Agriculture
lekhaka-Chidananda M
ಚಿತ್ರದುರ್ಗ, ಜುಲೈ 01: ಆಧುನಿಕ ಭರಾಟೆಯಲ್ಲಿ ತಂತ್ರಜ್ಞಾನ ಮುಂದುವರಿದಂತೆ ಹೊಸ ಹೊಸ ಪ್ರಯೋಗಗಳು ಉದ್ಭವಿಸುತ್ತವೆ. ವಿಜ್ಞಾನಿಗಳು, ಇಂಜಿನಿಯರ್‌ಗಳು ಹೊಸ ಹೊಸ ಟೆಕ್ನಾಲಜಿ ಕಂಡುಹಿಡಿಯುವುದು ಸಹಜ. ಆದರೆ ಇತ್ತೀಚಿನ ದಿನಗಳಲ್ಲಿ ರೈತರು ಸಹ ತಮ್ಮದೇ ಆದ ಬುದ್ಧಿ ಉಪಯೋಗಿಸಿ ಹೊಸತನವನ್ನು ಕಂಡುಕೊಂಡು, ಕೃಷಿಯ ಕಡೆಗೆ ಹೆಜ್ಜೆ ಹಾಕುತ್ತಿರುವುದು ವಿಶೇಷವಾಗಿದೆ. ಅದೇ ರೀತಿ ಯುವ ರೈತರ ತಂಡವೊಂದು ಬೆಳೆಗಳಿಗೆ ಅನುಕೂಲವಾಗುವಂತೆ ಸುಲಭ ವಿಧಾನವನ್ನು ಕಂಡುಹಿದಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಯುವ ರೈತರು ಕೃಷಿಯಲ್ಲಿ ಮುಖ ಮಾಡಿ ಸಾಧನೆ ಮಾಡಲು ತೊಡಗಿರುವುದು ಸಂತೋಷದ ವಿಷಯವಾಗಿದೆ. ಇದರ ಜೊತೆಗೆ ಹೊಸ ಹೊಸ ಪ್ರಯೋಗಗಳು ಕಂಡುಬರುತ್ತಿರುವುದು ಸೋಜಿಗ ಸಂಗತಿಯಾಗಿದೆ. ಬೆಳೆಗಳಿಗೆ ರಸಗೊಬ್ಬರ ಹಾಕಲು ಸುಲಭ ವಿಧಾನವನ್ನು ಕಂಡುಹಿಡಿದಿರುವುದನ್ನು ಚಿತ್ರದುರ್ಗ ಜಿಲ್ಲೆಯಲ್ಲಿ ಕಾಣಬಹುದಾಗಿದೆ.
ಅಂದಹಾಗೆ ಚಿತ್ರದುರ್ಗದ ಭರಮಸಾಗರ ಹೋಬಳಿಯ ಬಹುದ್ದೂರ್ ಘಟ್ಟ ಗ್ರಾಮದ ಯುವ ರೈತರ ಬಳಗವೊಂದು, ತರಕಾರಿ ಬೆಳೆಗಳಿಗೆ ರಸಗೊಬ್ಬರ ಹಾಕಲು ಸುಲಭ ವಿಧಾನವನ್ನು ಕಂಡು ಹಿಡಿದು ಇತರರಿಗೆ ಮಾದರಿಯಾಗಿದ್ದಾರೆ.
ಈ ಗ್ರಾಮದಲ್ಲಿ ಹೆಚ್ಚು ಹೆಚ್ಚಾಗಿ ತರಕಾರಿ ಬೆಳೆಗಳನ್ನು ಬೆಳೆಯಲಾಗುತ್ತದೆ. ಈ ಬಹುದ್ದೂರ್ ಘಟ್ಟ ಪ್ರದೇಶದಲ್ಲಿ ಸುಮಾರು 300 ಎಕರೆ ಪ್ರದೇಶದಲ್ಲಿ ಟೊಮೆಟೊ, ಮೂಲಂಗಿ, ಬೆಂಡೆಕಾಯಿ, ಬದನೆಕಾಯಿ, ಮೆಣಸಿನ ಕಾಯಿ, ಎಲೆ ಕೋಸು, ಹುರುಳಿ ಕಾಯಿ, ಮತ್ತಿತರರ ಲಾಭದಾಯಕ ತರಕಾರಿ ಬೆಳೆಗಳನ್ನು ಬೆಳೆಯಲಾಗುತ್ತದೆ.
ಇಲ್ಲಿನ ಯುವ ರೈತನಾದ ಸಿದ್ದೇಶ್ ವಾಟರ್ ಕ್ಯಾನ್ ಬಳಸಿಕೊಂಡು ಮೆಣಸಿನ ಗಿಡಗಳಿಗೆ ಸುಲಭವಾಗಿ ಗೊಬ್ಬರ ಹಾಕುವುದನ್ನು ಕಂಡು ಹಿಡಿದಿದ್ದಾರೆ. 20 ಲೀಟರ್ ನೀರು ಹಿಡಿಯುವ ಒಂದು ಖಾಲಿ ಫಿಲ್ಟರ್ ವಾಟರ್ ಕ್ಯಾನ್ ತೆಗೆದುಕೊಂಡು, ಕ್ಯಾನಿನ ತಳ ಭಾಗವನ್ನು ಕತ್ತರಿಸಿ, ಕ್ಯಾನ್ ಉಲ್ಟಾ ಹಿಡಿದರೆ ಕ್ಯಾನಿನ ಕೆಳಭಾಗದಲ್ಲಿ ಒಂದು ರಂಧ್ರವಿರುತ್ತದೆ. ಆ ರಂಧ್ರಕ್ಕೆ ಪೈಪ್ ಜೋಡಿಸಲಾಗುತ್ತದೆ. ನಂತರ ಕ್ಯಾನಿನ ಎರಡು ಭಾಗದಲ್ಲಿ ಸಣ್ಣದಾಗಿ ರಂಧ್ರ ಕೊರೆದು ದಾರವನ್ನು ಕಟ್ಟಲಾಗುತ್ತದೆ. ನಂತರ ಆ ಕ್ಯಾನಿನಲ್ಲಿ ಗೊಬ್ಬರ ಹಾಕಿ ಅದನ್ನು ಬೆನ್ನಿನ ಹಿಂಭಾಗದಲ್ಲಿ ಹಾಕಿಕೊಂಡು (ಔಷಧಿ ಸಿಂಪಡಿಸುವ ಸ್ಪೇರ್ ನಂತೆ) ಮೆಣಸಿನ ಗಿಡಗಳಿಗೆ ಸುಲಭವಾಗಿ ಗೊಬ್ಬರ ಹಾಕಲಾಗುತ್ತದೆ.
ಹಿಂಭಾಗದಲ್ಲಿ ಕ್ಯಾನಿ ಹಾಕಿಕೊಂಡು ಪೈಪ್ ಹಿಡಿದು ಸಾಗಿದರೆ, ಗೊಬ್ಬರ ಪೈಪ್ ಮೂಲಕ ಗಿಡಗಳಿಗೆ ಮಿತವಾಗಿ ಬಿಳಲಾರಂಭಿಸುತ್ತದೆ. ಇದರಿಂದ ರೈತ ಕ್ಯಾನಿನಲ್ಲಿ ಒಮ್ಮೆ 10ಕೆಜಿ ಗೊಬ್ಬರ ಹಾಕಿಕೊಂಡು ಕೈಯಲ್ಲಿ ಪೈಪ್ ಹಿಡಿದು ಸಾಗಿದರೆ ಮೆಣಸಿನ ಗಿಡಗಳ ಬುಡಕ್ಕೆ ಗೊಬ್ಬರ ಬೀಳುತ್ತದೆ. ಈ ರೀತಿ ಮಾಡುವುದರಿಂದ ಕಡಿಮೆ ಸಮಯದಲ್ಲಿ 1.5 ಎಕರೆ ಜಮೀನಿನಲ್ಲಿರುವ ಮೆಣಸಿನ ಗಿಡಗಳಿಗೆ ಗೊಬ್ಬರ ಹಾಕುವ ಕೆಲಸ ಮುಗಿಸು ಬಹುದಾಗಿದೆ.
ಇನ್ನು ಈ ಕುರಿತು ಮಾತನಾಡಿದ ರೈತ ಸಿದ್ದೇಶ್ ‘ಈ ರೀತಿ ಮಾಡುವುದರಿಂದ ನಮಗೆ ಸಮಯ ಉಳಿಯುತ್ತದೆ. ಮತ್ತು ಹೆಚ್ಚು ಶ್ರಮ ಪಡುವ ಅಗತ್ಯವಿಲ್ಲ. ಜೊತೆಗೆ ನಾವು ಕೈಯಲ್ಲಿ ಗೊಬ್ಬರ ಹಾಕುವುದರಿಂದ ಗೊಬ್ಬರ ಗಿಡದ ಮೇಲೆ ಅಥವಾ ಎಲೆಗೆ ತಾಗಿ ಗಿಡಗಳು ಸುಟ್ಟು ಹೋಗುತ್ತದೆ. ಪೈಪ್ ಮೂಲಕ ಗಿಡದ ಬುಡಕ್ಕೆ ಗೊಬ್ಬರ ಬೀಳುತ್ತದೆ ಗಿಡಗಳಿಗೆ ಯಾವುದೇ ರೀತಿಯ ತೊಂದರೆ ಇಲ್ಲ. ಹಾಗಾಗಿ ನನ್ನ ಸ್ನೇಹಿತರ ಜೊತೆಗೂಡಿ ಇಂಥದೊಂದು ಹೊಸ ಪ್ರಯೋಗ ಮಾಡಲಾಗಿದೆ. ಈ ವಿಧಾನವನ್ನು ಎಲೆಕೋಸು, ಟೊಮೋಟೊ, ಬದನೆಕಾಯಿ, ಮತ್ತಿತರರ ಬೆಳೆಗಳಿಗೆ ಬಳಸಬಹುದು’ ಎಂದು ವಿವರಿಸಿದ್ದಾರೆ.
ಒಟ್ಟಾರೆಯಾಗಿ ಇತ್ತೀಚಿನ ದಿನಗಳಲ್ಲಿ ಯುವಕರು ಕೃಷಿ ಚಟುವಟಿಕೆಗಳ ಕಡೆ ಹೆಚ್ಚು ಗಮನ ಹರಿಸಿ, ಇಂತಹ ಹೊಸ ಹೊಸ ಪ್ರಯೋಗಗಳನ್ನು ಕಂಡು ಹಿಡಿದು ಕೃಷಿಯಲ್ಲಿ ಸಾಧನೆ ಮಾಡಿ ಇತರರಿಗೆ ಮಾದರಿಯಾಗುತ್ತಿರುವುದು ಸಂತೋಷದ ವಿಷಯವಾಗಿದೆ. ಕೃಷಿಯಲ್ಲಿ ತೊಡಗಿರುವ ಇಂತಹ ಯುವ ರೈತರಿಗೆ ಸರ್ಕಾರದ ಪ್ರೋತ್ಸಾಹ ಅಗತ್ಯವಾಗಿದೆ.
English summary
New idea of Chitradurga district Bharamasagara youth farmers to apply fertilizer to crops, Know more,
Story first published: Saturday, July 1, 2023, 13:39 [IST]