Udupi
oi-Gururaj S
ಉಡುಪಿ, ಜುಲೈ 10; ಪ್ರತಿಯೊಬ್ಬ ವ್ಯಕ್ತಿಗೂ ಜನನ ಮತ್ತು ಮರಣವನ್ನು ದೃಢೀಕರಿಸುವ ದಾಖಲೆ ಅತ್ಯಂತ ಅಗತ್ಯವಾಗಿದೆ. ವಿದ್ಯಾಭ್ಯಾಸ, ಉದ್ಯೋಗ, ವಿಮೆ ಸೇರಿದಂತೆ ಸರ್ಕಾರಿ ಮತ್ತು ಖಾಸಗಿ ವಲಯದಲ್ಲಿಯೂ ಜೀವಂತವಿರುವಾಗಲೂ ಮತ್ತು ಮರಣದ ನಂತರ ಆತನ ಕುಟುಂಬಕ್ಕೂ ಈ ದಾಖಲೆಗಳು ಅವಶ್ಯಕವಾಗಿದೆ. ಇವುಗಳನ್ನು ಪಡೆಯುವುದು ಸರಳ ಪ್ರಕ್ರಿಯೆಯಾಗಿದೆ.
ಕರ್ನಾಟಕದ ಕರಾವಳಿಯ ಉಡುಪಿ ಜಿಲ್ಲೆಯು ಆರೋಗ್ಯ ಕ್ಷೇತ್ರದಲ್ಲಿ ಪ್ರಸಿದ್ಧಿ ಪಡೆದಿದೆ. ಇಲ್ಲಿನ ಮಣಿಪಾಲ ಆಸ್ಪತ್ರೆಗೆ ರಾಜ್ಯದ ವಿವಿಧ ಜಿಲ್ಲೆಗಳು ಸೇರಿದಂತೆ ಹೊರ ರಾಜ್ಯದ ರೋಗಿಗೂ ಸಹ ಚಿಕಿತ್ಸೆಗೆ ಆಗಮಿಸುತ್ತಾರೆ. ಆಸ್ಪತ್ರೆಯಲ್ಲಿ ನೂರಾರು ಮಕ್ಕಳ ಜನನವಾಗುತ್ತದೆ. ರೋಗ ಉಲ್ಬಣಗೊಂಡು ಅಂತಿಮ ಹಂತದಲ್ಲಿ ಆಸ್ಪತ್ರೆಗೆ ದಾಖಲಾಗುವ ರೋಗಿಗಳು ವೈದ್ಯರ ಸತತ ಶ್ರಮದ ನಂತರವೂ ಚಿಕಿತ್ಸೆ ಫಲಕಾರಿಯಾಗದೇ ಮರಣ ಹೊಂದುತ್ತಾರೆ.
ಹೊರ ಜಿಲ್ಲೆ ಮತ್ತು ರಾಜ್ಯದಿಂದ ಆಗಮಿಸಿದ ವ್ಯಕ್ತಿ ಮರಣಹೊಂದಿದ ನಂತರ ವ್ಯಕ್ತಿಯ ಕುಟುಂಬಕ್ಕೆ ಮುಂದಿನ ಚಟುವಟಿಕೆಗಳನ್ನು ಕೈಗೊಳ್ಳಲು ಮರಣ ಪ್ರಮಾಣ ಪತ್ರವು ಅತ್ಯಂತ ಅಗತ್ಯ. ಹಲವು ಸಂದರ್ಭದಲ್ಲಿ ಸಂಬಂಧಿಸಿದ ಸ್ಥಳೀಯರು ಜನನ, ಮರಣ ನೋಂದಣಿ ಪ್ರಾಧಿಕಾರಕ್ಕೆ ಪ್ರಮಾಣ ಪತ್ರ ಕೋರಿ ಅಂದೇ ಅರ್ಜಿ ಸಲ್ಲಿಸಿದರೂ ಸಹ ತಾಂತ್ರಿಕ ಕಾರಣಗಳಿಂದ ಪ್ರಮಾಣಪತ್ರ ಪಡೆಯಲು ಸಾಧ್ಯವಾಗುವುದಿಲ್ಲ ಮತ್ತು ಅದೇ ಉದ್ದೇಶಕ್ಕೆ ವ್ಯಕ್ತಿಯ ಮರಣದ ದು:ಖದ ನಡುವೆ ಉಡುಪಿ ಜಿಲ್ಲೆಗೆ ಪುನ: ಸಾವಿರಾರು ರೂಪಾಯಿಗಳನ್ನು ಖರ್ಚು ಮಾಡಿಕೊಂಡು ಬರಬೇಕಾಗುತ್ತದೆ.
ಅಂಚೆ ಇಲಾಖೆ ಜೊತೆ ಸಹಯೋಗ; ಈ ಸಮಸ್ಯೆಯನ್ನು ಅರ್ಥಮಾಡಿಕೊಂಡ ಉಡುಪಿ ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ. ವಿಶೇಷ ಮುತುವರ್ಜಿ ವಹಿಸಿ ಉಡುಪಿ ನಗರಸಭೆ ಮತ್ತು ಅಂಚೆ ಇಲಾಖೆಯ ಮೂಲಕ, ಉಡುಪಿ ಜಿಲ್ಲೆಯ ಮಣಿಪಾಲ ಸೇರಿದಂತೆ ಯಾವುದೇ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಮರಣ ಹೊಂದಿದ ಮತ್ತು ಜಿಲ್ಲೆಯಲ್ಲಿ ಇತರೇ ಕಾರಣಗಳಿಂದ ಮರಣ ಹೊಂದಿದ ಹೊರ ಜಿಲ್ಲೆ ಮತ್ತು ಹೊರ ರಾಜ್ಯದ ವ್ಯಕ್ತಿಗಳ ಕುಟುಂಬದ ಮನೆ ಬಾಗಲಿಗೆ ಮರಣ ಪ್ರಮಾಣಪತ್ರವನ್ನು ಅಂಚೆ ಮೂಲಕ ತಲುಪಿಸುವ ನಾಗರೀಕ ಸ್ನೇಹಿ ವಿಶಿಷ್ಠ ವ್ಯವಸ್ಥೆಯನ್ನು ಜಾರಿಗೊಳಿಸಿದ್ದಾರೆ.
ಮೃತಪಟ್ಟ ವ್ಯಕ್ತಿಯ ಕುಟುಂಬದವರು ಮರಣಪ್ರಮಾಣ ಪತ್ರ ಕೋರಿ ಸಂಬಂದಿಸಿದ ದಾಖಲೆಗಳೊಂದಿಗೆ ಅರ್ಜಿ ನಮೂನೆಯಲ್ಲಿ ಅಂಚೆ ಮೂಲಕ ಕಳುಹಿಸುವ ವ್ಯವಸ್ಥೆಯನ್ನು ಆಯ್ಕೆ ಮಾಡಿಕೊಂಡಲ್ಲಿ ಇದಕ್ಕಾಗಿ ನಿಗದಿಪಡಿಸಿರುವ ಶುಲ್ಕ ರೂ. 80 ಅನ್ನು ಪಾವತಿ ಮಾಡಬೇಕು. ಕರ್ನಾಟಕ ರಾಜ್ಯ ಸೇರಿದಂತೆ ದೇಶದ ಯಾವುದೇ ಮೂಲೆಯಲ್ಲಿರುವ ಮೃತರ ಕುಟುಂಬಕ್ಕೆ ಸ್ಪೀಡ್ ಪೋಸ್ಟ್ ಮೂಲಕ ಪ್ರಮಾಣಪತ್ರವನ್ನು ತಲುಪಿಸಲಾಗುತ್ತದೆ.
ಈ ವ್ಯವಸ್ಥೆ ಕುರಿತು ಉಡುಪಿ ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ. ಮಾತನಾಡಿ, “ಜಿಲ್ಲೆಗೆ ವೈದ್ಯಕೀಯ ಚಿಕಿತ್ಸೆ ಉದ್ಯೋಗ ಸೇರಿದಂತೆ ಹಲವು ಕಾರಣಗಳಿಗೆ ಸಾವಿರಾರು ಮಂದಿ ವಲಸಿಗರು ಆಗಮಿಸುತ್ತಿದ್ದು ವಿವಿಧ ಕಾರಣಗಳಿಂದ ಮೃತಪಟ್ಟ ವ್ಯಕ್ತಿಗಳ ಮರಣಪ್ರಮಾಣಪತ್ರ ಸಕಾಲದಲ್ಲಿ ಪಡೆಯಲು ತೊಂದರೆಯಾಗುತ್ತಿದ್ದ ಕಾರಣ ನಗರಸಭೆ ಮತ್ತು ಅಂಚೆ ಇಲಾಖೆ ಮೂಲಕ ಮನೆ ಬಾಗಿಲಿಗೆ ತಲುಪಿಸುವ ವ್ಯವಸ್ಥೆ ಮಾಡಿದ್ದು, ಕಳೆದ 10 ದಿನದಲ್ಲಿ 100ಕ್ಕೂ ಅಧಿಕ ಜನನ ಮತ್ತು ಮರಣ ಪ್ರಮಾಣ ಪತ್ರಗಳನ್ನು ಸಂಬಂಧಿಸಿದವರಿಗೆ ಯಶಸ್ವಿಯಾಗಿ ಅವರ ಮನೆ ಬಾಗಿಲಿಗೆ ತಲುಪಿಸಲಾಗಿದೆ. ಜಿಲ್ಲೆಯ ಎಲ್ಲಾ ನಗರ ಸ್ಥಳೀಯ ಸಂಸ್ಥೆಗಳಲ್ಲೂ ಇದನ್ನು ಅಳವಡಿಸಿಕೊಳ್ಳುವಂತೆ ಸೂಚನೆ ನೀಡಲಾಗಿದೆ” ಎಂದು ಹೇಳಿದ್ದಾರೆ.
ಜಿಲ್ಲಾಧಿಕಾರಿಗಳ ನಿರ್ದೇಶನದ ಮೇರೆಗೆ ಉಡುಪಿ ನಗರದ ಸ್ಥಳೀಯ ಜನನ ಮರಣ ನೋಂದಣಿ ಪ್ರಾಧಿಕಾರವಾದ ಉಡುಪಿ ನಗರಸಭೆ ಮತ್ತು ಅಂಚೆ ಇಲಾಖೆಗಳು ಈ ಸೇವೆ ಒದಗಿಸಲು ಪರಸ್ಪರ ಒಪ್ಪಂದ ಮಾಡಿಕೊಂಡಿವೆ.
ನಗರಸಭೆಯಿಂದ ದಾಖಲೆಗಳನ್ನು ಸಂಗ್ರಹಿಸಲು ಅಂಚೆ ಇಲಾಖೆಯಿಂದ ಇದಕ್ಕಾಗಿಯೇ ಪ್ರತ್ಯೇಕ ಸಿಬ್ಬಂದಿ ನಿಯೋಜಿಸಲಾಗಿದೆ. ಈ ಮೂಲಕ ಮೃತ ವ್ಯಕ್ತಿಯ ಕುಟುಂಬದವರು ನೋವಿನ ನಡುವೆ ದಾಖಲೆಗಾಗಿ ಕಚೇರಿಗೆ ಅಲೆದಾಡದೇ ಮನೆ ಬಾಗಿಲಿನಲ್ಲಿಯೇ ಸೇವೆ ಪಡೆಯಲು ಅವಕಾಶ ಕಲ್ಪಿಸಲಾಗಿದೆ.
English summary
Udupi district administration will send birth and death certificate to home through speed post. New service started in the direction of deputy commissioner M. Kurma Rao.
Story first published: Monday, July 10, 2023, 16:19 [IST]