Chamarajanagar
lekhaka-Surendra S
ಚಾಮರಾಜನಗರ, ಜುಲೈ 03: ರಾಜ್ಯದಲ್ಲೇ ಆಷಾಢ ಮಾಸದಲ್ಲಿ ನಡೆಯುವ ಏಕೈಕ ರಥೋತ್ಸವವಾದ ಚಾಮರಾಜನಗರದ ಚಾಮರಾಜೇಶ್ವರ ಸ್ವಾಮಿ ಬ್ರಹ್ಮ ರಥೋತ್ಸವವು ಇಂದು(ಜುಲೈ 03) ವಿಜೃಂಭಣೆಯಿಂದ ನಡೆಯಿತು.
ಆಷಾಢ ಮಾಸದಲ್ಲಿ ನಡೆಯುವ ರಾಜ್ಯದ ಏಕೈಕ ರಥೋತ್ಸವವು ಇದಾಗಿದ್ದು ನವಜೋಡಿಗಳ ಜಾತ್ರೆ ಎಂದೇ ಖ್ಯಾತಿ ಪಡೆದಿದೆ. ಆಷಾಢ ಮಾಸದಲ್ಲಿ ನವದಂಪತಿಗಳು ದೂರ ಇರಲಿದ್ದು, ಪರಸ್ಪರ ಭೇಟಿಯಾಗಲು ಅಪೂರ್ವ ಸದಾವಕಾಶವನ್ನು ಈ ಜಾತ್ರೆ ಕಲ್ಪಿಸುವುದರಿಂದ ಜಾತ್ರೆಯಲ್ಲಿ ನವದಂಪತಿಗಳ ಕಲರವ ಹೆಚ್ಚಿರುವುದು ಈ ರಥೋತ್ಸವದ ವಿಶೇಷ.
ಚಾಮರಾಜೇಶ್ವರ ಸ್ವಾಮಿ ಬ್ರಹ್ಮ ರಥೋತ್ಸವವು ಇಂದು ಪೂರ್ವಾಷಾಢ ನಕ್ಷತ್ರದ ಮಧ್ಯಾಹ್ನ 12 ರಿಂದ 1 ರವರೆಗೆ ಸಲ್ಲುವ ಶುಭ ಕನ್ಯಾ ಲಗ್ನದಲ್ಲಿ ಶ್ರೀ ಚಾಮರಾಜೇಶ್ವರ ಸ್ವಾಮಿ ಉತ್ಸವ ಮೂರ್ತಿಗೆ ಪೂಜೆ ಸಲ್ಲಿಸುವ ಮೂಲಕ ರಥೋತ್ಸವಕ್ಕೆ ಚಾಲನೆ ನೀಡಲಾಯಿತು. ಸಾವಿರಾರು ಭಕ್ತರು ಹರ್ಷೋದ್ಗಾರದ ಹಾಕುತ್ತಾ ರಥ ಬೀದಿಯಲ್ಲಿ ತೇರನ್ನು ಎಳೆದರು.
ಚಾಮರಾಜನಗರದ ಸುವರ್ಣಾವತಿ ಜಲಾಶಯಲ್ಲಿ ಜಲಸಾಹಸ ಕ್ರೀಡೆ, ಎಂಜಾಯ್ ಮೂಡ್‌ನಲ್ಲಿ ಯುವಕ, ಯುವತಿಯರು
ಹಣ್ಣು ಧವನ ಎಸೆದ ನವ ದಂಪತಿಗಳು
ಮದುವೆಯಾದ ಪ್ರಥಮ ಆಷಾಢ ಮಾಸದಲ್ಲಿ ನವದಂಪತಿಗಳು ಪರಸ್ಪರ ದೂರ ಇರುವುದು ವಾಡಿಕೆ. ಇದರಿಂದ ಅವರು ಪರಸ್ಪರ ಮುಖಾಮುಖಿ ಭೇಟಿಯಾಗಲು ಆಗುವುದಿಲ್ಲ. ಆದರೆ ಆಷಾಢ ಮಾಸದಲ್ಲಿ ಚಾಮರಾಜನಗರದಲ್ಲಿ ನಡೆಯುವ ಈ ರಥೋತ್ಸವಕ್ಕೆ ನವದಂಪತಿಗಳು ತಮ್ಮ ತಮ್ಮ ಊರಿನಿಂದ ಬೇರೆ ಬೇರೆಯಾಗಿ ಬಂದು ಇಲ್ಲಿನ ನೆಂಟರಿಷ್ಟರ ಮನೆಯಲ್ಲಿ ಅಥವಾ ಪ್ರತ್ಯೇಕವಾಗಿ ಭೇಟಿಯಾಗಿ ರಥೋತ್ಸವದಲ್ಲಿ ಪಾಲ್ಗೊಂಡು ರಥಕ್ಕೆ ಹಣ್ಣು-ಧವನ ಎಸೆಯುತ್ತಾ, ಕೈ ಕೈ ಹಿಡಿದುಕೊಂಡು ಸಂಭ್ರಮದಿಂದ ಓಡಾಡಿದರು.
ನವದಂಪತಿಗಳು ಬಂದು ರಥಕ್ಕೆ ಹಣ್ಣು-ಧವನ ಎಸೆದರೆ ಸಂತಾನ ಭಾಗ್ಯ ಹಾಗೂ ಸುಖ ಸಂಸಾರ ಪ್ರಾಪ್ತಿಯಾಗಲಿದೆ ಎಂಬ ನಂಬಿಕೆ ನೂರಾರು ವರ್ಷಗಳಿಂದ ನಡೆದುಕೊಂಡು ಬಂದಿದೆ.
ರಾಜ್ಯದ ವಿವಿಧ ಮೂಲೆಗಳಿಂದ, ತಮಿಳುನಾಡಿನ ಗಡಿ ಗ್ರಾಮಗಳಿಂದಲೂ ನೂತನ ದಂಪತಿಗಳು, ಚಾಮರಾಜೇಶ್ವರನ ಭಕ್ತರು ಜಾತ್ರೆಯಲ್ಲಿ ಪಾಲ್ಗೊಂಡಿದ್ದರು. ನೂತನ ದಂಪತಿಗಳಿಗೆ ಎಂಥಲೇ ವಿವಿಧ ಸಂಘಟನೆಗಳು ಅನ್ನ ಸಂತರ್ಪಣೆಯನ್ನು ಆಯೋಜಿಸಿದ್ದವು.
English summary
Chamarajeshwara Swamy Brahma Rathotsava, the only Rathotsava held in the month of Ashadha in the state, was held today (July 03). Know more
Story first published: Monday, July 3, 2023, 15:25 [IST]