Ballari
lekhaka-Muruli Kanth Rao

ಬಳ್ಳಾರಿ, ಜೂನ್ 30: ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳ ಅರ್ಜಿ ಪಡೆಯಲು ಕೈ ಕಾರ್ಯಕರ್ತರು ಮನೆ ಬಾಗಿಲಿಗೆ ಬರಲಿದ್ದಾರೆ ಎಂದು ಯುವಜನ ಸಬಲೀಕರಣ, ಕ್ರೀಡೆ ಹಾಗೂ ಪರಿಶಿಷ್ಟ ವರ್ಗಗಳ ಕಲ್ಯಾಣ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ.ನಾಗೇಂದ್ರ ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಸರ್ಕಾರ ಘೋಷಿಸಿರುವ ಗ್ಯಾರಂಟಿ ಯೋಜನೆಗಳನ್ನು ಪಡೆಯಲು ಅರ್ಜಿ ಸಲ್ಲಿಸಬೇಕಿದ್ದು, ಈಗಾಗಲೇ ಗೃಹಜ್ಯೋತಿ ಯೋಜನೆಯ ಅರ್ಜಿಗಳನ್ನು ಆನ್ಲೈನ್ ಮತ್ತು ಆಫ್ಲೈನ್ ಅಂದರೇ, ಗ್ರಾಮ ಒನ್, ಬಾಪು ಕೇಂದ್ರ, ತಾಲೂಕು ಕಚೇರಿಗಳಲ್ಲಿ ಸಲ್ಲಿಸಬಹುದಾಗಿದೆ ಎಂದರು.

ದಿನಕ್ಕೆ ಸುಮಾರು 12 ಲಕ್ಷಕ್ಕೂ ಹೆಚ್ಚು ಅರ್ಜಿಗಳು ಸಲ್ಲಿಕೆಯಾಗುತ್ತಿರುವ ಕಾರಣ ತಾಂತ್ರಿಕ ಕಾರಣಗಳಿಂದ ಅನ್ ಲೈನ್ನಲ್ಲಿ ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ ಗೊಂದಲ ಉಂಟಾಗುತ್ತಿದೆ. ಹಾಗಾಗಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರನ್ನೇ ಮನೆ ಮನೆಗೆ ಕಳುಹಿಸಿ ಗ್ಯಾರಂಟಿ ಯೋಜನೆಯ ಅರ್ಜಿ ಸ್ವೀಕರಿಸುವ ವ್ಯವಸ್ಥೆ ಮಾಡಲಾಗುವುದು ಎಂದು ಹೇಳಿದರು.
ಪ್ರತಿ ಐನೂರು ಜನರಿಗೆ ಇಬ್ಬರು ಕಾಂಗ್ರೆಸ್ ಕಾರ್ಯಕರ್ತರನ್ನು ನೇಮಿಸಲಾಗುತ್ತದೆ. ಅವರು ಪ್ರತಿ ಮನೆಗೆ ಭೇಟಿ ನೀಡಿ ಗೃಹ ಲಕ್ಷ್ಮೀ ಗೃಹಜ್ಯೋತಿ ಯೋಜನೆಗಳ ಅರ್ಜಿ ಸ್ವೀಕರಿಸಿ, ಗ್ರಾಮ ಒನ್ ಕೇಂದ್ರಗಳಲ್ಲಿ ನೀಡುವಂತಹ ಸರ್ಟಿಫಿಕೇಟ್ಗಳನ್ನು ಸಂಗ್ರಹಿಸಿ ರಾಜ್ಯ ಸರ್ಕಾರಕ್ಕೆ ಸಲ್ಲಿಸಲಾಗುವುದು. ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ ಉಂಟಾಗುತ್ತಿರುವ ನೂಕುನುಗ್ಗಲು ಹಾಗೂ ಗೊಂದಲ ತಪ್ಪಿಸುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಸಚಿವ ನಾಗೇಂದ್ರ ತಿಳಿಸಿದರು.

ರಾಜ್ಯದಲ್ಲಿ ಮೋಡ ಬಿತ್ತನೆಗೆ ಸರ್ಕಾರ ಚಿಂತನೆ
ರಾಜ್ಯದಲ್ಲಿ ಮುಂಗಾರು ಮಳೆ ಅಭಾವ ಕಂಡುಬಂದಿರುವುದರಿಂದ ಮೋಡ ಬಿತ್ತನೆ ಕಾರ್ಯ ಮಾಡುವ ಕುರಿತು ಸರ್ಕಾರ ಚಿಂತನೆ ಮಾಡಿದೆ. ಈ ಬಾರಿ ವಾಡಿಕೆಗಿಂತ ಕಡಿಮೆ ಮಳೆ ಆಗಿರುವುದರಿಂದ ರೈತರಿಗೆ ಯಾವುದೇ ಸಂಕಷ್ಟ ಉಂಟಾಗದೆ ಇರುವ ರೀತಿ ಸರ್ಕಾರ ಕ್ರಮ ಕೈಗೊಳ್ಳಲಿದೆ ಎಂದರು.
ಅಂದಾಜು 138 ಮಿ.ಮೀ ನಷ್ಟು ಮಳೆ ಈಗಾಗಲೇ ಆಗಬೇಕಿತ್ತು. ಆದರೆ ಕೇವಲ ಅರ್ಧದಷ್ಟು ಅಂದರೆ 70 ರಿಂದ 75 ಮಿ.ಮೀ ನಷ್ಟು ಮಾತ್ರ ಮಳೆಯಾಗಿದೆ. ರೈತರು ಆತಂಕ ಪಡುವ ಅಗತ್ಯವಿಲ್ಲ. ಮುಂದಿನ ಎರಡು ವಾರಗಳಲ್ಲಿ ಉತ್ತಮ ಮಳೆಯಾಗುವ ನಿರೀಕ್ಷೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಒಂದು ವೇಳೆ ಸಮರ್ಪಕ ಮಳೆಯಾಗದಿದ್ದ ಪಕ್ಷದಲ್ಲಿ ಮೋಡ ಬಿತ್ತನೆ ಕಾರ್ಯ ಮಾಡುವ ಕುರಿತು ರಾಜ್ಯ ಸರ್ಕಾರ ಚಿಂತನೆ ನಡೆಸಲಿದೆ ಎಂದು ಹೇಳಿದರು.
ರಾಜ್ಯದಲ್ಲಿ ಹಾಗೂ ಜಿಲ್ಲೆಯಲ್ಲಿ ಕೃಷಿ ಚಟುವಟಿಕೆಗೆ ಅಗತ್ಯವಿರುವಷ್ಟು ರಸಗೊಬ್ಬರ ಮತ್ತು ಬಿತ್ತನೆ ಬೀಜಗಳ ಸಂಗ್ರಹವಿದೆ. ಮಳೆ ಕೂಡಾ ಮುಂದಿನ ದಿನಗಳಲ್ಲಿ ಉತ್ತಮ ಪ್ರಮಾಣದಲ್ಲಿ ಆಗಲಿದ್ದು, ಅದರಲ್ಲಿಯೂ ವಿಶೇಷವಾಗಿ ಮಲೆನಾಡು ಹಾಗೂ ತುಂಗಭದ್ರಾ ಜಲಾನಯನ ಪ್ರದೇಶದಲ್ಲಿ ಮಳೆ ಆಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಟಿಬಿ ಡ್ಯಾಂನ ಜಲ ಸಂಗ್ರಹ ಹೆಚ್ಚಾಗಿ ರೈತರ ಕೃಷಿ ಚಟುವಟಿಕೆಗಳು ಚುರುಕುಗೊಳ್ಳಲಿದೆ ಎಂದು ಸಚಿವ ನಾಗೇಂದ್ರ ಆಶಾಭಾವನೆಯನ್ನು ವ್ಯಕ್ತಪಡಿಸಿದರು.t
English summary
Congress workers will come door to door to get applications for guarantee schemes says Youth empowerment Minister B. Nagendra. Know more.
Story first published: Friday, June 30, 2023, 13:56 [IST]