Monsoon Delayed

8*12 ಮಾದರಿಯ ಸಸಿಗಳ ಬೆಲೆ 3 ರೂಪಾಯಿಯಿಂದ 23 ರೂಪಾಯಿಗೆ ಹೆಚ್ಚಿಸಲಾಗಿದ್ದರೆ, 6*9 ಮಾದರಿಯ ಗಿಡಗಳ ಬೆಲೆ 1 ರೂಪಾಯಿನಿಂದ 6 ರೂಪಾಯಿಗೆ ಹೆಚ್ಚಿಸಲಾಗಿದೆ. ಇಲಾಖೆ ವತಿಯಿಂದ ಹೆಬ್ಬೇವು, ಮಹಾಘನಿ, ತೇಗ, ರಕ್ತಚಂದನ, ಶ್ರೀಗಂಧ, ಹುಲಚಿ ಸೇರಿದಂತೆ ಆರೇಳು ಮಾದರಿಯ ಗಿಡಗಳನ್ನು ಮಾರಾಟ ಮಾಡಲಾಗುತ್ತಿದೆ.

ಮುಂಗಾರು ವೇಳೆಯಲ್ಲಿ ಭೇಟಿ ನೀಡಲೇಬೇಕಾದ 7 ಆಕರ್ಷಕ ಪ್ರವಾಸಿ ತಾಣಗಳು ಮುಂಗಾರು ವೇಳೆಯಲ್ಲಿ ಭೇಟಿ ನೀಡಲೇಬೇಕಾದ 7 ಆಕರ್ಷಕ ಪ್ರವಾಸಿ ತಾಣಗಳು

ಶೀಘ್ರ ಬೆಳವಣಿಗೆ ಕಾಣುವ ಹೆಬ್ಬೇವು, ಮಹಾಘನಿ, ತೇಗ ಮರಗಳಿಗೆ ಸಾಮಾನ್ಯವಾಗಿ ಹೆಚ್ಚಿನ ಬೇಡಿಕೆ ಇದೆ. ಕಳೆದ ವರ್ಷ ಮುಂಗಾರು ಪೂರ್ವ ಮಳೆಯಿಂದಲೇ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಗಿಡಗಳನ್ನು ಕೊಂಡೊಯ್ದು ನೆಟ್ಟು ಬೆಳೆಸಿದ್ದರು. ಈ ವರ್ಷವೂ ರೈತರಿಂದ ಹೆಚ್ಚಿನ ಬೇಡಿಕೆ ಬರಬಹುದೆಂದು ನಿರೀಕ್ಷಿಸಿ ಅತಿ ಹೆಚ್ಚು ಸಂಖ್ಯೆಯಲ್ಲಿ ಗಿಡಗಳನ್ನು ಮಾರಾಟಕ್ಕೆ ಸಿದ್ಧಪಡಿಸಿಟ್ಟುಕೊಂಡಿದ್ದರೂ ಗಿಡಗಳನ್ನು ಕೊಳ್ಳುವುದಕ್ಕೆ ಮುಂದಾಗುತ್ತಿಲ್ಲ.

ಗಿಡಗಳ ಖರೀದಿಗೆ ರೈತರ ನಿರಾಸಕ್ತಿ

ರೈತರು ಇಲಾಖೆಗೆ ಬಂದು ಗಿಡಗಳ ಬೆಲೆಯನ್ನು ವಿಚಾರಿಸಿಕೊಂಡು ಹೋಗುತ್ತಿದ್ದಾರೆ. ಆದರೆ, ಖರೀದಿಗೆ ಒಲವು ತೋರುತ್ತಿಲ್ಲ. ಇದರಿಂದ ಇಲಾಖೆ ವತಿಯಿಂದ ಗಿಡಗಳು ಮಾರಾಟವಾಗದೆ ಇರುವ ಜಾಗದಲ್ಲೇ ಉಳಿಯುವಂತಾಗಿದೆ. ಮಂಡ್ಯ ತಾಲೂಕು ಒಂದರಲ್ಲೇ ಸುಮಾರು 55 ಸಾವಿರ ಸಸಿಗಳನ್ನು ರೆಡಿಮಾಡಿಟ್ಟುಕೊಂಡಿದ್ದರೂ ಕೊಳ್ಳಲು ರೈತರು ಬಾರದಂತಾಗಿದೆ.

 Agroforestry Activities Setback Due To Monsoon Delayed

ಮಂಡ್ಯ ತಾಲೂಕೊಂದರಲ್ಲೇ ಸುಮಾರು 250 ಮಂದಿ ಅರಣ್ಯ ಕೃಷಿಯನ್ನು ಅವಲಂಬಿಸಿದ್ದಾರೆ. ಹೆಬ್ಬೇವು, ಮಹಾಘನಿ, ಹುಲಚಿ ಸೇರಿದಂತೆ ಕೆಲವು ಮರಗಳ ಬೆಳವಣಿಗೆ ಶೀಘ್ರಗತಿಯಲ್ಲಿರುವುದರಿಂದ ಬಹುತೇಕರು ಇವುಗಳನ್ನು ಬೆಳೆಸುವುದಕ್ಕೆ ಹೆಚ್ಚಿನ ಆಸಕ್ತಿ ತೋರುತ್ತಿದ್ದಾರೆ. ನಗರ-ಪಟ್ಟಣ ಪ್ರದೇಶಗಳ ಜನರು ಖಾಲಿ ಇರುವ ಜಾಗಗಳಲ್ಲಿ ಗಿಡಗಳನ್ನು ತೆಗೆದುಕೊಂಡು ಹೋಗಿ ಬೆಳೆಸುತ್ತಿದ್ದರು. ಈ ಬಾರಿ ಮಳೆ ಕೊರತೆಯಿಂದಲೋ ಏನೋ ರೈತರು ಹಾಗೂ ಜನರು ಗಿಡಗಳನ್ನು ಕೊಳ್ಳುವುದಕ್ಕೆ ನಿರಾಸಕ್ತಿ ತೋರಿದ್ದಾರೆ.

ಕಳೆದ ನಾಲ್ಕೈದು ವರ್ಷಗಳಿಂದ ಅರಣ್ಯ ಇಲಾಖೆಯಿಂದ ಬಹಳಷ್ಟು ಸಂಖ್ಯೆಯ ರೈತರು ಹಾಗೂ ಜನರು ಗಿಡಗಳನ್ನು ಕೊಂಡು ನೆಟ್ಟು ಬೆಳೆಸುವುದಕ್ಕೆ ಆಸಕ್ತಿ ತೋರುತ್ತಿದ್ದರು. ಆದರೆ, ಈ ಬಾರಿ ಪೂರ್ವ ಮುಂಗಾರು ಹಾಗೂ ಮುಂಗಾರು ಮಳೆ ಕೈಕೊಟ್ಟಿರುವುದರಿಂದ ಗಿಡಗಳನ್ನು ನೆಟ್ಟಿ ಬೆಳೆಸುವುದು ಕಷ್ಟವಾಗಬಹುದೆಂಬ ಭಯ ಸಹಜವಾಗಿ ಎಲ್ಲರನ್ನೂ ಕಾಡುತ್ತಿದೆ.

ಇಷ್ಟೊತ್ತಿಗೆ ಮಳೆ ಶುರುವಾಗಿದ್ದರೆ ಮಾರಾಟಕ್ಕೆ ಸಿದ್ಧವಿರುವ ಸಸಿಗಳಲ್ಲಿ ಬಹುತೇಕ ಮಾರಾಟವಾಗುತ್ತಿದ್ದವು. ಆದರೆ, ಮಳೆ ಸಮರ್ಪಕವಾಗಿ ಬಾರದಿರುವುದರಿಂದ ಅರಣ್ಯ ಕೃಷಿ ಮಾಡಲು ಮುಂದಾಗಿದ್ದವರು ಅದರಿಂದ ಹಿಂದೆ ಸರಿಯುತ್ತಿರುವ ಮಾತುಗಳು ಕೇಳಿಬರುತ್ತಿವೆ.

ಪ್ರಸಕ್ತ ಸಾಲಿನಿಂದ ಅರಣ್ಯ ಇಲಾಖೆ ವತಿಯಿಂದ ವಿತರಿಸಲಾಗುವ ಗಿಡಗಳ ಬೆಲೆಯನ್ನು ರಾಜ್ಯ ಸರ್ಕಾರ ತುಸು ಹೆಚ್ಚಳ ಮಾಡಿದೆ. ಏರಿಸಿರುವ ಬೆಲೆಯನ್ನು ಕೊಂಚ ಇಳಿಸಬೇಕೆಂಬ ಬೇಡಿಕೆಯೂ ಕೇಳಿಬರುತ್ತಿದೆ. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರವೂ ಚಿಂತನೆ ನಡೆಸಿದೆ. ಒಮ್ಮೆ ದರ ಇಳಿಸಿದರೆ, ನಿರೀಕ್ಷೆಯಂತೆ ಮಳೆ ಸುರಿದರೆ ಗಿಡಗಳಿಗೆ ಬೇಡಿಕೆ ಸೃಷ್ಟಿಯಾಗಬಹುದೆಂಬ ನಿರೀಕ್ಷೆಯಲ್ಲಿದೆ.

English summary

This year Agroforestry activities setback due to price hike and Monsoon delayed. Know more,

Story first published: Monday, July 3, 2023, 12:07 [IST]

Source link