Chikkaballapur
lekhaka-Mohan Kumar D
ಚಿಕ್ಕಬಳ್ಳಾಪುರ, ಜೂನ್ 27: ಮುಂಗಾರು ಆರಂಭಗೊಂಡು ಒಂದು ತಿಂಗಳು ಕಳೆದರೂ ಮಳೆ ಬಾರದಿರುವ ಹಿನ್ನೆಲೆಯಲ್ಲಿ ಅನ್ನದಾತ ಮುಗಿಲ ಕಡೆ ಮುಖ ಮಾಡುವಂತಾಗಿದೆ. ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಕಳೆದ ವರ್ಷ ಆರ್ಭಟಿಸಿದ್ದ ವರುಣದೇವ ಮುಂಗಾರಿನಲ್ಲಿ ಮುನಿಸಿ ಕೊಂಡಿದ್ದಾನೆ. ಇದರಿಂದ ಕೃಷಿಯನ್ನೇ ಜೀವನಾಧರ ಮಾಡಿಕೊಂಡಿರುವ ಕೃಷಿಕ ಕುಟುಂಬಗಳಿಗೆ ಜೀವನ ನಿರ್ವಹಣೆ ಕಷ್ಟವಾಗುವ ಲಕ್ಷಣಗಳು ದಟ್ಟವಾಗುತ್ತಿವೆ.
ಕಳೆದ ನಾಲೈದು ವರ್ಷಗಳಿಂದ ಇಲ್ಲದ ಮಳೆಯ ಬರ ಈ ಬಾರಿ ಜಿಲ್ಲೆಯಲ್ಲಿ ಜನರನ್ನು ಕಾಡಲು ಆರಂಭಿಸಿದೆ. ಹಿಂದೆಲ್ಲ ಸಾಕೆನ್ನುವಷ್ಟು ಬೀಳುತ್ತಿದ್ದ ಮಳೆ, ಮಳೆರಾಯನ ಧ್ಯಾನದಲ್ಲಿದ್ದರೂ ಈಗ ಮಳೆ ಬಿದ್ದರೆ ಸಾಕಪ್ಪ ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಬಾರಿ ಮಳೆ ಪ್ರಮಾಣ ಕಡಿಮೆ ಎಂಬ ಹವಾಮಾನ ಮುನ್ಸೂಚನೆ ಹಿನ್ನೆಲೆಯಲ್ಲಿ ಜಿಲ್ಲೆಯ ಕೃಷಿ ವಲಯದಲ್ಲಿ ಆಗಲೇ ಚಿಂತನ ಮಂಥನ ಶುರುವಾಗುವಂತೆ ಮಾಡಿದೆ.
ಜಿಲ್ಲೆಯಲ್ಲಿ ಮೇ ಅಂತ್ಯ ಅಥವಾ ಜೂನ್ ಮೊದಲ ವಾರದಲ್ಲಿ ಮಳೆ ಬಿದ್ದು ರೈತರು ಬಿತ್ತನೆಗೆ ಭೂಮಿಯನ್ನು ಸಜ್ಜುಗೊಳಿಸುತ್ತಿದ್ದರು. ಆದರೆ ಈ ಬಾರಿ ಜೂನ್ 4ನೇ ವಾರ ಮುಗಿಯುತ್ತಾ ಬಂದರೂ ಸರಿಯಾಗಿ ಮಳೆ ಬಿದ್ದಿಲ್ಲ. ಕೆಲವು ಕಡೆ ಮಳೆ ಬಾರದ ಹಿನ್ನೆಲೆಯಲ್ಲಿ ರೈತರು ಭೂಮಿಯನ್ನು ಉಳುಮೆಯೂ ಮಾಡಿಲ್ಲ. ಉಳುಮೆ ಮಾಡಿರುವವರೂ ಮಳೆಗಾಗಿ ಎದುರು ನೋಡುತ್ತಿದ್ದಾರೆ.
ಸದ್ಯಕ್ಕೆ ಈಗ ಮಳೆ ಬಿದ್ದರೂ ರೈತರು ಭೂಮಿಯನ್ನು ಬಿತ್ತನೆಗೆ ಅಣಿಗೊಳಿಸಲು ಕೆಲವು ತಿಂಗಳು ಬೇಕಾಗಬಹುದು. ಹೀಗಾಗಿ ಬಿತ್ತನೆಯಲ್ಲಿ ಈ ಬಾರಿ ಏರುಪೇರಾಗುವುದು ನಿಶ್ಚಿತ. ಕಳೆದ 4 ವರ್ಷಗಳಿಂದ ಜಿಲ್ಲೆಯಲ್ಲಿ ನಿರಂತರವಾಗಿ ಮಳೆ ಸುರಿದಿತ್ತು. ಬಿತ್ತನೆ ಮಾಡಲು ಸಮಯ ನೀಡದೆ ಮಳೆ ಸುರಿದು ನಾನಾ ಅನಾಹುತಕ್ಕೆ ಕಾರಣವಾಗಿತ್ತು. ಆದರೆ ಈ ಬಾರಿ ಮಳೆಯ ಸುಳಿವಿಲ್ಲದೆ ರೈತರು ಚಿಂತೆಗೀಡಾಗಿದ್ದಾರೆ.
ಮಳೆಯ ನಿರೀಕ್ಷೆಯಲ್ಲಿರುವ ರೈತರು
ಮತ್ತೊಂದೆಡೆ ಜಿಲ್ಲೆಯಲ್ಲಿ ಮುಂಗಾರಿಗಿಂತ ಹಿಂಗಾರು ಮಳೆಗಳು ಚೆನ್ನಾಗಿ ಆಗುತ್ತಿರುವುದರಿಂದ ರೈತರು ಅಳೆದು ತೂಗಿ ಬಿತ್ತನೆ ಮಾಡುವುದು ಇತ್ತೀಚಿನ ವರ್ಷಗಳಲ್ಲಿ ನಡೆದುಕೊಂಡು ಬಂದಿದೆ. ಈ ಬಾರಿ ಸಾಮಾನ್ಯ ಮಳೆ ಬಗ್ಗೆ ಹವಾಮಾನ ಮುನ್ಸೂಚನೆ ಇರುವುದರಿಂದ ಬಿತ್ತನೆ ಹೀಗೆ ಆಗುತ್ತದೆ ಎಂದು ಹೇಳುವುದು ಕಷ್ಟ. ಮುಂಗಾರು ಆರಂಭವೇ ಸರಿಯಾಗಿ ಆಗಿಲ್ಲದ ಕಾರಣ ರೈತರು ಹಿಂಗಾರು ಮಳೆಗಾದರೂ ಕೈಹಿಡಿಯಬಹುದು ಎನ್ನುವ ನಿರೀಕ್ಷೆಯಲ್ಲಿದ್ದಾರೆ.
ಜಿಲ್ಲೆಯಲ್ಲಿ ಈ ಬಾರಿ ಒಟ್ಟು 1,48,592 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಲಾಗಿದೆ. 48,000 ಹೆಕ್ಟೇರ್ ಪ್ರದೇಶದಲ್ಲಿ ರಾಗಿ ಬಿತ್ತನೆಗೆ ಗುರಿ ಹೊಂದಿದ್ದರು. ಇದುವರೆಗೂ ಎಲ್ಲಿಯೂ ಬಿತ್ತನೆ ಕಾರ್ಯ ನಡೆದಿಲ್ಲ. 50,450 ಹೆಕ್ಟೇರ್್ರ ಪ್ರದೇಶದಲ್ಲಿ ಹೈಬ್ರಿಡ್ ಮುಸುಕಿನ ಜೋಳ ಬಿತ್ತನೆಯ ಗುರಿ ಇದೆ. ಇದುವರೆಗೂ 132 ಹೆಕ್ಟೇರ್ ಪ್ರದೇಶದಲ್ಲಿ ಮಾತ್ರ ಬಿತ್ತನೆಯಾಗಿದೆ. 11400 ಹೆಕ್ಟೇರ್ ಪ್ರದೇಶದಲ್ಲಿ ತೊಗರಿ ಬಿತ್ತನೆ ಗುರಿ ಹೊಂದಿದ್ದು, ಇನ್ನೂ ಬಿತ್ತನೆ ಕಾರ್ಯ ನಡೆದಿಲ್ಲ. 27,142 ಹೆಕ್ಟೇರ್ ಪ್ರದೇಶದಲ್ಲಿ ನೆಲಗಡಲೆ ಬಿತ್ತನೆ ಗುರಿ ಹೊಂದಲಾಗಿದೆ. 2,900 ಹೆಕ್ಟೇರ್ ಪ್ರದೇಶದಲ್ಲಿ ಭತ್ತದ ಬಿತ್ತನೆ ಗುರಿ ಹೊಂದಲಾಗಿದೆ. ಆದರೆ ಎಲ್ಲಿಯೂ ಬಿತ್ತನೆಯಾಗಿಲ್ಲ.
ಬಾಗೇಪಲ್ಲಿ ತಾಲೂಕಿನಲ್ಲಿ 32,040 ಹೆಕ್ಟೇರ್, ಚಿಂತಾಮಣಿ ತಾಲೂಕಿನಲ್ಲಿ 34,167 ಹೆಕ್ಟೇರ್, ಶಿಡ್ಲಘಟ್ಟ ತಾಲೂಕಿನಲ್ಲಿ 17,679 ಹೆಕ್ಟೇರ್, ಚಿಕ್ಕಬಳ್ಳಾಪುರ ತಾಲೂಕಿನಲ್ಲಿ 17,663 ಹೆಕ್ಟೇರ್, ಗೌರಿಬಿದನೂರು ತಾಲೂಕಿನಲ್ಲಿ 35,532 ಹಾಗೂ ಗುಡಿಬಂಡೆ ತಾಲೂಕಿನಲ್ಲಿ 11,501 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಲಾಗಿದ್ದು, ಬಿತ್ತನೆಗೆ ಬೇಕಾದ ಎಲ್ಲ ಸಿದ್ಧತೆಗಳನ್ನು ಕೃಷಿ ಇಲಾಖೆ ಮಾಡಿಕೊಂಡಿವೆ.
ಜಿಲ್ಲೆಯಲ್ಲಿ ಕಳೆದ 4 ವರ್ಷಗಳಿಂದ ಭಾರಿ ಮಳೆಯಾಗಿರುವುದರಿಂದ ಕೆರೆಗಳಲ್ಲಿ ನೀರು ತುಂಬಿಕೊಂಡಿತ್ತು. ಆದರೆ ಈ ಬಾರಿ ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗದ ಕಾರಣ ಕೆರೆಗಳೆಲ್ಲ ಬತ್ತಲು ಆರಂಭಿಸಿವೆ. ರೈತರು ಹೆಚ್ಚಾಗಿ ಬೋರ್‌ವೆಲ್‌ಗಳನ್ನು ಬಳಸುತ್ತಿರುವುದರಿಂದ ಕೆರೆಗಳಲ್ಲಿನ ನೀರು ಬಹುಬೇಗ ಖಾಲಿಯಾಗುತ್ತಿವೆ. ಎಚ್‌ಎನ್ ವ್ಯಾಲಿಯಿಂದಲೂ ನಿರೀಕ್ಷಿತ ಪ್ರಮಾಣದಲ್ಲಿ ನೀರು ಹರಿಯದ ಕಾರಣ ವ್ಯಾಲಿ ವ್ಯಾಪ್ತಿಗೆ ಬರುವ ಕೆರೆಗಳಲ್ಲೂ ನೀರು ಕಡಿಮೆಯಾಗಿದ್ದು, ಕೆಲವು ಕೆರೆಗಳಲ್ಲಿ ಹಳ್ಳಗಳಲ್ಲಿ ಮಾತ್ರ ನೀರು ಉಳಿದಿದೆ.
ಈ ಬಾರಿ ಮಳೆ ಕೈ ಕೊಟ್ಟಿರುವುದರಿಂದ ಬಿತ್ತನೆಯಲ್ಲಿ ಏರುಪೇರಾಗುವುದು ನಿಶ್ಚಿತವಾಗಿದೆ. ಹೀಗಾಗಿ ರೈತರಿಗೆ ಕಾಲಕಾಲಕ್ಕೆ ಯಾವ ಬೆಳೆಯನ್ನು ಇಟ್ಟರೆ ಒಳಿತು ಎಂಬುದರ ಬಗ್ಗೆ ಕೃಷಿ ಇಲಾಖೆ ಜಾಗೃತಿ ಮೂಡಿಸಬೇಕಿದೆ. ಬಿತ್ತನೆ ಸಮಯದಲ್ಲಿ ರಸಗೊಬ್ಬರ ಹಾಗೂ ಇನ್ನಿತರ ಸಮಸ್ಯೆಗಳು ಎದುರಾಗುವುದು ಸಹಜವಾಗಿದ್ದು, ಸರ್ಕಾರ ಈ ಬಗ್ಗೆ ಕ್ರಮಕೈಗೊಳ್ಳಬೇಕಿದೆ ಎಂದು ಚಿಕ್ಕಬಳ್ಳಾಪುರ ತಾಲೂಕಿನ ಕಮ್ಮಗುಟ್ಟಹಳ್ಳಿ ಗ್ರಾ.ಪಂ ಮಾಜಿ ಸದಸ್ಯ ಹಾಗೂ ರೈತ ಮುಖಂಡ ಆರ್.ಚೊಕ್ಕನಹಳ್ಳಿ ನರಸಿಂಹಪ್ಪ ಅಭಿಪ್ರಾಯ ಪಟ್ಟಿದ್ದಾರೆ.
ಅದೇ ರೀತಿ ಹಿಂದಿನ ವರ್ಷಗಳಿಗೆ ಹೋಲಿಸಿದರೆ ಈ ಬಾರಿ ಮಳೆ ಬಂದಿಲ್ಲ. ಕಳೆದ ಬಾರಿ ಅಷ್ಟೊತ್ತಿಗಾಗಲೇ ನಾವೆಲ್ಲ ಬಿತ್ತನೆಗೆ ಭೂಮಿಯನ್ನು ಅಣಿಗೊಳಿಸಿದ್ದವು. ಆದರೆ ಈ ಬಾರಿ ಉಳುಮೆ ಮಾಡಲು ಬೇಕಾಗುವಷ್ಟು ಮಳೆ ಕೂಡಾ ಬಂದಿಲ್ಲ. ಈಗ ಮಳೆ ಬಂದರೂ ಭೂಮಿಯನ್ನು ಬಿತ್ತನೆಗೆ ಸಜ್ಜುಗೊಳಿಸಲು ಸಮಯಬೇಕಾಗಲಿದೆ ಎಂದು ಗುಡಿಬಂಡೆ ತಾಲೂಕಿನ ರೈತ ಮುಖಂಡ ಯಲಕಲರಾಳ್ಳಹಳ್ಳಿ ನರಸಿಂಹಮೂರ್ತಿ ಅಭಿಪ್ರಾಯಪಟ್ಟಿದ್ದಾರೆ.
English summary
Rain delayed in Karnataka: sowing rate decrease in Chikkaballapur district. Know more,
Story first published: Tuesday, June 27, 2023, 20:42 [IST]