ಕ್ರಿಕೆಟ್ ವಿಶ್ವಕಪ್ ಅವಕಾಶ ಸಿಗಲಿಲ್ಲ ಅಂತಾ ಕಾಂಗ್ರೆಸ್ ನಾಯಕನ ಆಕ್ರೋಶ! | Shashi Tharoor questions about world cup 2023

India

oi-Malathesha M

|

Google Oneindia Kannada News

ನವದೆಹಲಿ: ಎಲ್ಲರೂ ಇಷ್ಟುದಿನ ಕಾಯುತ್ತಿದ್ದ 2023ರ ಕ್ರಿಕೆಟ್ ವಿಶ್ವಕಪ್ ವೇಳಾಪಟ್ಟಿಯು ಹೊರಬಿದ್ದಿದೆ. ಆದರೆ ಇದೇ ಸಂದರ್ಭದಲ್ಲಿ ಮತ್ತೊಂದು ವಿವಾದ ಕೂಡ ಭುಗಿಲೆದ್ದಿದ್ದು, ಕೆಲವು ರಾಜ್ಯಗಳಿಗೆ ಮತ್ತು ಪ್ರಮುಖ ನಗರಗಳಿಗೆ ಕ್ರಿಕೆಟ್ ವಿಶ್ವಕಪ್ ಪಂದ್ಯಗಳು ಸಿಗದಿರುವ ಕುರಿತು ಅಸಮಾಧಾನ ಸ್ಫೋಟವಾಗಿದೆ. ಅದರಲ್ಲೂ ಕಾಂಗ್ರೆಸ್ ನಾಯಕ ಶಶಿ ತರೂರ್ ಈ ಬಗ್ಗೆ ಟ್ವೀಟ್ ಮಾಡಿ ಕೆಂಡ ಕಾರಿದ್ದಾರೆ.

ಅಂದಹಾಗೆ ದೇಶದ ಪ್ರಮುಖ ಕ್ರಿಕೆಟ್‌ ಮೈದಾನಗಳಿಗೂ ಈ ಬಾರಿ ವಿಶ್ವಕಪ್ ಪಂದ್ಯಗಳನ್ನು ಆಯೋಜಿಸುವ ಅವಕಾಶ ಸಿಕ್ಕಿಲ್ಲ. ಹಾಗೇ ಮಂಗಳವಾರ ಐಸಿಸಿ 2023ರ ಕ್ರಿಕೆಟ್ ವಿಶ್ವಕಪ್ ವೇಳಾಪಟ್ಟಿ ಪ್ರಕಟಿಸಿದ ಬೆನ್ನಲ್ಲೇ ಅವಕಾಶ ಸಿಗದ ರಾಜ್ಯ ಸಂಸ್ಥೆಗಳು ಅಸಮಾಧಾನ ಕೂಡ ಹೊರಹಾಕಿವೆ. ಇದೇ ಸಂದರ್ಭದಲ್ಲಿ ಆಕ್ರೋಶಕ್ಕೆ ಸಾಥ್ ನೀಡಿರುವ ಕೆಲವು ರಾಜಕೀಯ ನಾಯಕರು ವೇಳಾಪಟ್ಟಿಯಲ್ಲಿ ರಾಜಕೀಯ ದುರುದ್ದೇಶ ಇದೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ಈ ಪೈಕಿ ಶಶಿ ತರೂರ್ ಕೂಡ ಆಕ್ರೋಶ ಹೊರಹಾಕಿದ್ದು, ಕೇರಳ ರಾಜ್ಯದ ತಿರುವನಂತಪುರ ಕ್ರಿಕೆಟ್ ಮೈದಾನಕ್ಕೆ ಅವಕಾಶ ಸಿಗದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Shashi Tharoor questions about world cup 2023

ಶಶಿ ತರೂರ್ ಹೇಳಿದ್ದು ಏನು?

ಕಾಂಗ್ರೆಸ್ ನಾಯಕರ ಶಶಿ ತರೂರ್ ಹೇಳಿರುವಂತೆ, ತಿರುವನಂತಪುರದ ಕ್ರಿಕೆಟ್ ಮೈದಾನವು ಉತ್ತಮವಾಗಿದೆ ಎಂದು ಹಲವು ವರ್ಷಗಳಿಂದ ಮೆಚ್ಚುಗೆ ಕೂಡ ಸಿಕ್ಕಿದೆ. ಆದರೆ ಮೈದಾನಕ್ಕೆ ಒಂದೂ ಪಂದ್ಯ ಆಯೋಜನೆಗೆ ಲಭಿಸದಿರುವುದು ಅಘಾತ ಮೂಡಿಸಿದೆ ಎಂದಿದ್ದಾರೆ. ಹೀಗೆ ಶಶಿ ತರೂರ್ ಟ್ವೀಟ್ ಸಂಚಲನ ಸೃಷ್ಟಿಸಿದೆ. ಅಲ್ಲದೆ ಅಹಮದಾಬಾದ್ ಈಗ ಹೊಸ ಕ್ರಿಕೆಟ್ ರಾಜಧಾನಿಯಾಗುತ್ತಿದೆ. ಆದ್ರೆ ಕೇರಳಕ್ಕೆ ಒಂದು ಇಲ್ಲ ಎರಡು ಪಂದ್ಯ ಮಂಜೂರು ಮಾಡಲು ಏಕೆ ಸಾಧ್ಯವಾಗಿಲ್ಲ ಎಂದು ತರೂರ್ ಪ್ರಶ್ನೆ ಮಾಡಿದ್ದಾರೆ. ಹೀಗೆ ಕಾಂಗ್ರೆಸ್ ನಾಯಕನ ಪ್ರಶ್ನೆ ವೈರಲ್ ಆಗುತ್ತಿದೆ ಜೊತೆಗೆ ವಿಶ್ವಕಪ್ ಆರಂಭಕ್ಕೂ ಮುನ್ನ ಹೊಸ ತಿಕ್ಕಾಟ ಶುರುವಾಗಿದೆ.

ಭಾರತದ ಪಂದ್ಯಕ್ಕೂ ಬೆಂಗಳೂರು ಆಯ್ಕೆ

ಅಹಮದಾಬಾದ್ ಕ್ರೀಡಾಂಗಣದಲ್ಲಿ ಉದ್ಘಾಟನೆ ಪಂದ್ಯ, ಭಾರತ ಮತ್ತು ಪಾಕಿಸ್ತಾನ ಮಧ್ಯೆ ಪಂದ್ಯ ಹಾಗೂ ಫೈನಲ್ ಪಂದ್ಯ ನಡೆಯಲಿವೆ. ಪಾಕಿಸ್ತಾನ ತಂಡ ಚಿನ್ನಸ್ವಾಮಿ ಅಂಗಳದಲ್ಲಿ ಎರಡು ಪಂದ್ಯ ಆಡುತ್ತಿರುವುದು ವಿಶೇಷ. ನ್ಯೂಜಿಲೆಂಡ್ ಕೂಡ ಚಿನ್ನಸ್ವಾಮಿ ಅಂಗಳದಲ್ಲಿ ಎರಡು ಪಂದ್ಯ ಆಡುತ್ತಿದೆ. ಬಲಿಷ್ಠ ತಂಡಗಳೇ ನಮ್ಮ ಬೆಂಗಳೂರಿನ ಚಿನ್ನಸ್ವಾಮಿಯಲ್ಲಿ ಮುಖಾಮುಖಿ ಆಗುತ್ತಿರುವುದು ಕ್ರೀಡಾಭಿಮಾನಿಗಳ ಉತ್ಸಾಹ ಡಬಲ್ ಮಾಡಿದೆ. ನ.11ರ ಶನಿವಾರ ಭಾರತದ ಪಂದ್ಯ ನಡೆಯಲಿದೆ. ಎದುರಾಳಿ ತಂಡ ಯಾವುದು ಎಂದು ಶೀಘ್ರದಲ್ಲೇ ತಿಳಿಯಲಿದೆ. ಸದ್ಯ ಏಕದಿನ ವಿಶ್ವಕಪ್ ಅರ್ಹತಾ ಪಂದ್ಯಗಳು ನಡೆಯುತ್ತಿದ್ದು ವಿಶ್ವಕಪ್‌ ಪ್ರವೇಶಿಸುವ ತಂಡದೊಂದಿಗೆ ಭಾರತ ಸೆಣೆಸಲಿದೆ.

ಆಸ್ಟ್ರೇಲಿಯಾ-ಪಾಕಿಸ್ತಾನ ಮುಖಾಮುಖಿ

ಇನ್ನು ಚಿನ್ನಸ್ವಾಮಿ ಅಂಗಳದಲ್ಲಿ ಅಕ್ಟೋಬರ್ 20ರ ಶುಕ್ರವಾರ, ಬಲಿಷ್ಠ ಆಸ್ಟ್ರೇಲಿಯಾ ಮತ್ತು ಪಾಕಿಸ್ತಾನ ತಂಡ ಮುಖಾಮುಖಿಯಾಗಲಿದ್ದು ರನ್ ಹೊಳೆ ಸಾಧ್ಯತೆ ಇದೆ. ಬಲಿಷ್ಠ ಬ್ಯಾಟಿಂಗ್ ಪಡೆ ಹೊಂದಿರುವ ಆಸ್ಟ್ರೇಲಿಯಾ, ಶ್ರೇಷ್ಠ ವೇಗಿಗಳನ್ನು ಹೊಂದಿರುವ ಪಾಕಿಸ್ತಾನ ನಡುವಿನ ಹಣಾಹಣಿ ಕ್ರಿಕೆಟ್ ಪ್ರಿಯರಿಗೆ ಭರ್ಜರಿ ಮನರಂಜನೆ ಸಿಗಲಿದೆ. ಅ.26ರಂದು ಇಂಗ್ಲೆಂಡ್ ಚಿನ್ನಸ್ವಾಮಿ ಅಂಗಳದಲ್ಲಿ ಆಡಲಿದ್ದು, ಕ್ವಾಲಿಫೈಯರ್ 2 ತಂಡದ ವಿರುದ್ಧ ಸೆಣೆಸಲಿದೆ. ನವೆಂಬರ್ 4ರಂದು ಪಾಕಿಸ್ತಾನ ಮತ್ತೊಮ್ಮೆ ಚಿನ್ನಸ್ವಾಮಿ ಅಂಗಳದಲ್ಲಿ ಆಡಲಿದ್ದು ಬಲಿಷ್ಠ ನ್ಯೂಜಿಲೆಂಡ್ ತಂಡದ ವಿರುದ್ಧ ಸೆಣೆಸಲಿದೆ. ನ.9ರಂದು ನ್ಯೂಜಿಲೆಂಡ್ ಬೆಂಗಳೂರಿನಲ್ಲಿ ಎರಡನೇ ಪಂದ್ಯ ಆಡಲಿದ್ದು, ಕ್ವಾಲಿಫೈಯರ್ 2 ತಂಡದ ವಿರುದ್ಧ ಸೆಣೆಸಲಿದೆ.

ಭಾರತ ತಂಡವು ಲೀಗ್ ಹಂತದಲ್ಲಿ 8 ಪಂದ್ಯ ಆಡಲಿದೆ. ಏಕದಿನ ವಿಶ್ವಕಪ್‌ನ ತನ್ನ ಮೊದಲ ಪಂದ್ಯದಲ್ಲಿ ಭಾರತ ಬಲಿಷ್ಠ ಆಸ್ಟ್ರೇಲಿಯಾ ತಂಡವನ್ನು ಎದುರಿಸಲಿದೆ. ಮತ್ತೊಂದ್ಕಡೆ ಇಡೀ ಜಗತ್ತು ಕಾಯುತ್ತಿರುವ ಭಾರತ & ಪಾಕಿಸ್ತಾನ ಪಂದ್ಯಕ್ಕೂ ದಿನಗಣನೆ ಆರಂಭವಾಗಿದೆ. ಆದರೆ ಇಷ್ಟೆಲ್ಲಾ ಸಿದ್ಧತೆ ನಡುವೆ ರಾಜಕೀಯವಾಗಿಯೂ ಕ್ರಿಕೆಟ್ ವರ್ಲ್ಡ್ ಕಪ್ ಮುನ್ನೆಲೆಗೆ ಬರುತ್ತಿರುವುದಕ್ಕೆ ಕ್ರಿಕೆಟ್ ಅಭಿಮಾನಿಗಳು ಮಿಶ್ರ ಪ್ರತಿಕ್ರಿಯೆ ನೀಡಿದ್ದಾರೆ. ಮುಂದೆನಾಗುತ್ತೆ ಅನ್ನೋದನ್ನ ಕಾದು ನೋಡಬೇಕಿದೆ.

English summary

Shashi Tharoor questions about world cup 2023.

Source link