ಅಪ್ಪ ಆಟಕ್ಕೆಂದು ತಂದುಕೊಟ್ಟ ಚೆಸ್‌ಬೋರ್ಡ್ ಹಿಡಿದು ತನ್ನ ಸಹೋದರಿಯೊಂದಿಗೆ ಮಕ್ಕಳಾದಂತೆ ಚೆಸ್ ಆಟವಾಡುತ್ತಾ ಬೆಳೆದ ಹುಡುಗ, ಈಗ ಅದೇ ಚೆಸ್‌ಬೋರ್ಡ್ ಮುಂದೆ ಕುಳಿತು ವಿಶ್ವದ ಹಿರಿಯ, ಅನುಭವಿ, ದಿಗ್ಗಜ ಚೆಸ್ ಆಟಗಾರರನ್ನು ಆಡಿಸುತ್ತಿದ್ದಾನೆ. ‘ಸ್ಪರ್ಧೆ’ಯಲ್ಲಿ ಸೋಲಿಸುವ ಮಟ್ಟಕ್ಕೆ ಬೆಳೆದಿದ್ದಾನೆ ಎಂದರೆ ಸಾಧನೆಯಲ್ಲದೆ ಮತ್ತೇನು? ಅಂದು ಮಕ್ಕಳಾಟವಾಗಿದ್ದ ಚೆಸ್, ಪ್ರಜ್ಞಾನಂದನಿಗೆ ಈಗ ಹೆಸರು, ಘನತೆ ಮತ್ತು ಗೌರವವನ್ನು ತಂದುಕೊಡುತ್ತಿದೆ. ಅಷ್ಟೇ ಅಲ್ಲ ಕೈತುಂಬಾ ಸಂಪಾದನೆಯೂ ಸಾಧ್ಯವಾಗುತ್ತಿದೆ. ಆತನ ಚಾಣಾಕ್ಷ ಆಟ ಈಗ ಭಾರತೀಯರಿಗೆ ಕ್ಷಣ ಕ್ಷಣಕ್ಕೂ ರೋಚಕ, ರೋಮಾಂಚಕ ಅನುಭವ ತಂದುಕೊಡುತ್ತಿದೆ. ಈಗಾಗಲೇ ಯುವ ಪ್ರತಿಭೆ ಆರ್ ಪ್ರಜ್ಞಾನಂದ ಚೆಸ್ ವಿಶ್ವಕಪ್‌ನಲ್ಲಿ ಫೈನಲ್ ಪ್ರವೇಶಿಸಿದ ಎರಡನೇ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಈ ಹಿಂದೆ ವಿಶ್ವ ಚಾಂಪಿಯನ್ ವಿಶ್ವನಾಥನ್ ಆನಂದ್ (Viswanathan Anand) ಮಾತ್ರ ಈ ಸಾಧನೆ ಮಾಡಿದ್ದಾರೆ.