Karnataka
oi-Naveen Kumar N
ಬೆಂಗಳೂರು, ಜುಲೈ 4: ಕರ್ನಾಟಕದಲ್ಲಿ ಆಡಳಿತಾರೂಢ ಕಾಂಗ್ರೆಸ್ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿರುವ ಜೆಡಿಎಸ್ ನಾಯಕ ಎಚ್‌ಡಿ ಕುಮಾರಸ್ವಾಮಿ ಅವರಿಗೆ ಬಿಜೆಪಿ ಹಿರಿಯ ನಾಯಕ ಬಿಎಸ್ ಯಡಿಯೂರಪ್ಪ ಬೆಂಬಲ ವ್ಯಕ್ತಪಡಿಸಿದ್ದಾರೆ. ರಾಜ್ಯದ ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ವಿರುದ್ಧ ಎರಡೂ ಪಕ್ಷಗಳು ಒಗ್ಗಟ್ಟಾಗಿ ಹೋರಾಟ ನಡೆಸಲಿವೆ ಎಂದು ಹೇಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.
ಮಂಗಳವಾರ ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಚ್‌ಡಿ ಕುಮಾರಸ್ವಾಮಿ ಹೇಳಿದ್ದೆಲ್ಲ ಸತ್ಯ ಮತ್ತು ಅವರ ಹೇಳಿಕೆಯನ್ನು ನಾನು ಬೆಂಬಲಿಸುತ್ತೇನೆ. ಮುಂದಿನ ದಿನಗಳಲ್ಲಿ ಒಗ್ಗಟ್ಟಿನಿಂದ ಹೋರಾಟ ನಡೆಸುತ್ತೇವೆ ಎಂದು ಹೇಳಿದರು. ಮುಖ್ಯಮಂತ್ರಿಗಳ ಕಚೇರಿಯಲ್ಲಿ ಅಧಿಕಾರಿಗಳು 30 ಲಕ್ಷ ಲಂಚ ಕೇಳುತ್ತಿದ್ದಾರೆ ಎಂಬ ಕುಮಾರಸ್ವಾಮಿ ಆರೋಪವನ್ನು ಉಲ್ಲೇಖಿಸಿ ಮಾತನಾಡಿದರು. ರಾಜ್ಯ ರಸ್ತೆ ಸಾರಿಗೆ ನಿಗಮ ಮತ್ತು ಸಬ್ ರಿಜಿಸ್ಟ್ರಾರ್ ಕಚೇರಿಗಳಲ್ಲಿ ಸಿಂಡಿಕೇಟ್‌ಗಳಿವೆ ಎಂದು ಕುಮಾರಸ್ವಾಮಿ ಕಿಡಿಕಾರಿದ್ದರು.
ಬಿಎಸ್‌ವೈ ಅವರು ಕುಮಾರಸ್ವಾಮಿ ಅವರಿಗೆ ಬೆಂಬಲ ನೀಡಿರುವುದು ರಾಜಕೀಯ ವಲಯದಲ್ಲಿ ಚರ್ಚೆ ಹುಟ್ಟುಹಾಕಿದೆ. ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ಬಗ್ಗೆ ವದಂತಿಗಳು ಹರಿದಾಡುತ್ತಿದ್ದು, ಅದಕ್ಕೆ ಪೂರಕವಾಗಿ ಎರಡೂ ಪಕ್ಷಗಳ ನಾಯಕರು ಹೇಳಿಕೆ ನೀಡುತ್ತಿದ್ದಾರೆ.
ಏನಾದರೂ ಆಗಬಹುದು ಎಂದು ಬಿಜೆಪಿ-ಜೆಡಿಎಸ್ ಮೈತ್ರಿ ಬಗ್ಗೆ ಸುಳಿವು ನೀಡಿದ್ರಾ ಎಚ್‌ಡಿ ಕುಮಾರಸ್ವಾಮಿ ?
ಹೆಚ್.ಡಿ. ಕುಮಾರಸ್ವಾಮಿ ಹೇಳಿದ್ದೇನು?
ಯಡಿಯೂರಪ್ಪ ಹೇಳಿಕೆಗೆ ಪ್ರತಿಕ್ರಿಯಿಸಿದ ಕುಮಾರಸ್ವಾಮಿ, ಈ ವರ್ಷದ ಕೊನೆಯಲ್ಲಿ ಅಥವಾ ಸಂಸತ್ ಚುನಾವಣೆ ಸಂದರ್ಭದಲ್ಲಿ ಆಗಬಹುದು ಎಂದು ಹೇಳಿದರು. ಈ ಸರ್ಕಾರ ಹೆಚ್ಚು ದಿನ ಉಳಿಯುದಿಲ್ಲ. ಈ ವರ್ಷದ ಕೊನೆಯಲ್ಲಿ ಅಥವಾ ಸಂಸತ್ ಚುನಾವಣೆಯ ನಂತರ ಸಂಭವಿಸುತ್ತದೆ. ಅದಕ್ಕಾಗಿ ನಾವು ಕಾಯಬೇಕು, ನಾನು ಇಲ್ಲಿ ಯಾರ ಹೆಸರನ್ನೂ ಹೇಳುವುದಿಲ್ಲ.” ಎಂದು ಬಿಜೆಪಿ ಬಗೆಗಿನ ಹೊಂದಾಣಿಕೆಯ ಸಾಧ್ಯತೆ ಬಗ್ಗೆ ಮಾತನಾಡಿದರು.
ವಿಧಾನಸಭೆ ಚುನಾವಣೆಯಲ್ಲಿ ಹೀನಾಯ ಸೋಲು!
2023ರ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಕೆಟ್ಟ ಸೋಲು ಕಂಡಿದೆ. 2018ರ ವಿಧಾನಸಭಾ ಚುನಾವಣೆಯಲ್ಲಿ 37 ಸ್ಥಾನಗಳಲ್ಲಿ ಗೆಲುವು ಕಂಡಿದ್ದ ಜೆಡಿಎಸ್ ಈ ಬಾರಿ 19 ಸ್ಥಾನಗಳನ್ನು ಮಾತ್ರ ಗೆದ್ದಿದೆ.
2006ರಲ್ಲಿ ಜೆಡಿಎಸ್ ಮತ್ತು ಬಿಜೆಪಿ ಮೈತ್ರಿ ಮಾಡಿಕೊಂಡಿದ್ದವು. ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿ ಮತ್ತು ಯಡಿಯೂರಪ್ಪ ಉಪ ಮುಖ್ಯಮಂತ್ರಿಯಾಗಿ ಅಧಿಕಾರ ನಡೆಸಿದ್ದರು. 2007ರಲ್ಲಿ ಮೈತ್ರಿ ಸರ್ಕಾರ ಕುಸಿತವಾಗಿತ್ತು.
ಹೊಂದಾಣಿಕೆಗೆ ಸಿದ್ಧವಾಗುತ್ತಿದೆ ವೇದಿಕೆ
ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡ ಮೇ ತಿಂಗಳಲ್ಲಿ ನೂತನ ಸಂಸತ್ ಭವನ ಉದ್ಘಾಟನೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಬಿಜೆಪಿ ವಿರೋಧಿ ವಿರೋಧ ಪಕ್ಷದ ಮೈತ್ರಿಕೂಟದ ಸಭೆಗಳಿಗೂ ಜೆಡಿಎಸ್ ಗೈರಾಗಿದೆ. ಈ ಮಧ್ಯೆಯೇ ಬಿಜೆಪಿ-ಜೆಡಿಎಸ್ ಹೊಂದಾಣಿಕೆ ಬಗ್ಗೆ ಊಹಾಪೋಹ ಶುರುವಾಗಿದೆ.
English summary
BS Yediyurappa, senior BJP leader, supports JD(S) leader HD Kumaraswamy’s scathing criticism of the ruling Congress government in Karnataka, affirming that the two parties will join forces to oppose the Siddaramaiah-led government.
Story first published: Tuesday, July 4, 2023, 18:47 [IST]