Karnataka
oi-Naveen Kumar N

ಕಾಂಗ್ರೆಸ್ ಚುನಾವಣೆ ಸಂದರ್ಭದಲ್ಲಿ ಘೋಷಣೆ ಮಾಡಿದ್ದ 5 ಗ್ಯಾರಂಟಿಗಳನ್ನು ಒಂದೊಂದಾಗಿ ಜಾರಿ ಮಾಡಿದೆ. ಈಗಾಗಲೇ ಶಕ್ತಿ ಯೋಜನೆಯಡಿ ರಾಜ್ಯಾದ್ಯಂತ ಮಹಿಳೆಯರಿಗೆ ಉಚಿತ ಸಾರಿಗೆ ಸೌಲಭ್ಯ ಕಲ್ಪಿಸಲಾಗಿದೆ. ಇನ್ನು 200 ಯುನಿಟ್ ಉಚಿತ ವಿದ್ಯುತ್ ನೀಡುವ ಗೃಹಜ್ಯೋತಿ ಯೋಜನೆಗೆ ನೋಂದಣಿ ಆರಂಭವಾಗಿದೆ. ಆದರೆ, ಮನೆ ಯಜಮಾನಿಗೆ ಪ್ರತಿ ತಿಂಗಳು 2000 ರೂಪಾಯಿ ನೀಡುವ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸ್ವೀಕಾರ ಪ್ರಕ್ರಿಯೆ ಇನ್ನೂ ಆರಂಭವಾಗಿಲ್ಲ.
ಕಳೆದ ವಾರವೇ ಗೃಹ ಲಕ್ಷ್ಮಿ ಯೋಜನೆಗಾಗಿ ಅರ್ಜಿ ಸ್ವೀಕಾರ ಮಾಡುವುದಾಗಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದ್ದರು. ಸಿಎಂ ಸಿದ್ದರಾಮಯ್ಯ ಅವರು ಈ ಯೋಜನೆಯನ್ನು ಉದ್ಘಾಟಿಸಬೇಕಿತ್ತು. ಆದರೆ, ಸಂಜೆ ವೇಳೆ ಮತ್ತೆ ಮಾತನಾಡಿದ ಲಕ್ಷ್ಮಿ ಹೆಬ್ಬಾಳ್ಕರ್ ಗೃಹ ಲಕ್ಷ್ಮಿ ಯೋಜನೆಯಡಿ ಅರ್ಜಿ ಸ್ವೀಕಾರ ಪ್ರಕ್ರಿಯೆ ಮುಂದೂಡಿರುವುದಾಗಿ ತಿಳಿಸಿದ್ದರು. ಇನ್ನು ನಾಲ್ಕೈದು ದಿನದಲ್ಲಿ ಅರ್ಜಿ ಸ್ವೀಕರಿಸುವುದಾಗಿ ಹೇಳಿಕೆ ನೀಡಿದ್ದರು.

ಜೂನ್ 18ರಂದು 200 ಯುನಿಟ್ವರೆಗೆ ವಿದ್ಯುತ್ ಪಡೆಯುವ ಗೃಹಜ್ಯೋತಿ ಯೋಜನೆಗೆ ನೋಂದಣಿ ಪ್ರಕ್ರಿಯೆ ಆರಂಭಿಸಲಾಗಿದೆ. ಮೂರು ದಿನಗಳಲ್ಲಿ 8 ಲಕ್ಷಕ್ಕೂ ಅಧಿಕ ಮಂದಿ ನೋಂದಣಿ ಮಾಡಿಕೊಂಡಿದ್ದಾರೆ. ಹೆಚ್ಚಿನ ಸಂಖ್ಯೆಯ ಗ್ರಾಹಕರು ನೋಂದಣಿ ಮಾಡಲು ಮುಂದಾದ ಕಾರಣ ಸರ್ವರ್ ಡೌನ್ ಆಗಿದ್ದು, ಸಮಸ್ಯೆಯನ್ನು ಎದುರಿಸುವಂತಾಗಿದೆ.
ಗೊಂದಲವಿಲ್ಲದೆ ಅರ್ಜಿ ಸ್ವೀಕರಿಸಲು ಪ್ರಯತ್ನ
ಇನ್ನು ಗೃಹಲಕ್ಷ್ಮಿ ಯೋಜನೆಯಡಿ ಫಲಾನುಭವಿಗಳಾಗಲು ಹಲವು ದಾಖಲೆಗಳನ್ನು ಒದಗಿಸಬೇಕು ಎಂದು ಈಗಾಗಲೇ ತಿಳಿಸಲಾಗಿದೆ. ಒಬ್ಬರು ಅರ್ಜಿಯನ್ನು ಭರ್ತಿ ಮಾಡಲು ಕನಿಷ್ಠ 6 ನಿಮಿಷಗಳು ಬೇಕಾಗಲಿದೆ. ಲಕ್ಷಾಂತರ ಮಹಿಳೆಯರು ಈ ಯೋಜನೆಗೆ ಅರ್ಜಿ ಸಲ್ಲಿಸುವುದರಿಂದ ಹೆಚ್ಚಿನ ಗೊಂದಲಕ್ಕೆ ಒಳಗಾಗದಂತೆ ಸರಳವಾಗಿ ಅರ್ಜಿ ಪ್ರಕ್ರಿಯೆ ನಡೆಯಲು ಆಪ್ ಸಿದ್ದಪಡಿಸಲಾಗುತ್ತಿದೆ. ಈ ಕಾರಣಕ್ಕೆ ಅರ್ಜಿ ಸ್ವೀಕರಿಸುವ ಪ್ರಕ್ರಿಯೆ ತಡವಾಗುತ್ತಿದೆ.
ಗೃಹ ಜ್ಯೋತಿ: ಮೂರು ದಿನಗಳಲ್ಲಿ 8 ಲಕ್ಷಕ್ಕೂ ಅಧಿಕ ಗ್ರಾಹಕರಿಂದ ನೋಂದಣಿ
ಪ್ರತಿ ಬೂತ್ಗೆ ನಾಲ್ಕು ಜನರ ನೇಮಕ
ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, “ಅತಿ ಶೀಘ್ರದಲ್ಲೇ ಗೃಹಲಕ್ಷ್ಮಿ ಅಪ್ಲಿಕೇಷನ್ ಲಾಂಚ್ ಆಗಲಿದೆ. ಪ್ರತಿ ಬೂತ್ನಲ್ಲಿ ಓರ್ವ ಮಹಿಳೆ ಸೇರಿ ನಾಲ್ಕು ಜನರನ್ನು ನೇಮಕ ಮಾಡಲಾಗುವುದು. ರಾಜ್ಯದಲ್ಲಿ ಸರಿಸುಮಾರು 1 ಕೋಟಿ 13 ಲಕ್ಷ ಕುಟುಂಬಗಳು ಇದರ ಉಪಯೋಗ ಪಡೆಯಲಿವೆ. ಲಾಂಚ್ ಮಾಡಿದ ನಂತರ ಯಾವುದೇ ಗೊಂದಲ ಉಂಟಾಗಬಾರದು ಎನ್ನುವ ಕಾರಣಕ್ಕೆ ಸಾಫ್ಟ್ವೇರ್ ಸಿದ್ದಮಾಡುತ್ತಿದ್ದೇವೆ, ಕೆಲಸ ಪ್ರಗತಿಯಲ್ಲಿದ್ದು, ಶೀಘ್ರದಲ್ಲೇ ಬಿಡುಗಡೆ ಮಾಡಲಾಗುವುದು” ಎಂದು ಹೇಳಿದ್ದಾರೆ.
ಪಾರದರ್ಶಕವಾಗಿ ಯೋಜನೆ ಜಾರಿ : ಡಿಕೆಶಿ
ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಕೂಡ ಈ ಬಗ್ಗೆ ಮಾತನಾಡಿದ್ದು, ಆಗಸ್ಟ್ ತಿಂಗಳಿನಿಂದ ಗೃಹಲಕ್ಷ್ಮೀ ಯೋಜನೆಯಡಿ ಹಣ ಪಾವತಿ ಮಾಡಲಾಗುವುದು. ಶೀಘ್ರದಲ್ಲೇ ನೋಂದಣಿ ಪ್ರಕ್ರಿಯೆ ಶುರುವಾಗಲಿದೆ. ಇದಕ್ಕಾಗಿ ವಿಶೇಷವಾದ ಆಪ್ ಸಿದ್ಧಪಡಿಸಲಾಗುತ್ತಿದೆ ಎಂದು ಹೇಳಿದ್ದಾರೆ.
ಪಾರದರ್ಶಕವಾಗಿ, ಪ್ರಾಮಾಣಿಕವಾಗಿ ಯೋಜನೆ ಜಾರಿ ಮಾಡಲಾಗುತ್ತದೆ. ಅತಿ ಶೀಘ್ರದಲ್ಲೇ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವರು ದಿನಾಂಕವನ್ನು ಪ್ರಕಟಿಸಲಿದ್ದಾರೆ. ಆತುರದಿಂದ ತಾಂತ್ರಿಕ ತೊಂದರೆ ಆಗಬಾರದು ಎನ್ನುವ ಕಾರಣಕ್ಕೆ ಸಮಯ ತೆಗೆದುಕೊಳ್ಳಲಾಗುತ್ತಿದೆ. ಬಾಪು ಕೇಂದ್ರ, ಪಂಚಾಯಿತಿ ಕೇಂದ್ರ, ಹಾಗೂ ಮೊಬೈಲ್ ಮೂಲಕವು ಅರ್ಜಿ ತುಂಬಲು ಅವಕಾಶ ನೀಡಲಾಗುತ್ತದೆ. ಜೊತೆಗೆ ಪಕ್ಷದ ಕಾರ್ಯಕರ್ತರು, ಜನಪ್ರಿತಿನಿಧಿಗಳು ಮನೆ ಮನೆಗೆ ತೆರಳಿ ಪಕ್ಷ ಭೇದ ಮರೆತು ಅರ್ಜಿ ತುಂಬಬೇಕು ಎಂದು ಹೇಳಿದ್ದಾರೆ.
ಪ್ರತಿ ಬೂತ್ ಮಟ್ಟದಲ್ಲಿ ವಿದ್ಯಾವಂತ ಮಹಿಳೆ ಮತ್ತು ಪುರುಷರು ಮನೆ ಮನೆಗೆ ತೆರಳಿ ಅರ್ಜಿ ತುಂಬಲಿದ್ದಾರೆ ಇದಕ್ಕೆ ಯಾವುದೇ ಹಣ ಕೊಡುವಂತಿಲ್ಲ, ಅರ್ಜಿ ತುಂಬಲು ಲಂಚ ಪಡೆಯಬಾರದು, ಒಂದು ವೇಳೆ ಹಣ ಪಡೆದರೆ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
English summary
Gruhalakshmi Scheme: Application Receiving Getting Late: Karnataka Government Preparing Special Application for Gruhalakshmi Scheme, which is reduce confusion for People. Within Short time Government will start Receiving Application.
Story first published: Wednesday, June 21, 2023, 12:47 [IST]