ದರ ಏರಿಕೆಗೂ ನಮ್ಮ ಸರ್ಕಾರಕ್ಕೂ ಸಂಬಂಧವಿಲ್ಲ-ಸಿಎಂ ಸಿದ್ದರಾಮಯ್ಯ | CM Siddaramaiah React On Price Hike In State

Karnataka

oi-Mallika P

|

Google Oneindia Kannada News

ಬೆಂಗಳೂರು, ಜೂನ್ 24: ರಾಜ್ಯ ಸರ್ಕಾರ ಎಲ್ಲಾ ಸಮಸ್ಯೆಗಳನ್ನು ಎದುರಿಸಲು ಶಕ್ತವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಪ್ರಸ್ತುತ ಮಳೆ ಶುರುವಾಗಿದೆ. ಮಳೆ ಇನ್ನಷ್ಟು ವ್ಯಾಪಕವಾಗಿ ಆಗಬೇಕಿದೆ. ಮಳೆ ಬರಲಿ ಎಂದು ಪ್ರಾರ್ಥಿಸುತ್ತಿದ್ದು, ಬಿತ್ತನೆ ಈಗಾಗಲೇ ಕೆಲವೆಡೆ ಪ್ರಾರಂಭವಾಗಿದೆ. ಇನ್ನು ಕೆಲವೆಡೆ ಕುಡಿಯುವ ನೀರಿನ ಸಮಸ್ಯೆ ಇದ್ದು, ಈಗಾಗಲೇ 2 ಬಾರಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳೊಂದಿಗೆ ಸಭೆ ಕರೆದು ಸೂಚನೆಗಳನ್ನು ನೀಡಲಾಗಿದೆ ಎಂದು ತಿಳಿಸಿದರು.

CM Siddaramaiah React On Price Hike

ಮಳೆ ಯಾವಾಗ ಬಂದರೂ ಬಿತ್ತನೆ ಮಾಡಲು ತಯಾರಾಗಿದ್ದೇವೆ. ಕೃಷಿ ಇಲಾಖೆ ಬೀಜ, ಗೊಬ್ಬರ ಹಾಗೂ ಔಷಧಿಗಳನ್ನು ಸಂಗ್ರಹಿಸಿ ಸರ್ವಸನ್ನದ್ದವಾಗಿದೆ. ಸಸಣ್ಣ ಕೈಗಾರಿಕೆಗಳು ಹಾಗೂ ಕಾಸಿಯಾ ಪ್ರತಿನಿಧಿಗಳೊಂದಿಗೆ ನಿನ್ನೆ ನಡೆದ ಚರ್ಚೆಯಲ್ಲಿ ಅವರು ತಮ್ಮ ಸಮಸ್ಯೆಗಳನ್ನು ತಿಳಿಸಿದ್ದಾರೆ. ಬಜೆಟ್ ಮಂಡನೆಯ ನಂತರ ಈ ಬಗ್ಗೆ ಪರಿಶೀಲಿಸುವ ಭರವಸೆ ನೀಡಲಾಗಿದೆ ಎಂದರು.

ಕೈಗಾರಿಕೆಗಳಿಗೆ ಒಂಭತ್ತು ತಿಂಗಳ ವಿದ್ಯುತ್ ತೆರಿಗೆ ವಿಧಿಸಲಾಗಿದೆ. ಇದರಿಂದ ತಮಗೆ ಹೊರೆಯಾಗಿದೆ ಎಂದು ಕೈಗಾರಿಕೋದ್ಯಮಿಗಳು ತಿಳಿಸಿದ್ದಾರೆ. ದರ ಪರಿಷ್ಕರಣೆ ನಮ್ಮ ಸರ್ಕಾರದ ಅವಧಿಯಲ್ಲಿ ಆಗಿದ್ದಲ್ಲ. ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಮಾಡಿದ್ದು. ದರ ಪರಿಷ್ಕರಣೆಯನ್ನು ಪ್ರತಿ ವರ್ಷ ಕೆ.ಇ. ಆರ್.ಸಿ ಮಾಡುತ್ತದೆ. ದರ ಏರಿಕೆಗೂ ನಮ್ಮ ಸರ್ಕಾರಕ್ಕೂ ಸಂಬಂಧವಿಲ್ಲ. ನಾವೂ ಕೂಡ ಅವರಿಗೆ ಎಷ್ಟು ಮಾಡಬೇಕೆಂದು ಮನವಿ ಸಲ್ಲಿಸಿರುತ್ತೇವೆ. ಅದೊಂದು ಸ್ವಾಯತ್ತ ಸಂಸ್ಥೆಯಾಗಿದೆ ಎಂದರು.

ರಾಜ್ಯದಲ್ಲಿ ವಿದ್ಯುತ್‌ ಬಿಲ್‌ ಹೆಚ್ಚಳದ ಶಾಕ್‌ ; ಗೃಹಜ್ಯೋತಿ ಯೋಜನೆಯ ಹೊರೆಯನ್ನು ಯಾರ ಮೇಲೂ ಹಾಕುತ್ತಿಲ್ಲ: ಸಿದ್ದರಾಮಯ್ಯರಾಜ್ಯದಲ್ಲಿ ವಿದ್ಯುತ್‌ ಬಿಲ್‌ ಹೆಚ್ಚಳದ ಶಾಕ್‌ ; ಗೃಹಜ್ಯೋತಿ ಯೋಜನೆಯ ಹೊರೆಯನ್ನು ಯಾರ ಮೇಲೂ ಹಾಕುತ್ತಿಲ್ಲ: ಸಿದ್ದರಾಮಯ್ಯ

ಬಡವರ ಕಾರ್ಯಕ್ಕೆ ಕೇಂದ್ರದಿಂದ ತೊಂದರೆ

ಈಗಾಗಲೇ ತಿಳಿಸಿರುವಂತೆ ಬಡವರ ಕಾರ್ಯಕ್ರಮಕ್ಕೆ ತೊಂದರೆ ನೀಡಬೇಕೆಂದು ಅಕ್ಕಿ ಕೊಡಲು ಕೇಂದ್ರ ಸರ್ಕಾರ ನಿರಾಕರಿಸಿದೆ. ಅವರ ಬಳಿ ಲಕ್ಷಗಟ್ಟಲೆ ಟನ್ ಅಕ್ಕಿಯಿದೆ. ಖಾಸಗಿಯವರಿಗೆ ಹರಾಜು ಮಾಡುತ್ತಾರೆ. ಆದರೆ ರಾಜ್ಯಗಳಿಗೆ ನೀಡುವುದಿಲ್ಲ ಎನ್ನುತ್ತಾರೆ. ಹಣ ನೀಡಿದರೂ ಕೊಡುವುದಿಲ್ಲ. 36.70 ರೂ. ಗಳ ವೆಚ್ಚದಲ್ಲಿ 1 ಕೆಜಿ ಅಕ್ಕಿ ಪಡೆಯಬಹುದು. ದ್ವೇಷದ ರಾಜಕಾರಣ ಮಾಡುವವರನ್ನು ಬಡವರ ವಿರೋಧಿ ಎನ್ನಬೇಕು ಎಂದರು.

ಬಿ.ಎಸ್.ಯಡಿಯೂರಪ್ಪ ಅವರು ಅಕ್ಕಿ ನೀಡದಿದ್ದರೆ ಧರಣಿ ಮಾಡುವುದಾಗಿ ಹೇಳಿರುವ ಬಗ್ಗೆ ಪ್ರತಿಕ್ರಿಯೆ ನೀಡಿ ಅವರಿಗೆ ಧರಣಿ ಮಾಡುವ ಸ್ವಾತಂತ್ರ್ಯವಿದೆ. ಆದರೆ ಅವರಿಗೆ ಯಾವ ನೈತಿಕತೆ ಇದೆ ಎಂದು ಪ್ರಶ್ನಿಸಿದರು.

ಅಕ್ಕಿ ಖರೀದಿ: ಸರ್ಕಾರಿ ಏಜೆನ್ಸಿಗಳೊಂದಿಗೆ ಮಾತುಕತೆ

ಐದು ಗ್ಯಾರಂಟಿ ಯೋಜನೆಗಳ ಪೈಕಿ ಈಗಾಗಲೇ ಒಂದು ಯೋಜನೆಗೆ ಚಾಲನೆ ನೀಡಲಾಗಿದೆ. ಜುಲೈ ಒಂದರಿಂದ ಉಚಿತ ವಿದ್ಯುತ್ ಯೋಜನೆ ಜಾರಿಗೆ ಬರಲಿದೆ. ಅಕ್ಕಿಯನ್ನು ನೀಡಬೇಕೆಂಬ ಉದ್ದೇಶವಿದ್ದರೂ ಅಕ್ಕಿ ದೊರೆಯುತ್ತಿಲ್ಲ. ದೊರೆತರೂ ಹೆಚ್ಚಿನ ದರ ಕೇಳುತ್ತಾರೆ. 2.29 ಲಕ್ಷ ಮೆಟ್ರಿಕ್ ಟನ್ ಎಲ್ಲಿಯೂ ದೊರೆಯುತ್ತಿಲ್ಲ. ಎಲ್ಲಾ ರಾಜ್ಯದವರೂ ಪೂರ್ಣಪ್ರಮಾಣದ ಅಕ್ಕಿ ದೊರೆಯುತ್ತಿಲ್ಲವಾದ್ದರಿಂದ ಬೇರೆ ಸರ್ಕಾರಿ ಏಜೆನ್ಸಿಗಳಿಂದ ಎನ್.ಸಿ.ಸಿ.ಎಫ್ ನಿಂದ ಕೇಂದ್ರೀಯ ಭಂಡಾರ್, ನ್ಯಾಫೆಡ್ ಸಂಸ್ಥೆಗಳಿಂದ ದರಪಟ್ಟಿ ಕರೆಯಲಾಗಿದ್ದು, ಎಷ್ಟು ಅಕ್ಕಿ, ದರ ಎನ್ನುವ ಬಗ್ಗೆ ತೀರ್ಮಾನ ಮಾಡಲಾಗುವುದು. ಮುಕ್ತ ಮಾರುಕಟ್ಟೆಯಲ್ಲಿ ಅಕ್ಕಿ ಪಡೆಯಲು ಟೆಂಡರ್ ಕರೆಯಬೇಕು. ಜೋಳ, ರಾಗಿ ವಿತರಣೆ 6 ತಿಂಗಳಿಗಾಗುವಷ್ಟಿದೆ. 2 ಕೆಜಿಯಂತೆ ನೀಡಬಹುದು. ಇನ್ನೂ 3 ಕೆಜಿ ಅಕ್ಕಿ ನೀಡಬೇಕಿದೆ. ಇಡೀ ವರ್ಷ ನೀಡುವಷ್ಟು ರಾಗಿ, ಜೋಳವಿಲ್ಲ ಎಂದರು.

English summary

Our government has nothing to do with the rate hike, CM Siddaramaiah react on price hike. Know more

Story first published: Saturday, June 24, 2023, 17:49 [IST]

Source link