Karnataka
oi-Malathesha M
ಬೆಂಗಳೂರು: ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳಿಗೆ ಭರ್ಜರಿ ರೆಸ್ಪಾನ್ಸ್ ಸಿಗುತ್ತಿದೆ. ಅದ್ರಲ್ಲೂ ಬಡವರ ಮನೆಗೆ ಪ್ರತಿತಿಂಗಳು 200 ಯೂನಿಟ್ ವಿದ್ಯುತ್ ಉಚಿತವಾಗಿ ನೀಡುವ ಯೋಜನೆ ‘ಗೃಹ ಜ್ಯೋತಿ’ಗೆ ಜನ ಮುಗಿಬೀಳುತ್ತಿದ್ದಾರೆ. ಅರ್ಜಿ ಸಲ್ಲಿಕೆ ಶುರುವಾಗಿ ಇಂದಿಗೆ 9 ದಿನ ಕಳೆದಿದ್ದು ಲಕ್ಷ ಲಕ್ಷ ಅರ್ಜಿಗಳು ಹರಿದು ಬಂದಿವೆ. ಹಾಗಾದ್ರೆ ಒಟ್ಟಾರೆ ಸಲ್ಲಿಸಿರುವ ಅರ್ಜಿಗಳೆಷ್ಟು? ಸಂಪೂರ್ಣ ಮಾಹಿತಿ ಇಲ್ಲಿ ತಿಳಿಯಿರಿ.
ಜೂನ್ 18ರಿಂದ ರಾಜ್ಯ ಸರ್ಕಾರ ‘ಗೃಹ ಜ್ಯೋತಿ’ ಯೋಜನೆಗೆ ಆನ್‌ಲೈನ್ ಮೂಲಕವಾಗಿ ಅರ್ಜಿ ಸ್ವೀಕರಿಸ್ತಿದೆ. ಹೀಗೆ ಅರ್ಜಿ ಸ್ವೀಕರಿಸಲು ಶುರುವಾಗಿ ಕೇವಲ 9 ದಿನ ಕಳೆದಿದೆ. ಆದ್ರೆ ಸಲ್ಲಿಕೆಯಾಗಿರುವ ಅರ್ಜಿಗಳ ಸಂಖ್ಯೆ ಎಷ್ಟು ಗೊತ್ತಾ? ಆ ಲೆಕ್ಕ ಕೇಳಿದರೆ ತಲೆ ತಿರುಗುತ್ತದೆ. ಕರ್ನಾಟಕದಲ್ಲಿ ಒಟ್ಟಾರೆ 6 ವಿದ್ಯುತ್ ನಿಗಮಗಳು ವಲಯವಾರು ಕಾರ್ಯನಿರ್ವಹಿಸುತ್ತಿವೆ. ಉದಾಹರಣೆ ಬೆಂಗಳೂರು ಭಾಗದಲ್ಲಿ ಬೆಸ್ಕಾಂ ಇದೆ, ಹೀಗೆ ರಾಜ್ಯದ ವಿವಿಧ ವಿಭಾಗದಲ್ಲಿ ವಿದ್ಯುತ್ ನಿಗಮಗಳು ಕಾರ್ಯನಿರ್ವಹಿಸುತ್ತಿವೆ. ರಾಜ್ಯದ ಒಟ್ಟು 6 ವಿದ್ಯುತ್ ನಿಗಮಗಳಲ್ಲಿ ಗೃಹ ಜ್ಯೋತಿ ಯೋಜನೆಗೆ ಆನ್‌ಲೈನ್ ಮೂಲಕ ಅರ್ಜಿ ಸ್ವೀಕರಿಸಲಾಗ್ತಿದೆ. ಅರ್ಜಿ ಸಲ್ಲಿಕೆ ಶುರುವಾದ ನಂತರ ಬರೋಬ್ಬರಿ 60 ಲಕ್ಷಕ್ಕೂ ಹೆಚ್ಚು ಅರ್ಜಿಗಳು ಬಂದಿವೆ.
‘ಗೃಹ ಜ್ಯೋತಿ’ ಯಾವ ವಲಯದಲ್ಲಿ ಎಷ್ಟು ಅರ್ಜಿ?
ಅಂದಹಾಗೆ ಆರಂಭದಲ್ಲಿ ಸರ್ವರ್ ಡೌನ್ ಸಮಸ್ಯೆ ಪರಿಣಾಮ ನಿಧಾನಗತಿಯಲ್ಲಿ ಸಾಗಿದ್ದ ಗೃಹ ಜ್ಯೋತಿಗೆ ಈಗ ವೇಗ ಸಿಕ್ಕಿದೆ. ಯೋಜನೆಗೆ ಅರ್ಜಿ ಸ್ವೀಕಾರ ಪ್ರಕ್ರಿಯೆ ವೇಗ ಪಡೆದಿರುವ ಹಿನ್ನೆಲೆಯಲ್ಲಿ ಲಕ್ಷ ಲಕ್ಷ ಜನ ಅರ್ಜಿ ಸಲ್ಲಿಸುತ್ತಿದ್ದಾರೆ. ಹೀಗೆ ಸೋಮವಾರ ಸಂಜೆ 7 ಗಂಟೆ ವೇಳೆಗೆ ಒಟ್ಟಾರೆ 61,70,044 ಗ್ರಾಹಕರು ನೋಂದಾಯಿಸಿದ್ದಾರೆ. ಅದರಲ್ಲೂ ಬೆಂಗಳೂರಿನ ಬೆಸ್ಕಾಂ ವಲಯದಲ್ಲಿ ಅತಿಹೆಚ್ಚು ಪ್ರಮಾಣದಲ್ಲಿ ಗ್ರಾಹಕರು ಅರ್ಜಿ ಸಲ್ಲಿಕೆ ಮಾಡಿದ್ದಾರೆ. ಬರೋಬ್ಬರಿ 24,95,340 ಅರ್ಜಿಗಳು ಸಲ್ಲಿಕೆಯಾಗಿವೆ. ಹಾಗಾದ್ರೆ ಯಾವ ಯಾವ ವಲಯ ಎಷ್ಟು ಅರ್ಜಿ ಸ್ವೀಕರಿಸಿದೆ ಅನ್ನೋ ಮಾಹಿತಿ ಇಲ್ಲಿದೆ ತಿಳಿಯಿರಿ.
‘ಗೃಹ ಜ್ಯೋತಿ’ ವಲಯವಾರು ಅರ್ಜಿ ಲೆಕ್ಕಾಚಾರ
1) ಬೆಸ್ಕಾಂ – 24,95,340
2) ಸೆಸ್ಕಾಂ – 9,67,751
3) ಜೆಸ್ಕಾಂ – 6,60,668
4) ಹೆಸ್ಕಾಂ – 12,92,176
5) ಎಚ್ಆರ್‌ಇಸಿಎಸ್ – 29,192
6) ಮೆಸ್ಕಾಂ – 7,24,918
ಒಟ್ಟು – 61,70,044
‘ಗೃಹ ಜ್ಯೋತಿ’ಗೆ ಅರ್ಜಿ ಸಲ್ಲಿಸುವುದು ಹೇಗೆ?
ಅಂದಹಾಗೆ ರಾಜ್ಯದ ಇ – ಆಡಳಿತ ಇಲಾಖೆ ಪ್ರತ್ಯೇಕವಾಗಿ ನೋಂದಣಿ ಲಿಂಕ್ ಅನ್ನು ರಾಜ್ಯದ ವಿದ್ಯುತ್ ಕಚೇರಿಗಳಿಗೆ ನೀಡಿದ ನಂತರ ನೋಂದಣಿ ಪ್ರಕ್ರಿಯೆಗೆ ವೇಗ ದೊರೆತಿದೆ. ಗೃಹ ಜ್ಯೋತಿ ಯೋಜನೆಗೆ ಯಾವುದೇ ವಿದ್ಯುತ್ ಕಚೇರಿ, ನಾಡಕಚೇರಿ, ಕಂಪ್ಯೂಟರ್, ಲ್ಯಾಪ್‌ಟಾಪ್ & ಮೊಬೈಲ್ ಮೂಲಕ ಅಧಿಕೃತ ಪೋರ್ಟಲ್ https://sevasindhugs.karnataka.gov.in ಮೇಲೆ ಕ್ಲಿಕ್ ಮಾಡಿ ನೋಂದಣಿ ಮಾಡಬಹುದು. ಇನ್ನು ನೋಂದಣಿ ಸಂಪೂರ್ಣ ಉಚಿತ ಎಂದು ಸರ್ಕಾರ ತಿಳಿಸಿದೆ. ಅಲ್ಲದೆ ‘ಗೃಹ ಜ್ಯೋತಿ’ಗೆ ಅರ್ಜಿ ಸಲ್ಲಿಸಲು ಮೇಲ್ಕಂಡ ವೆಬ್ ಹೊರತುಪಡಿಸಿ, ನೋಂದಣಿಗೆ ಯಾವುದೇ ಖಾಸಗಿ ಅಥವಾ ನಕಲಿ ವೆಬ್‌ಸೈಟ್ ಬಳಸದಂತೆ ಇಂಧನ ಇಲಾಖೆ ಸೂಚನೆ ನೀಡಿದೆ.
‘ಗೃಹ ಜ್ಯೋತಿ’ಗೆ ಅರ್ಜಿ ಸಲ್ಲಿಸುವ ಗ್ರಾಹಕರು ಬೆಂಗಳೂರು ಒನ್, ಗ್ರಾಮ ಒನ್ ಹಾಗೂ ಕರ್ನಾಟಕ ಒನ್ ಸೇರಿ, ಗ್ರಾಮ ಪಂಚಾಯಿತಿ ಕಚೇರಿಗಳಲ್ಲಿ ನೋಂದಣಿಗೆ ನಿಗದಿತ ಸೇವಾ ಶುಲ್ಕ ಮಾತ್ರ ಪಾವತಿಸಿ ನೋಂದಾಯಿಸಲು ತಿಳಿಸಲಾಗಿದೆ. ಅಲ್ದೆ ಹೆಚ್ಚುವರಿ ಹಣಕ್ಕೆ ಯಾರಾದ್ರೂ ಬೇಡಿಕೆ ಇಟ್ಟಲ್ಲಿ, ಗ್ರಾಹಕರು ಕೂಡಲೇ 24×7 ಸಹಾಯವಾಣಿ 1912ಕ್ಕೆ ಕರೆಮಾಡಿ ಮಾಹಿತಿ ನೀಡಬಹುದು. ಅಂತಹ ಸಮಯದಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಈಗಾಗಲೇ ಇಲಾಖೆ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ. ಇನ್ನು ‘ಗೃಹ ಜ್ಯೋತಿ’ ನಿಯಮದ ಪ್ರಕಾರ ಯೋಜನೆ ಗೃಹ ಬಳಕೆಯ ವಿದ್ಯುತ್ ಸಂಪರ್ಕಗಳಿಗೆ ಮಾತ್ರ ಅನ್ವಯ. ವಾಣಿಜ್ಯ ಉದ್ದೇಶಕ್ಕೆ ವಿದ್ಯುತ್ ಉಪಯೋಗಿಸಿದಲ್ಲಿ ಯೋಜನೆ ಅನ್ವಯವಾಗುವುದಿಲ್ಲ ಎಂದು ತಿಳಿಸಲಾಗಿದೆ.
English summary
How many applications received for griha jyoti scheme in karnataka.