ಕರ್ನಾಟಕ ಮಳೆ: ಜೂನ್ 1 ರಿಂದ ರಾಜ್ಯದಲ್ಲಿ ಮಳೆ ಸಂಬಂಧಿತ ಘಟನೆಗಳಲ್ಲಿ 38 ಮಂದಿ ಸಾವು | Karnataka rain: 38 dead since June 1 in rain related incidents

Karnataka

oi-Mamatha M

|

Google Oneindia Kannada News

ಬೆಂಗಳೂರು, ಜುಲೈ. 27: ಧಾರಾಕಾರ ಮಳೆ ಮತ್ತು ಪ್ರವಾಹದಿಂದಾಗಿ ಇದುವರೆಗೆ 38 ಜನರು ಸಾವನ್ನಪ್ಪಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಈಗಲೂ ರಾಜ್ಯದ ಹಲವು ಭಾಗಗಳಲ್ಲಿ ಮಳೆ ಮುಂದುವರಿದಿದ್ದು, ಸಾಮಾನ್ಯ ಜನರ ಜೀವನ ಅಸ್ತವ್ಯಸ್ತವಾಗಿದೆ. ಕೊಡಗು, ಮಡಿಕೇರಿ ಸೇರಿದಂತೆ ಹಲವು ಭಾಗಗಳಲ್ಲಿ ಮಳೆಹಾನಿ ಹೆಚ್ಚಾಗಿದೆ.

ರಾಜ್ಯದಲ್ಲಿನ ಮಳೆ ಮತ್ತು ಪ್ರವಾಹ ಪರಿಸ್ಥಿತಿಯನ್ನು ಪರಿಶೀಲಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ತಕ್ಷಣದ ಪರಿಹಾರ ಮತ್ತು ರಕ್ಷಣಾ ಕಾರ್ಯಗಳನ್ನು ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಪ್ರಾಣಹಾನಿಯನ್ನು ತಡೆಗಟ್ಟುವ ಉದ್ದೇಶದಿಂದ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಂತೆ ಆದೇಶಿಸಿದ್ದಾರೆ. ಮುಂಗಾರು ಮಳೆಗೆ ಜೂನ್ 1 ರಿಂದ ಇಲ್ಲಿಯವರೆಗೆ ಮೂವತ್ತೆಂಟು ಜನರು ಸಾವನ್ನಪ್ಪಿದ್ದಾರೆ ಮತ್ತು 35 ಮಂದಿ ಗಾಯಗೊಂಡಿದ್ದಾರೆ. 57 ಮನೆಗಳು ಸಂಪೂರ್ಣ ಹಾನಿ, 208 ತೀವ್ರ ಹಾನಿ ಮತ್ತು 2,682 ಮನೆಗಳು ಭಾಗಶಃ ಹಾನಿಗೊಳಗಾಗಿವೆ ಮತ್ತು 105 ಜಾನುವಾರುಗಳು ಪ್ರಾಣ ಕಳೆದುಕೊಂಡಿವೆ ಎಂದಿದ್ದಾರೆ.

karnataka-rain-38-dead

ರಾಜ್ಯದ ಹವಾಮಾನ ಮತ್ತು ಬೆಳೆ ಸ್ಥಿತಿಯನ್ನು ನಿರ್ಣಯಿಸಲು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಎಲ್ಲಾ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪಂಚಾಯತ್ ಸಿಇಒಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಿದ್ದರಾಮಯ್ಯ, 185 ಹೆಕ್ಟೇರ್ ಪ್ರದೇಶದಲ್ಲಿ ಕೃಷಿ ಬೆಳೆಗಳು ಮತ್ತು 356 ಹೆಕ್ಟೇರ್ ತೋಟಗಾರಿಕೆ ಬೆಳೆಗಳು ಹಾನಿಗೊಳಗಾಗಿವೆ. ಒಟ್ಟಾರೆಯಾಗಿ, ಮಳೆ ಮತ್ತು ಪ್ರವಾಹದಿಂದಾಗಿ 541 ಹೆಕ್ಟೇರ್ ಬೆಳೆ ಹಾನಿಯಾಗಿದೆ ಎಂದು ತಿಳಿಸಿದ್ದಾರೆ.

ಒಟ್ಟು 11,995 ವಿದ್ಯುತ್ ಕಂಬಗಳು, 894 ಟ್ರಾನ್ಸ್‌ಫಾರ್ಮರ್‌ಗಳು ಮತ್ತು 215 ಕಿಲೋಮೀಟರ್ ವಿದ್ಯುತ್ ಲೈನ್ ಹಾನಿಯಾಗಿದೆ. ಸೇತುವೆಗಳು, ತರಗತಿ ಕೊಠಡಿಗಳು, ಪ್ರಾಥಮಿಕ ಆರೋಗ್ಯ ಕೇಂದ್ರಗಳು ಸೇರಿದಂತೆ ರಾಜ್ಯದಲ್ಲಿ ಉಂಟಾದ ವಿನಾಶದ ವಿವರಗಳನ್ನು ಪಟ್ಟಿ ಮಾಡಿದ್ದಾರೆ. ಜೊತೆಗೆ “ಸರ್ಕಾರದಿಂದ ಎರಡು ಪರಿಹಾರ ಶಿಬಿರಗಳನ್ನು ಸ್ಥಾಪಿಸಲಾಗಿದೆ, ಅಲ್ಲಿ ಸುಮಾರು 50 ಜನರು ಆಶ್ರಯ ಪಡೆದಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

ಮುಖ್ಯಮಂತ್ರಿಗಳ ಪ್ರಕಾರ, ಜೂನ್‌ನಲ್ಲಿ ಶೇ.56 ರಷ್ಟು ಕೊರತೆ ಮಳೆಯಾಗಿದ್ದು, ಬಿತ್ತನೆ ಸೇರಿದಂತೆ ಕೃಷಿ ಚಟುವಟಿಕೆಗಳಿಗೆ ಅಡಚಣೆಯಾಗಿದೆ. ಆದರೆ ಜುಲೈನಲ್ಲಿ ರಾಜ್ಯದಲ್ಲಿ ಇದುವರೆಗೆ 313 ಮಿಮೀ ಮಳೆಯಾಗಿದೆ. ಇದು ವಾಡಿಕೆಗಿಂತ 37 ರಷ್ಟು ಹೆಚ್ಚು. ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಕೊಡಗು, ಬೀದರ್ ನಲ್ಲಿ ಹೆಚ್ಚಿನ ಮಳೆಯಾಗಿದ್ದು, 21 ಜಿಲ್ಲೆಗಳಲ್ಲಿ ವಾಡಿಕೆ ಮಳೆಯಾಗಿದ್ದು, ಆರು ಜಿಲ್ಲೆಗಳಲ್ಲಿ ಕಡಿಮೆಯಾಗಿದೆ. ಜೂನ್ ಮತ್ತು ಜುಲೈನಲ್ಲಿ ಶೇ.80ಕ್ಕೂ ಹೆಚ್ಚು ಬಿತ್ತನೆಯಾಗಿದೆ ಎಂದು ತಿಳಿಸಿದ್ದಾರೆ.

karnataka-rain-38-dead

ಹವಾಮಾನ ಇಲಾಖೆ ಮುನ್ಸೂಚನೆಯ ಪ್ರಕಾರ ರಾಜ್ಯದಲ್ಲಿ ಇನ್ನೆರಡು ದಿನದಲ್ಲಿ ಹೆಚ್ಚಿನ ಮಳೆಯಾಗಲಿದ್ದು, ಒಂದು ವಾರದವರೆಗೆ ಮಳೆ ಮುಂದುವರಿಯಬಹುದು. ಕಾವೇರಿ ಮತ್ತು ಕೃಷ್ಣಾ ಜಲಾನಯನ ಪ್ರದೇಶದಲ್ಲಿ ಎಲ್ಲ ಜಲಾಶಯಗಳು ಶೇ.60 ರಿಂದ 70ರಷ್ಟು ಭರ್ತಿಯಾಗಿದ್ದು, ವಾರದಲ್ಲಿ 227 ಟಿಎಂಸಿ ನೀರು ಜಲಾಶಯಗಳಿಗೆ ಹರಿದು ಬಂದಿದೆ ಎಂದು ಮಾಹಿತಿ ನೀಡಿದ್ದಾರೆ.

ಮಳೆ ಸಂಬಂಧಿತ ಘಟನೆಗಳಲ್ಲಿ ಮೃತಪಟ್ಟವರ ಕುಟುಂಬಕ್ಕೆ ತಲಾ 5 ಲಕ್ಷ ರೂಪಾಯಿ ಪರಿಹಾರ ನೀಡಲಾಗಿದೆ ಎಂದು ತಿಳಿಸಿದ ಸಿದ್ದರಾಮಯ್ಯ, ಜಾನುವಾರುಗಳ ನಷ್ಟ, ಹಾನಿಗೊಳಗಾದ ಮನೆಗಳ ಬಗ್ಗೆ ಅಂದಾಜು ಮಾಡಿ ಪರಿಹಾರ ನೀಡಲು ಸೂಚನೆ ನೀಡಿದ್ದು, ಸೇತುವೆಗಳು ಮುಳುಗಿರುವ ಸ್ಥಳಗಳಲ್ಲಿ ಸಂಪರ್ಕವನ್ನು ಖಚಿತಪಡಿಸಿಕೊಳ್ಳಲು ಪರ್ಯಾಯ ರಸ್ತೆಗಳನ್ನು ಒದಗಿಸುವಂತೆ ನಿರ್ದೇಶನ ನೀಡಲಾಗಿದೆ ಎಂದಿದ್ದಾರೆ.

ಎಲ್ಲಕ್ಕಿಂತ ಮುಖ್ಯವಾಗಿ ಪ್ರಾಣಹಾನಿ ತಡೆಯುವ ಉದ್ದೇಶದಿಂದ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ಸೂಚನೆ ನೀಡಲಾಗಿದೆ. ಅಣೆಕಟ್ಟುಗಳಿಂದ ನೀರು ಬಿಡುವುದರಿಂದ ಆಗುವ ಹಾನಿಯನ್ನು ತಪ್ಪಿಸಲು ಗಡಿ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ಇತರ ರಾಜ್ಯಗಳ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಲು ತಿಳಿಸಲಾಗಿದೆ. ಬೀಜ, ರಸಗೊಬ್ಬರ ಮತ್ತು ಕೀಟನಾಶಕಗಳ ಕೊರತೆಯಾಗದಂತೆ ನೋಡಿಕೊಳ್ಳಲು ಅಧಿಕಾರಿಗಳಿಗೆ ತಿಳಿಸಲಾಗಿದೆ. ಮಳೆಯಿಂದಾಗಿ ಅಥವಾ ಮಳೆ ಕೊರತೆಯಿಂದ ಬೆಳೆ ಹಾನಿಯಾದಲ್ಲಿ ರೈತರಿಗೆ ಮತ್ತೊಮ್ಮೆ ಬೀಜ ಮತ್ತು ರಸಗೊಬ್ಬರಗಳನ್ನು ನೀಡಬೇಕು ಎಂದು ಹೇಳಿದ್ದಾರೆ.

ಮಳೆಯಿಂದ ಸಂಭವಿಸುವ ಸಾವು ತಡೆಗಟ್ಟಲು ಹೆಚ್ಚಿನ ಕ್ರಮವಹಿಸಿ: ಜಿಲ್ಲಾಧಿಕಾರಿಗಳಿಗೆ ಸಿಎಂ ಸೂಚನೆಮಳೆಯಿಂದ ಸಂಭವಿಸುವ ಸಾವು ತಡೆಗಟ್ಟಲು ಹೆಚ್ಚಿನ ಕ್ರಮವಹಿಸಿ: ಜಿಲ್ಲಾಧಿಕಾರಿಗಳಿಗೆ ಸಿಎಂ ಸೂಚನೆ

ಪ್ರವಾಹ ಪರಿಸ್ಥಿತಿಯ ಸಂದರ್ಭದಲ್ಲಿ ರೈತರಿಂದ ಬಲವಂತವಾಗಿ ಸಾಲ ಮರುಪಾವತಿಗೆ ಮುಂದಾಗದಂತೆ ಸೂಚನೆ ನೀಡಲಾಗಿದೆ. ಖಾಸಗಿ ಲೇವಾದೇವಿಗಾರರು ಅಧಿಕ ಬಡ್ಡಿ ಪಡೆಯಲು ಮುಂದಾದರೆ ಅಂತಹವರ ವಿರುದ್ಧ ಪೊಲೀಸರು ಕಠಿಣ ಕ್ರಮ ಕೈಗೊಳ್ಳಬೇಕು. ಎಲ್ಲ ಇಲಾಖೆಗಳ ನಡುವೆ ಸೂಕ್ತ ಸಮನ್ವಯತೆ ಇರಬೇಕು, ಅದರಲ್ಲೂ ಮಳೆ ಕೊರತೆ ಇರುವ ಕಡೆ ಕುಡಿಯುವ ನೀರಿನ ಸಮಸ್ಯೆಯಾಗದಂತೆ ನೋಡಿಕೊಳ್ಳಬೇಕು ಎಂದು ಸೂಚಿಸಿದ್ದಾರೆ.

“ಎಲ್ಲಾ ಜಿಲ್ಲೆಗಳ ಎಲ್ಲಾ ಜಿಲ್ಲಾಧಿಕಾರಿಗಳ ಖಾತೆಯಲ್ಲಿ ಸಾಕಷ್ಟು ಹಣವಿದೆ. ಸುಮಾರು 15-20 ಕೋಟಿ ರೂ ಇದೆ. ಕೊರತೆಯಿದ್ದರೆ ಹೆಚ್ಚಿನ ಹಣವನ್ನು ಒದಗಿಸಲಾಗುವುದು. ಸೋಮವಾರದಿಂದ ಮಂಗಳೂರು, ಉಡುಪಿ, ಉತ್ತರ ಕನ್ನಡ, ಕೊಡಗು, ಚಿಕ್ಕಮಗಳೂರು ಮುಂತಾದ ಮಳೆ ಪೀಡಿತ ಪ್ರದೇಶಗಳಿಗೆ ಪ್ರವಾಸ ಕೈಗೊಳ್ಳುವ ಸಾಧ್ಯತೆ ಇದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

English summary

Karnataka rain: Chief Minister Siddaramaiah said 38 people have lost their lives since June 1 so far due to torrential rains and floods in parts of karnataka. know more.

Story first published: Thursday, July 27, 2023, 23:04 [IST]

Source link