India
oi-Oneindia Staff
ಜುಲೈ ಎರಡು ಭಾನುವಾರ ಬೆಳಗ್ಗೆ ವಿಪಕ್ಷದ ನಾಯಕರಾಗಿದ್ದ ಅಜಿತ್ ಪವಾರ್, ಮಧ್ಯಾಹ್ನದ ಹೊತ್ತಿಗೆ ಮಹಾರಾಷ್ಟ್ರದ ಉಪಮುಖ್ಯಮಂತ್ರಿ. ರಾಜಕೀಯದಲ್ಲಿ ಯಾರೂ ಶತ್ರುಗಳಿಲ್ಲ, ಮಿತ್ರರೂ ಇಲ್ಲ ಎನ್ನುವುದಕ್ಕೆ ಈ ಬೆಳವಣಿಗೆ ಒಂದು ನಿರ್ದರ್ಶನವಾಗಬಹುದು. ಆದರೆ, ಇದು ಅನಿರೀಕ್ಷಿತ ರಾಜಕೀಯ ಬೆಳವಣಿಗೆಯಾಗಿರಲಿಲ್ಲ ಎನ್ನುವುದು ಕೂಡಾ ಅಷ್ಟೇ ಸತ್ಯ ಕೂಡಾ..
“ನಾನು ಐಸಿಸಿ ಅಧ್ಯಕ್ಷನಾಗಿದ್ದಾಗ, ನನ್ನ ಮಾವ ಉತ್ತಮ ಗೂಗ್ಲಿ ಬೌಲರ್ ಆಗಿದ್ದರು. ಕ್ರಿಕೆಟ್ ಆಡದಿದ್ದರೂ, ಈಗಿನ ರಾಜಕೀಯದಲ್ಲಿ ಎಲ್ಲಿ ಯಾವಾಗ ಗೂಗ್ಲಿ ಎಸೆಯಬೇಕು”ಎನ್ನುವುದು ನನಗೆ ತಿಳಿದಿದೆ”ಎಂದು ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಹೇಳಿದ್ದಾರೆ. ಸಹೋದರನ ಮಗನಾಗಿರುವ ಅಜಿತ್ ಪವಾರ್, ಚಿಕ್ಕಪ್ಪನ ಮತ್ತು ಸಹೋದರಿಯ ವಿರುದ್ದವೇ ತಿರುಗಿ ಬೀಳಬೇಕಾದರೆ ಅದಕ್ಕೆ ಕಾರಣ ರಾಜಕೀಯ ಮಹತ್ವಾಕಾಂಕ್ಷೆ.
ಎನ್‌ಸಿಪಿಯಲ್ಲಿ ಎರಡನೇ ಪ್ರಮುಖ ನಾಯಕರಾಗಿರುವ ಅಜಿತ್ ಪವಾರ್ ಪಕ್ಷ, ಚಿಕ್ಕಪ್ಪ ಮತ್ತು ಸಹೋದರಿ ಸುಪ್ರಿಯಾ ಸುಳೆ ವಿರುದ್ದ ಅಸಮಾಧಾನ ಹೊಂದಿರುವುದು ಹೊಸದೇನಲ್ಲ. ಈ ಹಿಂದೆ ಕೂಡಾ ಕೆಲವೇ ಗಂಟೆಗಳ ಮಟ್ಟಿಗೆ ಡಿಸಿಎಂ ಆಗಿದ್ದವರು. ಶಿವಸೇನೆ ಹೇಗೆ ಇಬ್ಬಾಗವಾಗಿತ್ತೋ, ಅದೇ ರೀತಿ ಎನ್‌ಸಿಪಿ ಛಿದ್ರವಾಗಲು ಶಿವಸೇನೆಯ ಉದ್ದವ್ ಠಾಕ್ರೆ ಬಳದ ಹಿರಿಯ ನಾಯಕರೊಬ್ಬರು ಕಾರಣ ಎನ್ನುವುದು ಕೆಲವೊಂದು ರಾಜಕೀಯ ವಿಶ್ಲೇಷಕರ ಅಭಿಪ್ರಾಯ.
ಮಹಾರಾಷ್ಟ್ರ ರಾಜಕೀಯ: ಶರದ್ ಪವಾರ್‌ಗೆ ಫೋನ್ ಮಾಡಿದ ಸೋನಿಯಾ ಗಾಂಧಿ
ಮುಂಬರುವ ಲೋಕಸಭಾ ಚುನಾವಣೆಗೆ ಬಿಜೆಪಿ ವಿರುದ್ದ ವಿರೋಧ ಪಕ್ಷಗಳ ಮಹಾಘಟಬಂಧನ್ ಗೆ ಮಹಾರಾಷ್ಟ್ರದ ಬೆಳವಣಿಗೆ ಭಾರೀ ಹಿನ್ನಡೆಯನ್ನು ಉಂಟು ಮಾಡಿದೆ. ವಿಪಕ್ಷಗಳ ಎರಡನೇ ಹಂತದ ಮೀಟಿಂಗ್ ಜುಲೈ 13ಕ್ಕೆ ಬೆಂಗಳೂರಿನಲ್ಲಿ ನಿಗದಿಯಾಗಿತ್ತು, ಈಗ ಅದು ಮುಂದೂಡಲ್ಪಟ್ಟಿದೆ. ತಮ್ಮ ಪಕ್ಷದಲ್ಲಿ ಕ್ಷಿಪ್ರ ರಾಜಕೀಯ ಬೆಳವಣಿಗೆಗಳು ನಡೆಯುತ್ತಿದೆ ಎನ್ನುವುದನ್ನು ಅರಿತೂ ಶರದ್ ಪವಾರ್ ಸುಮ್ಮನಿದ್ದರೋ ಎನ್ನುವುದು ಈಗ ಚರ್ಚೆಯ ವಿಷಯವಾಗಿದೆ.
ಶರದ್ ಪವಾರ್ ಮಗಳು, ಬಾರಾಮತಿ ಲೋಕಸಭಾ ಕ್ಷೇತ್ರದ ಸಂಸದೆ ಸುಪ್ರಿಯಾ ಸುಳೆ
ಶರದ್ ಪವಾರ್ ಮಗಳು ಮತ್ತು ಬಾರಾಮತಿ ಲೋಕಸಭಾ ಕ್ಷೇತ್ರದ ಸಂಸದೆಯೂ ಆಗಿರುವ ಸುಪ್ರಿಯಾ ಸುಳೆ ಅವರನ್ನು ಶರದ್ ಪವಾರ್ ಪಕ್ಷದ ಕಾರ್ಯಾಧ್ಯಕ್ಷರನ್ನಾಗಿ ನೇಮಿಸಿದ ನಂತರ ಎನ್‌ಸಿಪಿಯ ಬಣ ರಾಜಕೀಯ ಇನ್ನೊಂದು ಮಜಲಿಗೆ ತಿರುಗಿತ್ತು. ಅಜಿತ್ ಪವಾರ್ ಪಕ್ಷದ ವಿರುದ್ದ ತಿರುಗಿ ಬೀಳುತ್ತಿರುವುದು ಇದೇನು ಹೊಸದೇನಲ್ಲ. 2009ರಲ್ಲೇ ಚಿಕ್ಕಪ್ಪ ಶರದ್ ಪವಾರ್ ಅವರ ಕಾರ್ಯವೈಖರಿಯ ಬಗ್ಗೆ ಕಟುವಾಗಿ ಮತ್ತು ಬಹಿರಂಗವಾಗಿಯೇ ಟೀಕಿಸಿದ್ದರು. ಅವರು ಸಿಟ್ಟಾದಗಲೆಲ್ಲಾ ಅವರ ಸಮಾಧಾನ ಪಡಿಸುವ ಕೆಲಸವನ್ನು ಶರದ್ ಪವಾರ್ ಮಾಡುತ್ತಿದ್ದರೆಯೇ ಹೊರತು, ಸಮಸ್ಯೆಗೆ ಶಾಸ್ವತ ಪರಿಹಾರ ಕಂಡುಕೊಳ್ಳುವ ಕೆಲಸವನ್ನು ಮಾಡಿರಲಿಲ್ಲ.
ಉದ್ದವ್ ಠಾಕ್ರೆ ನೇತೃತ್ವದ ಮಹಾವಿಕಾಸ್ ಅಗಾಡಿ ಸರ್ಕಾರ ಪತನ
ಏಕನಾಥ್ ಶಿಂಧೆಯವರು ಮಹಾರಾಷ್ಟ್ರದ ಸಿಎಂ ಆಗಿ, ಉದ್ದವ್ ಠಾಕ್ರೆ ನೇತೃತ್ವದ ಮಹಾವಿಕಾಸ್ ಅಗಾಡಿ ಸರ್ಕಾರ ಪತನಗೊಂಡ ನಂತರ, ಠಾಕ್ರೆ ಸುಪ್ರೀಂಕೋರ್ಟ್ ಮೆಟ್ಟಲೇರಿದ್ದರು. ಒಂದು ವೇಳೆ, ಸರ್ವೋಚ್ಚ ನ್ಯಾಯಾಲಯದ ತೀರ್ಪು ವ್ಯತಿರಿಕ್ತವಾಗಿ ಬಂದರೆ, ಬಿಜೆಪಿ-ಶಿವಸೇನೆ(ಶಿಂಧೆ ಬಣ) ಪರವಾಗಿ ಅಜಿತ್ ಪವಾರ್ ನಿಲ್ಲಲಿದ್ದಾರೆ ಎನ್ನುವ ಸುದ್ದಿಯೂ ಕಳೆದ ಏಪ್ರಿಲ್ ನಲ್ಲಿ ಹರಿದಾಡುತ್ತಿತ್ತು. ಅಜಿತ್ ಪವಾರ್ ಇಂದಲ್ಲಾ ನಾಳೆ ಕೈಕೊಡುತ್ತಾರೆ ಎನ್ನುವುದು ಬಹುತೇಕ ಖಾತ್ರಿಯಾದಾಗ ಶರದ್ ಪವಾರ್ ಪಕ್ಷದ ಮುಖ್ಯಸ್ಥ ಸ್ಥಾನದಿಂದ ಹೊರ ನಡೆಯುವ ಘೋಷಣೆ ಮಾಡಿದರು. ಆ ವೇಳೆ, ನಡೆದ ಭಾವನಾತ್ಮಕ ಸನ್ನಿವೇಶಗಳು ಅಜಿತ್ ಪವಾರ್ ಅವರಿಗೆ ಬಿಸಿ ಮುಟ್ಟಿಸಿತ್ತು. ಶರದ್ ಪವಾರ್ ಅವರ ಉದ್ದೇಶ ಕೂಡಾ ಅದೇ ಆಗಿತ್ತು.
ಅಜಿತ್ ಪವಾರ್ ಬಣದಲ್ಲಿ ಗುರುತಿಸಿಕೊಂಡಿರುವ ಪ್ರಪುಲ್ ಪಟೇಲ್
ಸುಪ್ರಿಯಾ ಸುಳೆ ಮತ್ತು ಅಜಿತ್ ಪವಾರ್ ಬಣದಲ್ಲಿ ಗುರುತಿಸಿಕೊಂಡಿರುವ ಪ್ರಪುಲ್ ಪಟೇಲ್ ಅವರನ್ನು ಪಕ್ಷದ ಕಾರ್ಯಾಧ್ಯಕ್ಷರನ್ನಾಗಿ ಶರದ್ ಪವಾರ್ ನೇಮಿಸುವ ಮೂಲಕ ವಿವಾದದ ಬೆಂಕಿಗೆ ತುಪ್ಪ ಸುರಿದಿದ್ದರು. ಇದರ ಬೆನ್ನಲ್ಲೇ, ಪಕ್ಷದ ಜವಾಬ್ದಾರಿಯಿಂದ ಮುಕ್ತಗೊಳಿಸಿ ಎಂದು ಅಜಿತ್ ಪವಾರ್ ಹೇಳಿದ್ದರು. ತನ್ನ ಸಹೋದರನ ಮಗನ ರಾಜಕೀಯ ನಿರ್ಧಾರಕ್ಕೆ ಆಲ್ ದಿ ಬೆಸ್ಟ್ ಹೇಳಿರುವ ಶರದ್ ಪವಾರ್, ಜನತಾ ನ್ಯಾಯಾಲಯದಲ್ಲಿ ಅಜಿತ್ ಪವಾರ್ ಭವಿಷ್ಯ ನಿರ್ಧಾರವಾಗಲಿ ಎಂದು ಹೇಳಿದ್ದಾರೆ.
ಅವರು ಯಾವತ್ತೂ ಹಿರಿಯ ಅಣ್ಣನಾಗಿರುತ್ತಾರೆ
ಇನ್ನೊಂದು ಕಡೆ “ಅಜಿತ್ ಪವಾರ್ ಯಾವುದೇ ನಿರ್ಧಾರ ತೆಗೆದುಕೊಳ್ಳಲಿ, ನನಗೆ ಅವರ ಮೇಲಿನ ಗೌರವ ಕಮ್ಮಿಯಾಗುವುದಿಲ್ಲ. ಅವರು ಯಾವತ್ತೂ ಹಿರಿಯ ಅಣ್ಣನಾಗಿರುತ್ತಾರೆ. ಕುಟುಂಬದ ಸಂಬಂಧಗಳು ಬೇರೆ, ರಾಜಕೀಯ ಬೇರೆ, ಪಕ್ಷವನ್ನು ಮತ್ತೆ ಬಲವಾಗಿ ಕಟ್ಟುತ್ತೇವೆ”ಎಂದು ಸುಪ್ರಿಯಾ ಸುಳೆ ಹೇಳಿದ್ದಾರೆ. ಎನ್‌ಸಿಪಿಯಲ್ಲಿ ನಡೆಯುತ್ತಿರುವ ವಿದ್ಯಮಾನಗಳ ಬಗ್ಗೆ ಶರದ್ ಪವಾರ್ ಅವರಿಗೆ ಸ್ಪಷ್ಟ ಮುನ್ಸೂಚನೆಯಿತ್ತು.
ಮೋದಿ, ಅಮಿತ್ ಶಾ ವಿರುದ್ದ ಶರದ್ ಪವಾರ್ ಕಿಡಿ
ಮೋದಿ, ಅಮಿತ್ ಶಾ ವಿರುದ್ದ ಶರದ್ ಪವಾರ್ ಕಿಡಿಕಾರುತ್ತಿದ್ದಾರೆಯೇ ಹೊರತು, ಅಜಿತ್ ಪವಾರ್ ವಿರುದ್ದ ಚಿಕ್ಕಪ್ಪ ಏನೂ ಕಟುವಾದ ಹೇಳಿಕೆಯನ್ನು ನೀಡುತ್ತಿಲ್ಲ ಎನ್ನುವುದು ಸ್ಪಷ್ಟ. ಲೋಕಸಭಾ ಚುನಾವಣೆಗೆ ಪಕ್ಷಗಳು ತಯಾರಿ ನಡೆಸುತ್ತಿರುವ ಹೊತ್ತಿನಲ್ಲಿ ಎನ್ಡಿಎ ಹೊರತಾದ ಮೈತ್ರಿಕೂಟದಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸಿಕೊಳ್ಳಬೇಕಾಗುತ್ತದೆ ಎನ್ನುವುದರ ಅರಿವಿದ್ದೂ, ಪಕ್ಷದಲ್ಲಿನ ಬೆಳವಣಿಗೆಗಳನ್ನು ನೋಡಿಕೊಂಡು ಶರದ್ ಪವಾರ್ ಉದ್ದೇಶಪೂರ್ವಕವಾಗಿಯೇ ತಡೆಯಲು ಹೋಗಲಿಲ್ಲವೇ ಎನ್ನುವುದು ಸದ್ಯಕ್ಕೆ ಪ್ರಶ್ನೆಯಾಗಿಯೇ ಉಳಿಯಲಿದೆ.
English summary
Ajit Pawar Rebels Against His own uncle and siblings, however we can observe that this sudden development in Maharashtra Politics gave raise to suspicion around Sharad Pawar. Know More,