Mandya
lekhaka-Srinivasa K
ಮಂಡ್ಯ, ಜೂನ್ 28: ಗೋಹತ್ಯೆ ನಿಷೇಧ ಕಾಯ್ದೆಯನ್ನು ನಿಷ್ಕ್ರಿಯಗೊಳಿಸದೇ ಕಾಯ್ದೆಯನ್ನು ಮತ್ತಷ್ಟು ಬಲಪಡಿಸಿ ಇನ್ನೂ ಕಠಿಣ ಕ್ರಮ ಕೈಗೊಂಡು ಗೋವುಗಳನ್ನು ಉಳಿಸುವಂತೆ ಒತ್ತಾಯಿಸಿ ಭಾರತೀಯ ಕಿಸಾನ್ ಸಂಘದ ಕಾರ್ಯಕರ್ತರು ಮಂಡ್ಯ ನಗರದಲ್ಲಿ ಪ್ರತಿಭಟನೆ ನಡೆಸಿದರು.
ನಗರದ ಸಿಲ್ವರ್ ಜ್ಯೂಬಿಲಿ ಪಾರ್ಕಿನಲ್ಲಿ ಜಮಾಯಿಸಿದ ಕಾರ್ಯಕರ್ತರು, ಬೆಂಗಳೂರು-ಮೈಸೂರು ಹೆದ್ದಾರಿ ಮಾರ್ಗವಾಗಿ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಮನವಿ ಸಲ್ಲಿಸಿದರು.
ಕರ್ನಾಟಕದ ಮುಖ್ಯ ಕಸುಬು ಹೈನುಗಾರಿಕೆ ಮತ್ತು ವ್ಯವಸಾಯ. ಶೇ. 70ರಷ್ಟು ಗೋವುಗಳನ್ನೇ ಆಶ್ರಯಿಸಿದ್ದಾರೆ. ಹೈನುಗಾರಿಕೆ ಇಲ್ಲದೆ ವ್ಯವಸಾಯವಿಲ್ಲ, ವ್ಯವಸಾಯಕ್ಕೆ ಮುಖ್ಯವಾದ ಆಧಾರ ಗೋವು. ಆದ್ದರಿಂದ ಹೈನುಗಾರಿಕೆ ವ್ಯವಸಾಯ ಒಂದಕ್ಕೊಂದು ಪೂರಕ. ದೇಶಿ ತಳಿ ಹಸು ಮತ್ತು ಎತ್ತುಗಳು ಇಂದು ಅಳಿವಿನ ಅಂಚಿನಲ್ಲಿವೆ. ಗೋವು ದೇಶದ ಪ್ರಾಣ ಎಂದುಕೊಂಡು ಕಳೆದ 75 ವರ್ಷಗಳಿಂದ ಸರ್ಕಾರಗಳು ಗೋವು ಅಭಿವೃದ್ಧಿಯನ್ನು ಕಡೆಗಣಿಸಿವೆ ಎಂದು ಆರೋಪಿಸಿದರು.
ಗೋಹತ್ಯೆ ನಿಷೇಧ ಕಾಯ್ದೆಯನ್ನು ವಾಪಸ್ ಪಡೆಯದಂತೆ ರಾಜ್ಯಪಾಲರಿಗೆ ಒತ್ತಾಯ: ಪ್ರಮೋದ್ ಮುತಾಲಿಕ್
ಕೃಷಿ ಕ್ಷೇತ್ರ ತುಂಬಾ ಸೊರಗಿ ಹೋಗಿದೆ. ನಷ್ಟದ ಹಾದಿಯಲ್ಲಿರುವ ವ್ಯವಸಾಯ ಬದುಕಿನಿಂದ ಇಂದಿನ ಯುವ ಜನತೆ ದಿಕ್ಕು ತೋಚದೆ ಉದ್ಯೋಗ ಅರಸುತ್ತಾ ನಗರಗಳತ್ತ ವಲಸೆ ಹೋಗುತ್ತಿದ್ದಾರೆ. ಈ ಕೂಡಲೇ ಸರ್ಕಾರ ಎಚ್ಚೆತ್ತುಕೊಂಡು ಗೋಹತ್ಯೆ ನಿಷೇದ ಕಾಯ್ದೆಯನ್ನು ನಿಷ್ಕ್ರಿಯಗೊಳಿಸದೇ ಕಾಯ್ದೆಯನ್ನು ಬಲಪಡಿಸಿ ಇನ್ನೂ ಕಠಿಣ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಹಳ್ಳಿಗಾಡಿನಲ್ಲಿ ಗೋವು ಪರಪೂಜ್ಯ ದೇವತೆಯಾಗಿದೆ. ಗೋಮಾತೆಯನ್ನು ದೇವರೆಂದೇ ನಂಬಿರುವ ನಮ್ಮ ಸಮಾಜದ ಎಲ್ಲ ವರ್ಗದ ಸ್ವಾಮೀಜಿ, ಮಠಾಧಿಪತಿಗಳು ಬೇರೆ ಎಲ್ಲಾ ವಿಷಯಗಳಲ್ಲಿ ಮೂಗು ತೂರಿಸುವರು. ಆದರೆ, ಗೋವನ್ನು ದೇವರೆಂದು ಪೂಜಿಸುವ ಈ ಮಠಾಧಿಪತಿಗಳು ಈ ವಿಚಾರದಲ್ಲಿ ದಿವ್ಯ ಮೌನಕ್ಕೆ ಶರಣಾಗಿರುವುದು ಅಚ್ಚರಿ ಮೂಡಿಸಿದೆ. ಮೌನವಾಗಿದ್ದುಕೊಂಡೇ ಸಹಕರಿಸುದ್ದಾರೆಂಬ ಅನುಮಾನವೂ ವ್ಯಕ್ತವಾಗುತಿದೆ ಎಂದು ಆರೋಪಿಸಿದರು.
ಗೋವಿನಿಂದ ಸಾವಿರಾರು ಉಪಯೋಗಗಳು ಮಾನವಕುಲಕ್ಕೆ ದೊರೆತಿದೆ. ಅದರಲ್ಲಿ ಬಹುಮುಖ್ಯವಾಗಿ ನಾಟಿ ಹಸುವಿನ ಹಾಲು ಔಷಧೀಯ ಗುಣ ಹೊಂದಿದೆ. ಹಾಲು ಕೊಡದ ಹಸುವು ತನ್ನ ಜೀವಿತಾವಧಿಯಲ್ಲಿ ಪ್ರತಿ ದಿನವೂ ಸಗಣಿ, ಗಂಜಲಗಳನ್ನು ನೀಡುತ್ತದೆ. ನೈಸರ್ಗಿಕ ಕೃಷಿಗೆ ಅತ್ಯಮೂಲ್ಯವಾದ ಅಮೃತವಾಗಿದ್ದು, ಇಂದಿನ ದಿನದಲ್ಲಿ ನಮ್ಮ ಜಿಲ್ಲೆಯಲ್ಲಿ ಹಾಗೂ ರಾಜ್ಯದಲ್ಲಿ ಸಾವಿರಾರು ರೈತರುಗಳು ಗೋ ಆಧಾರಿತ ನೈಸರ್ಗಿಕ ಕೃಷಿಯಿಂದ ಸಬಲರಾಗಿ ಸಮಾಜಕ್ಕೆ ವಿಷಮುಕ್ತ ಆಹಾರವನ್ನು ಕೊಡುತ್ತಿದ್ದಾರೆ ಹಾಗೂ ವಿಷಮುಕ್ತ ಭೂಮಿಯನ್ನು ಹೊಂದಿದ್ದಾರೆ ಎಂದು ಆರೋಪಿಸಿದರು.
ಗೋವಿನ ಮರಣದ ನಂತರವೂ ಗೋವಿನ ದೇಹದಿಂದ ಗೋಜಲ ತಯಾರು ಮಾಡುವ ವಿಧಾನವೂ ಕೂಡ ಅಸ್ತಿತ್ವದಲ್ಲಿದೆ. ಈ ಗೋಜಲದಿಂದ 50 ಸಾವಿರಕ್ಕೂ ಹೆಚ್ಚು ರೂಪಾಯಿ ಗೊಬ್ಬರ ತಯಾರಾಗುತ್ತದೆ. ಇಂದಿನ ದಿನಗಳಲ್ಲಿ ತಂತ್ರಜ್ಞಾನ ಎಷ್ಟೇ ಮುಂದುವರಿದರೂ, ಕೃಷಿ ಯಾಂತ್ರೀಕರಣವಾಗಿದ್ದರೂ ಸಹ ಬಹುತೇಕ ಕೆಲಸಗಳಿಗೆ ಎತ್ತುಗಳು ಅನಿವಾರ್ಯ. ಈ ಸಂತತಿ ಅಳಿವಿನ ಅಂಚಿನಲ್ಲಿರುವುದು ಬಹಳ ದುಃಖಕರ ವಿಚಾರ ಎಂದರು.
ಪ್ರತಿಭಟನೆಯಲ್ಲಿ ಕಿಸಾನ್ ಸಂಘದ ಮುಖಂಡರಾದ ಹಾಡ್ಯ ರಮೇಶರಾಜು, ವೆಂಕಟೇಶ, ಪುಟ್ಟಮ್ಮ, ಅಪ್ಪಾಜಿ, ಹರೀಶ್, ಜೋಗೀಗೌಡ, ಮಹದೇವು, ನರಸಿಂಹ, ಸಿದ್ದರಾಜುಗೌಡ, ಶಿವಣ್ಣ, ವಸಂತ, ವಿವೇಕ ಸೇರಿದಂತೆ ಹಲವರು ಭಾಗವಹಿಸಿದ್ದರು.
English summary
Mandya Bharatiya Kisan sangh protest for Cow Slaughter Ban. and Kisan Sangh demands to make the Cow Slaughter Prohibition Act more stringent. Know more
Story first published: Wednesday, June 28, 2023, 16:38 [IST]