India
oi-Shankrappa Parangi
ಮಹಾರಾಷ್ಟ್ರ, ಜೂನ್ 25: ಪ್ರಧಾನಿ ನರೇಂದ್ರ ಮೋದಿಯವರು ಹೇಳಿದ ಒಳ್ಳೆಯ ದಿನಗಳು (ಅಚ್ಚೇದಿನ್) ಬರಲೇ ಇಲ್ಲ. ಅವರ ಭರವಸೆ ಸುಳ್ಳಾಗಿದೆ. ಮುಂದಿನ ದಿನಗಳಲ್ಲಿ ದೇಶದ ಅಭಿವೃದ್ಧಿಗಾಗಿ ಬಿಜೆಪಿಯೇತರ ಸರ್ಕಾರ ದೇಶದಲ್ಲಿ ಬರಬೇಕಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.
ಮಹಾರಾಷ್ಟ್ರದ ಸಾಂಗ್ಲಿಯಲ್ಲಿ ಅವರು ಇಂದು ಆಯೋಜಿಸಿದ್ದ ಕಾಂಗ್ರೆಸ್ ಪಕ್ಷದ ಮಹಾ ನಿರ್ಧಾರ ಸಮಾವೇಶ ಉದ್ಘಾಟಿಸಿ ಮಾತನಾಡಿದರು. ಭಾರತದ ದೀನ ದಲಿತರ ಹಾಗೂ ಬಡವರ ಏಳಿಗೆಗಾಗಿ, ಭ್ರಷ್ಟಾಚಾರ ನಿಗ್ರಹಕ್ಕಾಗಿ ಹಾಗೂ ದೇಶವನ್ನು ಅಭಿವೃದ್ಧಿಯ ಪಥದಲ್ಲಿ ನಡೆಸುವ ಸಲುವಾಗಿ ಭಾರತದಲ್ಲಿ ಬಿಜೆಪಿಯೇತರ ಸರ್ಕಾರ ಬರಲೇಬೇಕು. ಅದಕ್ಕಾಗಿ 2024ರ ಲೋಕಸಭೆಯಲ್ಲಿ ಒಗ್ಗಟ್ಟಾಗಿ ಹೋರಾಡಿ ಬಿಜೆಪಿ ಸೋಲಿಸಬೇಕು ಎಂದು ಕಾರ್ಯಕರ್ತರನ್ನು ಹುರಿದುಂಬಿಸಿದರು.
ಪ್ರಧಾನಿ ಮೋದಿ ವಿರುದ್ಧ ವಿಪಕ್ಷಗಳಲ್ಲಿ ನಾಯಕರಿಲ್ಲ: ತಿಂಗಳಲ್ಲಿ ಜನಪ್ರಿಯತೆ ಕಳೆದುಕೊಂಡ ಕಾಂಗ್ರೆಸ್: ಬೊಮ್ಮಾಯಿ
ರಾಜಕೀಯ ಇತಿಹಾಸದಲ್ಲಿ ಈ ಪ್ರಧಾನಿಯಂತಹ ಸುಳ್ಳು ಹೇಳುವರನ್ನು ನೋಡಲಿಲ್ಲ. ಚುನಾವಣೆ ವೇಳೆ ವಿದೇಶದಲ್ಲಿ ಕಪ್ಪುಹಣವನ್ನು ತಂದು, ದೇಶದ ಪ್ರತಿ ಯೊಬ್ಬರಿಗೂ 15 ಲಕ್ಷ ನೀಡುತ್ತೇನೆಂದರು. ಅದು ಸುಳ್ಳಾಯಿತು. ಕಳೆದ 9 ವರ್ಷದಲ್ಲಿ 18 ಕೋಟಿ ಉದ್ಯೋಗ ಸೃಷ್ಟಿಸಬೇಕು. ಹೊಸ ಉದ್ಯೋಗ ಸೃಷ್ಟಿಸುವ ಬದಲು ಇರುವ ಉದ್ಯೋಗವನ್ನು ಯುವಕರು ಕಳೆದುಕೊಳ್ಳುತ್ತಿದ್ದಾರೆ.
ಪ್ರಧಾನಿ ಮೋದಿಯವರ ಅಚ್ಛೇ ದಿನ್ ಆಯೆಂಗೆ ಎಂಬ ಮಾತು ಹೇಳಿದ್ದರು. ಇಂದು ಪೆಟ್ರೋಲ್, ಡೀಸೆಲ್, ಗ್ಯಾಸ್, ಗೊಬ್ಬರ,ಕಬ್ಬಿಣ, ಸಿಮೆಂಟು, ಆಹಾರ ಪದಾರ್ಥಗಳೂ ಸೇರಿದಂತೆ ಎಲ್ಲದರ ಬೆಲೆ ಹೆಚ್ಚಾಗಿದೆ. ನರೇಂದ್ರ ಮೋದಿಯವರು ನ ಖಾವೋಂಗ್ , ನ ಖಾನೆ ದೂಂಗ ಎಂದರು. ಆದರೆ ಕರ್ನಾಟಕದಲ್ಲಿ 40 % ಭ್ರಷ್ಟಾಚಾರ ರಾರಾಜಿಸಿತು. ಹೀಗಾಗಿ ಒಳ್ಳೆಯ ದಿನಗಳು ಬರಲೇ ಇಲ್ಲ ಎಂದರು.
ಸಂವಿಧಾನ ರಕ್ಷಣೆಯ ಹೋರಾಟಕ್ಕೆ ನಾವು ಸಿದ್ಧರಾಗಬೇಕು
ನೆರೆ ರಾಜ್ಯದ ಸಾಂಗ್ಲಿ ಜಿಲ್ಲೆ ಕಾಂಗ್ರೆಸ್ ನ ಭದ್ರ ಕೋಟೆಯಾಗಿದೆ. ಸಾಂಗ್ಲಿ ದೇಶಕ್ಕೆ ಪ್ರಮುಖ ರಾಷ್ಟ್ರನಾಯಕರನ್ನು ನೀಡಿದೆ. ಡಾ.ಬಿ.ಆರ್. ಅಂಬೇಡ್ಕರ್ ಅವರು ಭಾರತದ ಸಂವಿಧಾನದ ಕರ್ತೃ. ಈ ಸಂವಿಧಾನವಿರದಿದ್ದರೆ ಸಮಾಜದ ಶೋಷಿತರು, ದೀನದಲಿತರು, ಅಲ್ಪಸಂಖ್ಯಾತರೂ ದೇಶದ ರಾಜಕಾರಣದಲ್ಲಿ, ಸಾಮಾಜಿಕವಾಗಿ ಆರ್ಥಿಕವಾಗಿ ಮುಂದೆ ಬರಲು ಸಾಧ್ಯವಾಗುತ್ತಿರಲಿಲ್ಲ. ಕಾಂಗ್ರೆಸಿಗರು ಸಂವಿಧಾನವನ್ನು ಬದಲಾಯಿಸಲು ಬಿಡಬಾರದು ಎಂಬ ಶಪಥ ಮಾಡಬೇಕು.ಅದಕ್ಕಾಗಿ ಹೋರಾಡಲು ಸಿದ್ಧರಾಗಬೇಕು ಎಂದು ಅವರು ಕರೆ ನೀಡಿದರು.
ಕೋಮುವಾದಿ ಬಿಜೆಪಿ ಸಂವಿಧಾನವನ್ನು ವಿರೋಧಿಸುತ್ತದೆ. ಸಾರ್ವಕರ್, ಗೋಲ್ವಕರ್ ಅವರು ಸಂವಿಧಾನವನ್ನು ಅಂದೇ ವಿರೋಧಿಸಿದ್ದರು. ಧರ್ಮಗಳ ನಡುವೆ ಸಂಘರ್ಷಗಳಿಂದ ರೈತರು, ದೀನದಲಿತರು, ಅಲ್ಪಸಂಖ್ಯಾತರು ಆತಂಕದಲ್ಲಿ ಬದುಕುವಂತಾಗಿದೆ. ಭಾರತದಲ್ಲಿ ಹಾಗೂ ಮಹಾರಾಷ್ಟ್ರದಲ್ಲಿ ಭಾರತೀಯ ಜನತಾ ಪಕ್ಷ ಆಡಳಿತದಲ್ಲಿದ್ದು, ಅವರನ್ನು ಕಿತ್ತೊಗೆಯಬೇಕಾದ ಜವಾಬ್ದಾರಿ ಕಾಂಗ್ರೆಸ್ ಮೇಲಿದೆ.
ಪ್ರಜಾತಂತ್ರದ ರಕ್ಷಣೆಗಾಗಿ ಮತ್ತೊಂದು ಸ್ವಾತಂತ್ರ್ಯ ಸಂಗ್ರಾಮಕ್ಕಾಗಿ ನಾವೆಲ್ಲರೂ ಸಿದ್ದಗೊಳ್ಳಬೇಕಿದೆ. ಆಪರೇಷನ್ ಕಮಲ ಮೂಲಕ 2008 ಹಾಗೂ 2018 ರಲ್ಲಿ ಅಧಿಕಾರಕ್ಕೆ ಬಂದಿತು. ಬಿಜೆಪಿ ಎಂದರೆ ಭ್ರಷ್ಟಾಚಾರ. ಕರ್ನಾಟಕದಲ್ಲಿ ಗುತ್ತಿಗೆದಾರರ ಸಂಘ 40% ಭ್ರಷ್ಟಾಚಾರದ ಸರ್ಕಾರ ಎಂದು ಕರೆಯಿತು. ಬಿಜೆಪಿ ಬಡವ ಪರ ಕೆಲಸ ಮಾಡಿಲ್ಲ ಎಂದು ಅವರು ವಾಗ್ದಾಳಿ ನಡೆಸಿದರು.
ಅಕ್ಕಿ ವಿಚಾರದಲ್ಲೂ ದ್ವೇಷದ ರಾಜಕಾರಣ: ಸಿಎಂ
ಕಾಂಗ್ರೆಸ್ ಪಕ್ಷ ಕರ್ನಾಟಕದ ಜನರಿಗೆ 5 ಗ್ಯಾರೆಂಟಿಗಳನ್ನು ನೀಡಿತ್ತು. ಅಧಿಕಾರಕ್ಕೆ ಬಂದ ದಿನವೇ 5 ಗ್ಯಾರೆಂಟಿಗಳನ್ನು ಜಾರಿಗೊಳಿಸುವ ತೀರ್ಮಾನ ಮಾಡಿದೆವು. ಇದರಿಂದ ಎಲ್ಲ ಮಹಿಳೆಯರು ಸರ್ಕಾರಿ ಬಸ್ಸಿನಲ್ಲಿ ಉಚಿತವಾಗಿ ಪ್ರಯಾಣಿಸುವ ಶಕ್ತಿ ಯೋಜನೆ ಜಾರಿ ಆಯಿತು.
ಹಿಂದಿನ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ, ಅನ್ನಭಾಗ್ಯ ಯೋಜನೆಯಡಿ ಏಳು ಕೆಜಿ ಅಕ್ಕಿಯನ್ನು ನೀಡಲಾಗುತ್ತಿತ್ತು. ಈ ಬಾರಿಯೂ ರಾಜ್ಯದ ಬಿಪಿಎಲ್ ಕಾರ್ಡ್ ಹಾಗೂ ಅಂತ್ಯೋದಯ ಕಾರ್ಡ್‍ದಾರರಿಗೆ 10 ಕೆಜಿ ಅಕ್ಕಿ ನೀಡುವ ಅನ್ನಭಾಗ್ಯ ಯೋಜನೆ ಅನುಷ್ಠಾನಕ್ಕೆ ತೀರ್ಮಾನಿಸಿದ್ದೇವೆ. ಆದರೆ ನೀಡಿನ ಮಾತಿನಂತೆ ಕೇಂದ್ರ ಸರ್ಕಾರ ನಡೆದುಕೊಳ್ಳುತ್ತಿಲ್ಲ. ಕಾಂಗ್ರೆಸ್ ಸರ್ಕಾರಕ್ಕೆ ದಾಸ್ತಾನಿದ್ದರು ಅಕ್ಕಿ ನೀಡಬಾರದು ಎಂದು ಸೂಚನೆ ನೀಡಿದೆ. ಇದರಲ್ಲಿ ಕೇಂದ್ರ ದ್ವೇಷದ ರಾಜಕಾರಣ ಮಾಡುತ್ತಿದೆ ಎಂದು ಅವರು ಆರೋಪಿಸಿದರು.
ಕರ್ನಾಟಕದ ಸೋಲಿನಿಂದ ಪ್ರಧಾನಿ ಮೋದಿ ಜನಪ್ರಿಯತೆಗೆ ಮಸುಕು
ಕರ್ನಾಟಕದಲ್ಲಿ ಬಿಜೆಪಿ ಸೋತಿರುವುದು ನರೇಂದ್ರ ಮೋದಿಯವರ ಜನಪ್ರಿಯತೆ ಮಸುಕ್ಕಾಗುತ್ತಿದೆ ಎಂಬುದನ್ನು ಸಂಕೇತಿಸುತ್ತಿದೆ. ರಾಜ್ಯದಲ್ಲಿ ನಿರುದ್ಯೋಗಿ ಪದವೀಧರ ಯುವಕರಿಗೆ ತಿಂಗಳಿಗೆ 3 ಸಾವಿರ ರೂ, ಡಿಪ್ಲೊಮಾ ಪದವೀಧರರಿಗೆ 1,500 ರೂ,ಅನ್ನು 24 ತಿಂಗಳವರೆಗೆ ನೀಡುವ ಯುವಶಕ್ತಿ ಯೋಜನೆ ಜಾರಿ ಮಾಡಲಾಗುವುದು.
ಕರ್ನಾಟಕದಲ್ಲಿ ಕಾಂಗ್ರೆಸ್ ಸೋಲಿಸಲು ಪ್ರಧಾನಿ ಮೋದಿಯವರು ಹಾಗೂ ಕೇಂದ್ರ ಮಂತ್ರಿಮಂಡಲದ ಅನೇಕರು ರಾಜ್ಯಕ್ಕೆ ಭೇಟಿ ನೀಡಿ ಪ್ರಚಾರ ಮಾಡಿದ್ದರು. ಆದರೆ ಬಿಜೆಪಿ ಭ್ರಷ್ಟಚಾರದಲ್ಲಿ ಮುಳುಗಿ, ಜನವಿರೋಧಿ ಆಗಿತ್ತು. ಹೀಗಾಗಿ ಮೋದಿ ನಂಬಿದ್ದ ಕರ್ನಾಟಕ ಬಿಜೆಪಿ ನಂಬಿಕೆ ಹುಸಿಯಾಯಿತು.
ಕಾರ್ಯ್ರಕ್ರಮದಲ್ಲಿ ಮಹಾರಾಷ್ಟ್ರ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ನಾನಾ ಪಟೋಲೆ, ಶಾಸಕಾಂಗ ಪಕ್ಷದ ನಾಯಕ ಬಾಳಾ ಸಾಹೇಬ್ ತೋರತ್, ಕೇಂದ್ರದ ಮಾಜಿ ಸಚಿವ ಪೃಥ್ವಿರಾಜ್ ಚೌಹಾಣ್, ಶಾಸಕರಾದ ವಿಕ್ರಂ ಸಾವಂತ್, ವಿಶ್ವಜಿತ್ ಕದಂ ಉಪಸ್ಥಿತರಿದ್ದರು.
English summary
Acche Din is become fake, non-BJP govt should come for India development, CM Siddaramaiah called to congress workers,
Story first published: Sunday, June 25, 2023, 19:53 [IST]