ಕ್ಷಣಕ್ಷಣಕ್ಕೂ ಏರುತ್ತಿದೆ ತುಂಗಾಭದ್ರ ನದಿ: ನದಿ ಪಾತ್ರದ ಜನರಲ್ಲಿ ಹೆಚ್ಚಿದ ಪ್ರವಾಹ ಭೀತಿ | Flood Fear In Harihara Taluk Due To Tungabhadra Overflow

Davanagere

lekhaka-Yogaraja G H

By ದಾವಣಗೆರೆ ಪ್ರತಿನಿಧಿ

|

Google Oneindia Kannada News

ದಾವಣಗೆರೆ, ಜುಲೈ 27: ಹರಿಹರದಲ್ಲಿ ಪ್ರವಾಹ ಭೀತಿ ತಲೆದೋರಿದೆ. ತುಂಗಭದ್ರಾ ನದಿಯಲ್ಲಿ ಕ್ಷಣಕ್ಷಣಕ್ಕೂ ನೀರಿನ ಮಟ್ಟ ಏರಿಕೆಯಾಗಿದೆ. ನದಿಯಲ್ಲಿ ಇಲ್ಲಿಯವರೆಗೆ 9.85 ಮೀಟರ್‌ಗೂ ಹೆಚ್ಚು ನೀರಿನ ಹರಿವು ಇತ್ತು. 11 ಮೀಟರ್‌ಗೆ ತುಂಗಭದ್ರಾ ನದಿ ಹರಿವು ತಲುಪಿದರೆ, ಅದು ಅಪಾಯದ ಮಟ್ಟವಾಗುತ್ತದೆ.

ಘಟ್ಟ ಪ್ರದೇಶದ ಮಳೆಯಿಂದಾಗಿ ನದಿ ಹರಿವು ಏರಿಕೆಯಾಗುತ್ತಿದ್ದು, ಇದೇ ಪರಿಸ್ಥಿತಿ ಮುಂದುವರಿದರೆ ಹೊನ್ನಾಳಿ, ಹರಿಹರ ತಾಲೂಕಿನ ಹಲವಾರು ಪ್ರವಾಹಕ್ಕೆ ತುತ್ತಾಗುವ ಭೀತಿ ಇದೆ. ಈಗಾಗಲೇ ಜಿಲ್ಲೆಯ ಹೊನ್ನಾಳಿ ಪಟ್ಟಣದ ಬಾಲರಾಜ ಘಾಟ್, ಬಂಬೂ ಬಜಾರ್, ಶ್ರೀ ರಾಘವೇಂದ್ರ ಸ್ವಾಮಿ ಮಠ, ದೇವನಾಯ್ಕನಹಳ್ಳಿವರೆಗೆ ನದಿ ನೀರು ಹರಿವು ತಲುಪಿದೆ, ಯಾವುದೇ ಕ್ಷಣದಲ್ಲಾದರೂ ಇವೆಲ್ಲಾ ಪ್ರದೇಶ ಜಲಾವೃತವಾಗಬಹುದು.

Flood Fear In Harihara Taluk Due To Tungabhadra Overflow

ಹರಿಹರ ತಾಲೂಕಿನ ಉಕ್ಕಡಗಾತ್ರಿ-ಪತ್ಯಾಪುರ ಗ್ರಾಮದ ರಸ್ತೆ ಸಂಚಾರ ಬಂದ್ ಆಗಿದೆ. ಇದೇ ರೀತಿ ಇನ್ನೂ ಅನೇಕ ಗ್ರಾಮಗಳ ಸಂಪರ್ಕ ಕಡಿತವಾಗುವ ಅಪಾಯವಿದೆ. ಸಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆಗಳ ತುಂಗಾ, ಭದ್ರಾ ಹಾಗೂ ತುಂಗಭದ್ರಾ ನದಿಯ ಜಲಾನಯನ ಪ್ರದೇಶದಲ್ಲಿ ಸುರಿಯುತ್ತಿರುವ ವ್ಯಾಪಕ ಮಳೆಯಿಂದಾಗಿ ನದಿಗೆ ಹರಿವು ಹೆಚ್ಚುತ್ತಿದೆ. ಉಕ್ಕಡಗಾತ್ರಿ ಪುಣ್ಯಕ್ಷೇತ್ರ ಹೆಚ್ಚು ಜಲಾವೃತವಾಗಿದೆ.

ಹಲಸಬಾಳು, ಬಿಳಸನೂರು, ಬೆಳ್ಳೂಡಿ, ರಾಜನಹಳ್ಳಿ ಹಾಗೂ ಹರಿಹರ ನಗರದ ನದಿ ಪಾತ್ರದ ಪ್ರದೇಶದ ಜನ ವಸತಿ ಪ್ರದೇಶಗಳೂ ಜಲಾವೃತವಾಗುವ ಸಾಧ್ಯತೆ ಇದೆ. ಘಟ್ಟ ಪ್ರದೇಶದಲ್ಲಿ ಮಳೆ ಆರ್ಭಟ ಮುಂದುವರಿದಿದ್ದು, ರಾತ್ರಿ ವೇಳೆ ಮತ್ತಷ್ಟು ನದಿ ನೀರು ಹರಿವು ಹೆಚ್ಚುವ ಸಾಧ್ಯತೆ ಇದೆ.

ನದಿ ಪಾತ್ರದ ಗ್ರಾಮಸ್ಥರು, ರೈತರು, ಪ್ರವಾಸಿಗರು ನದಿ ದಂಡೆಗೆ ಹೋಗದಂತೆ, ನೀರಿಗಿಳಿಯಂತೆ, ರಾಸುಗಳನ್ನು ಮೇಯಿಸಲು ನದಿ ತಟಕ್ಕೆ ಹೋಗದಂತೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಸತತ ಮಳೆಯಿಂದಾಗಿ ಉಕ್ಕಡಗಾತ್ರಿ-ಪತ್ಯಾಪುರ ರಸ್ತೆ ಸಂಪರ್ಕ ಬಂದ್ ಆದ ಸ್ಥಳ, ಜಲಾವೃತವಾದ ಸ್ಥಳ, ಮಳೆ ಹಾನಿ ಪ್ರದೇಶಗಳಿಗೆ ಜಿಲ್ಲಾಧಿಕಾರಿ, ತಾಲೂಕು ಅಧಿಕಾರಿಗಳು, ಜನ ಪ್ರತಿನಿಧಿಗಳು, ಸ್ಥಳೀಯ ಮುಖಂಡರ ಜೊತೆಗೆ ಭೇಟಿ ನೀಡಿ, ಪರಿಶೀಲಿಸಿದರು.

Flood Fear In Harihara Taluk Due To Tungabhadra Overflow

ನದಿ ಪಾತ್ರದ ತಾಲೂಕುಗಳಲ್ಲಿ ನೆರೆ ಹಾವಳಿ, ಪ್ರವಾಹ ಪರಿಸ್ಥಿತಿ ಎದುರಾದರೆ, ಸಮರ್ಥವಾಗಿ ನಿರ್ವಹಿಸಲು ಸುರಕ್ಷತಾ ಕ್ರಮಗಳನ್ನು ಅನುಸರಿಸಲು, ಪ್ರಕೃತಿ ವಿಕೋಪ ಪರಿಹಾರ ಕಾರ್ಯಕ್ಕೆ ಎಲ್ಲಾ ಅಗತ್ಯ ಕ್ರಮ ಕೈಗೊಳ್ಳಲು ಉಭಯ ತಾಲೂಕುಗಳ ತಹಸೀಲ್ದಾರರು, ತಾಲೂಕು ಮಟ್ಟದ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

158 ಅಡಿ ತಲುಪಿದ ಭದ್ರಾ ಡ್ಯಾಂ ನೀರಿನ ಮಟ್ಟ

ಭದ್ರಾ ಜಲಾನಯನ ಪ್ರದೇಶದಲ್ಲಿ ತುಸು ಮಳೆ ಹೆಚ್ಚಾಗಿದ್ದು, ಬುಧವಾರ ಬೆಳಿಗ್ಗೆ ಆರು ಗಂಟೆಯ ಹೊತ್ತಿಗೆ 28,296 ಕ್ಯೂಸೆಕ್ ಒಳಹರಿವು ಹೆಚ್ಚಾಗಿದೆ. ಭದ್ರಾ ಡ್ಯಾಂಗೆ ಒಂದೇ ಎರಡು ಮುಕ್ಕಾಲು ಅಡಿ ನೀರು ಬಂದಿದೆ. ಮಂಗಳವಾರ 24,704 ಕ್ಯೂಸೆಕ್‌ಗೆ ಇಳಿದಿದ್ದ ಒಳಹರಿವು ಹೆಚ್ಚಾಗಿದೆ. ಇದು ದಾವಣಗೆರೆ ಜಿಲ್ಲೆಯ ರೈತರ ಖುಷಿಗೆ ಕಾರಣವಾಗಿದೆ.

ಚಿಕ್ಕಮಗಳೂರು ಜಿಲ್ಲೆಯಲ್ಲಿ ಕಳೆದ ಒಂದು ವಾರದಿಂದ ಉತ್ತಮ ಮಳೆಯಾಗುತ್ತಿದ್ದು, ಕಳೆದ ಎರಡು ದಿನಗಳಿಂದ ತಗ್ಗಿತ್ತು. ಮತ್ತೆ ನಿನ್ನೆ ವರುಣನ ತುಸು ಆರ್ಭಟ ಹೆಚ್ಚಿದ್ದು, ಹಳ್ಳ ಕೊಳ್ಳಗಳು, ಕೆರೆ ಕಟ್ಟೆಗಳು ತುಂಬಿ ಹರಿಯುವುದು ಮುಂದುವರಿದಿದೆ. ಮೂರು ದಿನಗಳ ಹಿಂದೆ 39 ಸಾವಿರಕ್ಕೂ ಹೆಚ್ಚು ಕ್ಯೂಸೆಕ್ ಹರಿದು ಬರುತ್ತಿತ್ತು. ನಿನ್ನೆ ಕಡಿಮೆಯಾಗಿತ್ತು. ಇಂದೂ ಸಹ ಸ್ವಲ್ಪ ಏರಿಕೆಯಾಗಿದ್ದು, ರೈತರು ಖುಷಿಪಡುತ್ತಿದ್ದಾರೆ.

ಬುಧವಾರ ಬೆಳಿಗ್ಗೆ ಆರು ಗಂಟೆ ಸುಮಾರಿಗೆ ಭದ್ರಾ ಡ್ಯಾಂ ನೀರಿನ ಮಟ್ಟ 155.3 ಅಡಿ ಇತ್ತು. ಒಳಹರಿವು 24,704 ಕ್ಯೂಸೆಕ್ ಇತ್ತು, ಹೊರ ಹರಿವು 170 ಕ್ಯೂಸೆಕ್ ಇದೆ. ಕಳೆದ ವರ್ಷ 184.6 ಅಡಿ ಇತ್ತು. ಇಂದು ಭದ್ರಾ ಡ್ಯಾಂ ನೀರಿನ ಮಟ್ಟ 158ಕ್ಕೆ ಏರಿಕೆಯಾಗಿದೆ. ಹೊರ ಹರಿವು 183 ಕ್ಯೂಸೆಕ್ ಇದೆ.

ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ, ಶೃಂಗೇರಿ ಸೇರಿದಂತೆ ಭದ್ರಾ ಜಲಾನಯನ ಪ್ರದೇಶದಲ್ಲಿ ಮಳೆ ಸ್ವಲ್ಪ ಪ್ರಮಾಣದಲ್ಲಿ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ಜಲಾಶಯಕ್ಕೆ ನೀರು ಹರಿದು ಬರುತ್ತಿರುವುದು ಹೆಚ್ಚಾಗಿದೆ. ಇದೇ ರೀತಿ ಮಳೆ ಮುಂದುವರಿದರೆ ಈ ವರ್ಷವೂ ಭದ್ರಾ ಡ್ಯಾಂ ಅಥಾರಿಟಿ ಅಧಿಕಾರಿಗಳು ಹೇಳುವ ಪ್ರಕಾರ ಭದ್ರೆ ಒಡಲು ತುಂಬಲಿದೆ. ಮುಂಗಾರು ಮಳೆ ಕೈ ಕೊಟ್ಟರೂ ಈಗ ಮಳೆ ಚೆನ್ನಾಗಿಯೇ ಬರುತ್ತಿದೆ. ನಾಳೆ ಹೊತ್ತಿಗೆ 160 ಅಡಿ ದಾಟುವ ನಿರೀಕ್ಷೆ ಹೊಂದಲಾಗಿದೆ.

ಕಳೆದ ವರ್ಷ ಇಷ್ಟೊತ್ತಿಗೆ ಡ್ಯಾಂ ಬಹುತೇಕ ತುಂಬಿ ತುಳುಕುತಿತ್ತು. ಆದರೆ, ಈ ವರ್ಷ ಇನ್ನೂ 28 ಅಡಿ ನೀರು ಹರಿದು ಬರಬೇಕು. ಕಳೆದ ಎರಡ್ಮೂರು ದಿನಗಳಿಂದ 15 ಅಡಿ ನೀರು ಡ್ಯಾಂಗೆ ಹರಿದು ಬಂದಿದೆ. ಮಳೆ ಉತ್ತಮವಾಗಿ ಸುರಿದರೆ ಮತ್ತಷ್ಟು ನೀರು ಅಣೆಕಟ್ಟಿಗೆ ಬರುತ್ತದೆ. ಸದ್ಯದ ಮಾಹಿತಿ ಪ್ರಕಾರ ಭದ್ರಾ ಜಲಾನಯನ ಪ್ರದೇಶದಲ್ಲಿ ಮಳೆ ಮುಂದುವರಿದಿದೆ. ಇದು ಭದ್ರಾ ಎಡದಂಡೆ ನಾಲಾ ಹಾಗೂ ಬಲದಂಡೆ ನಾಲಾ ವ್ಯಾಪ್ತಿಯ ರೈತರ ಖುಷಿಗೂ ಕಾರಣವಾಗಿದೆ.

English summary

Overflowing Tungabhadra Continues due to Heavy Rain. Flood fear in Harihara Taluk. Know more

Story first published: Thursday, July 27, 2023, 19:02 [IST]

Source link