Hubballi
lekhaka-Sandesh R Pawar
ಸೂಪರ್ ಸ್ಪೇಷಾಲಿಟಿ ಕಟ್ಟಡದ ನೂತನ ತುರ್ತು ಚಿಕಿತ್ಸಾ ವಿಭಾಗಕ್ಕೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಇದೇ ವೇಳೆ ಮಾತನಾಡಿದ ಅವರು, ಕಿಮ್ಸ್‌ನಲ್ಲಿ ಹೆಚ್ಚುವರಿ ಸಿಬ್ಬಂದಿ ನೇಮಕ ಮಾಡುವಂತೆ ರಾಜ್ಯ ಸರ್ಕಾರಕ್ಕೆ ತಿಳಿಸುತ್ತೇನೆ ಎಂದರು.
ಹುಬ್ಬಳ್ಳಿಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಹಭಾಗಿತ್ವದಲ್ಲಿ 72 ಕೋಟಿ ರೂಪಾಯಿ ವೆಚ್ಚದಲ್ಲಿ ವಿಶೇಷ ತುರ್ತು ಚಿಕಿತ್ಸಾ ಘಟಕ ನಿರ್ಮಾಣ ಮಾಡಲಾಗಿದೆ. ಇನ್ನು ಕಾಮಗಾರಿ ಪೂರ್ಣಗೊಂಡ ನಂತರ ಈ ನೂತನ ಕಟ್ಟಡದ ಉದ್ಘಾಟನೆಯನ್ನು ಮಾಡಲಾಗುವುದು ಎಂದು ತಿಳಿಸಿದರು. ಹಾಗೆಯೇ ಕಿಮ್ಸ್‌ನಲ್ಲಿ ಹೆಚ್ಚಿನ ಸಿಬ್ಬಂದಿಯನ್ನು ನೇಮಿಸುವಂತೆ ರಾಜ್ಯ ಸರ್ಕಾರಕ್ಕೆ ಮನವಿ ಮಾಡುತ್ತೇನೆ. 1,100 ಸಿಬ್ಬಂದಿ ನೇಮಿಸಲು ಕ್ರಮ ಕೈಗೊಳ್ಳುವಂತೆ ಸಚಿವ ಡಾ.ಶರಣಪ್ರಕಾಶ್ ಪಾಟೀಲ್ ಜೊತೆ ಚರ್ಚಿಸುತ್ತೇನೆ ಎಂದರು.
ನಂತರ ಇವಿಎಮ್ ಹೇಳಿಕೆ ಸಮರ್ಥಿಸಿಕೊಂಡ ಸತೀಶ್ ಜಾರಕಿಹೋಳಿಗೆ ಜೋಶಿ ಅವರು ತಿರುಗೇಟು ನೀಡಿದ್ದಾರೆ. ರಾಜಕೀಯ ಕಾರಣಕ್ಕೆ ಕಾಂಗ್ರೆಸ್‌ವರು ಹಾಗೆ ಹೇಳಿಕೆ ಕೊಡುತ್ತಿದ್ದಾರೆ. ಐದು ಗ್ಯಾರಂಟಿಗಳ ಯೋಜನೆ ಜಾರಿ ವಿಚಾರದಲ್ಲೂ ಹಾಗೆ ಸುಮ್ಮನೆ ಆಶ್ವಾಸನೆ ಕೊಟ್ಟಿದ್ದಾರೆ.
ಚೆಲುವರಾಯಸ್ವಾಮಿ ವೋಟ್‌ಗಾಗಿ ಗ್ಯಾರಂಟಿಗಳ ಬಗ್ಗೆ ಮಾತನಾಡುತ್ತೇವೆ ಅಂದಿದ್ದರು ಎಂದು ಕಾಂಗ್ರೆಸ್‌ಗೆ ಟಾಂಗ್ ನೀಡಿದರು.
ಅಕ್ಕಿ ತಿಕ್ಕಾಟ; ಕೇಂದ್ರ ಸರಕಾರದ ಮೇಲೆ ಗೂಬೆಕೂರಿಸುವ ಯತ್ನ: ಪ್ರಹ್ಲಾದ ಜೋಶಿ
ಸಿದ್ದರಾಮಯ್ಯ ಏಮ್ಸ್ ಅನ್ನು ರಾಯಚೂರಿಗೆ ಶಿಫ್ಟ್ ಮಾಡಲು ಕೇಂದ್ರಕ್ಕೆ ಪತ್ರ ಬರೆದ ವಿಚಾರಕ್ಕೆ ಪ್ರತಿಕ್ರಿಯಿಸಿ, ಈ ವಿಚಾರವಾಗಿ ನಾನು ಹೆಚ್ಚಿಗೆ ಮಾತನಾಡುವುದಿಲ್ಲ. ಧಾರವಾಡ ಜಿಲ್ಲೆಯ ಕಾಂಗ್ರೆಸ್ ನಾಯಕರು ಈ ಬಗ್ಗೆ ಸಿದ್ದರಾಮಯ್ಯನವರಿಗೆ ಏನು ಹೇಳುತ್ತಾರೆ ಅನ್ನೋದು ನನ್ನ ಪ್ರಶ್ನೆಯಾಗಿದೆ. ಕಾಂಗ್ರೆಸ್ ಜನಪ್ರತಿನಿಧಿಗಳು ಏನು ಹೇಳುತ್ತಾರೆಯೋ ಅದನ್ನು ಅವರೇ ಡಿಸೈಡ್ ಮಾಡಲಿ ಎಂದರು.
ಕಾಂಗ್ರೆಸ್ ವಿರುದ್ಧ ಸಿ.ಟಿ.ರವಿ ವಾಗ್ದಾಳಿ
ಅಕ್ಕಿಯ ವಿಚಾರದಲ್ಲಿ ಕಾಂಗ್ರೆಸ್ ಪಾರ್ಟಿಯು ಕೆಟ್ಟ ರಾಜಕಾರಣ ಮಾಡುವುದು ಬೇಡ ಎಂದು ರಾಷ್ಟ್ರೀಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಅವರು ಆಗ್ರಹಿಸಿದ್ದಾರೆ. ಅಕ್ಕಿ ಕೊಡುವ ವಿಚಾರದಲ್ಲಿ ಕಾಂಗ್ರೆಸ್ ಪಾರ್ಟಿಯು ತನ್ನ ವೈಫಲ್ಯವನ್ನು ಮುಚ್ಚಿಕೊಳ್ಳಲು, ಬಿಜೆಪಿಯನ್ನು, ಪ್ರಧಾನಿ ನರೇಂದ್ರ ಮೋದಿಯವರನ್ನು ಎಳೆದು ತರಲು ಹರ ಸಾಹಸ ಮಾಡುತ್ತಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಟೀಕಿಸಿದ್ದಾರೆ.
ಒಂದು ರಾಜ್ಯದ ಮುಖ್ಯಮಂತ್ರಿ ಎರಡು ಲಕ್ಷ ಟನ್ ಅಕ್ಕಿ ಬೇಡಿಕೆಗೆ ಸಂಬಂಧಿಸಿದಂತೆ ಪ್ರಧಾನ ಮಂತ್ರಿಗಳಿಗಾಗಲಿ, ಕೇಂದ್ರ ಆಹಾರ ನಾಗರೀಕ ಸರಬರಾಜು ಸಚಿವರಾಗಲಿ ಬೇಡಿಕೆ ಇಡಲೇ ಇಲ್ಲ. ಅವರೊಂದಿಗೆ ಮಾತನಾಡುವ ಸೌಜನ್ಯವನ್ನೂ ತೋರಿಸಲಿಲ್ಲ. ರಾಜ್ಯ ಸರ್ಕಾರ 2 ಲಕ್ಷ ಟನ್ ಅಕ್ಕಿಗಾಗಿ ಎಫ್‍ಸಿಐ ವಿಭಾಗೀಯ ವ್ಯವಸ್ಥಾಪಕರಿಗೆ 9/6/23 ರಂದು ಪತ್ರ ಮುಖೇನ ವಿನಂತಿ ಮಾಡುತ್ತಾರೆ.
12/6/23ರಂದು ವಿಭಾಗೀಯ ವ್ಯವಸ್ಥಾಪಕ ಇದಕ್ಕೆ ಅನುಮತಿ ನೀಡುತ್ತಾರೆ. ಆದರೆ ಈ ಅನುಮತಿ ನೀಡುವ ಮುನ್ನ ಅವರು ಕೇಂದ್ರ ಕಚೇರಿಯನ್ನು ಸಂಪರ್ಕಿಸದೆ ಪ್ರಾಯಶ: ಏಕಮುಖವಾಗಿ ತೀರ್ಮಾನ ಕೈಗೊಂಡ ಹಾಗೆ ಭಾಸವಾಗುತ್ತದೆ ಎಂದು ತಿಳಿಸಿದ್ದಾರೆ.
13/6/23 ರಂದು ಆಹಾರ ಮತ್ತು ನಾಗರಿಕ ಸರಬರಾಜು ಕಚೇರಿಯಿಂದ ಎಫ್‍ಸಿಐ ಕೇಂದ್ರ ಕಚೇರಿಗೆ ಒಎಂಎಸ್‍ಎಸ್ ಕೋಟಾದಡಿ ಅಕ್ಕಿ ಮಾರಾಟವನ್ನು ನಿರ್ಭಂಧಿಸಿರುವ ಬಗ್ಗೆ ಆದೇಶ ಬರುತ್ತದೆ. ಈ ತೀರ್ಮಾನವನ್ನು 08/06/23 ರಂದು ನಡೆದ ಸಭೆಯಲ್ಲಿ ತೀರ್ಮಾನವಾಗಿತ್ತು. ಈ ಪತ್ರವು ಕರ್ನಾಟಕ ಸರ್ಕಾರಕ್ಕೆ ಬರೆದ ಪತ್ರವಲ್ಲ ಬದಲಿಗೆ ಎಫ್‍ಸಿಐ ಮುಖ್ಯಸ್ಥರಿಗೆ ಬರೆದಿರುವ ಪತ್ರವಿದು ಎಂದು ವಿವರಿಸಿದ್ದಾರೆ.
ಈ ನಿರ್ಧಾರ ರಾಜ್ಯ ಸರ್ಕಾರ ಎಫ್‍ಸಿಐ ಗೆ ಪತ್ರ ಬರೆಯುವ ಒಂದು ದಿನ ಮುಂಚಿತವಾಗಿ ತೆಗೆದುಕೊಂಡ ತೀರ್ಮಾನ ಎಂದು ಅವರು ನೆನಪಿಸಿದ್ದಾರೆ. ಕೇಂದ್ರ ಸರಕಾರ ಮುಂಗಾರು ಮಳೆ, ಬೆಳೆಯನ್ನು ಆಧರಿಸಿ ಕೇಂದ್ರದಲ್ಲಿರುವ ದಾಸ್ತಾನನ್ನು ಪರಿಗಣಿಸಿ ಫುಡ್ ಸೆಕ್ಯೂರಿಟಿ ಆಕ್ಟ್ ಪ್ರಕಾರ ಉಚಿತವಾಗಿ ಅಕ್ಕಿ ಕೊಡಬೇಕಾಗಿರುವ ಸರಬರಾಜಿಗೆ ಯಾವುದೇ ಭಂಗವಾಗದಂತೆ ಕಾಲಕಾಲಕ್ಕೆ ಇಂತಹ ನಿರ್ಣಯ ತೆಗೆದುಕೊಳ್ಳುವುದು ಸರ್ವೇಸಾಮಾನ್ಯ ಎಂದರು.
ಈಗಾಗಲೇ ಪ್ರತಿ ಕುಟುಂಬದ ಪ್ರತಿಯೊಬ್ಬ ಸದಸ್ಯರಿಗೂ ಐದು ಕೆ.ಜಿ. ಉಚಿತ ಅಕ್ಕಿ ನಿರಂತರವಾಗಿ ಕೇಂದ್ರ ಸರ್ಕಾರ ನೀಡುತ್ತಿದೆ. ಹಾಗೆಯೇ ಕೋವಿಡ್ ಸಂಕಷ್ಟದ 84 ಕೋಟಿ ಜನರಿಗೆ ಕಾಲದಲ್ಲಿ ಪ್ರತಿ ವ್ಯಕ್ತಿಗೆ ಹತ್ತು ಕೆ.ಜಿ. ಅಕ್ಕಿಯಂತೆ ನೀಡಿದೆ ಎಂದರು.
ಪ್ರತಿ ಕುಟುಂಬದ ಅಕ್ಕಿಯ ಅವಶ್ಯಕತೆಯನ್ನು ಕೇಂದ್ರ ಸರಕಾರವೇ ಪೂರೈಸುತ್ತಿದೆ. ಆದ ಕಾರಣ, ರಾಜ್ಯ ಸರ್ಕಾರ ಬಡ ಕುಟುಂಬಗಳಿಗೆ ಕೇಂದ್ರ ಸರ್ಕಾರದ ಅಕ್ಕಿಯ ಜೊತೆಗೆ ರಾಗಿ, ಗೋಧಿ, ಬೆಳೆ ಮತ್ತು ರವೆಯನ್ನು ನೀಡಬಹುದಾಗಿದೆ. ತಾನು ವಾಗ್ದಾನ ಮಾಡಿರುವಂತೆ ಹತ್ತು ಕೆ.ಜಿ. ಅಕ್ಕಿಯ ಬದಲಾಗಿ ಅದಕ್ಕೆ ಸಮ ಮೊತ್ತದ ಹಣವನ್ನು ನೀಡಬಹುದಾಗಿದೆ ಎಂದು ಒತ್ತಾಯಿಸಿದ್ದಾರೆ.
ಈಗ ರಾಜ್ಯ ಸರ್ಕಾರಕ್ಕೆ ಬಡವರಿಗೆ ಸಹಾಯ ಮಾಡುವುದು ಮುಖ್ಯವಾಗಬೇಕೇ ಹೊರತು ರಾಜಕಾರಣವಲ್ಲ. ಇದು ಸಿದ್ದರಾಮಯ್ಯನವರಂತಹ ಅನುಭವಿ ರಾಜಕಾರಣಿಗೆ ತಿಳಿಯದ ಸಂಗತಿ ಅಲ್ಲ ಎಂದು ಸಿ.ಟಿ ರವಿ ತಿಳಿಸಿದ್ದಾರೆ.
ಅನಗತ್ಯವಾಗಿ ಕಾಂಗ್ರೆಸ್ ಪಾರ್ಟಿ ಮೋದಿಯವರು ಬಡವರ ಅನ್ನ ಕಸಿದುಕೊಳ್ಳುತ್ತಿದ್ದಾರೆ ಎಂದು ಅಪಪ್ರಚಾರ ಮಾಡುತ್ತಿದ್ದಾರೆ. ನಿರಂತರವಾಗಿ ಮೋದಿ ಸರ್ಕಾರ ದೇಶದ ಯಾವೊಬ್ಬ ನಾಗರಿಕನೂ ಹಸಿವಿನಿಂದ ಇರಬಾರದು ಎಂದೇ ಪ್ರತಿ ಬಿಪಿಎಲ್ ಕುಟುಂಬದ ಪ್ರತಿ ವ್ಯಕ್ತಿಗೆ 5ಕೆಜಿ ಅಕ್ಕಿಯನ್ನು ಉಚಿತವಾಗಿ ನೀಡುತ್ತಿರುವುದನ್ನು ಮರೆಮಾಚಿ ಟೀಕಿಸುತ್ತಿರುವುದು ಅತ್ಯಂತ ಖಂಡನೀಯ ಹಾಗೂ ಕೀಳು ಮಟ್ಟದ ರಾಜಕೀಯವಾಗಿದೆ ಎಂದು ಆಕ್ಷೇಪಿಸಿದ್ದಾರೆ.
ದೇಶದ ಯಾವುದೇ ಕುಟುಂಬವು ಅಕ್ಕಿ ಅಥವಾ ಗೋಧಿ ಇಲ್ಲ ಎಂದು ಹಸಿವಿನಿಂದ ಒಂದು ದಿನವು ಕಳೆದಿಲ್ಲ. ಹಾಗೆ ಅವರು ಕಳೆಯಬಾರದು ಎಂದೇ ಕೇಂದ್ರವು ಅವರಿಗೆ ಉಚಿತ ರೇಷನ್ ನೀಡುತ್ತಿರುವುದು. ಇವರ ರಾಜಕಾರಣಕ್ಕೆ ಮೋದಿಯವರ ವಿರುದ್ಧ ಉತ್ಪ್ರೇಕ್ಷಿತ ಸುಳ್ಳಿನ ಕಂತೆಯ ಮೂಲಕ ನಡೆಯುತ್ತಿರುವ ದುರುದ್ದೇಶದ ಆರೋಪವನ್ನು ತೀವ್ರವಾಗಿ ಖಂಡಿಸುತ್ತೇನೆ ಎಂದು ತಿಳಿಸಿದ್ದಾರೆ.
English summary
I will request to state government for increase number of kims staff says union minitser Pralhad Joshi in Hubballi,
Story first published: Wednesday, June 21, 2023, 20:20 [IST]