Karnataka
oi-Shankrappa Parangi
ವಿಜಯಪುರ, ಜೂನ್ 22: ಕಾಂಗ್ರೆಸ್‌ನ ಮಹಾತ್ವಾಕಾಂಕ್ಷೆಯ ಅಕ್ಕಿ ವಿತರಣೆ ಸಂಬಂಧ ರಾಜ್ಯವು ಕೇಂದ್ರ ಸರ್ಕಾರದೊಂದಿಗೆ ಮೊದಲಿನಿಂದಲೂ ವ್ಯವಹರಿಸುತ್ತಲೇ ಇದೆ. ಮೊದಲು ಕೊಡುವುದಾಗಿ ಹೇಳಿದ್ದ ಕೇಂದ್ರ ಸರ್ಕಾರ ಇದೀಗ ಅಕ್ಕಿ ನೆಪದಲ್ಲಿ ರಾಜಕೀಯ ಮಾಡುತ್ತಿದೆ. ಬಡವರ ವಿರೋಧಿ ನೀತಿ ತಾಳಿದೆ ಎಂದು ಕೈಗಾರಿಕೆ ಸಚಿವ ಎಂ.ಬಿ.ಪಾಟೀಲ್ ಹೇಳಿದರು.
ಗುರುವಾರ ಜಿಲ್ಲೆಯ ತಮ್ಮ ನಿವಾಸದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ರಾಜ್ಯದ ಬಡವರಿಗೆ ತಿಂಗಳಿಗೆ 10 ಕೆಜಿ ಅಕ್ಕಿಯನ್ನು ಉಚಿತವಾಗಿ ಕೊಡಲು ಸರ್ಕಾರ ಬದ್ಧವಾಗಿದೆ. ಆದರೆ ಈ ವಿಚಾರದಲ್ಲಿ ಕೇಂದ್ರ ಸರಕಾರವು ರಾಜಕೀಯ ಮಾಡುತ್ತಿದೆ. ತಡವಾಗಿಯಾದರೂ ಸರಿಯೇ, ಅನ್ನಭಾಗ್ಯ ಯೋಜನೆ ಜಾರಿಗೆ ತಂದೇ ತರುತ್ತೇವೆ ಎಂದು ಸ್ಪಷ್ಟಪಡಿಸಿದರು.
ರಾಜ್ಯ ಸರ್ಕಾರ ಕೇಂದ್ರವನ್ನು ಸಂಪರ್ಕಿಸಿದಾಗ, ತನ್ನಲ್ಲಿ 7.5 ಲಕ್ಷ ಟನ್ ಅಕ್ಕಿ ದಾಸ್ತಾನಿದ್ದು, ರಾಜ್ಯಕ್ಕೆ ಅಗತ್ಯವಿರುವಷ್ಟು ಅಕ್ಕಿ ಕೊಡುವುದಾಗಿ ಕೇಂದ್ರ ಬಿಜೆಪಿ ಸರ್ಕಾರ ಹೇಳಿತ್ತು. ಆದರೆ ಈಗ ಅದು ತದ್ವಿರುದ್ಧ ಧೋರಣೆ ತಾಳಿದೆ. ನಾವೇನೂ ಅವರನ್ನು ಉಚಿತವಾಗಿ ಅಕ್ಕಿ ಕೊಡಿ ಎಂದು ಕೇಳಿರಲಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ದಿ.ಅನಂತ್ ಕುಮಾರ್‌ರನ್ನು ನೋಡಿ ಕಲಿಯಿರಿ: ನನ್ನ ಬ್ರಾಹ್ಮಣ ಸಮಾಜದ ಮಧ್ಯೆ ಉತ್ತಮ ಸಂಬಂಧವಿದೆ: ಎಂಬಿಪಾ ತಿರುಗೇಟು
ಬೇರೆ ರಾಜ್ಯಗಳಿಂದ ಅಕ್ಕಿ ಖರೀದಿಸಲು ನಾವು ಯೋಚಿಸುತ್ತಿದ್ದೇವೆ. ಜತೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ಕೇಂದ್ರ ಸಚಿವ ಅಮಿತ್ ಶಾ ಅವರೊಂದಿಗೆ ಈ ಸಂಬಂಧ ಮಾತುಕತೆ ನಡೆಸಿದ್ದಾರೆ. ಕೇಂದ್ರ ಸರ್ಕಾರದ ಬೇರೆಬೇರೆ ಸಂಸ್ಥೆಗಳನ್ನೂ ಈ ಸಂಬಂಧ ಸಂಪರ್ಕಿಸಲಾಗಿದೆ. ಈ ಎಲ್ಲ ಕಾರಣಗಳಿಂದ ಅನ್ನಭಾಗ್ಯ ಯೋಜನೆಯ ಜಾರಿ ಸ್ವಲ್ಪ ವಿಳಂಬವಾಗುತ್ತಿದೆ. ಆದರೆ, ಜಾರಿಗೆ ಬರುವುದರಲ್ಲಿ ಯಾವ ಅನುಮಾನವೂ ಇಲ್ಲ. ಜನರಿಗೆ ಕೊಟ್ಟ ಮಾತಿನಂತೆ ನಮ್ಮ ಸರ್ಕಾರ ನಡೆದುಕೊಳ್ಳಲಿದೆ ಎಂದು ಪುನರುಚ್ಚರಿಸಿದರು.
ಕೈಗಾರಿಕೆ ಇಲಾಖೆ: ಜುಲೈ ತಿಂಗಳಲ್ಲಿ ದೆಹಲಿಗೆ
ಭಾರೀ ಮತ್ತು ಮಧ್ಯಮ ಕೈಗಾರಿಕೆ ಇಲಾಖೆಯ ಬೆಳವಣಿಗೆಗೆ ಸಂಬಂಧಿಸಿದಂತೆ ಸದ್ಯಕ್ಕೆ ಸಮಗ್ರ ನೀಲನಕ್ಷೆ ಸಿದ್ಧಪಡಿಸಲಾಗುತ್ತಿದೆ. ಇದು ಈ ತಿಂಗಳಲ್ಲಿ ಅಂತಿಮ ರೂಪ ಪಡೆಯಲಿದೆ. ಬಳಿಕ, ಜುಲೈ ತಿಂಗಳಲ್ಲಿ ದೆಹಲಿಗೆ ತೆರಳಿ, ಕೇಂದ್ರ ಕೈಗಾರಿಕಾ ಸಚಿವರ ಜತೆ ಕೂಲಂಕಷವಾಗಿ ಚರ್ಚಿಸಲಾಗುವುದು.
ರಾಜ್ಯದಲ್ಲಿ ಕೈಗಾರಿಕಾ ಕ್ಷೇತ್ರವನ್ನು ಹೇಗೆ ಪ್ರಗತಿಯತ್ತ ಕೊಂಡೊಯ್ಯಬೇಕು ಎನ್ನುವ ಬಗ್ಗೆ ಸ್ಪಷ್ಟ ಕಲ್ಪನೆ ಸರ್ಕಾರಕ್ಕಿದೆ. ಹಾಗೆಯೇ ಕೇಂದ್ರದಿಂದ ನಮಗೆ ದೊರೆಯಬಹುದಾದ ಸಹಾಯ ಮತ್ತು ನಮ್ಮಲ್ಲಿ ಯಾವ್ಯಾವ ಉದ್ದಿಮೆಗಳಿಗೆ ಹೇರಳ ಅವಕಾಶಗಳಿವೆ ಎನ್ನುವುದನ್ನೆಲ್ಲ ಚರ್ಚಿಸಲಾಗುವುದು. ಇದರಿಂದ ರಾಜ್ಯದ ಎಲ್ಲೆಡೆಗಳಲ್ಲೂ ಉದ್ದಿಮೆಗಳು ಬರಲು ಸಹಾಯವಾಗಲಿದೆ ಎಂದು ಅವರು ಹೇಳಿದರು.
ಲೀಥಿಯಂ ಕೋಶ ಉತ್ಪಾದನೆ: ರಾಜ್ಯದಲ್ಲಿ 8 ಸಾವಿರ ಕೋಟಿ ರೂ. ಹೂಡಿಕೆಗೆ ಐಬಿಸಿ ಕಂಪನಿ ಒಲವು
ವಿದ್ಯುತ್ ಬೆಲೆ ಏರಿಕೆ- ಸಿಎಂ ಜತೆ ಚರ್ಚೆ
ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗವು ಇತ್ತೀಚೆಗೆ ವಿದ್ಯುತ್ ಬೆಲೆ ಏರಿಸಿದ್ದು, ಇದರ ಬಗ್ಗೆ ಕೈಗಾರಿಕೋದ್ಯಮಿಗಳು ಕಳವಳ ಹೊರಹಾಕಿದ್ದಾರೆ. ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಇಂಧನ ಸಚಿವ ಕೆ.ಜೆ.ಜಾರ್ಜ್ ಅವರೊಂದಿಗೆ ಮಾತುಕತೆ ನಡೆಸಲಿದ್ದೇನೆ. ಆದ್ದರಿಂದ ಕೈಗಾರಿಕೋದ್ಯಮಿಗಳು ಯಾವುದೇ ಪ್ರತಿಕೂಲ ತೀರ್ಮಾನ ತೆಗೆದುಕೊಳ್ಳಬಾರದು ಎಂದು ಅವರು ಮನವಿ ಮಾಡಿದರು.
ವಿದ್ಯುತ್ ದರ ಏರಿಕೆ ಸರ್ಕಾರ ತೀರ್ಮಾನವಲ್ಲ. KERC ಸ್ವಾಯತ್ತ ಸಂಸ್ಥೆಯಾಗಿದ್ದು, ಅದು ಕಾಲಕಾಲಕ್ಕೆ ಬೆಲೆ ಪರಿಷ್ಕರಣೆ ಮಾಡುತ್ತಲೇ ಇರುತ್ತದೆ. ಮುಂದೆಯೂ ಅದು ಇದನ್ನು ಮಾಡಲಿದೆ. ಈಗಿನ ಬೆಲೆ ಏರಿಕೆಯು ಕಾಂಗ್ರೆಸ್ ಸರ್ಕಾರ ಬರುವುದಕ್ಕೂ ಮೊದಲೇ ಆಗಿದ್ದ ತೀರ್ಮಾನವಾಗಿದೆ. ಇದನ್ನು ಉದ್ಯಮಿಗಳು ಅರ್ಥ ಮಾಡಿಕೊಳ್ಳಬೇಕು ಎಂದರು.
English summary
Anti poor attitude of central which had earlier promised to provide rice, Central industry ministers meet in july discuse industries development, says MB Patil.
Story first published: Thursday, June 22, 2023, 14:34 [IST]