ಜಗದೀಶ್ ಶೆಟ್ಟರ್‌, ಬೋಸರಾಜುಗೆ ಪರಿಷತ್ ಟಿಕೆಟ್ ಕನ್ಫರ್ಮ್: ಬಾಬುರಾವ್ ಚಿಂಚನಸೂರ್‌ಗೆ ಚಾನ್ಸ್ ಮಿಸ್! | Karnataka MLC Election Congress ticket confirmed for Jagadish Shettar and Boseraju

Karnataka

oi-Malathesha M

|

Google Oneindia Kannada News

ಬೆಂಗಳೂರು: ವಿಧಾನ ಪರಿಷತ್ ಚುನಾವಣೆಗೆ ಕೌಂಟ್‌ಡೌನ್ ಶುರುವಾಗಿದ್ದು, ಜೂನ್ 30ರಂದು ಪರಿಷತ್ತಿನ 3 ಸ್ಥಾನಗಳಿಗೆ ನಡೆಯಲಿರುವ ಉಪಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳನ್ನು ಫೈನಲ್ ಮಾಡಿದೆ. ಅಳೆದು ತೂಗಿ, ಲೆಕ್ಕಾಚಾರ ಹಾಕಿ ಟಿಕೆಟ್ ನೀಡಿದ್ದಾರೆ ಕಾಂಗ್ರೆಸ್ ನಾಯಕರು. ಆದ್ರೆ ಟಿಕೆಟ್ ಸಿಕ್ಕೇ ಸಿಗಲಿದೆ ಅನ್ನೋ ನಿರೀಕ್ಷೆಯಲ್ಲಿದ್ದ ಬಾಬುರಾವ್ ಚಿಂಚನಸೂರ್‌ಗೆ ಚಾನ್ಸ್ ಮಿಸ್ ಆಗಿ ಶಾಕ್ ಸಿಕ್ಕಿದೆ!

ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್‌ಎಸ್ ಬೋಸರಾಜು, ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಹಾಗೂ ಮಾಜಿ ಸಚಿವ ಬಾಬುರಾವ್ ಚಿಂಚನಸೂರ್ ಸೇರಿ ಇತರರ ಹೆಸರುಗಳು ಕಾಂಗ್ರೆಸ್‌ನ ಪಟ್ಟಿಯಲ್ಲಿವೆ ಎಂಬ ಮಾತುಗಳು ಕೇಳಿಬಂದಿದ್ದವು. ಆದರೆ ನಿರೀಕ್ಷೆ ಉಲ್ಟಾ ಆಗಿದ್ದು, ಮಾಜಿ ಸಚಿವ ಬಾಬುರಾವ್ ಚಿಂಚನಸೂರ್‌ಗೆ ಶಾಕ್ ಕೊಟ್ಟಿದೆ ಕಾಂಗ್ರೆಸ್ ಹೈಕಮಾಂಡ್. ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಲು ತಮ್ಮ ವಿಧಾನ ಪರಿಷತ್‌ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು ಬಾಬುರಾವ್‌ ಚಿಂಚನಸೂರ್. ಈ ಹಿನ್ನೆಲೆ ಚಿಂಚನಸೂರ್ ಟಿಕೆಟ್ ಪಡೆಯಲಿದ್ದಾರೆ ಎಂಬ ನಂಬಿಕೆ ಇತ್ತು. ಆದರೆ ಅನಿರೀಕ್ಷಿತ ಪಟ್ಟಿ ಪ್ರಕಟಿಸಿದ್ದಾರೆ ಕಾಂಗ್ರೆಸ್ ನಾಯಕರು.

Karnataka MLC Election Congress ticket confirmed for Jagadish Shettar and Boseraju

ಪರಿಷತ್ ಟಿಕೆಟ್ ಸಿಕ್ಕಿದ್ದು ಯಾರಿಗೆಲ್ಲಾ?

ಈಗ ಘೋಷಣೆಯಾಗಿರುವ ಪಟ್ಟಿಯಲ್ಲಿ ವಿಜ್ಞಾನ & ತಂತ್ರಜ್ಞಾನ ಸಚಿವ ಎನ್‌ಎಸ್ ಬೋಸರಾಜು, ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಹಾಗೂ ತಿಪ್ಪಣ್ಣ ಕಮಕನೂರ್​ ಅವರಿಗೆ ಟಿಕೆಟ್ ನೀಡಿದೆ ಕಾಂಗ್ರೆಸ್. ನಾಮಪತ್ರ ಸಲ್ಲಿಸಲು ಮಂಗಳವಾರ ಅಂದ್ರೆ ನಾಳೆ ಜೂ.20 ಕೊನೇ ದಿನ. ಮಧ್ಯಾಹ್ನ 3 ಗಂಟೆಯವರೆಗೆ ನಾಮಪತ್ರ ಸಲ್ಲಿಸಲು ಅವಕಾಶವಿದೆ. ಜೂನ್‌ 21 ರಂದು ನಾಮಪತ್ರ ಪರಿಶೀಲನೆ ನಡೆಯಲಿದೆ. ಮತ್ತು ಜೂನ್‌ 23ರಂದು ನಾಮಪತ್ರ ಹಿಂಪಡೆಯಲು ಕೊನೇ ದಿನವಾಗಿದೆ. ಜೂನ್‌ 30ರ ಬೆಳಗ್ಗೆ 9ರಿಂದ ಸಂಜೆ 4ರವರೆಗೆ ಶಾಸಕರು ಮತದಾನ ಮಾಡಲಿದ್ದಾರೆ. ಆ ನಂತರ ಮತ ಎಣಿಕೆ ನಡೆಯಲಿದ್ದು, ಫಲಿತಾಂಶವೂ ಪ್ರಕಟವಾಗಲಿದೆ.

ಶೆಟ್ಟರ್ ಬೆನ್ನಿಗೆ ನಿಂತ ಕಾಂಗ್ರೆಸ್!

2023ರ ಚುನಾವಣೆಯಲ್ಲಿ ಕಿತ್ತೂರು ಕರ್ನಾಟಕ ಭಾಗದಲ್ಲಿ ಕಾಂಗ್ರೆಸ್‌ಗೆ ಬಲ ತುಂಬಿದ್ದೇ ಶೆಟ್ಟರ್ ಅವರ ಎಂಟ್ರಿ. ಹೀಗಾಗಿ ಜಗದೀಶ್ ಶೆಟ್ಟರ್​ ಇತ್ತೀಚೆಗೆ ನಡೆದಿರುವ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್​ ಅಭ್ಯರ್ಥಿಯಾಗಿ ಸೋತರೂ ಸ್ಥಾನ ಕಲ್ಪಿಸಲಾಗುತ್ತಿದೆ. ಹುಬ್ಬಳ್ಳಿ ಧಾರವಾಡ ಸೆಂಟ್ರಲ್ ಕ್ಷೇತ್ರದಿಂದ ಸ್ಪರ್ಧಿಸಿ ಬಿಜೆಪಿಯ ಮಹೇಶ್ ಟೆಂಗಿನಕಾಯಿ ವಿರುದ್ಧ ಸೋಲನುಭವಿಸಿದ್ದರು ಶೆಟ್ಟರ್. ಕಾಂಗ್ರೆಸ್ ಸರ್ಕಾರದಲ್ಲಿ ಸಚಿವ ಸ್ಥಾನದ ಆಕಾಂಕ್ಷಿ ಅಂತಾ ಹೇಳಲಾಗಿತ್ತು. ಇದೇ ಸಂದರ್ಭದಲ್ಲಿ ಸಚಿವ ಸಂಪುಟ ಅಸ್ತಿತ್ವಕ್ಕೆ ಬಂದ ಬಳಿಕ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಹುಬ್ಬಳ್ಳಿಗೆ ತೆರಳಿ ಶೆಟ್ಟರ್ ಜತೆ ಮಾತುಕತೆ ನಡೆಸಿದ್ದರು. ಸೂಕ್ತ ಸ್ಥಾನಮಾನ ನೀಡುವ ಭರವಸೆ ನೀಡಿದ್ದರು.

ಉಪಚುನಾವಣೆ ನಡೆಯುತ್ತಿರುವುದು ಏಕೆ?

ಹಿಂದೆ ಪರಿಷತ್ ಸದಸ್ಯರಾಗಿದ್ದ ಆರ್.ಶಂಕರ್, ಲಕ್ಷ್ಮಣ ಸವದಿ & ಬಾಬುರಾವ್ ಚಿಂಚನಸೂರ್ ವಿಧಾನಸಭೆ ಚುನಾವಣೆಗೂ ಮುನ್ನ ತಮ್ಮ ಪರಿಷತ್ ಸ್ಥಾನಕ್ಕೆ ಹಾಗೂ ಬಿಜೆಪಿಗೆ ರಾಜೀನಾಮೆ ನೀಡಿ ಕಾಂಗ್ರೆಸ್‌ಗೆ ಸೇರ್ಪಡೆಯಾಗಿದ್ದರು. ಹೀಗಾಗಿಯೇ ಪರಿಷತ್‌ನಲ್ಲಿ 3 ಸ್ಥಾನ ತೆರವಾಗಿದ್ದವು. ಈಗ ಆ ಸ್ಥಾನಗಳ ಭರ್ತಿಗೆ ಉಪಚುನಾವಣೆ ನಡೆಯುತ್ತಿದೆ. ಇನ್ನು ಬಾಬುರಾವ್‌ ಚಿ೦ಚನಸೂರು ಪರಿಷತ್ ಸದಸ್ಯತ್ವ 2024ರ ಜೂನ್‌ 17ಕ್ಕೆ, ಆರ್.‌ಶ೦ಕರ್‌ ಅವಧಿ 2026ರ ಜೂನ್‌ 30ಕ್ಕೆ ಮತ್ತು ಲಕ್ಷ್ಮಣ ಸವದಿ ಸದಸ್ಯತ್ವ 2028ರ ಜೂನ್ 14ಕ್ಕೆ ಮುಗಿಯುತ್ತಿತ್ತು. ಆದರೆ ಕಾಂಗ್ರೆಸ್‌ ಟಿಕೆಟ್ ಪಡೆದು ವಿಧಾನಸಭೆ ಚುನಾವಣೆಗೆ ಸ್ಪರ್ಧಿಸುವ ಸಲುವಾಗಿ ತಮ್ಮ ತಮ್ಮ ಎ೦ಎಲ್‌ಸಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.

ಒಟ್ನಲ್ಲಿ ವಿಧಾನಸಭೆ ಚುನಾವಣೆ ನಡೆದು ಒಂದೂವರೆ ತಿಂಗಳ ಕಳೆಯುವ ಒಳಗೆ ಮತ್ತೊಂದು ಎಲೆಕ್ಷನ್ ಬಂದಿದೆ. ಪರಿಷತ್ ಚುನಾವಣೆಯಲ್ಲಿ ಟಿಕೆಟ್ ನೀಡಲು ಅಳೆದು, ತೂಗಿ ಇಷ್ಟುದಿನ ಲೆಕ್ಕಾಚಾರ ಹಾಕುತ್ತಿದ್ದರು ಕಾಂಗ್ರೆಸ್ ನಾಯಕರು. ಮತ್ತೊಂದ್ಕಡೆ ಜಗದೀಶ್ ಶೆಟ್ಟರ್‌ಗೆ ಸೂಕ್ತ ಸ್ಥಾನ ಒದಗಿಸುವ ಜವಾಬ್ದಾರಿ ಕೂಡ ಕಾಂಗ್ರೆಸ್ ನಾಯಕರ ಮೇಲಿತ್ತು. ಅದನ್ನ ಈಗ ಕಾಂಗ್ರೆಸ್ ಲೀಡರ್ಸ್ ನಿಭಾಯಿಸಿದ್ದು, ಒಟ್ಟು 3 ಸ್ಥಾನದಲ್ಲೂ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಗೆಲುವು ಸಾಧಿಸುವುದು ಬಹುತೇಕ ಖಚಿತ ಎನ್ನಲಾಗುತ್ತಿದೆ.

English summary

Karnataka MLC Election Congress ticket confirmed for Jagadish Shettar and Boseraju.

Story first published: Monday, June 19, 2023, 18:24 [IST]

Source link