Karnataka
oi-Naveen Kumar N
ಕರ್ನಾಟಕ ಬಿಜೆಪಿಯಲ್ಲಿ ಸದ್ಯಕ್ಕೆ ಒಳಜಗಳ ನಿಲ್ಲುವಂತೆ ಕಾಣುತ್ತಿಲ್ಲ. ಹೀನಾಯ ಸೋಲಿನ ಬಳಿಕ ಹಲವು ಮಾಜಿ ಸಚಿವರು, ಶಾಸಕರು ತಮ್ಮದೇ ಪಕ್ಷದ ಕೆಲವು ನಾಯಕರ ವಿರುದ್ಧ ತಿರುಗಿಬಿದ್ದಿದ್ದು, ಬಹಿರಂಗವಾಗಿಯೇ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಬಿಜೆಪಿಯೇ ಈಗ ವಿರೋಧಿಗಳಿಗೆ ಕೋಲು ಕೊಟ್ಟು ಹೊಡೆಸಿಕೊಳ್ಳುವ ಸ್ಥಿತಿಗೆ ಬಂದಿದೆ.
ಹೊನ್ನಾಳಿ ಮಾಜಿ ಶಾಸಕ, ಬಿಜೆಪಿ ಹಿರಿಯ ನಾಯಕ ಎಂಪಿ ರೇಣುಕಾಚಾರ್ಯ ಈಗ ಹಿರಿಯ ನಾಯಕರ ವಿರುದ್ಧ ತಿರುಗಿಬಿದ್ದಿದ್ದಾರೆ. ರಾಜ್ಯ ಚುನಾವಣೆ ಉಸ್ತುವಾರಿಗೆ ಬಂದಿದ್ದ ಅಣ್ಣಾಮಲೈ ಸೇರಿದಂತೆ ಹಲವರ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
ಚುನಾವಣೆಗೆ ಎರಡು ದಿನ ಮೊದಲು ಆನ್‌ಲೈನ್ ಸಭೆ ಮಾಡಿದರು, ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲ್ಲಲಾಗದವರು ನಮಗೆ ಚುನಾವಣೆಯ ಬಗ್ಗೆ ಪಾಠ ಮಾಡಿದ್ರು ಎಂದು ಹೇಳಿದ್ದಾರೆ. ನಾನು ಬಿಜೆಪಿ ವಿರುದ್ಧ ಮಾತಾಡ್ತಿಲ್ಲ, ಪಕ್ಷ ನನಗೆ ತಾಯಿ ಸಮಾನ ಆದರೆ ಕೆಲವು ದೌರ್ಬಲ್ಯಗಳ ಬಗ್ಗೆ ಮಾತನಾಡಬೇಕಾಗುತ್ತದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಬಿಎಲ್ ಸಂತೋಷ್‌ಗೆ ಕಾಂಗ್ರೆಸ್ ಸವಾಲು
ಎಂಪಿ ರೇಣುಕಾಚಾರ್ಯ ಹೇಳಿಕೆಯನ್ನು ಉಲ್ಲೇಖಿಸಿ ಕರ್ನಾಟಕ ಕಾಂಗ್ರೆಸ್ ಟ್ವೀಟ್ ಮಾಡಿದ್ದು, ಬಿಎಲ್ ಸಂತೋಷ್ ಅವರಿಗೆ ಸವಾಲಾಕಿದೆ. ರೇಣುಕಾಚಾರ್ಯ ಹೇಳಿಕೆಯನ್ನು ಸವಾಲಾಗಿ ಸ್ವೀಕರಿಸಿ ಗ್ರಾಮ ಪಂಚಾಯಿತಿ ಚುನಾವಣೆಗೆ ನಿಲ್ಲಿ ಎಂದು ಹೇಳಿದೆ.
ಗ್ರಾಮ ಪಂಚಾಯ್ತಿ ಚುನಾವಣೆಗೆ ನಿಂತು ಗೆಲ್ಲಲಾಗದ ದೊಣ್ಣೆನಾಯಕರೊಬ್ಬರು RSSನ ದೊಣ್ಣೆ ತೋರಿಸಿ ಇಡೀ ಬಿಜೆಪಿಯನ್ನು ಅಲ್ಲಾಡಿಸುತ್ತಿದ್ದಾರೆ!@blsanthosh ಅವರೇ, ರೇಣುಕಾಚಾರ್ಯರ ಈ ಮಾತನ್ನು ಸವಾಲಾಗಿ ಸ್ವೀಕರಿಸಿ ಮುಂದಿನ ಗ್ರಾಂ.ಪಂ ಚುನಾವಣೆಗೆ ಸ್ಪರ್ದಿಸಿ ಗೆದ್ದು ತೋರಿಸಿ!
ನಿಮ್ಮ ದಮ್ಮು ತಾಕತ್ತು ನಿರೂಪಿಸಿ!#BJPvsBJP pic.twitter.com/cBxbqkxs4B
— Karnataka Congress (@INCKarnataka) June 30, 2023
“ಗ್ರಾಮ ಪಂಚಾಯ್ತಿ ಚುನಾವಣೆಗೆ ನಿಂತು ಗೆಲ್ಲಲಾಗದ ದೊಣ್ಣೆನಾಯಕರೊಬ್ಬರು RSSನ ದೊಣ್ಣೆ ತೋರಿಸಿ ಇಡೀ ಬಿಜೆಪಿಯನ್ನು ಅಲ್ಲಾಡಿಸುತ್ತಿದ್ದಾರೆ! ಬಿಎಲ್ ಸಂತೋಷ್ ಅವರೇ, ರೇಣುಕಾಚಾರ್ಯರ ಈ ಮಾತನ್ನು ಸವಾಲಾಗಿ ಸ್ವೀಕರಿಸಿ ಮುಂದಿನ ಗ್ರಾಮ ಪಂಚಾಯಿತಿ ಚುನಾವಣೆಗೆ ಸ್ಪರ್ಧಿಸಿ ಗೆದ್ದು ತೋರಿಸಿ! ನಿಮ್ಮ ದಮ್ಮು ತಾಕತ್ತು ನಿರೂಪಿಸಿ!” ಎಂದು ಕರ್ನಾಟಕ ಕಾಂಗ್ರೆಸ್ ಟ್ವೀಟ್ ಮಾಡಿದೆ.
ಬಿಜೆಪಿಯಲ್ಲಿ ಹೆಚ್ಚಾಯ್ತು ಕಿತ್ತಾಟ
ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಸೋತ ಬಳಿಕ ರಾಜ್ಯ ಬಿಜೆಪಿಯಲ್ಲಿ ಎಲ್ಲವೂ ಸರಿಯಿಲ್ಲ ಎನ್ನುವುದು ಬಹಿರಂಗವಾಗುತ್ತಿದೆ. ಹಲವು ನಾಯಕರು ಬಿಜೆಪಿ ಹೈಕಮಾಂಡ್ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇನ್ನೂ ಕೆಲವರು ಬಿಎಲ್ ಸಂತೋಷ್, ನಳಿನ್ ಕುಮಾರ್ ಕಟೀಲ್ ವಿರುದ್ಧ ಸಿಟ್ಟಾಗಿದ್ದಾರೆ.
ಬಿಜೆಪಿಯಲ್ಲಿ ಇದುವರೆಗೂ ವಿಪಕ್ಷ ನಾಯಕ ಯಾರು ಎಂದು ಆಯ್ಕೆ ಮಾಡಲು ಆಗಿಲ್ಲ, ಜುಲೈ 2ಕ್ಕೆ ಮೊದಲು ವಿಪಕ್ಷ ನಾಯಕನ ಹೆಸರನ್ನು ಘೋಷಣೆ ಮಾಡುವುದಾಗಿ ಹಿರಿಯ ನಾಯಕ ಸದಾನಂದ ಗೌಡ ಹೇಳಿದ್ದಾರೆ. ಈಗಾಗಲೇ ಹಲವು ನಾಯಕರು ವಿಪಕ್ಷ ನಾಯಕನ ಸ್ಥಾನದ ಆಕಾಂಕ್ಷಿಗಳಾಗಿದ್ದು, ಆಯ್ಕೆ ನಂತರ ಉಳಿದ ಆಕಾಂಕ್ಷಿಗಳ ಅಸಮಾಧಾನವನ್ನು ತಣ್ಣಗಾಗಿಸಬೇಕಿದೆ.
ಕಾಂಗ್ರೆಸ್ ಜೊತೆ ಹಿರಿಯ ನಾಯಕರು ಹೊಂದಾಣಿಕೆ ರಾಜಕೀಯ ಮಾಡುತ್ತಿದ್ದಾರೆ ಎಂದು ಪ್ರತಾಪ್ ಸಿಂಹ, ಸಿ.ಟಿ. ರವಿ ಆರೋಪಿಸಿದ್ದರೆ. ಕಾಂಗ್ರೆಸ್‌ನಿಂದ ಬಂದವರಿಂದ ಪಕ್ಷದಲ್ಲಿ ಶಿಸ್ತು ಹಾಳಾಗಿದೆ ಎಂದು ಕೆ.ಎಸ್. ಈಶ್ವರಪ್ಪ ಕಿಡಿ ಕಾರಿದ್ದರು, ಇನ್ನು ಎಂಟಿಬಿ ನಾಗರಾಜ್ ಅಂತೂ ಮಾಜಿ ಸಚಿವ ಡಾ.ಕೆ. ಸುಧಾಕರ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು, ನನ್ನ ಸೋಲಿಗೆ ಅವರೇ ಕಾರಣ ಎಂದು ನೇರವಾಗಿ ಆರೋಪಿಸಿದ್ದಾರೆ.
English summary
Congress challenges BL Santhosh to participate in the Gram Panchayat election and emerge victorious, citing BJP former minister MP Renukacharya’s remarks about BJP leaders.
Story first published: Friday, June 30, 2023, 11:46 [IST]