ಕಲ್ಲುಗಣಿಗಾರಿಕೆಗೆ ಸ್ಫೋಟಕ ಬಳಸಿದ ಆರೋಪ: ಬಿಜೆಪಿ ಶಾಸಕ ಮುನಿರತ್ನ ವಿರುದ್ಧ ಎಫ್‌ಐಆರ್ | Allegation of using explosives for quarrying: FIR filed against BJP MLA Munirathna

Karnataka

oi-Punith BU

|

Google Oneindia Kannada News

ಬೆಂಗಳೂರು, ಜುಲೈ 13: ಹುಣಸಮಾರನಹಳ್ಳಿಯ ಕ್ವಾರಿಯಲ್ಲಿ ಕಲ್ಲು ಗಣಿಗಾರಿಕೆ ನಡೆಸಲು ಸ್ಫೋಟ ನಡೆಸಿದ ಆರೋಪದ ಮೇಲೆ ಕರ್ನಾಟಕದ ಮಾಜಿ ಸಚಿವ ಹಾಗೂ ಬಿಜೆಪಿ ಶಾಸಕ ಮುನಿರತ್ನ ಸೇರಿ ಇತರ ಮೂವರ ವಿರುದ್ಧ ಸ್ಫೋಟಕ ಕಾಯ್ದೆ ಮತ್ತು ಕರ್ನಾಟಕ ಭೂ ಕಂದಾಯ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.

ಯಲಹಂಕ ತಹಸೀಲ್ದಾರ್ ಅನಿಲ್ ಅರೋಲಿಕರ್ ನೀಡಿದ ದೂರಿನ ಮೇರೆಗೆ ಚಿಕ್ಕಜಾಲ ಪೊಲೀಸರು ಮುನಿರತ್ನ, ಆನಂದನ್, ಗಣೇಶ್ ವಿ ಮತ್ತು ರಾಧಮ್ಮ ಎಂಬುವವರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಅಕ್ರಮ ಗಣಿಗಾರಿಕೆ ಚಟುವಟಿಕೆಗಳನ್ನು ನಿಲ್ಲಿಸುವಂತೆ ಜೈ ಭೀಮ್ ಸೇನೆಯು ತಹಸೀಲ್ದಾರ್‌ಗೆ ಮನವಿ ಮಾಡಿದೆ ಎಂದು ಎಫ್‌ಐಆರ್ ಹೇಳಿದೆ. ಕಲ್ಲು ಗಣಿಗಾರಿಕೆಗೆ ಸಿಡಿಮದ್ದು ಬಳಸುವುದನ್ನು ವಿರೋಧಿಸಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದರು.

Allegation of using explosives

ಈಗ ಅವರು ನೀಡಿರುವ ದೂರಿನ ಮೇರೆಗೆ ಕ್ಷೇತ್ರ ಸಮೀಕ್ಷೆ ನಡೆಸಿದ್ದು, ಕಲ್ಲುಗಣಿಗಾರಿಕೆಗೆ ಸ್ಫೋಟಕ ಬಳಸಿರುವುದು ಪತ್ತೆಯಾಗಿದೆ. ಎಫ್‌ಐಆರ್‌ನಲ್ಲಿ ಈ ಚಟುವಟಿಕೆಗಳು ಆ ಪ್ರದೇಶದಲ್ಲಿ ಭೂಮಿಗೆ ಹಾನಿ ಮಾಡುತ್ತಿವೆ. ಕಲ್ಲುಗಳ ಮಾರಾಟದಿಂದ ರಾಜ್ಯ ಸರ್ಕಾರಕ್ಕೂ ನಷ್ಟವಾಗುತ್ತಿದೆ. ಕ್ವಾರಿ ಗಣಿಗಾರಿಕೆ ನಡೆಸುವವರು ಸಕ್ಷಮ ಪ್ರಾಧಿಕಾರದಿಂದ ಯಾವುದೇ ಅನುಮತಿ ಪಡೆದಿಲ್ಲ ಎಂದು ತನಿಖೆಯಿಂದ ತಿಳಿದುಬಂದಿದೆ ಎಂದು ಎಫ್‌ಐಆರ್ ತಿಳಿಸಿದೆ.

ಹುಣಸಮಾರನಹಳ್ಳಿ ಗ್ರಾಮಸ್ಥರು ಗಣಿಗಾರಿಕೆ ವಿರುದ್ಧ ಧರಣಿ ನಡೆಸಿದ್ದರು. ಧರಣಿ ಹಿನ್ನೆಲೆ ಸ್ಥಳ ಪರಿಶೀಲನೆ ನಡೆಸಿದ್ದ ತಹಶೀಲ್ದಾರ್ ಅವರು ದೂರು ದಾಖಲು ಮಾಡಿದ್ದರು. ಹುಣಸಮಾರನಹಳ್ಳಿ ಸರ್ವೆ ನಂಬರ್ 177/3, 178/1.2.3 ಹಾಗೂ ಸೊಣಪ್ಪನಹಳ್ಳಿ ಸರ್ವೆ ನಂ. 34/1 2 3, 17/7 8,9ರಲ್ಲಿ ಗಣಿಗಾರಿಕೆ ಮಾಡಲಾಗಿದ್ದು, ಆರೋಪಿಗಳಾದ ಆನಂದನ್, ಗಣೇಶ್, ರಾಧಮ್ಮ, ಶಾಸಕ ಮುನಿರತ್ನ ವಿರುದ್ಧ ಸ್ಫೋಟಕ ಕಾಯ್ದೆ 1884 US 9B(1b) , ಕರ್ನಾಟಕ ಭೂ ಕಂದಾಯ ಕಾಯ್ದೆ 1964ರಡಿ ಕೇಸ್ ದಾಖಲಾಗಿದೆ.

ನನ್ನ ಕ್ಷೇತ್ರದ ಅಧಿಕಾರಿಗಳ ಅಮಾನತು ಮಾಡುವ ಮೂಲಕ ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ ಎಂದು ನಿನ್ನೆಯಷ್ಟೆ ಡಿಸಿಎಂ ವಿರುದ್ಧ ಸದನದಲ್ಲಿ ಮುನಿರತ್ನ ಆರೋಪಿಸಿದ್ದರು. ಇದರ ಬೆನ್ನಲ್ಲೇ ಈಗ ಶಾಸಕರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ.

ಇನ್ನು ಈ ಬಗ್ಗೆ ಮುನಿರತ್ನ, ಅದು ಸರ್ಕಾರಿ ಜಾಗ ಅಲ್ಲ. ತಮ್ಮ ಜಾಗ, ತಾವು 25 ವರ್ಷದ ಹಿಂದೆ ಖರೀದಿಸಿದ ಸ್ಥಳದಲ್ಲಿ ಕಟ್ಟಡ ಕಟ್ಟಲು ತಳಪಾಯ ತೆಗೆಯಲಾಗುತ್ತಿದೆ. ತಮ್ಮ ಜಾಗದಲ್ಲಿ ಕಟ್ಟಡ ಕಟ್ಟುವುದು ತಪ್ಪಾ? ಪಾಯವನ್ನು ಅಗೆಯುವಾಗ ಕಲ್ಲುಗಳು ಬಂದಿದ್ದು, ಅದನ್ನ ತೆಗೆಯಲು ಒಂದು ಏಜೆನ್ಸಿಗೆ ಕೊಟ್ಟಿದ್ದೇನೆ ಎಂದು ತಿಳಿಸಿದ್ದಾರೆ.

English summary

A case has been registered under the Explosives Act and the Karnataka Land Revenue Act against Ex-Minister and BJP MLA munirathna along with three others for allegedly setting off blasts for stone mining in a quarry in Hunasamaranahalli.

Story first published: Thursday, July 13, 2023, 17:12 [IST]

Source link