India
oi-Ravindra Gangal
ಚೆನ್ನೈ, ಜೂನ್ 23: ಭಾರತೀಯ ಜನತಾ ಪಕ್ಷದ (ಬಿಜೆಪಿ) ತಮಿಳುನಾಡು ಘಟಕವು ನಟ ವಿಜಯ್ ಅವರನ್ನು ಚುನಾವಣಾ ಮೈತ್ರಿಗೆ ಆಹ್ವಾನಿಸಿದೆ. ಬಿಜೆಪಿ ಶಾಸಕಾಂಗ ಪಕ್ಷದ ನಾಯಕ ಮತ್ತು ತಿರುನಲ್ವೇಲಿ ಶಾಸಕ ನೈನಾರ್ ನಾಗೇಂದ್ರನ್ ಅವರು ವಿಜಯ್ ಅವರ ರಾಜಕೀಯ ಆಸೆಯಲ್ಲಿ ಯಾವುದೇ ತಪ್ಪಿಲ್ಲ. ಒಂದು ವೇಳೆ, ಅವರು ರಾಜಕೀಯಕ್ಕೆ ಬಂದರೆ ಬಿಜೆಪಿ ಅವರನ್ನು ಮೈತ್ರಿಗೆ ಆಹ್ವಾನಿಸುತ್ತದೆ ಎಂದು ಹೇಳಿದ್ದಾರೆ.
‘ನಟ ವಿಜಯ್ ಮುಂದಿನ ಮುಖ್ಯಮಂತ್ರಿ ಎಂದು ಅವರ ಅಭಿಮಾನಿಗಳು ಪೋಸ್ಟರ್ ಹಾಕುವುದರಲ್ಲಿ ತಪ್ಪೇನಿಲ್ಲ. ನಟ ವಿಜಯ್ ರಾಜಕೀಯಕ್ಕೆ ಬರಲಿ. ಅವರು ಚುನಾವಣೆಗೆ ಸ್ಪರ್ಧಿಸಿದರೆ ಬಿಜೆಪಿ ಜೊತೆ ಮೈತ್ರಿಗೆ ಆಹ್ವಾನಿಸುತ್ತೇವೆ’ ಎಂದು ನಾಗೇಂದ್ರನ್ ತಿಳಿಸಿದ್ದಾರೆ.
ವಿಜಯ್ ಸೇರಿದಂತೆ ಯಾರೇ ಮೈತ್ರಿ ಬಯಸಿದರೂ ಪಕ್ಷ ಒಪ್ಪಿಕೊಳ್ಳಲು ಸಿದ್ಧ ಎಂದು ಶಾಸಕರು ತಿಳಿಸಿದ್ದಾರೆ. ಬಿಜೆಪಿ ಯಾವುದೇ ಧರ್ಮವನ್ನು ಟೀಕಿಸುವುದಿಲ್ಲ. ಇದು ಧಾರ್ಮಿಕ ಪಕ್ಷವೂ ಅಲ್ಲ ಎಂದು ಅವರು ಹೇಳಿದ್ದಾರೆ.
ತಮಿಳುನಾಡು ರಾಜಕೀಯ ನಟರಿಂದ ಶಾಪಗ್ರಸ್ತವಾಗಿದೆ ಎಂಬ ಡಿಎಂಕೆ ಮಿತ್ರಪಕ್ಷ ವಿಸಿಕೆ ಹೇಳಿಕೆ ನೀಡಿದೆ. ಇದಕ್ಕೆ ಪ್ರತಿಕ್ರಿಯಿಸಿದ ಬಿಜೆಪಿ ಶಾಸಕರು, ‘ನಟರು ರಾಜಕೀಯಕ್ಕೆ ಬರುವುದು ‘ಶಾಪ’ ಎಂದು ಹೇಳುವುದು ತಪ್ಪು. ನಟರು ಮಾತ್ರವಲ್ಲ, ಯಾವುದೇ ಕ್ಷೇತ್ರದವರು ರಾಜಕೀಯ ಸೇರಬಹುದು. ಅವರು ರಾಜಕೀಯ ಸ್ಥಾನವನ್ನು ಅಲಂಕರಿಸಿದ ನಂತರವೇ ಅವರ ಸಾಮರ್ಥ್ಯ ಬಹಿರಂಗಗೊಳ್ಳುತ್ತದೆ’ ಎಂದು ಪ್ರತಿಪಾದಿಸಿದ್ದಾರೆ.
ಶಾಸಕರ ತರಬೇತಿಗೆ ವೀರೇಂದ್ರ ಹೆಗ್ಗಡೆ, ರವಿಶಂಕರ್ ಗುರೂಜಿಗೆ ಆಹ್ವಾನ-ಎಸ್‌ಡಿಪಿಐ ಕೆಂಡಾಮಂಡಲ
ಅದೇ ರೀತಿ, ಕೊಯಮತ್ತೂರು (ದಕ್ಷಿಣ) ಶಾಸಕಿ ಮತ್ತು ಬಿಜೆಪಿ ರಾಷ್ಟ್ರೀಯ ಮಹಿಳಾ ವಿಭಾಗದ ಮುಖ್ಯಸ್ಥೆ ವನತಿ ಶ್ರೀನಿವಾಸನ್ ಕೂಡ ವಿಜಯ್ ರಾಜಕೀಯಕ್ಕೆ ಪ್ರವೇಶಿಸುವ ಯೋಜನೆಯನ್ನು ಸ್ವಾಗತಿಸಿದ್ದಾರೆ.
‘ಯಾರು ಬೇಕಾದರೂ ರಾಜಕೀಯ ಸೇರಬಹುದು. ವಿಜಯ್ ರಾಜಕೀಯಕ್ಕೆ ಬಂದರೆ ಅದನ್ನು ತುಂಬು ಹೃದಯದಿಂದ ಸ್ವಾಗತಿಸುತ್ತೇವೆ. ಏಕೆಂದರೆ ಯುವಕರು ರಾಜಕೀಯದಲ್ಲಿ ಹೆಚ್ಚು ಭಾಗವಹಿಸಿದಾಗ ಪ್ರಜಾಪ್ರಭುತ್ವಕ್ಕೆ ಹೊಸ ವೇಗ ಸಿಗುತ್ತದೆ. ಹಾಗಾಗಿ ನಟ ವಿಜಯ್ ರಾಜಕೀಯಕ್ಕೆ ಬಂದರೆ ಬಿಜೆಪಿ ಸ್ವಾಗತಿಸುತ್ತದೆ’ ಎಂದೂ ಹೇಳಿದ್ದಾರೆ.
ತಮಿಳುನಾಡಿನಲ್ಲಿ ಖ್ಯಾತಿ ಗಳಿಸಿರುವ ವಿಜಯ್ ಅವರು ಅತ್ಯಂತ ಜನಪ್ರಿಯ ನಟರಾಗಿದ್ದಾರೆ. ಅವರು ನಿನ್ನೆಯಷ್ಟೇ 49 ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಅವರ ಜನ್ಮದಿನವನ್ನು ಸಂಭ್ರಮದಿಂದ ಆಚರಿಸಿರುವ ಅಭಿಮಾನಿಗಳು ಮುಂದಿನ ಮುಖ್ಯಮಂತ್ರಿ ದಳಪತಿ ವಿಜಯ್ ಎಂದು ಪೋಸ್ಟರ್ ಹಾಕಿದ್ದಾರೆ.
ಲೋಕೇಶ್ ಕನಕರಾಜ್ ನಿರ್ದೇಶನದ ಲಿಯೋ ಚಿತ್ರದಲ್ಲಿ ಸದ್ಯ ವಿಜಯ್ ನಟಿಸುತ್ತಿದ್ದಾರೆ. ಲಿಯೋ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಬಿಡಗಡೆಯಾಗಿದೆ. ಮಾಸ್ಟರ್ ನಂತರ ವಿಜಯ್ ಮತ್ತು ಲೋಕೇಶ್ ಕನಕರಾಜ್ ಜೋಡಿಯ ಎರಡನೇ ಚಿತ್ರವಾಗಿದೆ.
ಈ ಚಿತ್ರದಲ್ಲಿ ತ್ರಿಶಾ, ಸಂಜಯ್ ದತ್, ಅರ್ಜುನ್, ಪ್ರಿಯಾ ಆನಂದ್, ಗೌತಮ್ ವಾಸುದೇವ್ ಮೆನನ್, ಮನ್ಸೂರ್ ಅಲಿ ಖಾನ್, ಸ್ಯಾಂಡಿ ಮತ್ತು ಮಿಸ್ಕಿನ್ ಸೇರಿದಂತೆ ಹಲವರು ನಟಿಸುತ್ತಿದ್ದಾರೆ. 15 ವರ್ಷಗಳ ನಂತರ ತ್ರಿಷಾ ಮತ್ತು ವಿಜಯ್ ಒಟ್ಟಿಗೆ ತೆರೆ ಮೇಲೆ ಕಾಣಿಸಿಕೊಳ್ಳುತ್ತಿದ್ದಾರೆ.
English summary
Tamil Nadu unit of the Bharatiya Janata Party (BJP) has invited actor Vijay for the electoral alliance
Story first published: Friday, June 23, 2023, 11:32 [IST]