ಕಾಡುಗೊಲ್ಲರನ್ನು ಅಲೆಮಾರಿ ಅಥವಾ ಅರೆ ಅಲೆಮಾರಿ ಪಟ್ಟಿಗೆ ಸೇರಿಸಿ- ಸಚಿವ ಡಿ.ಸುಧಾಕರ್ | Add Kadugolla Community To The Nomadic Or Semi-Nomadic List- Minister D.Sudhakar

Chitradurga

lekhaka-Chidananda M

By ಚಿತ್ರದುರ್ಗ ಪ್ರತಿನಿಧಿ

|

Google Oneindia Kannada News

ಚಿತ್ರದುರ್ಗ, ಜುಲೈ 20: ಮಧ್ಯ ಕರ್ನಾಟಕದಲ್ಲಿ ಅತಿ ಹೆಚ್ಚಾಗಿ ಕಂಡುಬರುವ ಬುಡಕಟ್ಟು ಕಾಡುಗೊಲ್ಲ ಸಮುದಾಯವನ್ನು ಅಲೆಮಾರಿ/ ಅರೆ ಅಲೆಮಾರಿ ಪಟ್ಟಿಗೆ ಸೇರಿಸುವಂತೆ ಒತ್ತಾಯಿಸಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವರಿಗೆ ಚಿತ್ರದುರ್ಗ ಜಿಲ್ಲಾ ಉಸ್ತುವಾರಿ ಸಚಿವ ಡಿ. ಸುಧಾಕರ್ ಪತ್ರ ಬರೆದಿದ್ದಾರೆ.

ಕಾಡುಗೊಲ್ಲ ಸಮಾಜವು ಬುಡಕಟ್ಟು ಸಮುದಾಯವಾಗಿದ್ದು, ಅಲೆಮಾರಿ/ ಅರೆ ಅಲೆಮಾರಿ ಸಮುದಾಯಕ್ಕೆ ಸೇರಿರುತ್ತದೆ. ಈ ಹಿಂದೆ ನಮ್ಮ ಕಾಂಗ್ರೆಸ್ ಸರ್ಕಾರವು ಕಾಡುಗೊಲ್ಲ ಸಮುದಾಯವನ್ನು ಪರಿಶಿಷ್ಟ ಪಂಗಡದ ಮೀಸಲಾತಿಗೆ ಸೇರಿಸುವಂತೆ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿತ್ತು. ಆದರೆ ರಾಜ್ಯದ ಜಾತಿ ಪಟ್ಟಿಯಲ್ಲಿ ಕಾಡುಗೊಲ್ಲ ಎಂದು ಇಲ್ಲದಿರುವುದರಿಂದ ಕಳೆದ ಐದು ವರ್ಷಗಳಿಂದ ಈ ಸಮುದಾಯವು ಜಾತಿ ಪಟ್ಟಿಯಲ್ಲಿ ಕಾಡುಗೊಲ್ಲ ಎಂದು ಸೇರಿಸಲು ಸತತ ಪ್ರಯತ್ನಗಳು ಮತ್ತು ಹೋರಾಟಗಳನ್ನು ಮಾಡುತ್ತಾ ಬಂದಿರುತ್ತದೆ.

Add Kadugolla Community To The Nomadic Or Semi-Nomadic List- Minister D.Sudhakar

ಆದ್ದರಿಂದ ಅಲೆಮಾರಿ/ ಅರೆ ಅಲೆಮಾರಿ ಪಟ್ಟಿಯಲ್ಲಿ ಕಾಡುಗೊಲ್ಲ ಅಥವಾ ಅಡವಿಗೊಲ್ಲ ಸಮುದಾಯವನ್ನು ಜಾತಿ ಪಟ್ಟಿಗೆ ಸೇರಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕೆಂದು ತಮ್ಮಲ್ಲಿ ಕೋರುತ್ತೇನೆ ಎಂದು ಸಚಿವ ಡಿ.ಸುಧಾಕರ್ ಅವರು ಹಿಂದುಳಿದ ವರ್ಗ, ಕನ್ನಡ ಮತ್ತು ಸಂಸ್ಕೃತಿ ಸಚಿವರಾಗಿರುವ ಶಿವರಾಜ್.ಎಸ್ ತಂಗಡಗಿ ಅವರಿಗೆ ಪತ್ರ ಬರೆದಿದ್ದಾರೆ.

ಇನ್ನು ಶಿರಾ ವಿಧಾನಸಭಾ ಕ್ಷೇತ್ರದ ಹಿರಿಯ ಕಾಂಗ್ರೆಸ್ ಶಾಸಕ ಟಿ.ಬಿ ಜಯಚಂದ್ರ ಸಹ ಕಾಡುಗೊಲ್ಲರನ್ನು ಅಲೆಮಾರಿ/ಅರೆ ಅಲೆಮಾರಿ ಪಟ್ಟಿಗೆ ಸೇರಿಸುವಂತೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವರಿಗೆ ಪತ್ರ ಬರೆದು ಮನವಿ ಮಾಡಿದ್ದಾರೆ.

ಈ ಜನಾಂಗವು ಯತ್ತಪ್ಪ, ಜುಂಜಪ್ಪ, ಕಾಟಯ್ಯ, ಕ್ಯಾತೇಲಿಂಗ, ಚಿತ್ರಲಿಂಗ, ವೀರಕರಿಯಣ್ಣ, ಕರಡಿ ಬುಳಪ್ಪರಂತಹ ದೇವರನ್ನು ಪೂಜಿಸುವ ಇವರು ಆರ್ಥಿಕವಾಗಿ, ಶೈಕ್ಷಣಿಕವಾಗಿ, ಸಾಮಾಜಿಕವಾಗಿ ಹಾಗೂ ರಾಜಕೀಯವಾಗಿ ಹಿಂದುಳಿದ ಸಮುದಾಯವಾಗಿದೆ. ಇವರು ಕುರಿ ಕಾಯುವುದು, ದನಗಳನ್ನು ಮೇಯಿಸುವುದು ಇವರ ಮೂಲ ಕುಲ ಕಸುಬಾಗಿದೆ.

ಈ ಸಮುದಾಯದಲ್ಲಿ ಶಿಕ್ಷಣದ ಕೊರತೆ ಉಂಟಾಗಿದ್ದು, ನಾಗರೀಕತೆಯಿಂದ ದೂರ ಉಳಿದಿದೆ. ಈ ಜನಾಂಗದ ಬಾಣಂತಿಯರು ಹಾಗೂ ಋತುಮತಿಯಾದ ಹೆಣ್ಣು ಮಕ್ಕಳನ್ನು ಮನೆಯಿಂದ ಅಥವಾ ಹಟ್ಟಿಯಿಂದ ಆಚೆಗೆ ಇರಿಸುವ ಪದ್ಧತಿ ಇನ್ನೂ ಜೀವಂತವಾಗಿದೆ. ಮದುವೆ ವಿಚಾರದಲ್ಲಿ ಸಾಕಷ್ಟು ಬದಲಾವಣೆಗಳಿವೆ.

ಕಾಡುಗೊಲ್ಲರು ಎಂಬ ಒಳ ಪಂಗಡದಲ್ಲಿ ಕಾಣುವ ಅಜ್ಜೇರುಗೊಲ್ರು ಎಂಬ ಬೆಡಗಿನವರು ಕೆಲವು ಭಾಗಗಳಲ್ಲಿ ಹುರುಳಿ, ನವಣೆಗಳನ್ನು ಮನೆಯ ಒಳಗಡೆ ಕೊಂಡೊಯ್ಯುವ ಪದ್ಧತಿ ಇಂದಿಗೂ ರೂಢಿಯಲ್ಲಿ ಇಟ್ಟುಕೊಂಡಿಲ್ಲ. ಹೀಗೆ ಅನೇಕ ಪದ್ದತಿಗಳಿದ್ದು, ಮೌಢ್ಯಸತೆಗೆ ಒಳಪಟ್ಟಿರುತ್ತಾರೆ. ರಾಜ್ಯದ ಅದೆಷ್ಟೋ ಗೊಲ್ಲರ ಹಟ್ಟಿಗಳು ಕಂದಾಯ ಗ್ರಾಮಗಳಾಗಿಲ್ಲ. ಊರಿನಿಂದ ಪ್ರತ್ಯೇಕವಾಗಿರುವ ಗೊಲ್ಲರಹಟ್ಟಿಗಳು ಮೂಲಭೂತ ಸೌಕರ್ಯಗಳ ಕೊರತೆಯಿಂದ ಬಳಲುತ್ತಿವೆ.

ಇಂತಹ ಸಮುದಾಯ ಪರಿಶಿಷ್ಟ ಪಂಗಡಕ್ಕೆ ಸೇರಿಸುವಂತೆ ಎಲ್.ಜಿ. ಹಾವನೂರು ಕಾಲದಿಂದಲೂ ಹೋರಾಟ ನಡೆಸಿಕೊಂಡು ಬರುತ್ತಿದ್ದಾರೆ. ರಾಜ್ಯದ 35 ವಿಧಾನಸಭಾ ಕ್ಷೇತ್ರದಲ್ಲಿ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಇವರು ವಿಧಾನಸಭೆಯಲ್ಲಿ ಹೇಳಿಕೊಳ್ಳಲು ಒಬ್ಬ ಶಾಸಕರು, ವಿಧಾನಪರಿಷತ್ ಸದಸ್ಯರು ಇಲ್ಲದಂತಾಗಿದೆ. ಹಿರಿಯೂರು ಕ್ಷೇತ್ರದ ಸಚಿವ ಡಿ.ಸುಧಾಕರ್, ಶಿರಾ ಶಾಸಕ ಟಿ.ಬಿ ಜಯಚಂದ್ರ, ಚಿನಾ ಹಳ್ಳಿ, ಸುರೇಶ್ ಬಾಬು, ಹೊಸದುರ್ಗ ಬಿ.ಜಿ ಗೋವಿಂದಪ್ಪ, ಮೊಳಕಾಲ್ಮೂರು ಎನ್.ವೈ ಗೋಪಾಲಕೃಷ್ಣ, ಅರಸೀಕೆರೆ ಶಿವಲಿಂಗೇಗೌಡ, ಮಾಗಡಿ ಬಾಲಕೃಷ್ಣ ಸೇರಿದಂತೆ ಇತರೆ ಶಾಸಕರು, ಸಚಿವರು ಈ ಬುಡಕಟ್ಟು ಸಣ್ಣ ಸಮುದಾಯಕ್ಕೆ ಬೆಂಬಲವಾಗಿ ನಿಂತಿದ್ದಾರೆ ಎನ್ನಬಹುದು.

English summary

Minister D.Sudhakar wrote letter to Social Welfare minister Shivraj S Tangadagi for Add Kadugolla Community to the nomadic or semi-nomadic list. Know more,

Story first published: Thursday, July 20, 2023, 17:43 [IST]

Source link