Chamarajanagar
lekhaka-Surendra S
ಚಾಮರಾಜನಗರ, ಜೂನ್, 21: ಗುಂಡ್ಲುಪೇಟೆ ತಾಲೂಕಿನ ಹೊಂಗಹಳ್ಳಿ, ಹಂಗಳ, ತೆರಕಣಾಂಬಿ, ಬೇಗೂರು, ಪಟ್ಟಣದ ಊಟಿ ರಸ್ತೆ ಶಾಲೆ, ಕೆ.ಎಸ್.ನಾಗರತ್ನಮ್ಮ, ದೊಡ್ಡಹುಂಡಿ ಭೋಗಪ್ಪ, ಸೆಂಟ್ ಜಾನ್ಸ್ ಸೇರಿದಂತೆ ವಿವಿಧ ಶಾಲೆಗಳು ಹಾಗೂ ಪಟ್ಟಣದ ನ್ಯಾಯಾಲಯದ ಆವರಣದಲ್ಲಿ 9ನೇ ಅಂತರಾಷ್ಟ್ರೀಯ ಯೋಗ ದಿನವನ್ನು ವಿವಿಧ ಭಂಗಿಯ ಯೋಗ ಪ್ರದರ್ಶಿಸುವ ಮೂಲಕ ಆಚರಣೆ ಮಾಡಲಾಯಿತು.
ನ್ಯಾಯಾಧೀಶರಿಂದ ಯೋಗ ದಿನಾಚರಣೆಗೆ ಚಾಲನೆ
ಪಟ್ಟಣದ ನ್ಯಾಯಾಲಯದ ಆವರಣದಲ್ಲಿ ನಡೆದ 9ನೇ ವಿಶ್ವ ಯೋಗ ದಿನಾಚರಣೆ ಕಾರ್ಯಕ್ರಮಕ್ಕೆ ಹಿರಿಯ ಪ್ರಧಾನ ಸಿವಿಲ್ ನ್ಯಾಯಾಧೀಶರಾದ ಬಸವರಾಜ ತಳವಾರ್ ಚಾಲನೆ ನೀಡಿದರು. ಈ ವೇಳೆ ಮಾತನಾಡಿದ ಅವರು, ಒತ್ತಡದ ಜೀವನದಲ್ಲಿ ಮನುಷ್ಯನ ಆರೋಗ್ಯ ಕಾಪಾಡಿಕೊಳ್ಳಲು ಯೋಗಾಭ್ಯಾಸ ಅಗತ್ಯವಾಗಿದೆ. ಯಾವುದೇ ವಯಸ್ಸಿನ ಮಿತಿಯಿಲ್ಲದೆ ಯೋಗವನ್ನು ಅಭ್ಯಾಸ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ದೇಹ ಮತ್ತು ಮನಸ್ಸು ಎರಡನ್ನೂ ಸ್ವಸ್ಥವಾಗಿಡಲು ಯೋಗದಿಂದ ಸಾಧ್ಯವಿದೆ. ಯೋಗವೆಂದರೆ ಔಷಧ ರಹಿತ ಚಿಕಿತ್ಸಾ ಪದ್ಧತಿಯ ದೇಸಿ ಕ್ರಮವಾಗಿದೆ. ಮಿತ ಆಹಾರ ಸೇವನೆ, ಉಪವಾಸ ವ್ಯಾಯಾಮದಂತಹ ಚಿಕಿತ್ಸಾ ಕ್ರಮಗಳ ಮೂಲಕ ಮನುಷ್ಯನ ದೇಹವನ್ನು ನಿಯಂತ್ರಣಕ್ಕೆ ತರಬಹುದಾಗಿದೆ. ಪ್ರತಿದಿನ ಯೋಗ ಮಾಡುವುದರಿಂದ ದೈಹಿಕ ಹಾಗೂ ಮಾನಸಿಕ ಆರೋಗ್ಯ ಕಾಪಾಡಬಹುದು. ಜೊತೆಗೆ ಸರಳ ಯೋಗಗಳು ನಮ್ಮ ಮನಸ್ಸನ್ನು ಉಲ್ಲಸವಾಗಿಡುತ್ತದೆ ಎಂದರು.
ಮಂಡ್ಯ: ದೇಹ, ಮನಸ್ಸು ಆರೋಗ್ಯವಾಗಿರಬೇಕೆಂದರೆ ಈ ಮಾರ್ಗವನ್ನು ಅನುಸರಿಸಿ, ಡಿ.ಸಿ.ಸಲಹೆ ಇಲ್ಲಿದೆ
ಈ ಸಂದರ್ಭದಲ್ಲಿ ಪ್ರಧಾನ ಸಿವಿಲ್ ನ್ಯಾಯಾಧೀಶರಾದ ಜಿ.ಜೆ.ಶಿವಕುಮಾರ್, ಅಪರ ಸಿವಿಲ್ ನ್ಯಾಯಾಧೀಶರಾದ ಎ.ಎಂ.ಕಾಂತಮ್ಮ, ವಕೀಲರ ಸಂಘದ ಅಧ್ಯಕ್ಷ ಟಿ.ಎಸ್.ವೆಂಕಟೇಶ್, ಕಾರ್ಯದರ್ಶಿ ಪುಟ್ಟಸ್ವಾಮಿ, ಸಿದ್ದಯ್ಯ ಸೇರಿದಂತೆ ನ್ಯಾಯಾಲಯದ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
ಹೊಂಗಹಳ್ಳಿ ಶಾಲೆಯಲ್ಲಿ ಯೋಗ ದಿನಾಚರಣೆ
ತಾಲೂಕಿನ ಕಾಡಂಚಿನ ಹೊಂಗಹಳ್ಳಿ ಪರಿಸರ ಮಿತ್ರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿಶ್ವ ಯೋಗ ದಿನಾಚರಣೆ ಆಚರಿಸಲಾಯಿತು. ಈ ವೇಳೆ ಶಾಲಾ ಮಕ್ಕಳಿಂದ ಪ್ರಾಣಾಯಾಮ, ಸೂರ್ಯ ನಮಸ್ಕಾರ ಸೇರಿದಂತೆ ಹಲವು ಯೋಗಾಸನಗಳನ್ನು ಮಾಡಿಸಲಾಯಿತು.
ಮುಖ್ಯ ಶಿಕ್ಷಕ ಮಹದೇಶ್ವರಸ್ವಾಮಿ ಮಾತನಾಡಿ, ಜಗತ್ತಿಗೆ ಯೋಗವನ್ನು ಅನಾದಿ ಕಾಲದಿಂದಲೂ ಪರಿಚಯ ಮಾಡಿ ಕೊಟ್ಟಿರುವುದು ನಮ್ಮ ಭಾರತ ದೇಶದ ಋಷಿ ಮುನಿಗಳು. ಯೋಗದಿಂದ ಸದೃಢ ದೇಹ ಮತ್ತು ಸದೃಢ ಮನಸ್ಸು ನಿರ್ಮಾಣ ಆಗುತ್ತದೆ. ಹೀಗೆ ಯೋಗ ಮಾಡುತ್ತಾ ಒಳ್ಳೆಯ ಜೀವನಶೈಲಿ, ಸಾತ್ವಿಕ ಆಹಾರ ಸೇವನೆ ಹಾಗೂ ಉತ್ತಮ ಚಿಂತನೆ ಮಾಡುತ್ತಾ ಕಾಯಕ ಯೋಗದ ಮೂಲಕ ಸಾರ್ಥಕವಾಗಿ ಬದುಕೋಣ ಎಂದು ಸಲಹೆ ನೀಡಿದರು.
ಈ ವೇಳೆ ಶಿಕ್ಷಕರಾದ ಪ್ರಭಾಕರ್, ವಿನೋದ, ಅತಿಥಿ ಶಿಕ್ಷಕಿಯರಾದ ಕವಿತ, ಜಯಶೀಲ ಸೇರಿದಂತೆ ಶಾಲಾ ಮಕ್ಕಳು ಹಾಜರಿದ್ದರು.
ಸೆಂಟ್ ಜಾನ್ಸ್ ಶಾಲೆಯಲ್ಲಿ ಮಕ್ಕಳಿಂದ ಯೋಗಾಸನ
ಇನ್ನು ಪಟ್ಟಣದ ಹೊರ ವಲಯದಲ್ಲಿರುವ ಸೆಂಟ್ ಜಾನ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ 9ನೇ ಅಂತರಾಷ್ಟ್ರೀಯ ಯೋಗ ದಿನವನ್ನು ಆಚರಿಸಲಾಯಿತು. ಈ ವೇಳೆ ಶಾಲಾ ಮುಖ್ಯ ಶಿಕ್ಷಕಿ ಸುನೀತಾ ಮೇರಿ ಅವರು ಯೋಗ ದಿನಾಚರಣೆಯ ಮಹತ್ವವನ್ನು ಮಕ್ಕಳಿಗೆ ತಿಳಿಸಿದರು. ಹಾಗೆಯೇ ಶಿಕ್ಷಕಿ ಗೌರಮ್ಮ, ಶಿಕ್ಷಕ ಆಂಜನೇಯ ಹಲವು ಸರಳ ಯೋಗಾಸನಗಳನ್ನು ಮಾಡಿ ಇದರ ಪ್ರಯೋಜನಗಳನ್ನು ಮಕ್ಕಳಿಗೆ ತಿಳಿಸಿದರು.
ಊಟಿ ರಸ್ತೆ ಶಾಲೆಯಲ್ಲಿ ಯೋಗಾಸನ
ಪಟ್ಟಣದ ಊಟಿ ರಸ್ತೆ ಸರ್ಕಾರಿ ಕೆ.ಪಿ.ಎಸ್ ಶಾಲೆಯಲ್ಲಿ ಶಿಕ್ಷಣ ಪೌಂಡೇಶನ್, ಮೈಂಡ್ ಟ್ರೀ ಸಹಯೋಗದೊಂದಿಗೆ ಯೋಗ ದಿನವನ್ನು ಆಚರಣೆ ಮಾಡಲಾಯಿತು. ಹಾಗೆಯೇ ಈ ವೇಳೆ ಮಕ್ಕಳಿಗೆ ಯೋಗ ಸಂಪನ್ಮೂಲ ವ್ಯಕ್ತಿಯಾದ ಸುಂದರೇಶ್ ವಿವಿಧ ಬಗೆಯ ಯೋಗಾಸದನ ಭಂಗಿಗಳನ್ನು ಹೇಳಿಕೊಟ್ಟರು.
ಈ ಸಂದರ್ಭದಲ್ಲಿ ಶಾಲಾ ಮುಖ್ಯ ಶಿಕ್ಷಕ ಸಿದ್ಧಾರ್ಥ್, ಸಹ ಶಿಕ್ಷಕರಾದ ಮಂಜುಳಾ, ಶಾರದಮ್ಮ, ರೇಖಾ, ನೀಲಾಂಬಿಕಾ, ವೃಷಬೇಂದ್ರ, ಶಿಕ್ಷಣ ಪೌಂಡೇಶನ್‍ನ ತಾಲೂಕು ವ್ಯವಸ್ಥಾಪಕ ಕಲ್ಲಿಗೌಡನಹಳ್ಳಿ ಮಹದೇವಸ್ವಾಮಿ ಸೇರಿದಂತೆ ಶಾಲಾ ಮಕ್ಕಳು ಹಾಜರಿದ್ದರು.
English summary
International Yoga Day 2023: Yoga Day celebration in many places of Chamarajanagar district, here see details.
Story first published: Wednesday, June 21, 2023, 18:24 [IST]