Features
oi-Oneindia Staff
ಒಂದೊಳ್ಳೆ ಕೆಲಸ ಮಾಡಲು ಹೊರಟಾಗ ಅದನ್ನು ಪ್ರೋತ್ಸಾಹಿಸಲು ಸಾಧ್ಯವಾಗದೇ ಇದ್ದರೆ, ಕೊನೇ ಪಕ್ಷ ಅದಕ್ಕೆ ಅಡ್ಡಿ ಪಡಿಸುವ ಕೆಲಸವನ್ನು ಮಾಡಲು ಹೋಗಬಾರದು. ಸರ್ಕಾರದ ತಪ್ಪುಗಳನ್ನು ಎತ್ತಿ ತೋರಿಸಬೇಕಾಗಿರುವುದು ವಿರೋಧ ಪಕ್ಷಗಳ ರಾಜಕೀಯ ಧರ್ಮ, ಆದರೆ ವಿರೋಧಿಸ ಬೇಕು ಎನ್ನುವ ಕಾರಣಕ್ಕಾಗಿ ವಿರೋಧಿಸಿದರೆ??
ಚುನಾವಣಾ ಪ್ರಣಾಳಿಕೆಯಲ್ಲಿ ಭರವಸೆ ನೀಡಿದಂತೆ ಕರ್ನಾಟಕದಲ್ಲಿ ಸಿದ್ದರಾಮಯ್ಯ ಸರ್ಕಾರ ಗ್ಯಾರಂಟಿ ಸ್ಕೀಂಗಳನ್ನು ಒಂದೊಂದಾಗಿಯೇ ಜಾರಿಗೆ ತರಲು ಮುಂದಾಗಿದೆ. ಮಹಿಳೆಯರಿಗೆ ಫ್ರೀ ಬಸ್ ಯೋಜನೆ ಜಾರಿಗೆ ಬಂದಿದೆ, ಅದಕ್ಕೆ ಸಿಗುತ್ತಿರುವ ರೆಸ್ಪಾನ್ಸ್ ನೋಡಿ, ರಾಜ್ಯ ಸರ್ಕಾರದ ಒಡೆತನದ ಸಾರಿಗೆ ಸಂಸ್ಥೆಗಳು ಅಲ್ಲೋಲಕಲ್ಲೋಲವಾಗಿದೆ. ಧಾರ್ಮಿಕ, ಶ್ರದ್ದಾ ಕೇಂದ್ರಗಳಲ್ಲಿ ವಾರ್ಷಿಕ ಜಾತ್ರೆ, ಲಕ್ಷದೀಪೋತ್ಸವಕ್ಕೂ ಮುನ್ನವೇ ಜನಜಾತ್ರೆ ನಡೆಯುತ್ತಿದೆ.
ಸಿದ್ದರಾಮಯ್ಯ ಸರ್ಕಾರ ಜಾರಿಗೆ ತಂದಿರುವ/ತರಲು ಮುಂದಾಗಿರುವ ಗ್ಯಾರಂಟಿಗಳಿಂದ ಆರ್ಥಿಕ ಹೊರೆಯಾಗಲಿದೆಯೇ? ಈ ಬಗ್ಗೆ ಸಾಕಷ್ಟು ಪರವಿರೋಧ ಚರ್ಚೆಗಳು ನಡೆಯುತ್ತಿವೆ. ಇದನ್ನೆಲ್ಲಾ ಪಕ್ಕಕ್ಕಿಟ್ಟು, ಈ ಗ್ಯಾರಂಟಿಗಳಿಂದ ಕೆಳ/ಮಧ್ಯಮ ವರ್ಗಕ್ಕೆ ಆಗುವ ಉಪಯೋಗಗಳೇನು, ಹಂಡ್ರೆಂಡ್ ಪರ್ಸೆಂಟ್ ಈ ಯೋಜನೆ ಅಧಿಕೃತವಾದ ನಂತರ ಒಂದು ಕುಟುಂಬಕ್ಕೆ ಇದರಿಂದ ಆಗುವ ಲಾಭಗಳೇನು ಎನ್ನುವುದನ್ನು ನೋಡುವುದಾದರೆ..
ಅಕ್ಕಿ, ಗ್ಯಾಸ್, ಸಾರಿಗೆ ಉಚಿತ ಎನ್ನುವುದು ಬರೀ ಕರ್ನಾಟಕದಲ್ಲಿ ಮಾತ್ರವಲ್ಲ
ಅಕ್ಕಿ, ಗ್ಯಾಸ್, ಸಾರಿಗೆ ಉಚಿತ ಎನ್ನುವುದು ಬರೀ ಕರ್ನಾಟಕದಲ್ಲಿ ಮಾತ್ರ ಇದೇ ಮೊದಲ ಬಾರಿಗೆ ಜಾರಿಗೇನೂ ಬರುತ್ತಿಲ್ಲ. ತಮಿಳುನಾಡು ಸರ್ಕಾರ ಹಿಂದೆಯೇ ಈ ಯೋಜನೆಗಳನ್ನು ಜಾರಿಗೆ ತಂದಿದ್ದವು. ದಿವಂಗತ ತಮಿಳುನಾಡು ಸಿಎಂ ಕರುಣಾನಿಧಿ ಹೇಳುವ ಪ್ರಕಾರ, ಸಾರಿಗೆ ವ್ಯವಸ್ಥೆ ಎನ್ನುವುದೊಂದು ಸರ್ವೀಸ್, ಇದರಿಂದ ಲಾಭನಷ್ಟ ನಿರೀಕ್ಷಿಸಲು ಸಾಧ್ಯವಿಲ್ಲ ಎಂದು. ಮಹಿಳೆಯರಿಗೆ ಉಚಿತ ಪ್ರಯಾಣದ ಘೋಷಣೆಗೂ ಮುನ್ನವೇ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಗಳು ಲಾಭದಲ್ಲೇನೂ ಕಾರ್ಯನಿರ್ವಹಿಸುತ್ತಿರಲಿಲ್ಲ.
ಬಿಎಂಟಿಸಿ ಬಸ್ಸಿನಲ್ಲಿ ಮಾಸಿಕ ಬಸ್
ಬಿಎಂಟಿಸಿ ಬಸ್ಸಿನಲ್ಲಿ ಮಾಸಿಕ ಬಸ್ (ಎಸಿ ಬಸ್ ಹೊರತಾಗಿ) ದರ ತಿಂಗಳಿಗೆ 1,050 ರೂಪಾಯಿ. ಒಂದು ಶ್ರಮಿಕ ವರ್ಗದ ಕುಟುಂಬದಲ್ಲಿ ಇಬ್ಬರು ಮಹಿಳೆಯರು ಕೆಲಸಕ್ಕೆ ಹೋಗುತ್ತಿದ್ದರೆ ಮತ್ತು ಬಿಎಂಟಿಸಿ ಬಸ್ಸನ್ನು ಅವಲಂಬಿಸಿದ್ದರೆ, ನೇರ ತಿಂಗಳಿಗೆ 2,100 ಉಳಿತಾಯವಾಗುತ್ತದೆ. ಈ ವರ್ಗದ ಜನರಿಗೆ ಎರಡು ಸಾವಿರ ರೂಪಾಯಿ ಉಳಿತಾಯ ಎನ್ನುವುದು ದೊಡ್ಡ ಮೊತ್ತ.
ಇನ್ನೊಂದು ಉದಾಹರಣೆ, ರಾಜಧಾನಿ ಬೆಂಗಳೂರಿಗೆ ಅಕ್ಕಪಕ್ಕದ ತಾಲೂಕು/ಜಿಲ್ಲಾ ಕೇಂದ್ರಗಳಿಂದ (ಉದಾಹರಣೆಗೆ ತುಮಕೂರು, ಕೋಲಾರ, ಚಿಕ್ಕಬಳ್ಲಾಪುರ ಮುಂತಾದ ಕಡೆಯಿಂದ) ಕೆಲಸಕ್ಕಾಗಿ ಬರುವವರು ಮಹಿಳೆಯರೂ ಸೇರಿ ಲಕ್ಷಾಂತರ ಜನ. ಅಂದಾಜು ಬೆಂಗಳೂರಿಗೆ ಮಾಸಿಕ ಅಪ್ & ಡೌನ್ ಚಾರ್ಜ್ ಮೂರು ಸಾವಿರ ಎಂದು ಇಟ್ಟುಕೊಂಡರೆ, ಒಂದು ಕುಟುಂಬಕ್ಕೆ ಉಳಿತಾಯವಾಗುವ ಹಣ ಕಮ್ಮಿ ಮೊತ್ತವೇನೂ ಅಲ್ಲ. ಇದಷ್ಟೇ ಅಲ್ಲಾ..
ಗೃಹಲಕ್ಷ್ಮಿ ಯೋಜನೆಯಡಿ ಕುಟುಂಬದ ಒಡತಿಗೆ ಮಾಸಿಕ 2 ಸಾವಿರ ರೂಪಾಯಿ
ಗೃಹಲಕ್ಷ್ಮಿ ಯೋಜನೆಯಡಿ ಕುಟುಂಬದ ಒಡತಿಗೆ (ಬಿಪಿಎಲ್/ಎಪಿಎಲ್) ಮಾಸಿಕ ಎರಡು ಸಾವಿರ ರೂಪಾಯಿ ಯೋಜನೆ ಸದ್ಯದಲ್ಲೇ ಜಾರಿಯಾಗಲಿದೆ. ತಿಂಗಳಿಗೆ ಎರಡು ಸಾವಿರ ಎನ್ನುವುದು ಕೆಲವೊಂದು ಕುಟುಂಬಕ್ಕೆ ಅತ್ಯಮೂಲ್ಯವಾಗಿರುತ್ತದೆ. ಮೆಡಿಸಿನ್, ತಮಗೆ ಬೇಕಾದ್ದನ್ನು ಪಡೆದುಕೊಳ್ಳಲು ಇತರರ ಆಸರೆ ತಪ್ಪಿದಂತಾಗುತ್ತದೆ, ಇದಕ್ಕೂ ಮಕ್ಕಳನ್ನು ಅವಲಂಬಿತವಾಗುವುದು ನಿಲ್ಲುತ್ತದೆ.
ಗೃಹಜ್ಯೋತಿ ಯೋಜನೆಯ ಇನ್ನೂರು ಯುನಿಟ್ ವಿದ್ಯುತ್ ಫ್ರೀ
ಇನ್ನು, ಗೃಹಜ್ಯೋತಿ ಯೋಜನೆಯ ಭಾಗವಾದ ಇನ್ನೂರು ಯುನಿಟ್ ವಿದ್ಯುತ್ ಫ್ರೀ. ಸರಾಸರಿ ತೆಗೆದುಕೊಂಡಾಗ ತಿಂಗಳಿಗೆ 500-1200 ರೂಪಾಯಿ ಬಿಲ್ ಬರುವ ಎಲ್ಲಾ ಮನೆಗಳಿಗೂ ಇದರ ಲಾಭ ಸಿಗಲಿರುವುದು ನಿಶ್ಚಿತ ಮತ್ತು ಖಚಿತ. ಹಾಗಾಗಿ, ಸದ್ಯದಲ್ಲೇ ಜಾರಿಗೆ ಬರಲಿರುವ (ಶಕ್ತಿ ಯೋಜನೆ ಚಾಲ್ತಿಯಲ್ಲಿದೆ) ಯೋಜನೆಗಳಿಂದ ಒಂದು ಕುಟುಂಬಕ್ಕೆ ಮಾಸಿಕ ಉಳಿಯು ಅಂದಾಜು ಮೊತ್ತವೆಷ್ಟು ಎಂದು ಲೆಕ್ಕಹಾಕಿದಾಗ ಅದೇನೂ ಸಣ್ಣಮೊತ್ತವೇನೂ ಅಲ್ಲ..
ಕುಟುಂಬದಲ್ಲಿ ಒಬ್ಬರು ಮಹಿಳೆಯರು ಬಿಎಂಟಿಸಿ ಬಸ್ ಅವಲಂಬಿಸಿದ್ದರೆ
ಕುಟುಂಬದಲ್ಲಿ ಒಬ್ಬರು ಮಹಿಳೆಯರು ಬಿಎಂಟಿಸಿ ಬಸ್ ಅವಲಂಬಿಸಿದ್ದಾರೆ ಎಂದು ಇಟ್ಟುಕೊಂಡಾಗ, ಮಾಸಿಕವಾಗಿ ಉಳಿಯುವ ಹಣ 1,050, ಗೃಹಲಕ್ಷ್ಮಿ ಯೋಜನೆಯಿಂದ ಎರಡು ಸಾವಿರ, ಗೃಹಜ್ಯೋತಿಯಿಂದ ಅಂದಾಜು ಎಂಟು ನೂರು ರೂಪಾಯಿ ಅಂದುಕೊಂಡರೂ ತಿಂಗಳಿಗೆ ನಾಲ್ಕು ಸಾವಿರ ರೂಪಾಯಿ ಉಳಿತಾವಾಗುತ್ತದೆ. ಇನ್ನು KSRTC ಬಸ್ ಅವಲಂಬಿತರಿಗೆ ಅಂದಾಜು ಐದು ಸಾವಿರ ರೂಪಾಯಿ ಉಳಿತಾಯವಾಗಲಿದೆ. ಇದು ಅನ್ನಭಾಗ್ಯದ ಹತ್ತು ಕೆಜಿ, ಇಂದಿರಾ ಕ್ಯಾಂಟೀನ್ ನಲ್ಲಿ ರಿಯಾಯತಿ ದರದಲ್ಲಿ ಸಿಗುವ ಊಟತಿಂಡಿಯ ಖರ್ಚು ಸೇರಿಸದೇ ಉಳಿಯುವ ಅಂದಾಜು ಮೊತ್ತ.
ಅನ್ನಭಾಗ್ಯ, ಯುವನಿಧಿ ಜಾರಿಗೆ ಮುನ್ನವೇ ಒಂದು ಕುಟುಂಬಕ್ಕೆ ಇಷ್ಟು ಉಳಿತಾಯ
ಸರ್ಕಾರದ ಅನ್ನಭಾಗ್ಯ, ಯುವನಿಧಿ ಯೋಜನೆ ಜಾರಿಗೆ ಮುನ್ನವೇ ಒಂದು ಕುಟುಂಬಕ್ಕೆ ಇಷ್ಟು ಉಳಿತಾಯವಾಗಬಲ್ಲದು. ಈ ಉಳಿತಾಯದ ಹಣವನ್ನು ಮತ್ತೆ ಸಾರ್ವಜನಿಕರು ಇನ್ನೊಂದಕ್ಕೆ ವಿನಿಯೋಗಿಸದೇ ಇರುತ್ತಾರೆಯೇ? ಅದರಿಂದ ರಿಟರ್ನ್ ಸರ್ಕಾರಕ್ಕೆ ತೆರಿಗೆ ರೂಪದಲ್ಲಿ ಮತ್ತೆ ಬೊಕ್ಕಸಕ್ಕೆ ದುಡ್ಡು ಬರಲಿದೆ ಎನ್ನುವುದು ಸಿಂಪಲ್ ಲೆಕ್ಕಾಚಾರ. ಮಹಿಳೆಯರ ಸ್ವಾವಲಂಬಿ ಬದುಕಿಗೆ ಇಂತಹ ಯೋಜನೆಗಳು ಎಷ್ಟು ಶಕ್ತಿ ನೀಡಲಿದೆ ಎನ್ನುವುದರ ಪರಿಚಯವನ್ನು ‘ಶಕ್ತಿ ಯೋಜನೆ’ ಇಂದ ಈಗಾಗಲೇ ನೋಡಿದ್ದಾಗಿದೆ.
ಪುರುಷರನ್ನೇ ಅವಲಂಬಿತವಾಗಿರುವ ಮಹಿಳೆಯರು
ಸಾಂಸಾರಿಕ ಕಟ್ಟುಪಾಡುಗಳು, ಎಲ್ಲದಕ್ಕೂ ಪುರುಷರನ್ನೇ ಅವಲಂಬಿತವಾಗಿರುವ ಮಹಿಳೆಯರು ನಮ್ಮ ರಾಜ್ಯದಲ್ಲಿ ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. ಇಂತಹ ಚೈನಿನಿಂದ ಹೊರಬರಲು ಬಯಸುವ ಮಹಿಳೆಯರು ಇರದೆ ಇರುತ್ತಾರಾ? ಹಾಗಾಗಿಯೇ ಧರ್ಮಸ್ಥಳ, ಕುಕ್ಕೆ ಮುಂತಾದ ಕಡೆ ಜನಜಂಗುಳಿಗೆ ಭಕ್ತಿ ಮಾತ್ರ ಕಾರಣ ಎಂದು ಹೇಳಲು ಬರುವುದಿಲ್ಲ. ಮಹಿಳೆಯರ ಈ ಸಂಭ್ರಮ, ಸಡಗರದ ಹಿಂದೆ ಬಹುವರ್ಷದ ಆಸೆಗಳಿರಬಹುದು. ಯೋಜನೆ ಬಳಸುವ ಉತ್ಸಾಹದಲ್ಲಿರುವ ಮಹಿಳೆಯರು ಜವಾಬ್ದಾರಿಯುತವಾಗಿ ಇರಬೇಕು ಎನ್ನುವುದು ಕೂಡಾ ಒಪ್ಪಿಕೊಳ್ಳಬೇಕಾದ ವಿಚಾರ.
ಶತಮಾನಗಳಿಂದ ಶ್ರಮ ಪಡದೇ ಉಂಡವರು
“ಶತಮಾನಗಳಿಂದ ಶ್ರಮ ಪಡದೇ ಉಂಡವರು ಬಡವರಿಗೆ ನೀಡಿದ್ದನ್ನೆಲ್ಲಾ ಬಿಟ್ಟಿಭಾಗ್ಯ ಎಂದು ಹಂಗಿಸುತ್ತಿದ್ದಾರೆ”ಎಂದು ಮುಖ್ಯಮಂತ್ರಿಗಳು ಇತ್ತೀಚೆಗೆ ಹೇಳಿದ್ದರು. ಅವರಿವರ ಆರೋಪ/ವ್ಯಂಗ್ಯ ಏನಿದ್ದರೂ, ಸರ್ಕಾರ ಘೋಷಿಸಿದ ಎಲ್ಲಾ ಯೋಜನೆಗಳು ಕ್ರಮಬದ್ದವಾಗಿ ಜಾರಿಗೆಯಾದರೆ, ಒಂದು ವರ್ಗದ ಕುಟುಂಬದ ಬದುಕು ಇನ್ನಷ್ಟು ಸುಂದರವಾಗಿ ರೂಪುಗೊಳ್ಳುವುದಂತೂ ಹೌದು. ಇದು ವಿರೋಧ ಪಕ್ಷದವರೂ ಒಪ್ಪಿಕೊಳ್ಳ ಬೇಕಾದ ಸತ್ಯ.
English summary
Siddaramaiah Government Guarantee Schemes In Karnataka Can Change The Life Style Of Middle Class Family. How, Know More.
Story first published: Wednesday, June 21, 2023, 15:25 [IST]