ಐಪಿಎಲ್ 2025ರಲ್ಲಿ ಅಗ್ರ 2 ಸ್ಥಾನ ಪಡೆಯುವ ಅವಕಾಶ ಯಾವ ತಂಡಕ್ಕೆ ಎಷ್ಟಿದೆ; ಜಿಟಿ, ಆರ್‌ಸಿಬಿ, ಪಂಜಾಬ್‌ ನಡುವೆ ಪೈಪೋಟಿ

ಐಪಿಎಲ್ 2025ರಲ್ಲಿ ಸದ್ಯ ಗುಜರಾತ್ ಟೈಟನ್ಸ್, ಆರ್‌ಸಿಬಿ, ಪಂಜಾಬ್ ಕಿಂಗ್ಸ್ ಹಾಗೂ ಮುಂಬೈ ಇಂಡಿಯನ್ಸ್ ತಂಡಗಳು ಪ್ಲೇಆಫ್‌ಗೆ ಅರ್ಹತೆ ಪಡೆದಿವೆ. ಆದರೆ, ಇವುಗಳ ಪೈಕಿ ಅಗ್ರ ಎರಡು ಸ್ಥಾನ ಇನ್ನೂ ಖಚಿತವಾಗಿಲ್ಲ. ಅದಕ್ಕೆ ಪೈಪೋಟಿ ಮುಂದುವರೆದಿದೆ.

ಐಪಿಎಲ್ 2025ರಲ್ಲಿ ಅಗ್ರ 2 ಸ್ಥಾನ ಪಡೆಯುವ ಅವಕಾಶ ಯಾವ ತಂಡಕ್ಕೆ ಎಷ್ಟಿದೆ? ಆರ್‌ಸಿಬಿ ಸಾಧ್ಯತೆಗಳೇನು?

ಐಪಿಎಲ್ 2025ರಲ್ಲಿ ಅಗ್ರ 2 ಸ್ಥಾನ ಪಡೆಯುವ ಅವಕಾಶ ಯಾವ ತಂಡಕ್ಕೆ ಎಷ್ಟಿದೆ? ಆರ್‌ಸಿಬಿ ಸಾಧ್ಯತೆಗಳೇನು? (AP)

ಐಪಿಎಲ್ 2025ರ ಋತು ಕೊನೆಯ ಹಂತಕ್ಕೆ ಬಂದಿದೆ. ಈಗಾಗಲೇ ಗುಜರಾತ್ ಟೈಟನ್ಸ್, ರಾಯಲ್ ಚಾಲೆಂಜರ್ಸ್ ಬೆಂಗಳೂರು, ಪಂಜಾಬ್ ಕಿಂಗ್ಸ್ ಹಾಗೂ ಮುಂಬೈ ಇಂಡಿಯನ್ಸ್ ತಂಡಗಳು ಪ್ಲೇಆಫ್‌ಗೆ ಅರ್ಹತೆ ಪಡೆದಿವೆ. ಇದುವರೆಗೆ ನಡೆದ ಐಪಿಎಲ್ ಋತುಗಳಿಗೆ ಹೋಲಿಸಿದರೆ, ಅಗ್ರ ನಾಲ್ಕು ಸ್ಥಾನಗಳು ಇಷ್ಟು ಬೇಗ ನಿರ್ಧಾರವಾಗಿದ್ದು ಇದೇ ಮೊದಲು. ಆದರೆ ಇಲ್ಲಿಗೆ ಸ್ಪರ್ಧೆ ಮುಗಿದಿಲ್ಲ. ಅಗ್ರ ಎರಡು ಸ್ಥಾನಗಳನ್ನು ಪಡೆದು ಬೇಗನೆ ಫೈನಲ್ ತಲುಪುವ ಅವಕಾಶಗಳಿರುವುದು ಅಗ್ರ ಎರಡು ತಂಡಗಳಿಗೆ ಮಾತ್ರ. ಆ ಎರಡು ತಂಡಗಳು ಯಾವುವು ಎಂಬುದು ಸದ್ಯದ ಕುತೂಹಲ. ಇದೀಗ ಈ ನಾಲ್ಕು ತಂಡಗಳ ನಡುವೆ ಆ ಪೈಪೋಟಿ ಶುರುವಾಗಿದೆ.

ಅಗ್ರ ಎರಡು ಸ್ಥಾನ ಪಡೆಯುವ ತಂಡಗಳು ಫೈನಲ್‌ ತಲುಪಲು ಎರಡು ಅವಕಾಶಗಳನ್ನು ಪಡೆಯುತ್ತವೆ. ಕ್ವಾಲಿಫೈಯರ್ 1ರಲ್ಲಿ ಸೋತರೂ, ತಂಡವು ಕ್ವಾಲಿಫೈಯರ್ 2ರಲ್ಲಿ ಎಲಿಮಿನೇಟರ್ ವಿಜೇತರನ್ನು ಎದುರಿಸುವ ಮೂಲಕ ಫೈನಲ್ ತಲುಪಲು ಮತ್ತೊಂದು ಅವಕಾಶವನ್ನು ಹೊಂದುತ್ತವೆ. ಹೀಗಾಗಿ ತಂಡಗಳು ಅಗ್ರ ಎರಡು ಸ್ಥಾನಗಳಲ್ಲಿ ಕಾಣಿಸಿಕೊಳ್ಳಲು ಶ್ರಮ ಹಾಕುತ್ತವೆ.

ಸದ್ಯ ಗುಜರಾತ್ ಟೈಟನ್ಸ್ ತಂಡ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಸೋತಿರುವುದು ತಂಡ ಯೋಜನೆಗಳನ್ನು ತುಸು ಅಸ್ಥಿರಗೊಳಿಸಿದೆ. ಇದೀಗ ತಂವು ಇತರ ಫಲಿತಾಂಶಗಳ ಮೇಲೆ ಅವಲಂಬಿತವಾಗಿದೆ. ಗುಜರಾತ್ ಟೈಟನ್ಸ್ ತಂಡವು ಎಲ್ಎಸ್‌ಜಿ ವಿರುದ್ಧದ ಪಂದ್ಯ ಗೆದ್ದು, ಆ ಬಳಿಕ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯವನ್ನು ಗೆದ್ದಿದ್ದರೆ, ಖಂಡಿತವಾಗಿಯೂ ಅಗ್ರ ಎರಡು ಸ್ಥಾನಗಳಲ್ಲಿ ಒಂದು ಸ್ಥಾನ ಪಡೆಯುತ್ತಿತ್ತು. ಇದೀಗ ಆರ್‌ಸಿಬಿ ಮತ್ತು ಪಂಜಾಬ್ ಕಿಂಗ್ಸ್ ತಂಡಗಳು ಕೂಡಾ ಅಂಕಪಟ್ಟಿಯಲ್ಲಿ ಅಗ್ರ ಎರಡು ಸ್ಥಾನ ಪಡೆಯುವ ಫೇವರಿಟ್ ತಂಡಗಳಾಗಿವೆ.

ನಾಲ್ಕು ತಂಡಗಳ ಅರ್ಹತಾ ಸನ್ನಿವೇಶಗಳು

ಗುಜರಾತ್ ಟೈಟನ್ಸ್

ಲಕ್ನೋ ವಿರುದ್ಧದ ಸೋಲಿನ ನಂತರ ಗುಜರಾತ್ ತಂಡದ ನೆಟ್ ರನ್ ರೇಟ್ +0.795ರಿಂದ +0.602ಕ್ಕೆ ಇಳಿದಿದೆ. ಪ್ರಸ್ತುತ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ತಂಡವು, ಈಗ ಸಿಎಸ್‌ಕೆ ವಿರುದ್ಧದ ಕೊನೆಯ ಪಂದ್ಯವನ್ನು ಗೆಲ್ಲಬೇಕಾಗಿದೆ. ಆಗ ತಂಡವು ಒಟ್ಟು 20 ಅಂಕಗಳನ್ನು ತಲುಪುತ್ತದೆ. ಒಂದು ವೇಳೆ ಗುಜರಾತ್ ಟೈಟಾನ್ಸ್ ಸೋತರೆ, ಆರ್‌ಸಿಬಿ ಮತ್ತು ಪಿಬಿಕೆಎಸ್ ತಂಡಗಳು ತಮ್ಮ ಉಳಿದ ಪಂದ್ಯಗಳನ್ನು ಗೆದ್ದರೆ ಜಿಟಿಯನ್ನು ಹಿಂದಿಕ್ಕಲಿದೆ. ಜಿಟಿಯ ನೆಟ್‌ರನ್‌ ರೇಟ್ ಮುಂಬೈ ಇಂಡಿಯನ್ಸ್‌ಗಿಂತ ಹಿಂದಿದೆ. ಆದರೆ ಆರ್‌ಸಿಬಿ ಹಾಗೂ ಪಂಜಾಬ್‌ಗಿಂತ ಮುಂದಿದೆ.

ಅಗ್ರ ಎರಡು ಸ್ಥಾನವನ್ನು ಖಚಿತಪಡಿಸಲು ಸಿಎಸ್‌ಕೆ ವಿರುದ್ಧದ ಗೆದ್ದರಷ್ಟೇ ಜಿಟಿಗೆ ಸಾಲುವುದಿಲ್ಲ. ಆರ್‌ಸಿಬಿ ಅಥವಾ ಪಂಜಾಬ್ ಕಿಂಗ್ಸ್ ಒಂದು ಪಂದ್ಯವನ್ನು ಸೋತರೆ ಮಾತ್ರ ಇದು ಸಾಧ್ಯ.

ರಾಯಲ್ ಚಾಲೆಂಜರ್ಸ್ ಬೆಂಗಳೂರು

ರಜತ್ ಪಾಟೀದಾರ್ ನೇತೃತ್ವದ ಆರ್‌ಸಿಬಿ ಪ್ರಸ್ತುತ 17 ಅಂಕಗಳೊಂದಿಗೆ ಪಾಯಿಂಟ್ಸ್ ಟೇಬಲ್‌ನಲ್ಲಿ ಎರಡನೇ ಸ್ಥಾನದಲ್ಲಿದೆ. ಸನ್‌ರೈಸರ್ಸ್ ಹೈದರಾಬಾದ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಉಳಿದ ಎರಡು ಪಂದ್ಯಗಳನ್ನು ಗೆದ್ದರೆ ಆರ್‌ಸಿಬಿ ಖಂಡಿತವಾಗಿಯೂ ಅಗ್ರ ಎರಡು ಸ್ಥಾನಗಳನ್ನು ಪಡೆಯುತ್ತದೆ. ಒಂದು ವೇಳೆ ಒಂದು ಪಂದ್ಯವನ್ನು ಸೋತರೆ, ಇತರ ತಂಡಗಳ ಫಲಿತಾಂಶ ಅವಲಂಬಿಸಬೇಕಗುತ್ತದೆ. ಗುಜರಾತ್ ಟೈಟನ್ಸ್ ಅಥವಾ ಪಂಜಾಬ್ ಕಿಂಗ್ಸ್ ಸೋಲನ್ನು ಬಯಸಬೇಕು. ಆರ್‌ಸಿಬಿ ಎರಡೂ ಪಂದ್ಯಗಳನ್ನು ಸೋತರೆ, ಅದು ಮೂರು ಅಥವಾ ನಾಲ್ಕನೇ ಸ್ಥಾನಕ್ಕೆ ಇಳಿಯುತ್ತದೆ.

ಪಂಜಾಬ್ ಕಿಂಗ್ಸ್

12 ಪಂದ್ಯಗಳಿಂದ 17 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿರುವ ಪಂಜಾಬ್‌, ಆರ್‌ಸಿಬಿಯಂತೆಯೇ ಅಂಕಗಳನ್ನು ಹೊಂದಿದೆ. ಆದರೆ ನೆಟ್ ರನ್ ರೇಟ್ ಕಡಿಮೆ ಇರುವ ಕಾರಣ ಹಿಂದುಳಿದಿದೆ. ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಮುಂಬೈ ಇಂಡಿಯನ್ಸ್ ವಿರುದ್ಧದ ಉಳಿದ ಎರಡು ಪಂದ್ಯಗಳನ್ನು ಗೆದ್ದರೆ, ಶ್ರೇಯಸ್ ಅಯ್ಯರ್ ಬಳಗ ಅಗ್ರ ಎರಡು ಸ್ಥಾನಗಳನ್ನು ಪಡೆಯಲಿದೆ. ಆದರೆ, ಪಂಜಾಬ್‌ಗೆ ಹೋಲಿಸಿದರೆ ಉತ್ತಮ ನೆಟ್ ರನ್ ರೇಟ್ ಹೊಂದಿರುವುದರಿಂದ ಗುಜರಾತ್ ಟೈಟಾನ್ಸ್ ಅಥವಾ ಆರ್‌ಸಿಬಿ ಇನ್ನೂ ಒಂದು ಪಂದ್ಯವನ್ನು ಸೋಲಬೇಕಾಗುತ್ತದೆ. ಪಂಜಾಬ್ ಎರಡೂ ಪಂದ್ಯಗಳಲ್ಲಿ ಸೋತರೆ ಎಲಿಮಿನೇಟರ್‌ನಲ್ಲಿ ಆಡಬೇಕಾಗುತ್ತದೆ.

ಮುಂಬೈ ಇಂಡಿಯನ್ಸ್‌

ಹಾರ್ದಿಕ್ ಪಾಂಡ್ಯ ನಾಯಕತ್ವದ ಮುಂಬೈ ಇಂಡಿಯನ್ಸ್ ತಂಡವು 13 ಪಂದ್ಯಗಳಿಂದ 16 ಅಂಕಗಳೊಂದಿಗೆ ನಾಲ್ಕನೇ ಸ್ಥಾನದಲ್ಲಿದೆ. ಉಳಿದ ಮೂರು ತಂಡಗಳಿಗೆ ಹೋಲಿಸಿದರೆ ಮುಂಬೈ ತಂಡಕ್ಕೆ ಅಗ್ರ ಎರಡು ಸ್ಥಾನ ಪಡೆಯುವ ಅವಕಾಶ ತುಸು ಕಡಿಮೆ. ತಂಡವು ಮೊದಲಿಗೆ ಪಂಜಾಬ್ ಕಿಂಗ್ಸ್ ತಂಡವನ್ನು ಸೋಲಿಸಬೇಕಾಗುತ್ತದೆ. ಪಿಬಿಕೆಎಸ್ ವಿರುದ್ಧ ಗೆದ್ದರೆ 18 ಅಂಕ ಗಳಿಸಲಿದೆ. ಅತ್ತ ಗುಜರಾತ್ ತಂಡ ಸಿಎಸ್‌ಕೆ ವಿರುದ್ಧ ಸೋತು, ಆರ್‌ಸಿಬಿ ತಂಡ ಮುಂದಿನ ಎರಡೂ ಪಂದ್ಯಗಳ ಸೋತರೆ ಮುಂಬೈ ಅಗ್ರ ಎರಡರೊಳಗೆ ಇರುತ್ತದೆ. ಒಂದು ವೇಳೆ ಪಂಜಾಬ್ ಕಿಂಗ್ಸ್ ವಿರುದ್ಧವೇ ಸೋತರೆ, ಮುಂಬೈ ಇಂಡಿಯನ್ಸ್ ತಂಡ ಎಲಿಮಿನೇಟರ್ ಪಂದ್ಯ ಆಡುವುದನ್ನು ಖಚಿತಪಡಿಸುತ್ತದೆ.

ಜಯರಾಜ್‌ ಅಮಿನ್: ‘ಹಿಂದೂಸ್ತಾನ್ ಟೈಮ್ಸ್ ಕನ್ನಡ’ದಲ್ಲಿ ಸೀನಿಯರ್ ಕಂಟೆಂಟ್‌ ಪ್ರೊಡ್ಯೂಸರ್. ಕ್ರೀಡಾ (ಕ್ರಿಕೆಟ್) ವಿಭಾಗದಲ್ಲಿ ಕಾರ್ಯನಿರ್ವಹಣೆ. ಈಟಿವಿ ಭಾರತ್, ಇನ್‌ಶಾರ್ಟ್ಸ್‌ ವಿವಿಧ ವಿಭಾಗಗಳಲ್ಲಿ ಒಟ್ಟು 6 ವರ್ಷಗಳ ಅನುಭವ. ಕಲೆ, ಸಾಹಿತ್ಯ, ಭೂಗೋಳದ ಬಗ್ಗೆ ಹೆಚ್ಚು ಆಸಕ್ತಿ. ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ ಸಮೀಪದ ಹೊಸಮೊಗ್ರು ನಿವಾಸಿ.

Source link