Ramanagara
lekhaka-Ramesh Ramakirshna
ರಾಮನಗರ, ಜೂನ್ 28: ರಾಜ್ಯ ಸರ್ಕಾರದ ವಿರುದ್ಧ ವರ್ಗಾವಣೆ ದಂಧೆ ಆರೋಪದ ಬಗ್ಗೆ ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ ಪ್ರತಿಕ್ರಿಯಿಸಿದ್ದು, ಒಂದೇ ಹುದ್ದೆಗೆ ಮುಖ್ಯಮಂತ್ರಿ ಅವರೇ ನಾಲ್ಕರಿಂದ ಐದು ಬಾರಿ ಆದೇಶ ಮಾಡಿದ್ದಾರೆ. ಒಂದು ಹುದ್ದೆಗೆ ಐದು ವ್ಯಕ್ತಿಗಳು ನಿಯುಕ್ತಿಗೊಳಿಸಿದ್ದಾರೆ. ಕಾಂಗ್ರೆಸ್‌ನಲ್ಲಿ ವರ್ಗಾವಣೆ ದಂಧೆ ದೊಡ್ಡಮಟ್ಟದಲ್ಲಿ ನಡೆಯುತ್ತಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ.
ಚನ್ನಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‌ನಲ್ಲೂ ಈಗ ಪರ್ಸೆಂಟೇಜ್ ಶುರುವಾಗುತ್ತದೆ. ಅದರಲ್ಲಿ ಯಾವುದೇ ಅನುಮಾನ ಬೇಡ. ರೇಟ್ ಫಿಕ್ಸ್ ಮಾಡುವ ಸಲುವಾಗಿ ಎಲ್ಲಾ ಕೆಲಸ ನಿಲ್ಲಿಸಿದ್ದಾರೆ. ಕಳೆದ 4 ವರ್ಷದ ಬೆಂಗಳೂರು ಅಭಿವೃದ್ಧಿ ಬಗ್ಗೆ ತನಿಖೆ ಮಾಡುತ್ತೇವೆ ಎಂದು ಒಬ್ಬ ಮಂತ್ರಿ ಹೇಳುತ್ತಾರೆ. ಇದು ನಗೆಪಾಟಲಿನ ವಿಚಾರ ಎಂದರು.
ನಾಲ್ಕು ವರ್ಷದ ಅಭಿವೃದ್ಧಿ ಕಾರ್ಯಗಳ ತನಿಖೆ ಯಾವ ರೀತಿ, ಎಲ್ಲಿಂದ ಮಾಡಲು ಸಾಧ್ಯ. ಇವತ್ತು ಬೆಳಿಗ್ಗೆಯಾದರೆ ಯಾವ ಮಂತ್ರಿ ನೋಡಿದರೂ ತನಿಖೆ ಎನ್ನುತ್ತಿದ್ದಾರೆ. ಐದು ಗ್ಯಾರಂಟಿಗಳ ಜೊತೆಗೆ ತನಿಖಾ ಜ್ಯೋತಿ ಕೊಡಲು ಹೊರಟಿದ್ದಾರೆ. ಈ ಸರ್ಕಾರದ ಹೇಳಿಕೆ ನೋಡಿದರೆ ಇದು 6ನೇ ಗ್ಯಾರಂಟಿ. ಹಿಂದಿನ ಸರ್ಕಾರದ ತನಿಖಾ ಜ್ಯೋತಿ ಎಂದು ಸೇರಿಸಿಕೊಳ್ಳಿ. ಇವರ ಯಾವ ತನಿಖೆಗಳಿಗೂ ತಾರ್ಕಿಕ ಅಂತ್ಯ ಇಲ್ಲ ಎಂದು ಕಾಂಗ್ರೆಸ್ ವಿರುದ್ಧ ವ್ಯಂಗ್ಯವಾಡಿದ್ದಾರೆ.
ಕಾಂಗ್ರೆಸ್ ಸರ್ಕಾರದ 6ನೇ ಗ್ಯಾರಂಟಿ ಖಾತ್ರಿ; ಅದು; ʼಕಾಸಿಗಾಗಿ ಪೋಸ್ಟಿಂಗ್!!ʼ: ಹೆಚ್ ಡಿ ಕುಮಾರಸ್ವಾಮಿ
ಸರ್ಕಾರದ ವೈಫಲ್ಯ ಮುಚ್ಚಿಕೊಳ್ಳಲು ಹೊಸ ಹೊಸ ಹೇಳಿಕೆ ಕೊಡುತ್ತಿದ್ದಾರೆ. ರಾಜ್ಯದಲ್ಲಿ ಪರಿಶುದ್ಧ ಆಡಳಿತ ತರುತ್ತೇವೆ ಎನ್ನುವುದು ಇವರ ಭ್ರಮೆ. ಕಾಂಗ್ರೆಸ್ ಹಾಗೂ ಬಿಜೆಪಿ ಒಂದೇ ನಾಣ್ಯದ ಎರಡು ಮುಖಗಳು. ಹಿಂದೆ ಸ್ವಾತಂತ್ರ್ಯ ಪೂರ್ವದ ರಾಜ ಮಹಾರಾಜರ ಕಾಲದಲ್ಲಿ ಗುಲಾಮಗಿರಿ ಇತ್ತು. ಮೊಘಲರು ಬಂದಾಗ ಒಂದು ರೀತಿಯ ಗುಲಾಮಗಿರಿ ಇತ್ತು. ಈಸ್ಟ್ ಇಂಡಿಯಾ ಕಂಪನಿಯವರು ವ್ಯಾಪಾರ ಮಾಡಲು ಬಂದು ದೇಶ ಲೂಟಿ ಮಾಡಿ ಹೋದರು. ಈಗಿನ ರಾಷ್ಟ್ರೀಯ ಪಕ್ಷಗಳು ಕೂಡಾ ಒಂದು ರೀತಿಯ ಈಸ್ಟ್ ಇಂಡಿಯಾ ಕಂಪನಿ ಎಂದು ಬಿಜೆಪಿ ಹಾಗೂ ಕಾಂಗ್ರೆಸ್ ವಿರುದ್ಧ ಕಿಡಿಕಾರಿದರು.
ರಾಜ್ಯದಲ್ಲಿ ಬೆಲೆ ಏರಿಕೆ ಅಬ್ಬರದ ಬಗ್ಗೆ ಮಾತನಾಡಿದ ಕುಮಾರಸ್ವಾಮಿ,ಇದನ್ನು ಕೇಂದ್ರ ಸರ್ಕಾರ ಮಾಡಿರೋದಂತಲ್ಲ. ರಾಜ್ಯದವರು ಈಗ ಕೇಂದ್ರದ ಕಡೆಗೆ ಕೈ ತೋರಿಸುತ್ತಿದ್ದಾರೆ. ಅವರನ್ನು ಹೊಣೆ ಮಾಡಿದರೆ ಇವರು ಇರುವುದೇಕೆ. ಚುನಾವಣೆ ಪೂರ್ವದಲ್ಲಿ ಇಬ್ಬರೂ ಕೂಡ ಫೋಟೋ ಹಾಕಿ ಜಾಹಿರಾತಿ ಕೊಟ್ಟಿದ್ದರಲ್ಲ. ಬೆಲೆ ಏರಿಕೆ ಇಳಿಸುತ್ತೇವೆ ಎಂದು ತಾನೆ ಓಟ್ ಕೇಳಿದರು. ಈಗ ಕೇಂದ್ರದ ಕಡೆ ಕೈ ತೋರಿಸಿದರೆ. ಹಾಗಿದ್ದರೆ ರಾಜ್ಯ ಸರ್ಕಾರದ ಪಾತ್ರ ಏನೂ ಇಲ್ಲವೇ ಎಂದು ಪ್ರಶ್ನಿಸಿದ್ದಾರೆ.
ಶೀಘ್ರದಲ್ಲೇ ಮತ್ತೆ ಚುನಾವಣೆ ಎಂಬ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಕುಮಾರಸ್ವಾಮಿ, ಮರು ಚುನಾವಣೆಯಾಗಲಿ ಅಂತ ನಾನೇನು ಬಯಸಲ್ಲ. ಚುನಾವಣೆ ಐದು ವರ್ಷಕ್ಕೆ ಬರುತ್ತದೆ. ಯಾವಾಗ ಬರುತ್ತೋ ಕಾದುನೋಡೊಣ. ಯಾರೋ ಒಬ್ಬ ಮಂತ್ರಿ ನಾನು ಬುಲ್ಡೋಜರ್ ತರ ನುಗ್ತಿದೆ. ಯಾರಿಗೂ ಕೇರ್ ಮಾಡದೇ ಸ್ಟೀಲ್ ಬ್ರಿಡ್ಜ್ ಕಟ್ತಿದ್ದೆ ಅಂತಾರೆ. ಜನಾಭಿಪ್ರಾಯದ ವಿರುದ್ಧ ತೀರ್ಮಾನ ತೆಗೆದುಕೊಳ್ತೀನಿ ಅಂತಾರೆ. ಅವರನ್ನು ನಾನು ಕೇಳ್ತೀನಿ, ರಾಜ್ಯಕ್ಕೆ ಬೊಲ್ಡೋಜರ್ ಸಂಸ್ಕೃತಿಯ ಅಗತ್ಯವಿಲ್ಲ. ಮುಂದೆ ನಿಮ್ಮ ಕಥೆ ಏನಾಗುತ್ತೋ ಕಾದು ನೋಡೊಣ ಬನ್ನಿ ಎಂದು ಪರೋಕ್ಷವಾಗಿ ಡಿಸಿಎಂ ಡಿ.ಕೆ ಶಿವಕುಮಾರ್ ವಿರುದ್ಧ ವಾಗ್ದಾಳಿ ನಡೆಸಿದರು.
ಲೋಕಸಭೆ ಚುನಾವಣೆಗೆ ಹೊಂದಾಣಿಕೆ ರಾಜಕೀಯದ ಬಗ್ಗೆ ಮಾತನಾಡಿದ ಅವರು, ಸದಾನಂದಗೌಡರು ಕಾಂಗ್ರೆಸ್-ಜೆಡಿಎಸ್ ಹೊಂದಾಣಿಕೆ ಅಂತಾರೆ. ನನಗೆ ಗೊತ್ತಿಲ್ಲ, ಯಾರ್ಯಾರು ಎಲ್ಲೆಲ್ಲಿ ಹೊಂದಾಣಿಕೆ ಮಾಡಿಕೊಳುತ್ತಾರೋ ಕಾದು ನೋಡೊಣ. ಸಮಯ ಬಂದಾಗ ಏನಾಗುತ್ತೋ ಗೊತ್ತಿಲ್ಲ. ಯೋಗೇಶ್ವರ್ ದೆಹಲಿಯಲ್ಲಿ ಒಳ್ಳೆಯ ಸಂಪರ್ಕ ಹೊಂದಿರಬಹುದು. ಮೊನ್ನೆ ಏನೋ ದೆಹಲಿಗೆ ಹೋಗಿ ಬಂದಿದ್ದಾರೆ. ಅಲ್ಲಿಂದ ಬಂದು ಹೇಳಿಕೆ ಕೊಟ್ಟಿರೋದನ್ನು ನೋಡಿದ್ದೇನೆ. ಅಲ್ಲಿ ಏನು ಮಾತುಕತೆ ಆಗಿದ್ಯೋ ಗೊತ್ತಿಲ್ಲ. ನಮ್ಮ ಜೊತೆ ಯಾವುದೇ ಚರ್ಚೆ ಆಗಿಲ್ಲ ಎಂದು ಸ್ಪಷ್ಟಪಡಿಸಿದರು.
English summary
Percentage starts in Congress also No doubt about it says Former CM HD Kumaraswamy Know More
Story first published: Wednesday, June 28, 2023, 15:46 [IST]