Hassan
lekhaka-Veeresha H G
ಹಾಸನ, ಜುಲೈ, 12: ಹಾಸನ ಜಿಲ್ಲೆಯಲ್ಲಿ ಗಜಗಲಾಟೆ ಮುಂದುವರೆದಿದೆ. ಕಾಡಾನೆಗಳ ದಾಳಿಯಿಂದ ಅಪಾರ ಪ್ರಮಾಣದ ಬೆಳೆ ನಾಶವಾಗಿದ್ದು, ಇದರಿಂದ ರೈತರು ಕಂಗಾಲಾಗಿದ್ದಾರೆ.
ಹಾಸನ ಜಿಲ್ಲೆ ಬೇಲೂರು ತಾಲೂಕಿನ ಅರೇಹಳ್ಳಿ ಹೋಬಳಿ ಸಿರಗುರ ಗ್ರಾಮದಲ್ಲಿ ಕಳೆದ ಮೂರು ದಿನಗಳಿಂದ ಕಾಫಿ ತೋಟಗಳಲ್ಲಿ 25ಕ್ಕೂ ಹೆಚ್ಚು ಕಾಡಾನೆಗಳ ಹಿಂಡು ಬೀಡು ಬಿಟ್ಟಿದೆ. ಅಲ್ಲದೆ ಕಾಫಿ ತೋಟದಲ್ಲೆಲ್ಲಾ ಓಡಾಡಿ ಬೆಳೆ ನಾಶ ಮಾಡಿವೆ. ಹತ್ತರಿಂದ ಹದಿನೈದು ಹೆಕ್ಟೇರ್ ಪ್ರದೇಶದಲ್ಲಿ ಬೆಳೆದಿದ್ದ ಕಾಫಿ, ಮೆಣಸು, ಅಡಿಕೆ ಬೆಳೆ ನಾಶವಾಗಿದೆ.
ಅಕ್ಷತಾ, ಸಂದೇಶ್, ಕಪಿಲ್, ಅಂಜನ್ ಹಾಗೂ ಇತರೇ ರೈತರಿಗೆ ಸೇರಿದ ಕಾಫಿ ತೋಟ ಹಾನಿಯಾಗಿದೆ. ಅಷ್ಟೇ ಅಲ್ಲದೆ ನೀರು ತುಂಬಿದ್ದ ಬ್ಯಾರಲ್‌ಗಳನ್ನು ಧ್ವಂಸ ಮಾಡಿವೆ. ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪಟಾಕಿ ಸಿಡಿಸಿದರೂ ಕಾಡಾನೆ ಪಡೆ ಕದಲಿಲ್ಲ. ಒಂದು ತೋಟದಿಂದ ಮತ್ತೊಂದು ಕಾಫಿ ತೋಟಕ್ಕೆ ಹೋಗಿ ಬೀಡುಬಿಡುತ್ತಿರುವ ಕಾಡಾನೆ ನಷ್ಟ ಮಾತ್ರವಲ್ಲದೆ ಆತಂಕ ಸೃಷ್ಟಿ ಮಾಡಿವೆ.
ಕಾಡಾನೆಗಳನ್ನು ಕಾಡಿಗಟ್ಟಲು ಹರಸಾಹಸ ಅರಣ್ಯ ಇಲಾಖೆ ಸಿಬ್ಬಂದಿ ಹರಸಾಹಸ ಪಡುತ್ತಿದ್ದರೆ, ಕೆಲ ಕಾಡಾನೆಗಳು ರಸ್ತೆಯಲ್ಲಿ ಬಂದು ನಿಲ್ಲುತ್ತಿವೆ. ಕಾಡಾನೆ ಕಾಟ ಹಾಗೂ ಜೀವ ಭಯದಿಂದ ಶಾಲಾ, ಕಾಲೇಜಿಗೆ ತೆರಳುವ ಮಕ್ಕಳನ್ನು ರೈತರು ಸಂಬಂಧಿಕರ ಮನೆಯಲ್ಲೇ ಬಿಟ್ಟಿದ್ದಾರೆ. ಕಾಡಾನೆ ದಾಂಧಲೆಯಿಂದ ಬೆಳೆ ಕಳೆದುಕೊಂಡು ಕಂಗಾಲಾಗಿರುವ ಕಾಫಿ ಬೆಳೆಗಾರರಿಗೆ ಸೂಕ್ತ ಪರಿಹಾರ ನೀಡಬೇಕು. ಹಾಗೂ ಕಾಡಾನೆಗಳನ್ನು ಸ್ಥಳಾಂತರ ಮಾಡಬೇಕು. ಇಲ್ಲವಾದಲ್ಲಿ ನಮಗೆ ವಿಷ ಕೊಡಿ ಎಂದು ದುಃಖ ವ್ಯಕ್ತಪಡಿಸಿದ್ದಾರೆ.
ವನ್ಯಜೀವಿ ಮಾನವ ಸಂಘರ್ಷ;ಕಂಟ್ರೋಲ್ ರೂಮ್ ಸ್ಥಾಪಿಸಿ ಹೈಕೋರ್ಟ್
ಆನೆ ದಾಳಿಗೆ ಬಲಿಯಾದ ವ್ಯಕ್ತಿ
ಮತ್ತೊಂದೆಡೆ ಕಾಡಾನೆ ದಾಳಿಯಿಂದ ವ್ಯಕ್ತಿಯೋರ್ವ ಮೃತಪಟ್ಟಿರುವ ಘಟನೆ ಹನೂರು ತಾಲೂಕಿನ ಪಿ.ಜಿ.ಪಾಳ್ಯ ಸಮೀಪದ ಆಲದಕೆರೆ ಕಾಡಿನಲ್ಲಿ ನಡೆದಿದೆ.
ಪಿ.ಜಿ.ಪಾಳ್ಯ ಸಮೀಪದ ಮಾಳಿಗನತ್ತ ಗ್ರಾಮದ ಪ್ರಭುಸ್ವಾಮಿ (55) ಮೃತ ದುರ್ದೈವಿ. ಮಲೆ ಮಹದೇಶ್ವರ ವನ್ಯಜೀವಿಧಾಮ ಪಿ.ಜಿ. ಪಾಳ್ಯ ಅರಣ್ಯ ವಲಯಕ್ಕೆ ಸೇರಿದ ಆಲದಕೆರೆ ಬಯಲು ಅರಣ್ಯ ಪ್ರದೇಶಕ್ಕೆ ಪ್ರಭುಸ್ವಾಮಿ ಹಾಗೂ ಮಗ ಚಂದ್ರು ಇಬ್ಬರೂ ಪೊರಕೆ ಕಡ್ಡಿ ಕೀಳಲು ತೆರಳಿದ್ದರು. ಅಪ್ಪ ಒಂದು ಭಾಗದಲ್ಲಿ ಮಗ ಒಂದು ಭಾಗದಲ್ಲಿ ಪೊರಕೆ ಕಡ್ಡಿ ಕೀಳುತ್ತಿದ್ದಾಗ ಆನೆ ದಾಳಿ ಮಾಡಿದೆ. ಈ ವೇಳೆ ಪ್ರಭುಸ್ವಾಮಿ ಸ್ಥಳದಲ್ಲೇ ಅಸುನೀಗಿದ್ದಾರೆ.
ಇನ್ನು ಬಚಾವಾದ ಮಗನಿಂದ ಆನೆ ದಾಳಿ ವಿಚಾರ ಬೆಳಕಿಗೆ ಬಂದಿದೆ. ಪ್ರಭುಸ್ವಾಮಿ ಅವರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಹನೂರು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ರವಾನಿಸಲಾಗಿದೆ. ಮಲೆಮಹದೇಶ್ವರ ವನ್ಯಜೀವಿ ಧಾಮ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
English summary
Elephant attack continues in Hassan district, Farmers outrage against Forest department