ಇಂಡಿಯನ್ ಪ್ರೀಮಿಯರ್ ಲೀಗ್-2025ರಲ್ಲಿ ನಡೆದ ಮೊದಲ ಸೂಪರ್ ಓವರ್ನಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ರೋಚಕ ಗೆಲುವು ಸಾಧಿಸಿದ ಡೆಲ್ಲಿ ಕ್ಯಾಪಿಟಲ್ಸ್ ಅಂಕಪಟ್ಟಿಯಲ್ಲಿ ಮತ್ತೆ ಅಗ್ರಸ್ಥಾನಕ್ಕೆ ಲಗ್ಗೆ ಇಟ್ಟಿದೆ.
ತನ್ನದಲ್ಲದ ಪಂದ್ಯದಲ್ಲಿ ಡೆಲ್ಲಿಗೆ ‘ಸೂಪರ್’ ಗೆಲುವು; ಚಿನ್ನದಂಥ ಅವಕಾಶ ಕೈಚೆಲ್ಲಿ ಸೂಪರ್ ಓವರ್ನಲ್ಲಿ ಮುಗ್ಗರಿಸಿದ ಆರ್ಆರ್ (AFP)
18ನೇ ಆವೃತ್ತಿಯ ಐಪಿಎಲ್ ಮತ್ತೊಂದು ರೋಚಕ ಪಂದ್ಯಕ್ಕೆ ಸಾಕ್ಷಿಯಾಗಿದೆ. ಪಂಜಾಬ್ ಕಿಂಗ್ಸ್ ಮತ್ತು ಕೆಕೆಆರ್ ಪಂದ್ಯದ ಬಳಿಕ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ನಡುವಿನ ಪಂದ್ಯ ಮನರಂಜನೆಯ ರಸದೌತಣ ಉಣಬಡಿಸಿತು. ಯಾವಾಗ ಬೇಕಾದರೂ ಪಂದ್ಯದ ಚಿತ್ರಣ ಬದಲಾಗಬಹುದು ಎಂಬುದಕ್ಕೆ ಐಪಿಎಲ್ನ 32ನೇ ಪಂದ್ಯ ಸಾಕ್ಷಿ. ಕೊನೆಯ ಎಸೆತದ ತನಕ ತನ್ನದೇ ಎಂದು ಷರಾ ಬರೆದಿಟ್ಟಿದ್ದ ರಾಯಲ್ಸ್ ತನ್ನ ಎದುರಿದ್ದ ಚಿನ್ನದಂಥ ಅವಕಾಶಗಳನ್ನು ಕೈಚೆಲ್ಲಿ ಸೂಪರ್ ಓವರ್ನಲ್ಲಿ ಮುಗ್ಗರಿಸಿತು. ಇನ್ನಿಂಗ್ಸ್ದುದ್ದಕ್ಕೂ ಏಕಪಕ್ಷೀಯವಾಗಿ ಸಾಗಿದ ಪರಿಣಾಮ ತನ್ನದಲ್ಲದ ಪಂದ್ಯ ಎಂದು ಭಾವಿಸಿದ್ದ ಡೆಲ್ಲಿ ಸೂಪರ್ ಡೂಪರ್ ಗೆಲುವಿನೊಂದಿಗೆ ಸಂಭ್ರಮಿಸಿದೆ.
ರಾಯಲ್ಸ್ ವಿರುದ್ಧ ಪಡೆದಿದ್ದು ಒಂದೇ ವಿಕೆಟ್ ಆದರೂ ಇನ್ನಿಂಗ್ಸ್ನ 20ನೇ ಓವರ್ ಮತ್ತು ಸೂಪರ್ ಓವರ್ನಲ್ಲಿ ಅದ್ಭುತ ಬೌಲಿಂಗ್ ಮಾಡಿದ ಹಿನ್ನೆಲೆ ಡೆಲ್ಲಿ ವೇಗಿ ಮಿಚೆಲ್ ಸ್ಟಾರ್ಕ್ ಗೆಲುವಿನ ರೂವಾರಿಯಾದರು. 2025ರ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಜರುಗಿದ ಮೊದಲ ಸೂಪರ್ ಓವರ್ನಲ್ಲಿ 12 ರನ್ ಗುರಿ ಬೆನ್ನಟ್ಟಿದ ಡೆಲ್ಲಿ ಇನ್ನೂ 2 ಎಸೆತ ಬಾಕಿ ಇರುವಂತೆ ಜಯದ ಕೇಕೆ ಹಾಕಿತು. ಸೂಪರ್ ಓವರ್ ಸೇರಿದಂತೆ ಪಂದ್ಯದುದ್ದಕ್ಕೂ ಮಾಡಿದ ಎಡವಟ್ಟುಗಳೇ ಪಿಂಕ್ ಆರ್ಮಿ ಸೋಲಿಗೆ ಕಾರಣ. ಹ್ಯಾಟ್ರಿಕ್ ಸೋಲಿಗೆ ಶರಣಾದ ಆರ್ಆರ್, ಪ್ಲೇಆಫ್ ಆಸೆಯನ್ನು ಜೀವಂತವಾಗಿಟ್ಟುಕೊಳ್ಳಲು ಬಲಿಷ್ಠವಾಗಿ ಕಂಬ್ಯಾಕ್ ಮಾಡುವ ಅಗತ್ಯ ಇದೆ. ಮತ್ತೊಂದೆಡೆ ಸತತ 4 ಗೆಲುವುಗಳ ನಂತರ ಮೊದಲ ಸೋಲು ಕಂಡಿದ್ದ ಡಿಸಿ ಇದೀಗ ಗೆದ್ದು ಲಯಕ್ಕೆ ಮರಳಿದೆ.