ಕನಕ ಮಾರ್ಗ ಕನ್ನಡ ಸಿನಿಮಾಕ್ಕೆ ತೆರಿಗೆ ವಿನಾಯಿತಿ ನೀಡಿದ ಸರ್ಕಾರ | Tax Examination For The Kannada Movie Kanaka Marga

Karnataka

oi-Gururaj S

|

Google Oneindia Kannada News

ಬೆಂಗಳೂರು, ಜೂನ್ 23: ಕರ್ನಾಟಕ ಸರ್ಕಾರ ‘ಕನಕಮಾರ್ಗ’ ಶೀರ್ಷಿಕೆಯ ಕನ್ನಡ ಮಕ್ಕಳ ಚಲನಚಿತ್ರಕ್ಕೆ ತೆರಿಗೆ ವಿನಾಯಿತಿ ಘೋಷಣೆ ಮಾಡಿದೆ. ‘ಕನಕ ಹೆಜ್ಜೆ’ ಕಾದಂಬರಿ ಆಧಾರಿತ ಚಿತ್ರ ಇದಾಗಿದ್ದು, ಕಾಗಿನೆಲೆ ಗುರುಪೀಠದ ಶ್ರೀ ನಿರಂಜನಾನಂದಪುರಿ ಸ್ವಾಮೀಜಿ ಈ ಚಿತ್ರದಲ್ಲಿ ನಟಿಸಿದ್ದಾರೆ.

ಸರ್ಕಾರ ವಿಶೇಷ ರಾಜ್ಯಪತ್ರದಲ್ಲಿ ಚಿತ್ರಕ್ಕೆ ರಾಜ್ಯ ಸರಕು ಮತ್ತು ಸೇವಾ ತೆರಿಗೆ (ಎಸ್‌ಜಿಎಸ್‌ಟಿ) ತೆರಿಗೆ ವಿನಾಯಿತಿ ನೀಡುವ ಕುರಿತು ಆದೇಶ ಹೊರಡಿಸಲಾಗಿದೆ. ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ ಕವಿತ ಎಲ್. ಸರ್ಕಾರದ ಅಧೀನ ಕಾರ್ಯದರ್ಶಿ, ಆರ್ಥಿಕ ಇಲಾಖೆ (ವಾ. ತೆ-1) ಈ ಆದೇಶ ಹೊರಡಿಸಿದ್ದಾರೆ.

Tax Examination For The Kannada Movie Kanaka Marga

ಈ ವಿಶೇಷ ರಾಜ್ಯಪತ್ರವು ‘ಕನಕಮಾರ್ಗ’ ಶೀರ್ಷಿಕೆಯ ಕನ್ನಡ ಮಕ್ಕಳ ಚಲನಚಿತ್ರ ಪ್ರದರ್ಶನಕ್ಕೆ ರಾಜ್ಯ ಸರಕು ಮತ್ತು ಸೇವಾ ತೆರಿಗೆ (ಎಸ್‌ಜಿಎಸ್‌ಟಿ) ಮೊತ್ತವನ್ನು ಹಿಂಪಾವತಿ ನೀಡುವ ಕುರಿತು ಎಂಬ ವಿಷಯವನ್ನು ಒಳಗೊಂಡಿದೆ. ವಿಶಾಲ್ ರಾಜ್ ನಿರ್ದೇಶನದ ಚಿತ್ರ ಇದಾಗಿದ್ದು, ಕೆಂಪೇಗೌಡ ಪಾಟೀಲ್ ಚಿತ್ರದ ನಿರ್ಮಾಪಕರು.

ತೆರಿಗೆ ವಿನಾಯಿತಿ ಘೋಷಣೆ; ಅವ್ವ ಪ್ರೊಡಕ್ಷನ್ ವತಿಯಿಂದ 7/6/2023ರಂದು ಮುಖ್ಯಮಂತ್ರಿಗಳಿಗೆ ಬರೆದ ಪತ್ರದಲ್ಲಿ ಕರ್ನಾಟಕ ರಾಜ್ಯದಲ್ಲಿ ಪ್ರದರ್ಶನವಾಗಬೇಕಾಗಿರುವ ‘ಕನಕ ಮಾರ್ಗ’ ಕನ್ನಡ ಮಕ್ಕಳ ಚಲನಚಿತ್ರಕ್ಕೆ ಶೇ 100ರಷ್ಟು ತೆರಿಗೆ ವಿನಾಯಿತಿ ಕಲ್ಪಿಸುವಂತೆ ಮನವಿ ಮಾಡಲಾಗಿತ್ತು. ಸದರಿ ಮನವಿ ಪತ್ರದಲ್ಲಿ ಚಲನಚಿತ್ರವು ಮಕ್ಕಳ ಹಾಗೂ ಯುವಕರ ಮೇಲೆ ಈ ನಾಡಿನ ಸಂತ, ಮಹಂತ, ಶರಣ, ದಾಸಶ್ರೇಷ್ಠ ಕನಕದಾಸರ ತತ್ವಾದರ್ಶಗಳು ಪರಿಣಾಮ ಬೀರುವಂತೆ ಹಾಗೂ ಸರ್ಕಾರಿ ಶಾಲೆಗಳ ಆದ್ಯತೆಯ ಮಹತ್ವ ಈ ಮಣ್ಣಿನ ಕಲೆ, ಸಂಸ್ಕೃತಿಯನ್ನು ಬಿಂಬಿಸುವಂತೆ ಚಿತ್ರೀಕರಿಸಲಾಗಿದೆ ಎಂದು ವಿವರಿಸಲಾಗಿತ್ತು.

ಮುಖ್ಯಮಂತ್ರಿಗಳು ಮನವಿಯನ್ನು ಪರಿಗಣಿಸಿ, ಈ ಚಿತ್ರವನ್ನು ತೆರಿಗೆ ಮುಕ್ತಗೊಳಿಸಿದರೆ, ರಾಜ್ಯದ ಇನ್ನಷ್ಟು ಜನರಿಗೆ ಈ ಸಂದೇಶವನ್ನು ಮುಟ್ಟಿಸುವಲ್ಲಿ ಸಹಕಾರಿಯಾಗುವುದರಿಂದ ಸೂಕ್ತ ಆದೇಶ ಹೊರಡಿಸುವಂತೆ ಕೋರಲಾಗಿತ್ತು. ಆದ್ದರಿಂದ ಸರ್ಕಾರವು ತೆರಿಗೆ ವಿನಾಯಿತಿ ನೀಡಿ ಆದೇಶವನ್ನು ಹೊರಡಿಸಿದೆ.

ಆದೇಶದಲ್ಲಿ ‘ಕನಕ ಮಾರ್ಗ’ ಎಂಬ ಶೀರ್ಷಿಕೆಯುಳ್ಳ ಕನ್ನಡ ಮಕ್ಕಳ ಚಲನಚಿತ್ರ ಪ್ರದರ್ಶನಗಳಿಗೆ ಬಿಡುಗಡೆಯಾಗಲಿರುವ ದಿನಾಂಕದಿಂದ ಆರು ತಿಂಗಳ ಅವಧಿಗೆ ರಾಜ್ಯ ಸರಕು ಮತ್ತು ಸೇವಾ ತೆರಿಗೆ (ಎಸ್‌ಜಿಎಸ್‌ಟಿ) ಹಿಂಪಾವತಿ ಸೌಲಭ್ಯವನ್ನು ಷರತ್ತುಗಳಿಗೆ ಒಳಪಟ್ಟು ಸರ್ಕಾರವು ನೀಡಿರುತ್ತದೆ ಎಂದು ತಿಳಿಸಲಾಗಿದೆ.

ಪ್ರದರ್ಶಕರು ಸಿನೆಮಾ ಟಿಕೆಟ್ ಮೇಲೆ ಎಸ್‌ಜಿಎಸ್‌ಟಿ ವಿಧಿಸತಕ್ಕದ್ದಲ್ಲ ಮತ್ತು ಸಂಗ್ರಹಿಸತಕ್ಕದ್ದಲ್ಲ ಹಾಗೂ ಎಸ್‌ಜಿಎಸ್‌ಟಿ ಮೊತ್ತವನ್ನು ಕಡಿತಗೊಳಿಸಿದ ದರದಲ್ಲಿಯೇ ಟಿಕೆಟ್‌ಗಳನ್ನು ಮಾರಾಟ ಮಾಡತಕ್ಕದ್ದು.

ಸರ್ಕಾರದ ಆದೇಶವು ಜಾರಿಯಲ್ಲಿರುವ ಅವಧಿಯಲ್ಲಿ ‘ಕನಕ ಮಾರ್ಗ’ ಚಲನಚಿತ್ರ ಪ್ರದರ್ಶನದ ಪ್ರವೇಶಕ್ಕೆ ಮಾರಾಟ ಮಾಡುವ ಟಿಕೆಟ್‌ಗಳ ಮೇಲೆ ಕರ್ನಾಟಕ ಸರ್ಕಾರದ ಆದೇಶದನ್ವಯ ರಾಜ್ಯ ಜಿಎಸ್‌ಟಿಯನ್ನು (ಎಸ್‌ಜಿಎಸ್‌ಟಿ) ಸಂಗ್ರಹಿಸಿರುವುದಿಲ್ಲ ಎಂಬ ಪದಗಳು ಪ್ರಮುಖವಾಗಿ ಎದ್ದು ಕಾಣುವಂತೆ ಇರತಕ್ಕದ್ದು.

ರಾಜ್ಯ ಸರಕು ಮತ್ತು ಸೇವಾ ತೆರಿಗೆ (ಎಸ್‌ಜಿಎಸ್‌ಟಿ)ಯನ್ನು ಪ್ರವೇಶ ಶುಲ್ಕದ ಮೇಲೆ ವಿಧಿಸದೆ ಮತ್ತು ಗ್ರಾಹಕರಿಂದ ಸಂಗ್ರಹಿಸದಿದ್ದರೂ, ಸಿನೆಮಾ ಮಂದಿರ/ ಮಲ್ಟಿಪ್ಲೆಕ್ಸ್‌ ಪ್ರದರ್ಶಕರು ತೆರಿಗೆ ನಮೂನೆಯನ್ನು ಸಲ್ಲಿಸಿ, ಇತರೆ ಸಿನೆಮಾಗಳಿಗೆ ಜಮೆ ಮಾಡುವ ರೀತಿಯಲ್ಲೇ ತಮ್ಮ ಸಂಪನ್ಮೂಲದಿಂದಲೇ ರಾಜ್ಯ ಜಿಎಸ್‌ಟಿ ಮೊತ್ತವನ್ನು ಜಮೆ ಮಾಡತಕ್ಕದ್ದು.

ಎಸ್‌ಜಿಎಸ್‌ಟಿ ಮೊತ್ತವನ್ನು ವಾಣಿಜ್ಯ ತೆರಿಗೆ ಆಯುಕ್ತರು (ಕರ್ನಾಟಕ) ನಿಗದಿ ಪಡಿಸಿದ ನಮೂನೆಯಲ್ಲಿ ವ್ಯಾಪ್ತಿ ಹೊಂದಿದ ಸ್ಥಳೀಯ ಜಿಎಸ್‌ಟಿ ಕಛೇರಿ/ ಉಪ ಜಿಎಸ್‌ಟಿ ಕಛೇರಿಗೆ ಅರ್ಜಿ ಸಲ್ಲಿಸಿ ಹಿಂಪಾವತಿಗೆ ಕ್ಷೇಮು ಮಾಡತಕ್ಕದ್ದು.

ಅಧಿಕಾರಿಯು (ವ್ಯಾಪ್ತಿ ಹೊಂದಿದ ಸ್ಥಳೀಯ ಜಿಎಸ್‌ಟಿ ಅಧಿಕಾರಿ/ ಉಪ ಜಿಎಸ್‌ಟಿ ಅಧಿಕಾರಿ) ತಮ್ಮ ವಿಭಾಗೀಯ ಸರಕು ಮತ್ತು ಸೇವಾ ತೆರಿಗೆ ಜಂಟಿ ಆಯುಕ್ತರ ಮೂಲಕ ಹಿಂಪಾವತಿಗೆ ಅರ್ಹವಾದ ಮೊತ್ತದ ದೃಢೀಕರಣಕ್ಕಾಗಿ ವಾಣಿಜ್ಯ ತೆರಿಗೆ ಆಯುಕ್ತರು (ಕರ್ನಾಟಕ) ಇವರಿಗೆ ಶಿಫಾರಸ್ಸು ಮಾಡತಕ್ಕದ್ದು.

ಪ್ರತಿ ಪ್ರದರ್ಶಕರಿಗೆ ಸಂಬಂಧಿಸಿದಂತೆ, ವಾಣಿಜ್ಯ ತೆರಿಗೆ ಆಯುಕ್ತರು, ಬೆಂಗಳೂರು ಇವರಿಂದ ಹಿಂಪಾವತಿಗೆ ದೃಢೀಕರಣಗೊಂಡ ಮೊತ್ತದ ವರದಿಯನ್ನು ಸ್ವೀಕರಿಸಿದ ನಂತರ ಆಯುಕ್ತರು, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಬೆಂಗಳೂರು ಇವರು ಬಟವಾಡೆಗೆ ವ್ಯವಸ್ಥೆ ಮಾಡತಕ್ಕದ್ದು.

ಪ್ರದರ್ಶಕರು ಹಿಂಪಾವತಿ ಕ್ಷೇಮು ಮಾಡಲು ಅಗತ್ಯವಿರುವ ಕಾರ್ಯವಿಧಾನ ಕುರಿತು ವಾಣಿಜ್ಯ ತೆರಿಗೆ ಆಯುಕ್ತರು (ಕ), ಬೆಂಗಳೂರು, ಇವರು ಸುತ್ತೋಲೆ ಮೂಲಕ ಸೂಚನೆಗಳನ್ನು ನೀಡತಕ್ಕದ್ದು.

ಈ ಆದೇಶದ ಜಾರಿಯಲ್ಲಿ ಯಾವುದೇ ತೊಂದರೆ ಉದ್ಭವಿಸಿದಲ್ಲಿ, ಅಂತಹ ತೊಂದರೆಯನ್ನು ನಿವಾರಿಸಲು ಅವಶ್ಯಕ ಅಥವಾ ಯುಕ್ತವಾದ ಸೂಚನೆಗಳನ್ನು ಸರ್ಕಾರವು ನೀಡಬಹುದು ಎಂದು ಷರತ್ತುಗಳನ್ನು ಹಾಕಲಾಗಿದೆ.

English summary

Karnataka government announced State Goods and Services Tax (SGST) tax examination for the Kannada movie Kanaka Marga.

Story first published: Friday, June 23, 2023, 16:19 [IST]

Source link