Chitradurga
lekhaka-Chidananda M
ಚಿತ್ರದುರ್ಗ, ಜೂನ್, 22: ರಾಜ್ಯ ಸರ್ಕಾರ ಜಾರಿಗೆ ತಂದಿರುವ ಶಕ್ತಿ ಯೋಜನೆಯಿಂದ ಕೆಎಸ್‌ಆರ್‌ಟಿಸಿ ಬಸ್ ಕಂಡಕ್ಟರ್ ಮತ್ತು ಡ್ರೈವರ್ ಒಂದಲ್ಲ ಒಂದು ತೊಂದರೆ ಅನುಭವಿಸುವಂತಾಗಿದೆ. ಮತ್ತೊಂದೆಡೆ ಇಂದು ಮಹಿಳೆಯರೊಂದಿಗೆ ಅನುಚಿತ ವರ್ತನೆ ತೋರಿದ ಆರೋಪದ ಮೇರೆಗೆ ಕೆಎಸ್‌ಆರ್‌ಟಿಸಿ ಕಂಡಕ್ಟರ್‌ಗೆ ಹಿಗ್ಗಮುಗ್ಗಾ ಥಳಿಸಿದ ಘಟನೆ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆಯಲ್ಲಿ ನಡೆದಿದೆ.
ಮಹಿಳಾ ಪ್ರಯಾಣಿಕರೊಂದಿಗೆ ಅನುಚಿತ ವರ್ತನೆ ತೋರಿದ ಆರೋಪ ಕೇಳಿಬಂದ ಹಿನ್ನೆಲೆ ಸಾರಿಗೆ ಬಸ್ ನಿರ್ವಾಹಕನ ಮೇಲೆ ಹಲ್ಲೆ ಮಾಡಿರುವ ಘಟನೆ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ನೆಹರೂ ವೃತ್ತದಲ್ಲಿ ನಡೆದಿದೆ. ಇನ್ನು ಹಲ್ಲೆಗೊಳಗಾದ ಬಸ್ ನಿರ್ವಾಹಕ ಚಂದ್ರೇಗೌಡ ಎಂದು ತಿಳಿದುಬಂದಿದೆ.
ಬಸ್ ಕಂಡಕ್ಟರ್ ಮತ್ತು ಡ್ರೈವರ್ ರಾಯದುರ್ಗ-ಬೆಂಗಳೂರು ಮಾರ್ಗದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ನಿನ್ನೆ ಚಳ್ಳಕೆರೆಯಿಂದ ಇದೇ ಬಸ್‌ನಲ್ಲಿ ಪ್ರಯಾಣಿಸಿದ್ದ ಓರ್ವ ಮಹಿಳೆ ಚಳ್ಳಕೆರೆಯಿಂದ ದಾಬಸ್ ಪೇಟೆಗೆ ಪ್ರಯಾಣಿಸಿದ್ದರಂತೆ. ಬಳಿಕ ದಾಬಸಪೇಟೆ ಬಳಿ ಬಂದಾಗ ಬಸ್ ನಿಲ್ಲಿಸಲು ಮಹಿಳೆ ಹೇಳಿದರೂ, ನಿರ್ವಾಹಕ ಚಂದ್ರೇಗೌಡ ಬಸ್ ನಿಲ್ಲಿಸದೆ ಕೆಂಪೇಗೌಡ ಬಸ್ ನಿಲ್ದಾಣದಲ್ಲಿ ನಿಲ್ಲಿಸಿದ್ದಾನೆ. ಬಳಿಕ ಈ ಬಗ್ಗೆ ಪ್ರಶ್ನೆ ಮಾಡಿದ ಮಹಿಳೆ ಜೊತೆಗೆ ನಿರ್ವಾಹಕ ಅನುಚಿತವಾಗಿ ವರ್ತಿಸಿದ್ದಾನೆ ಎನ್ನಲಾಗಿದೆ.
Shakti scheme: ಮೈಸೂರು ವಿಭಾಗದಲ್ಲಿ ಶಕ್ತಿ ಯೋಜನೆಗೆ ಲಭ್ಯವಿರುವ ಬಸ್‌ಗಳು, ಯಾವ ಕ್ಷೇತ್ರಕ್ಕೆ ಲಾಭ?, ಇಲ್ಲಿದೆ ವಿವರ
ಭಯಗೊಂಡ ಮಹಿಳೆ ಕುಟುಂಬದ ಸಂಬಂಧಿಕರಿಗೆ ಘಟನೆ ಬಗ್ಗೆ ತಿಳಿಸಿದ್ದು, ಇಂದು ಮಹಿಳೆಯ ಸಂಬಂಧಿಕರು ಚಳ್ಳಕೆರೆ ಬಸ್ ನಿಲ್ದಾಣದ ಬಳಿ ಬಸ್ ನಿರ್ವಾಹಕನಿಗೆ ಕಾದು ಕುಳಿತಿದ್ದರು. ನಿಲ್ದಾಣಕ್ಕೆ ಬಸ್ ಬಂದ ತಕ್ಷಣವೇ ನಿರ್ವಾಹಕನನ್ನು ಹಿಡಿದು ಮನಸೋಇಚ್ಛೆ ಥಳಿಸಿ ಹಲ್ಲೆ ಮಾಡಿದ್ದಾರೆ. ಇನ್ನು ಹಲ್ಲೆಗೊಳಗಾದ ನಿರ್ವಾಹಕ ಆಸ್ಪತ್ರೆಗೆ ದಾಖಲಾಗಿದ್ದಾನೆ ಎಂದು ತಿಳಿದುಬಂದಿದೆ. ಸದ್ಯ ಈ ಘಟನೆ ಚಳ್ಳಕೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ ಎನ್ನಲಾಗಿದೆ.
ಬಸ್ ನಿಲ್ದಾಣದಲ್ಲಿ ಮಹಿಳೆಯರ ಪರದಾಟ
ಹಾಗೆಯೇ ಕಾಂಗ್ರೆಸ್ ಸರ್ಕಾರ ಶಕ್ತಿ ಯೋಜನೆಯಡಿ ರಾಜ್ಯದೆಲ್ಲೆಡೆ ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ಹಸಿರು ನಿಶಾನೆ ತೋರಿದೆ. ಆದರೆ ಈ ಯೋಜನೆಯ ಪೂರ್ಣ ಮಾಹಿತಿ ಅರಿವಿನ ಕೊರತೆ ಹಾಗೂ ಕೆಲ ನಿರ್ಬಂಧದಿಂದ ಪಟ್ಟಣ ಪ್ರದೇಶಗಳಿಗೆ ಗುಳೆ ಹೊರಟ ಮಹಿಳೆಯರು ಬಸ್ ನಿಲ್ದಾಣದಲ್ಲಿ ಪರದಾಡುವಂತಾಗಿದೆ.
ರಾಯಚೂರು ತಾಲೂಕು ಕೇಂದ್ರದಿಂದ ಬೆಂಗಳೂರು, ಹಾಸನ, ಚಿಕ್ಕಮಗಳೂರು, ಮಂಗಳೂರು ಸೇರಿದಂತೆ ಪಟ್ಟಣ ಪ್ರದೇಶಗಳಿಗೆ ಪಡಿತರ ಚೀಟಿ, ಆಧಾರ್, ಚುನಾವಣಾ ಗುರುತಿನ ಚೀಟಿಗಳ ಜೆರಾಕ್ಸ್ ಪ್ರತಿ ಹಿಡಿದು ಖುಷಿಯಿಂದ ಬಸ್ ಹತ್ತುತ್ತಿದ್ದಾರೆ. ಆದರೆ ಉಚಿತ ಪ್ರಯಾಣಕ್ಕೆ ಅಸಲಿ ಕಾರ್ಡ್‌ಗಳನ್ನೇ ತೋರಿಸಬೇಕು ಎಂಬ ನಿಯಮ ಕಾರ್ಮಿಕ ಮಹಿಳೆಯರ ಆಸೆಗೆ ತಣ್ಣೀರು ಎರಚಿದಂತಾಗಿದೆ. ಅಸಲಿ ಕಾರ್ಡ್ ಇಲ್ಲದವರು ಬಸ್ ನಿಲ್ದಾಣಗಳಲ್ಲೇ ಕಾಲ ಕಳೆಯುವಂತಹ ಪರಿಸ್ಥಿತಿ ನಿರ್ಮಾಣವಾಗಿದ.
ಅಸಲಿ ಕಾರ್ಡ್ ತೋರಿಸಿ ಟಿಕೆಟ್ ಪಡೆಯಬೇಕು, ಇಲ್ಲವೇ ಬಸ್‌ನಿಂದ ಕೆಳಗೆ ಇಳಿಯುವಂತೆ ಕಂಡಕ್ಟರ್‌ಗಳು ಖಡಕ್ ಆಗಿ ಹೇಳುತ್ತಿದ್ದಾರೆ ಎನ್ನುವ ಆರೋಪಗಳು ಕೇಳಿಬಂದಿವೆ. ಅಲ್ಲದೆ ಸರಿಯಾದ ದಖಲೆ ಇಲ್ಲ ಅಂತಾ ಹೇಳಿ ಮಾರ್ಗದ ಮಧ್ಯದಲ್ಲೇ ಇಳಿಸಿ ಹೋಗುತ್ತಿರುವ ಘಟನೆಗಳು ಕೂಡ ನಡೆದಿವೆ. ಬೀದರ್, ಕಲಬುರಗಿ, ಯಾದಗಿರಿ, ವಿಜಯಪುರ, ಬಾಗಲಕೋಟೆ, ಹುಬ್ಬಳ್ಳಿ ಸೇರಿದಂತೆ ವಿವಿಧಡೆಗಳಿಂದ ಬರುವ ಬಸ್‌ಗಳಲ್ಲಿ ಶೇಕಡಾ 50ರಷ್ಟು ಮಹಿಳೆಯರು ಇದ್ದು, ಹೆಚ್ಚುವರಿ ಮಹಿಳೆಯರಿಗೆ ಅವಕಾಶವಿಲ್ಲ ಎಂದು ನಿರಾಕರಣೆ ಮಾಡಲಾಗುತ್ತಿದೆ.
ಕಾರ್ಡ್ ನೀಡಿ ಪ್ರಯಾಣಿಸುವ ಕುಟುಂಬಗಳಿಗೆ ಅವರ ಲಗೇಜ್ ನೋಡಿ ಬೇರೆ ಬಸ್‌ಗಳಿಗೆ ಬನ್ನಿ ಎಂದು ವಾಪಾಸ್ ಕಳುಹಿಸಿದ ಘಟನೆಗಳು ಕೂಡ ನಡೆದಿವೆ. ಇಂತಹ ನಿಯಮಗಳಿಂದ ಅನೇಕ ಮಹಿಳೆಯರು ಬಸ್ ನಿಲ್ದಾಣದಲ್ಲೇ ಉಳಿದುಕೊಳ್ಳುವುದು ಅನಿವಾರ್ಯವಾಗಿದೆ. ಬೇರೆ ಬೇರೆ ವಿಭಾಗಗಳಿಂದ ರಯಚೂರು ಕಡೆಗೆ ಪ್ರಯಾಣಿಸುವ ಬಹುತೇಕ ಸಾರಿಗೆ ಬಸ್‌ಗಳಲ್ಲಿ ಪಾಸ್ ಹೊಂದಿದ ಶಾಲಾ ಕಾಲೇಜು ಮಕ್ಕಳನ್ನು ದೂರವಿಡುವ ದುರುದ್ದೇಶದಿಂದ ಆಂಧ್ರಪ್ರದೇಶ, ತೆಲಂಗಾಣ ಸೇರಿದಂತೆ ಬೇರೆ ರಾಜ್ಯಗಳ ನಾಮಫಲಕ ಅಳವಡಿಸುತ್ತಿದ್ದಾರೆ ಎನ್ನುವ ಆರೋಪ ಕೆಳಿಬಂದಿವೆ.
ಹೊರ ರಾಜ್ಯಗಳಿಗೆ ತೆರಳುವ ಬಸ್‌ಗಳಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ ನೀಡದಿರುವುದರಿಂದ ಮಹಿಳೆಯರು ಸರ್ಕಾರದ ವಿರುದ್ಧ ಹಿಡಿಶಾಪ ಹಾಕುತ್ತಿದ್ದಾರೆ. ಮತ್ತೊಂದೆಡೆ ಅವಿದ್ಯಾವಂತ, ಕೂಲಿ ಕಾರ್ಮಿಕ ಮಹಿಳೆಯರು ಕಾರ್ಡ್ ಒಯ್ದರೆ ಕೆಲಸ ಮಾಡುವ ವೇಳೆ ಕಳೆಯುತ್ತದೆ ಎಂಬ ಭಯದಿಂದ ಜೆರಾಕ್ಸ್ ಮಾಡಿಸಿಕೊಂಡು ಪ್ರಯಾಣಿಸುವುದು ಸಾಮಾನ್ಯವಾಗಿದೆ. ಇದನ್ನೇ ಬಂಡವಾಳ ಮಾಡಿಕೊಂಡ ನಿರ್ವಾಹಕರು ಮಹಿಳೆಯರನ್ನು ಬಸ್‌ಗೆ ಹತ್ತಿಸಿಕೊಳ್ಳದೆ ಹಾಗೆ ಹೋಗುತ್ತಿದ್ದಾರೆ.
ಈ ಬಗ್ಗೆ ಸ್ಥಳೀಯ ಬಸ್ ನಿಲ್ದಾಣದಲ್ಲಿ ವಿಚಾರಣೆಗೂ ಅವಕಾಶಗಳಿಲ್ಲ. ಯಾವ ಬಸ್ ಹೊರ ರಾಜ್ಯಕ್ಕೆ ತೆರಳುವ ಮಾಹಿತಿಯೂ ಗೊತ್ತಿಲ್ಲ. ಇಂತಹ ಸಮಸ್ಯೆಗಳಿಂದ “ಶಕ್ತಿ” ಯೋಜನೆ ಮಹಿಳೆಯರ ಪಾಲಿಗೆ ಕಹಿಯಾಗಿ ಪರಿಣಮಿಸಿದೆ. ಯಾವುದೇ ಬಸ್ ಇರಲಿ ಗಡಿ ಪ್ರದೇಶದತ್ತ ಜೆರಾಕ್ಸ್ ಪ್ರತಿ ಮೇಲೆ ಪ್ರಯಾಣಿಸಲು ಅವಕಾಶ ನೀಡಬೇಕು ಎಂದು ಮಹಿಳೆಯರು ಒತ್ತಾಯಿಸಿದ್ದರು.
English summary
Misbehavior with a women; Beaten to KSRTC bus conductor in Challakere of chitradurga district