ಕಾರವಾರ: ಭಾರೀ ಮಳೆಗೆ ಗುಡ್ಡ ಕುಸಿತ: ಭೀತಿ ಹುಟ್ಟಿಸುತ್ತಿರುವ ಹೆದ್ದಾರಿ ಸಂಚಾರ! | National Highway 66 Not Been Completed From Last 10 Years

Karwar

lekhaka-Vasudeva Gouda

By ಉತ್ತರ ಕನ್ನಡ ಪ್ರತಿನಿಧಿ

|

Google Oneindia Kannada News

ಕಾರವಾರ, ಜೂನ್‌ 30: ಉತ್ತರ ಕನ್ನಡ ಜಿಲ್ಲೆಯ ಕರಾವಳಿಯಲ್ಲಿ ಮಳೆ ಜೋರಾದ ಬೆನ್ನಲ್ಲೇ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಸಂಚಾರಕ್ಕೆ ಆತಂಕ ಶುರುವಾಗಿದೆ. ದಶಕಗಳಿಂದ ನಡೆಯುತ್ತಿರುವ ಹೆದ್ದಾರಿ ವಿಸ್ತರಣಾ ಕಾಮಗಾರಿ ಕುಂಟುವುದರ ಜೊತೆಗೆ ಅವೈಜ್ಞಾನಿಕ ಕಾಮಗಾರಿಯಿಂದಾಗಿ ಗುಡ್ಡಗಳು ಬಾಯ್ತೆರೆದುಕೊಂಡಿದ್ದು ನಿತ್ಯ ಸಂಚಾರ ಮಾಡುವವರಿಗೆ ಜೀವ ಭಯ ಕಾಡುವಂತಾಗಿದೆ.

ಕಾರವಾರದ ಮಾಜಾಳಿಯಿಂದ ಕುಂದಾಪುರದವರೆಗೆ ರಾಷ್ಟ್ರೀಯ ಹೆದ್ದಾರಿ 66 ರನ್ನು ಕಳೆದ ಹತ್ತು ವರ್ಷಗಳಿಂದ ಚತುಷ್ಪಥಗೊಳಿಸುವ ಕಾಮಗಾರಿ ನಡೆಸಲಾಗುತ್ತಿದೆ. ಆದರೆ ಈವರೆಗೂ ಪೂರ್ಣಗೊಂಡಿಲ್ಲ. ಆದರೆ ಕೆಲವೆಡೆ ಅಭಿವೃದ್ದಿ ಪಡಿಸಿದರೂ ಕೂಡ ಅವೈಜ್ಞಾನಿಕವಾಗಿ ತೆರವುಗೊಳಿಸಿದ ಗುಡ್ಡಗಳಿಂದ ಮಳೆಗೆ ಮಣ್ಣು, ಕಲ್ಲುಗಳು ಮತ್ತೆ ಹೆದ್ದಾರಿಗೆ ಕುಸಿಯುತ್ತಿವೆ.

National Highway 66 Not Been Completed From Last 10 Years

ಕಳೆದ ಒಂದು ವಾರದ ಅವಧಿಯಲ್ಲಿಯೇ ಮೂರು ಕಡೆಗಳಲ್ಲಿ ಗುಡ್ಡಕುಸಿತವಾಗಿದೆ. ಬಿಣಗಾ ಘಟ್ಟದಲ್ಲಿ ಬೃಹತ್ ಬಂಡೆಗಲ್ಲೊಂದು ಜಾರಿ ಹೆದ್ದಾರಿಗೆ ಜಾರಿದ್ದು ಅದೃಷ್ಟವಸಾತ್ ಯಾವುದೇ ಪ್ರಾಣಪಾಯ ಸಂಭವಿಸಿಲ್ಲ. ತಂಡ್ರಕುಳಿ ಬಳಿ ಬೃಹತ್ ಬಂಡೆಗಲ್ಲು ಮನೆ ಮೇಲೆ ಉರುಳಿದ ಕಾರಣ ಗೋಡೆಗೆ ಹಾನಿಯಾಗಿದೆ. ಕಾರವಾರ ನಗರದ ಟನಲ್ ಬಳಿ ಮಣ್ಣು ಸಹಿತ ಕಲ್ಲುಗಳು ಹೆದ್ದಾರಿಗೆ ಉರುಳಿದ ಕಾರಣ ಹೆದ್ದಾರಿ ಸಂಚಾರದಲ್ಲಿ ಕೆಲ ಕಾಲ ಅಸ್ತವ್ಯಸ್ತವಾಗುವಂತಾಗಿತ್ತು.

ಆದರೆ ಇದೇ ರಿತಿ ಹಲವು ಪ್ರದೇಶಗಳಲ್ಲಿ ಗುಡ್ಡ ಕುಸಿಯುವ ಭೀತಿ ಇದೆ. ಹೆದ್ದಾರಿ ಕಾಮಗಾರಿಗಾಗಿ ಬರ್ಗಿ, ತಂಡ್ರಕುಳಿ, ಬಿಣಗಾ ಘಟ್ಟ, ದಿವಗಿ ಬಳಿ ಕಡಿದಾಗಿ ಗುಡ್ಡ ತೆರವು ಮಾಡಿದ ಕಾರಣ ಗುಡ್ಡಗಳು ಮಳೆಗೆ ಬಾಯ್ತೆರೆದುಕೊಂಡಿವೆ. ಅಲ್ಲಲ್ಲಿ ಸಣ್ಣ ಪ್ರಮಾಣದಲ್ಲಿ ಗುಡ್ಡ ಕುಸಿತವಾಗುತ್ತಿರುವುದು ಎಚ್ಚರಿಕೆಯಂತಿದ್ದು ಅಧಿಕಾರಿಗಳು ಐಆರ್‌ಬಿ ಅವರಿಗೆ ಸೂಚಿಸಿ ಸೂಕ್ತ ಮುಂಜಾಗೃತೆ ವಹಿಸಬೇಕು ಎಂದು ಹೋರಾಟಗಾರ ಮಂಜುನಾಥ ಗೌಡ ಆಗ್ರಹಿಸಿದ್ದಾರೆ.

National Highway 66 Not Been Completed From Last 10 Years

ಇನ್ನು ಪ್ರತಿವರ್ಷ ಮಳೆಗಾಲದ ಅವಧಿಯಲ್ಲಿ ಹೆದ್ದಾರಿಯ ಅಲ್ಲಲ್ಲಿ ಅಗಲೀಕರಣಕ್ಕಾಗಿ ಕೊರೆದ ಗುಡ್ಡಗಳಿಂದ ಕಲ್ಲು, ಮಣ್ಣು ಕುಸಿದುಬಿಳ್ಳುತ್ತಿದ್ದರು ಐಆರ್‌ಬಿ ಕಂಪೆನಿ ಶಾಸ್ವತ ಪರಿಹಾರ ಕಲ್ಪಿಸಿಲ್ಲ. ಅರೆಬರೆ ಹೆದ್ದಾರಿ ಕಾಮಗಾರಿಯಿಂದ ನಿತ್ಯ ಸಂಚಾರ ಮಾಡುವವರಿಗೆ ಆತಂಕ ಶುರುವಾಗಿದೆ. ಅಲ್ಲದೇ ಅಪಘಾತಗಳ ಸಂಖ್ಯೆ ಕೂಡ ಹೆಚ್ಚಾಗಿರುವದರಿಂದ ಕೂಡಲೇ ಅಪಾಯಕಾರಿ ಸ್ಥಳಗಳಲ್ಲಿ ರೋಡ್ ಹಂಪ್, ಸೂಚನಾ ಫಲಕಗಳನ್ನು ಹಾಕಬೇಕು ಎಂದು ಆಗ್ರಹಿಸಿದ್ದಾರೆ.

ಕಳೆದ ಒಂದು ವಾರದಿಂದ ಕರಾವಳಿಯಾದ್ಯಂತ ಭಾರಿ ಮಳೆಯಾಗುತ್ತಿರುವ ಕಾರಣ ಹೆದ್ದಾರಿ ಕಾಮಗಾರಿಗೆ ಕಡಿದಾಗಿ ಗುಡ್ಡ ತೆರವುಗೊಳಿಸಿದ ಪ್ರದೇಶದಲ್ಲಿ ಮಣ್ಣು ಕುಸಿಯುತ್ತಿದೆ. ಬಿಣಗಾದಲ್ಲಿ ಹೆದ್ದಾರಿಗೆ ಬಂಡೆಗಲ್ಲು ಉರುಳಿದ ಕಾರಣ ಸದ್ಯ ಒಂದು ಭಾಗದಲ್ಲಿ ಹೆದ್ದಾರಿ ಸಂಚಾರ ಬಂದ್ ಮಾಡಲಾಗಿದೆ. ಅಲ್ಲದೆ ಐಆರ್ ಬಿ ಅವರಿಗೂ ಅಗತ್ಯ ಮುಂಜಾಗೃತಾ ಕ್ರಮಕ್ಕೆ ಸೂಚಿಸಲಾಗಿದೆ. ತಂಡ್ರಕುಳಿ ಬಳಿಯೂ ಬಂಡೆಗಲ್ಲು ಉರುಳಿದ ಪ್ರದೇಶಕ್ಕೆ ಈಗಾಗಲೇ ಉಪವಿಭಾಗಾಧಿಕರಿ ಪರಿಶೀಲನೆ ನಡೆಸಿದ್ದಾರೆ. ಅಗತ್ಯ ಬಿದ್ದಲ್ಲಿ ಅವರನ್ನು ಸ್ಥಳಾಂತರಿಸಲು ಸೂಚಿಸಲಾಗಿದೆ. ಜನರು ಕೂಡ ಅಧಿಕಾರಿಗಳು ಸ್ಥಳಾಂತರಕ್ಕೆ ಸೂಚಿಸಿದರೆ ಸಹಕಾರ ನೀಡುವಂತೆ ಅಪರ ಜಿಲ್ಲಾಧಿಕಾರಿ ರಾಜು ಮೊಗವೀರ ಕೋರಿದ್ದಾರೆ.

ಒಟ್ಟಿನಲ್ಲಿ ಪ್ರತಿ ಮಳೆಗಾಲದಲ್ಲೂ ಹೆದ್ದಾರಿ ಅಗಲೀಕರಣದ ಅವ್ಯವಸ್ಥೆಯಿಂದಾಗಿ ವಾಹನ ಸವಾರರು ಪರದಾಡಬೇಕಾದ ಪರಿಸ್ಥಿತಿ ಎದುರಾಗಿದೆ. ಇದೀಗ ಅಲ್ಲಲ್ಲಿ ಗುಡ್ಡ ಕುಸಿತ ಕೂಡ ಸಂಭವಿಸುತ್ತಿರುವ ಕಾರಣ ದೊಡ್ಡ ಅವಾಂತರಗಳು ನಡೆಯುವ ಮುನ್ನ ಜಿಲ್ಲಾಡಳಿತ ಮುನ್ನೆಚ್ಚರಿಕಾ ಕ್ರಮಗಳ್ಳಬೇಕಿದೆ.

English summary

National Highway 66, which passes along the coast of Uttara Kannada district, has been more dangerous in rainy days. Know more.

Story first published: Friday, June 30, 2023, 12:00 [IST]

Source link