Bengaluru
oi-Shankrappa Parangi
ಬೆಂಗಳೂರು, ಜುಲೈ 10: ವರ್ಗಾವಣೆಗೆ ಶಾಸಕರ ಭವನ, ಕುಮಾರಕೃಪಾ ಸುತ್ತಮುತ್ತ ಜನಜಂಗುಳಿ, ಹಪ್ತಾ ವಸೂಲಿಗೆ ಮೇಲಾಧಿಕಾರಿಗಳಿಂದ ಒತ್ತಡ ಹೆಚ್ಚಾಗಿ ಪೇದೆ ಆತ್ಮಹತ್ಯೆಗೆ ಯತ್ನ ಮಾಡಿದ್ದಾರೆ ಎಂದು ರಾಜ್ಯ ಸರ್ಕಾರದ ವಿರುದ್ಧ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಆರೋಪಿಸಿದರು. ಪರಿಯನ್ನು ಮಾಜಿ ಬಸವರಾಜ ಬೊಮ್ಮಾಯಿ ಬಿಚ್ಚಿಟ್ಟ ಪರಿ ಇದು.
ರಾಜ್ಯಪಾಲರ ಭಾಷಣದ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಭ್ರಷ್ಟಾಚಾರ ನಿಯಂತ್ರಣಕ್ಕೆ ಲೋಕಾಯುಕ್ತ ಇರುವಾಗ ಅದನ್ನು ನಿಷ್ಕ್ರೀಯಗೊಳಿಸಿ ಎಸಿಬಿ ರಚನೆ ಮಾಡಿದ್ದರು. ಭ್ರಷ್ಟಾಚಾರ ಪ್ರಕರಣಗಳ ತನಿಖೆ ನಡೆಸಬೇಕೆಂದರೆ 2013 ರಿಂದ 2023 ರ ವರೆಗಿನ ಎಲ್ಲ ಪ್ರಕರಣಗಳ ತನಿಖೆ ನಡೆಸಿ ಎಂದು ಅವರು ಒತ್ತಾಯಿಸಿದರು.
ಭ್ರಷ್ಟಾಚಾರ ನಿಯಂತ್ರಣ ಮಾಡಲು 2013 ರಿಂದ 2023 ರ ವರೆಗಿನ ಎಲ್ಲ ಪ್ರಕರಣಗಳ ತನಿಖೆ ನಡೆಸಿ, ಈ ಸಮಯದಲ್ಲಿ ನಡೆದ ಹಗರಣಗಳ ಬಗ್ಗೆ ಯಾರೇ ದೂರು ಕೊಟ್ಟರೂ ತನಿಖೆ ನಡೆಸಿ. ಹಲವಾರು ಸಂದರ್ಭದಲ್ಲಿ ನ್ಯಾಯಾಂಗ ಆಯೋಗದ ತನಿಖೆಗಳನ್ನು ನೋಡಿದ್ದೇವೆ. ಮುಕ್ತವಾದ ಸತ್ಯ ಹೊರಬೇಕೆಂದರೆ ನಮ್ಮ ಕಾಲದ ನಿಮ್ಮ ಕಾಲದ ಎರಡೂ ಹಗರಣ ಹೊರ ಬರಲಿ ಎಂದರು.
ಅಧಿಕಾರಿ, ಸಿಬ್ಬಂದಿ ಮೇಲೆ ಹಪ್ತಾ ವಸೂಲಿಗೆ ಒತ್ತಡ
ಅಧಿಕಾರಿಗಳ ಮೇಲೆ, ಕಾನ್ ಸ್ಟೇಬಲ್ ಗಳ ಮೇಲೆ ಒತ್ತಡ ಹೇರಿ ಹಪ್ತಾ ವಸೂಲಿ ಮಾಡಲಾಗುತ್ತಿದೆ. ಬೀದರ್ ನಲ್ಲಿ ಒಬ್ಬ ಏಜೆಂಟ್ ಹಪ್ತಾ ವಸೂಲಿ ಮಾಡಲಿಕ್ಕೆ ಇಟ್ಟುಕೊಂಡಿದ್ದಾರೆ. ಅವನು ಹಪ್ತಾ ವಸೂಲಿ ಮಾಡಿದರೂ ಮತ್ತೆ ಗಾಡಿ ನಿಲ್ಲಿಸಿ ಮತ್ತೆ ಹಪ್ತಾ ವಸೂಲಿ ಮಾಡುವಂತೆ ಕೊರವಿ ಎನ್ನುವ ಇನ್ಸ್ ಪೆಕ್ಟರ್ ಒತ್ತಡ ಹೇರಿದ್ದಾರೆಂದು ದೂರು ನೀಡಿದ್ದು, ಎಫ್‌ಐಆರ್ ಸಹ ದಾಖಲಾಗಿದೆ.
ಕಲಬುರ್ಗಿಯಲ್ಲಿ ಹಿರಿಯ ಅಧಿಕಾರಿಗಳು ಹಪ್ತಾ ವಸೂಲಿ ಮಾಡುವಂತೆ ಒತ್ತಡ ಹೇರಿದ್ದಕ್ಕೆ ಕಾನ್ ಸ್ಟೇಬಲ್ ಆತ್ಮಹತ್ಯೆಗೆ ಯತ್ನ ಮಾಡಿದ್ದಾರೆ. ಯಾವ ಅಧಿಕಾರಿ ಒತ್ತಡ ಹೇರಿದ್ದರು ಅಂತ ಅವರ ಹೆಸರು ಕೂಡ ಪೇದೆ ಹೇಳಿದ್ದಾರೆ. ಅವರ ಮೇಲೆ ಒತ್ತಡ ತಂದು ಹೇಳಿಕೆ ತಿರುಚುವ ಪ್ರಯತ್ನ ಕೂಡ ಮಾಡಲಾಗಿದೆ ಎಂದು ಆರೋಪಿಸಿದರು.
ವರ್ಗಾವಣೆ ದಂಧೆ-ಕಾರ್ಮಿಕರನ್ನು ಕಾಯಂ
ವರ್ಗಾವಣೆ ದಂಧೆ ಅವ್ಯಾಹತವಾಗಿ ನಡೆಯುತ್ತಿದೆ. ಶಾಸಕರ ಭವನ, ಕುಮಾರಕೃಪಾ ಗೆಸ್ಟ್ ಹೌಸ್ ನಲ್ಲಿ ಜನ ತುಂಬಿಕೊಂಡಿದ್ದಾರೆ. ಇವರಿಂದ ಸ್ವಚ್ಚ ಆಡಳಿತ ನಿರೀಕ್ಷಿಸಲಾಗುತ್ತದೆಯೇ?. ವಿಧಾನಸೌಧದ ಸುತ್ತ ಜನವೋ ಜನ ತುಂಬಿ ತುಳುಕುತ್ತಿದೆ. ಎಲ್ಲರೂ ಫುಲ್ ಬಿಜಿಯಾಗಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಇನ್ನೂ ಪೌರ ಕಾರ್ಮಿಕರನ್ನು ಕಾಯಂ ಮಾಡುವ ಕೆಲಸ ನಮ್ಮ ಅವಧಿಯಲ್ಲಿ ಆರಂಭವಾಗಿತ್ತು. 43 ಸಾವಿರ ಪೌರ ಕಾರ್ಮಿಕರನ್ನು ನಾವು ಗುರುತಿಸಿದ್ದೇವೆ. ರಾಜ್ಯದ ಎಲ್ಲ ನಗರಗಳ ಪೌರ ಕಾರ್ಮಿಕರನ್ನು ಕಾಯಂಗೊಳಿಸಿ ಎಂದು ಬೊಮ್ಮಾಯಿ ಸಲಹೆ ನೀಡಿದರು.
ಕರ್ನಾಟಕದಲ್ಲಿ ಅಸಮಾನತೆ ಕೂಗು
ಈ ಸರ್ಕಾರ ಪ್ರಾದೇಶಿಕ ಅಸಮಾನತೆ ನಿವಾರಣೆಗೆ ಯಾವುದೇ ಆದ್ಯತೆ ನೀಡಿಲ್ಲ. ನಾವು ಕಲ್ಯಾಣ ಕರ್ನಾಟಕ ಮಂಡಳಿಗೆ 5 ಸಾವಿರ ಕೋಟಿ ಮೀಸಲಿಟ್ಟಿದ್ದೇವು ಅದನ್ನು ಮುಂದುವರೆಸಿರುವುದು ಸ್ವಾಗತ. ಕಿತ್ತೂರು ಕರ್ನಾಟಕ ಅಭಿವೃದ್ಧಿ ಗೆ ಮಂಡಳಿ ಮಾಡಿದ್ದೇವು. ಸರ್ಕಾರ ಬೋರ್ಡ್ ರಚನೆ ಮಾಡಬೇಕು ಇಲ್ಲದಿದ್ದರೆ ಹತ್ತರ ಕರ್ನಾಟಕ ಅಸಮಾನತೆ ಕೂಗು ಕೇಳಿ ಬರುತ್ತದೆ ಎಂದು ಹೇಳಿದರು.
ಜಲ ಜೀವನ್ ಮಿಷನ್ ಅಡಿಯಲ್ಲಿ ನಾವು ಕಳೆದ ಮೂರು ವರ್ಷದಲ್ಲಿ ಮನೆ ಮನೆಗೆ ನೀರು ಕೊಡುವ ಕೆಲಸ ಮಾಡಿದ್ದೇವೆ.
ಬಡವರಿಗೆ ಗ್ಯಾರೆಂಟಿ ಕೊಡುವುದಾಗಿ ಒಂದು ಕಡೆ ಹೇಳಿ ಇನ್ನೊಂದು ಕಡೆ ವಿದ್ಯುತ್, ಅಬಕಾರಿ ದರ ಹೆಚ್ಚಳ ಮಾಡಿ ಜನರ ಮೇಲೆ ಭಾರ ಹಾಕುತ್ತಿದ್ದಾರೆ. ಸುಮ್ಮನೇ ಕೇಂದ್ರ ಸರ್ಕಾರದ ಮೇಲೆ ಗೂಬೆ ಕೂರಿಸುವ ಕೆಲಸ ಮಾಡಿದ್ದಾರೆ. ಕೇಂದ್ರದಿಂದ ಫಲಾನುಭವಿಗಳಿಗೆ ಬರುವ ನೇರ ನಗದು ಯೋಜನೆ ರಾಜ್ಯ ಸರ್ಕಾರದ ಲೆಕ್ಕಕ್ಕೆ ಬರುವುದಿಲ್ಲ. ನಾವು ಸಾಲ ಮಾಡಿದ್ದರೂ, ಫಿಸಿಕಲ್ ರಿಸ್ಪಾನ್ಸಿಬಿಲಿಟಿ ಆ್ಯಕ್ಟ್ ವ್ಯಾಪ್ತಿಯ ಒಳಗೆ ಮಾಡಿದ್ದೇವು ಎಂದು ವಿವರಿಸಿದರು.
English summary
There is a transfer racket going on in the state government, pressure is being put on the police to collect hafta
Story first published: Monday, July 10, 2023, 20:28 [IST]