Karnataka
oi-Reshma P
ಬೆಳಗಾವಿ, ಜೂನ್ 26: ರಾಜ್ಯ ರಾಜಕಾರಣದಲ್ಲಿ ಆಡಳಿತ ಹಾಗೂ ವಿರೋಧ ಪಕ್ಷಗಳ ನಾಯಕರ ಭೇಟಿ ಹಲವು ಪ್ರಶ್ನೆಗಳನ್ನ ಹುಟ್ಟು ಹಾಕಿದೆ. ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನ ಡಿಸಿಎಂ ಡಿ ಕೆ ಶಿವಕುಮಾರ್ ಭೇಟಿ ಮಾಡಿರುವುದು ಕಮಲ ಪಾಳಯದಲ್ಲಿ ಹಲವು ಅನುಮಾನಗಳಿಗೆ ಕಾರಣವಾಗಿದೆ.
ಹೌದು, ಬೆಳಗಾವಿಯಲ್ಲಿ ಭಾನುವಾರ ಆಯೋಜಿಸಿದ್ದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಹಾಗೂ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ನಡುವೆ ವಾಕ್ಸಮರ ನಡೆಯಿತು. ಡಿಸಿಎಂ ಡಿಕೆ ಶಿವಕುಮಾರ್ ಅವರು ಬಸವರಾಜ ಬೊಮ್ಮಾಯಿ ನಿವಾಸಕ್ಕೆ ಭೇಟಿ ನೀಡಿದ ವಿಚಾರವಾಗಿ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ನೀಡಿದ ಮಾತಿನೇಟಿಗೆ ಬಸವರಾಜ ಬೊಮ್ಮಾಯಿ ತೀಕ್ಷ್ಣವಾಗಿಯೇ ತಿರುಗೇಟು ನೀಡಿದ್ದಾರೆ.
ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಮೊದಲು ಮಾತನಾಡಿದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಕಾಂಗ್ರೆಸ್ ಸರ್ಕಾರ ಐದು ವರ್ಷ ಉಳಿಯಲ್ಲ. ಸಿದ್ದರಾಮಯ್ಯ ಅಧಿಕಾರ ಬಿಟ್ಟುಕೊಡುವುದಿಲ್ಲ. ಆಗ ಡಿಕೆ ಶಿವಕುಮಾರ್ ಬಸವರಾಜ ಬೊಮ್ಮಾಯಿ ಅವರ ಮನೆಗೆ ಬರುತ್ತಾರೆ. ಆ ಮೂಲಕ ಸೋನಿಯಾ ಗಾಂಧಿ ಅವರನ್ನು ಹೆದರಿಸುತ್ತಾರೆ. ಬೊಮ್ಮಾಯಿ ಅವರೇ ಇಂಥದ್ದಕ್ಕೆ ಅವಕಾಶ ಕೊಡಬೇಡಿ. ಅಂಥವರನ್ನು ಮನೆಯೊಳಗೆ ಬಿಟ್ಟುಕೊಳ್ಳಬೇಡಿ ಎಂದು ಆಗ್ರಹಿಸಿದ್ದಾರೆ.
ಇನ್ನು, ಡಿಸಿಎಂ ಡಿಕೆ ಶಿವಕುಮಾರ್ ಹಾಗೂ ಕಾಂಗ್ರೆಸ್ ನಾಯಕ ಶಾಮನೂರು ಶಿವಶಂಕರಪ್ಪ ಇತ್ತಿಚ್ಚೆಗೆ ಬಿಎಸ್ ಯಡಿಯೂರಪ್ಪ ಹಾಗೂ ಬಸವರಾಜ ಬೊಮ್ಮಾಯಿ ಮನೆಗೆ ಭೇಟಿ ನೀಡಿದ್ದಾರೆ. ಇದನ್ನು ಸೌಜನ್ಯದ ಭೇಟಿ ಎನ್ನುತ್ತಾರೆ. ಆದರೆ, ಆ ಭೇಟಿಯ ಉದ್ದೇಶವೇ ಬೇರೆ. ಸಿಎಂ ಕುರ್ಚಿಗಾಗಿ ಬರುವ ಅವರನ್ನು ನಾವೇಕೆ ಮನೆಗೆ ಬಿಟ್ಟುಕೊಳ್ಳಬೇಕು ಎಂದು ಪ್ರಶ್ನಿಸಿದ್ದಾರೆ.
ವಿರೋಧ ಪಕ್ಷದವರ ಜತೆಗೆ ಮಾತನಾಡಲ್ಲ, ಅವರ ಮನೆಗೆ ಹೋಗೋದಿಲ್ಲ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಅದೇ ರೀತಿ ನಾವು ಕೂಡ ಇನ್ಮುಂದೆ ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಮನೆಗೆ ಹೋಗಲ್ಲ, ಫೋನ್ನಲ್ಲಿ ಮಾತನಾಡಲ್ಲ. ಹಲ್ಲು ಕಿಸಿಯಲ್ಲ ಎಂದು ನಿರ್ಧಾರ ಮಾಡೋಣ. ಆಗ ಮಾತ್ರ ಪಕ್ಷ ಉಳಿಯುತ್ತದೆ. ನೀವು ಕಾಂಗ್ರೆಸ್ನವರಿಗೆ ಸ್ವಾಗತ – ಸುಸ್ವಾಗತ ಎಂದರೆ ನಮ್ಮ ಕಾರ್ಯಕರ್ತರು ಮಲಗಿ ಬಿಡುತ್ತಾರೆ ಎಂದು ಬಸನಗೌಡ ಪಾಟೀಲ್ ಯತ್ನಾಳ್ ಸ್ವಪಕ್ಷದ ನಾಯಕರ ವಿರುದ್ದವೇ ಕಿಡಿಕಾರಿದರು.
ಇನ್ನೂ ಬಸನಗೌಡ ಪಾಟೀಲ್ ಯತ್ನಾಳ್ ಟೀಕೆಗೆ ಅದೇ ವೇದಿಕೆ ಮೇಲೆ ತಿರುಗೇಟು ನೀಡಿದ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ನಾನು ಎಂದಿಗೂ ರಾಜಿ ರಾಜಕಾರಣ ಮಾಡಿಲ್ಲ. ಮಾಡೋದು ಇಲ್ಲ. ಮನೆಗೆ ಬರುವವರನ್ನು ಬೇಡ ಎನ್ನಲು ಆಗಲ್ಲ. ಅದು ಕನ್ನಡಿಗರ ಸೌಜನ್ಯ. ಗೌಡ್ರೇ ನೀವು ತಲೆ ಕೆಡಿಸಿಕೊಳ್ಳಬೇಡಿ, ಯಾರೋ ಮನೆಗೆ ಬಂದ ತಕ್ಷಣ ನಾವು ರಾಜಿ ಆಗಲ್ಲ. ಕೆಲವರು ಮನೆಗೆ ಹೋಗದೆಯೇ ಒಳಗೊಳಗೇ ರಾಜಿ ಆಗಿದ್ದಾರೆ. ಇದು ಎಲ್ಲರಿಗೂ ಗೊತ್ತಿದೆ. ನಾವು ಬಹಿರಂಗವಾಗಿ, ಸ್ಪಷ್ಟವಾಗಿದ್ದೇವೆ ಎಂದರು.
ಬಿಜೆಪಿ ನನಗೆ ತಾಯಿಯ ಸಮಾನ. ಪಕ್ಷದ ಕಾರ್ಯಕರ್ತರು ಅಣ್ಣ-ತಮ್ಮಂದಿರು, ಅಕ್ಕ-ತಂಗಿಯರ ಸಮಾನ. ಕಾರ್ಯಕರ್ತರಿಗೆ ದ್ರೋಹ ಮಾಡುವ ಕೆಲಸ ಮಾಡಿಲ್ಲ ಎಂದು ಹೇಳಿದರು. ಮುಂದುವರಿದು ಮಾತನಾಡಿದ ಬಸವರಾಜ ಬೊಮ್ಮಾಯಿ, ವಿವೇಚನೆ ಇಲ್ಲದೇ ಕಾಂಗ್ರೆಸ್ನವರು ಉಚಿತ ಅಕ್ಕಿ ಕೊಡುತ್ತೇವೆ ಘೋಷಿಸಿದ್ದಾರೆ. ಅಕ್ಕಿ ಖರೀದಿಯಲ್ಲಿ ಕೆಲ ಸಚಿವರು ಪರ್ಸೆಂಟೇಜ್’ ಹಂಚಿಕೊಳ್ಳುತ್ತಿದ್ದಾರೆ. ಖರೀದಿಯಲ್ಲಿ ಏನೆಲ್ಲಾ ಹುನ್ನಾರ ನಡೆದಿದೆ ಎಂದು ನನಗೆ ಗೊತ್ತಿದೆ. ಶೀಘ್ರದಲ್ಲೇ ಇವರ ಕರಾಳ ಮುಖ ಬಯಲಾಗುತ್ತದೆ ಎಂದು ತಿಳಿಸಿದರು.
English summary
BJP- Congress Adjustment Politics; Former CM Basavaraj Bommai And MLA Basanagouda Patil Yatnal Talk War.