Karnataka
oi-Punith BU
ಬೆಂಗಳೂರು, ಜುಲೈ 3: ಬೆಲೆ ಏರಿಕೆಯಿಂದ ತತ್ತರಿಸಿರುವ ಜನಸಾಮಾನ್ಯರಿಗೆ ಕಾಂಗ್ರೆಸ್ ಸರ್ಕಾರ ಗ್ಯಾರಂಟಿಗಳನ್ನು ಅನುಷ್ಠಾನಗೊಳಿಸುವ ಮೂಲಕ ಬಡವರಿಗೆ ನೆರವಾಗುತ್ತಿದೆ. ಕುಮಾರಸ್ವಾಮಿ ಅವರು ಸ್ವಲ್ಪ ಇನ್ನೂ ಕಾದು ನೋಡಬೇಕು. ಈಗಲೇ ಕಾಂಗ್ರೆಸ್ ಸರ್ಕಾರವನ್ನು ಟೀಕಿಸುವ ಅಗತ್ಯತೆ ಇಲ್ಲ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ವಿಧಾನಸೌಧದಲ್ಲಿ ಇಂದು ಮಾಧ್ಯಮದವರಿಗೆ ಪ್ರತಿಕ್ರಿಯಿಸಿದ ಸಚಿವರು, ಕುಮಾರಸ್ವಾಮಿ ಅವರ ವೈ.ಎಸ್.ಟಿ ಆರೋಪವನ್ನು ತಳ್ಳಿಹಾಕಿದರು. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಭ್ರಷ್ಟ ಮುಕ್ತ ಆಡಳಿತವನ್ನ ನೀಡಲು ಹೆಚ್ಚು ಗಮನ ಹರಿಸಿದೆ. ಕುಮಾರಸ್ವಾಮಿ ಹೇಳಿದಂತೆ ಯಾವ ವೈಎಸ್.ಟಿ ತೆರಿಗೆ ಕೂಡ ಇಲ್ಲ. ಸರ್ಕಾರದ ಕಾರ್ಯಗಳಿಂದ ಲಾಭ ಪಡೆಯುತ್ತಿರುವ ಜನಸಾಮಾನ್ಯರ ಮನಸಲ್ಲಿ ಕಾಂಗ್ರೆಸ್ ಆಡಳಿತದ ಬಗ್ಗೆ ಉತ್ತಮ ಅಭಿಪ್ರಾಯ ಮೂಡಿದೆ ಎಂದರು.
ಪಾರದರ್ಶಕವಾಗಿ ಗ್ಯಾರಂಟಿಗಳನ್ನು ಸರ್ಕಾರ ಅನುಷ್ಠಾನಕ್ಕೆ ತರುತ್ತಿದೆ. ನೇರವಾಗಿ ದೊಡ್ಡ ಪ್ರಮಾಣದಲ್ಲಿ ಜನರ ಖಾತೆಗೆ ಹಣ ಹಾಕುತ್ತಿದ್ದೇವೆ. ಅದರಲ್ಲಿ ಒಂದು ರೂಪಾಯಿ ಭ್ರಷ್ಟಾಚಾರ ಮಾಡಲು ಸಾಧ್ಯವಿಲ್ಲ. ಹೀಗಿರುವಾಗ ಕುಮಾರಸ್ವಾಮಿ ಅವರಿಗೆ ಸರ್ಕರದ ಮೇಲೆ ಟೀಕೆ ಮಾಡಲು ಬೇರೆ ವಿಷಯಗಳಿಲ್ಲ. ಹೇಗಾದರು ಮಾಡಿ ಟೀಕೆ ಮಾಡಬೇಕು ಅಂತ ಟೀಕೆ ಮಾಡುತ್ತಿದ್ದಾರೆ. ಎಚ್.ಡಿ.ಕೆ ಅವರದ್ದು, ಆಧಾರರಹಿತ ಆರೋಪ ಎಂದು ಗುಂಡೂರಾವ್ ಟೀಕಿಸಿದರು.
ಕರ್ನಾಟಕದ ಅಜಿತ್ ಪವಾರ್ ಯಾರಾಗುತ್ತಾರೆ?: ಎಚ್‌ಡಿ ಕುಮಾರಸ್ವಾಮಿ ನುಡಿದ ಭವಿಷ್ಯವೇನು?
ನಾವು ಸ್ಪಷ್ಟವಾದ ಹೆಜ್ಜೆ ಇಡುತ್ತಿದ್ದೇವೆ. ಒಳ್ಳೆಯ ಆಡಳಿತ ಕೊಡುತ್ತೇವೆ. ಜನರಿಗೆ ಕಾಂಗ್ರೆಸ್ ಸರ್ಕಾರ ಬಂದ ಮೇಲೆ ಸುಧಾರಣೆ ಆಗುತ್ತಿದೆ. ಉತ್ತಮ ವ್ಯವಸ್ಥೆ ನಿರ್ಮಾಣ ಆಗಿದೆ. ಜನಪರ ಆಡಳಿತ ಕೊಡಲು ಆದ್ಯತೆ ನೀಡುತ್ತಿದ್ದೇವೆ. ಕುಮಾರಸ್ವಾಮಿ ತಾಳ್ಮೆಯಿಂದ ಇದ್ದರೆ ಒಳ್ಳೆಯದು. ನಾವು ಯಾವ ರೀತಿ ಕೆಲಸ ಮಾಡಬೇಕು ಎಂದು ಸ್ವಲ್ಪ ದಿನ ಕಾದು ನೋಡಬೇಕು. ಇಷ್ಟು ಬೇಗನೆ ಅವರು ಎಲ್ಲೋ ಒಂದು ಕಡೆ ಮೈ ಪರಚುವ ಕೆಲಸ ಮಾಡಬಾರದು ಎಂದು ಟೀಕಿಸಿದರು.
ಕೊರೊನಾ ವೇಳೆ ಬಿಜೆಪಿ ಅವಧಿಯಲ್ಲಿನ ಭ್ರಷ್ಟಾಚಾರದ ತನಿಖೆ ಬಗ್ಗೆ ಪ್ರತಿಕ್ರಿಯಿಸುತ್ತಾ, ಆ ಸಂಬಂಧ ಸಾಕಷ್ಟು ಮಾಹಿತಿ ಕಲೆ ಹಾಕಿದ್ದೇವೆ. ಯಾವ ರೀತಿ ತನಿಖೆ ಮಾಡಬೇಕು ಎಂಬ ಬಗ್ಗೆ ಪರಿಶೀಲಿಸುತ್ತಿದ್ದೇವೆ. ಸಮಿತಿ ಮಾಡಿ ತನಿಖೆ ಮಾಡಬೇಕಾ ಎಂಬ ಬಗ್ಗೆ ಪರಿಶೀಲನೆ ಮಾಡುತ್ತಿವೆ ಎಂದು ಇದೇ ವೇಳೆ ದಿನೇಶ್ ಗುಂಡೂರಾವ್ ಪ್ರತಿಕ್ರಿಯಿಸಿದರು.
English summary
The Congress government is helping the poor by implementing guarantees for the masses who are reeling from the price hike. Kumaraswamy will have to wait and see. Health Minister Dinesh Gundurao said that there is no need to criticize the Congress government now.
Story first published: Monday, July 3, 2023, 19:07 [IST]