ಈ ಸರಕಾರ ಡಿಸೆಂಬರ್‌ ನಲ್ಲಿ ಬಿದ್ದು ಹೋಗಲಿದೆ: ನಳಿನ್‍ಕುಮಾರ್ ಕಟೀಲ್‌ | The Congress Government Will Fall In December Says Nalin Kumar Kateel

Karnataka

oi-Reshma P

|

Google Oneindia Kannada News

ಬೆಂಗಳೂರು, ಜೂನ್‌ 19: ಸಿದ್ರಾಮಣ್ಣ ಮತ್ತು ಡಿ.ಕೆ.ಶಿವಕುಮಾರ್ ಅವರು ಕಾಂಗ್ರೆಸ್ 10 ಕೆಜಿ ಅಕ್ಕಿ ಕೊಡುತ್ತದೆ ಎಂದಿದ್ದರು. ಅದನ್ನು ಕೊಡಲಿ. ಈ ಸರಕಾರ ಡಿಸೆಂಬರ್‌ ನಲ್ಲಿ ಬಿದ್ದು ಹೋಗಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‍ಕುಮಾರ್ ಕಟೀಲ್‌ ಹೇಳಿದರು.

ಈ ಕುರಿತು ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ಅವರು, ಹಿಂದೆ ಸಿದ್ರಾಮಣ್ಣನ ಸರಕಾರ ಇದ್ದಾಗ ಕೇಂದ್ರದಿಂದ ಅಕ್ಕಿ ಪಡೆದು ಅದನ್ನು ತಮ್ಮ ಫೋಟೊ ಹಾಕಿ ಜನರಿಗೆ ನೀಡುತ್ತಿದ್ದರು. ಕೋವಿಡ್ ಅವಧಿಯಲ್ಲಿ ನಾವು ಅಕ್ಕಿ ನೀಡಿದ್ದೇವೆ ಎಂದು ಸವಾಲೆಸೆದರು.

The Congress Government Will Fall In December Says Nalin Kumar Kateel

ವಿದ್ಯುತ್ ಬಿಲ್‍ನಲ್ಲಿ ವಂಚನೆ ಮಾಡಲಾಗುತ್ತಿದೆ. ಈಗಾಗಲೇ ರಾಜ್ಯದ ಕೈಗಾರಿಕಾ ವಾಣಿಜ್ಯ ಮಂಡಳಿ ಕಾಸಿಯಾವು ಹೋರಾಟ, ಬಂದ್‍ಗೆ ಕರೆ ಕೊಟ್ಟಿದೆ. ಕಳೆದ 15- 20 ದಿನಗಳಿಂದ ರಾಜ್ಯದ ಜನರ ಬಾಯಲ್ಲಿ ವಿದ್ಯುತ್ ಬಿಲ್ ಕುರಿತು ಚರ್ಚೆಗಳು ನಡೆಯುತ್ತಿವೆ. ಸಾಮಾನ್ಯ ಜನರಿಗೂ 2 ಸಾವಿರದ ಬದಲು 6ರಿಂದ 8 ಸಾವಿರದ ಬಿಲ್ ಬರುತ್ತಿದೆ. 20 ಸಾವಿರ ಬಿಲ್ ಬರುವ ಉದ್ಯಮಿಗೆ 1 ಲಕ್ಷದ ಬಿಲ್ ಬಂದಿದೆ. ಕೆಲವೆಡೆ 7ರಿಂದ 8 ಲಕ್ಷದ ಬಿಲ್ ವಿಧಿಸಿದ್ದಾರೆ ಎಂದು ಆಕ್ಷೇಪ ವ್ಯಕ್ತಪಡಿಸಿದರು.

ರಾಜ್ಯದ ಕಾಂಗ್ರೆಸ್ ಸರಕಾರವು ತನ್ನ ಹಠಮಾರಿ ಧೋರಣೆಯನ್ನು ಕೈಬಿಡಬೇಕು. ಈ ರಾಜ್ಯದಲ್ಲಿ ಉದ್ಯಮಿಗಳಿಗೆ ಅವಕಾಶಗಳನ್ನು ಕೊಡಿ. ಅವರ ಸಮಸ್ಯೆಗಳನ್ನು ಆಲಿಸಿ ನ್ಯಾಯ ಕೊಡಬೇಕೆಂದು ಆಗ್ರಹಿಸಿದರು. ಕಳೆದೊಂದು ತಿಂಗಳಿನಿಂದ ಜನಸಾಮಾನ್ಯರ ಮೇಲೆ ಸೇರಿದಂತೆ ಎಲ್ಲ ವರ್ಗದವರ ಮೇಲೆ ಬೇರೆಬೇರೆ ಆಘಾತಗಳನ್ನು ನೀಡುವ ಕೆಲಸವನ್ನು ರಾಜ್ಯ ಸರಕಾರ ಮಾಡಿದೆ. ಹಾಲಿನ ಬೆಂಬಲ ಬೆಲೆಯನ್ನು 1.50 ರೂ. ಕಡಿಮೆ ಮಾಡಿದ್ದಾರೆ. ಕರೆಂಟ್ ಬಿಲ್ ಹೆಚ್ಚಾಗಿದೆ. ಹೀಗಾಗಿ ರೈತರಿಗೂ, ಜನಸಾಮಾನ್ಯರಿಗೂ ಆಘಾತ ಉಂಟಾಗಿದೆ.

ಬಿಜೆಪಿ ಸರಕಾರ ಇದ್ದಾಗ ಎಸ್‍ಸಿ, ಎಸ್‍ಟಿ ಸಮುದಾಯಕ್ಕೆ 75 ಯೂನಿಟ್ ಉಚಿತ ವಿದ್ಯುತ್ ಕೊಡಲಾಗಿತ್ತು. ಆದರೆ, ದರ ಏರಿಸಿರಲಿಲ್ಲ; ಕರ್ನಾಟಕದಲ್ಲಿ ಬಿಜೆಪಿ ಸರಕಾರ ಇದ್ದಾಗ ವಿದ್ಯುತ್ ಸರಬರಾಜಿನ ಸಮಸ್ಯೆ ಇರಲಿಲ್ಲ. ಈಗ ವಿದ್ಯುತ್ ಪೂರೈಕೆಯೂ ಸರಿಯಾಗಿಲ್ಲ. ಒಂದೆಡೆ ಮಳೆ ಇಲ್ಲ. ಇನ್ನೊಂದೆಡೆ ಗದ್ದೆ, ತೋಟಕ್ಕೆ ನೀರು ಹಾಯಿಸಲು ಕರೆಂಟಿಲ್ಲ ಎಂಬ ಸ್ಥಿತಿ ಬಂದಿದೆ ಎಂದು ಟೀಕಿಸಿದರು.

ನಾವು ಅನುಷ್ಠಾನಕ್ಕೆ ತಂದ ಮತಾಂತರ ನಿಷೇಧ ಕಾಯ್ದೆ, ಗೋಹತ್ಯಾ ನಿಷೇಧ ಕಾಯ್ದೆ ಹಿಂದಕ್ಕೆ ಪಡೆಯುವ ಕಾಂಗ್ರೆಸ್ ಸರಕಾರಕ್ಕೆ ವಿದ್ಯುತ್ ದರ ಏರಿಕೆ ಹಿಂದಕ್ಕೆ ಪಡೆಯಲಾಗುವುದಿಲ್ಲವೇ ಎಂದು ಅವರು ಪ್ರಶ್ನೆಯನ್ನು ಮುಂದಿಟ್ಟರು. ಪಠ್ಯದಲ್ಲಿ ಪಾಠ ಬದಲಾವಣೆ ಮಾಡುವ ಸಿದ್ರಾಮಣ್ಣನ ಸರಕಾರಕ್ಕೆ ಇದನ್ನು ಮಾಡಲಾಗುವುದಿಲ್ಲವೇ? ಎಂದು ಕೇಳಿದರು.

ಅಕ್ಕಿ ವಿಚಾರದಲ್ಲೂ ಸಿದ್ರಾಮಣ್ಣ, ಡಿ.ಕೆ.ಶಿವಕುಮಾರ್ 10 ಕೆಜಿ ಕೊಡುವುದಾಗಿ ಸುಳ್ಳು ಹೇಳಿದ್ದಾರೆ. ಅದರಲ್ಲಿ 5 ಕೆಜಿ ಕೇಂದ್ರದ್ದು ಎಂದು ಜನರಿಗೂ ಗೊತ್ತಾಗಲಿ. ಕಾಂಗ್ರೆಸ್ಸಿಗರು ಪ್ರತಿಭಟನೆ ಜೋರಾಗಿ ಮಾಡಿದರೆ ವಿಷಯ ಜನರಿಗೂ ತಿಳಿಯುತ್ತದೆ. ರಾಜ್ಯದಲ್ಲಿ ವಿದ್ಯುತ್ ದರ ತೀವ್ರ ಹೆಚ್ಚಳದ ವಿರುದ್ಧ ಉದ್ಯಮಿಗಳ (ಕಾಸಿಯಾ) ಹೋರಾಟಕ್ಕೆ ಬಿಜೆಪಿ ನೈತಿಕ ಬೆಂಬಲ ಕೊಡಲಿದೆ ಎಂದು ತಿಳಿಸಿದರು.

ವಿಪಕ್ಷ ನಾಯಕನ ಆಯ್ಕೆ ವಿಚಾರವಾಗಿ ಮಾತನಾಡಿ, ಅಧಿವೇಶನ ಆರಂಭವಾಗುವ ವೇಳೆಗೆ ವಿಪಕ್ಷ ನಾಯಕನ ಆಯ್ಕೆ ಮಾಡುತ್ತೇವೆ ಎಂದ ಅವರು, ಸರಕಾರ ನಡೆಸಲು ಮುಖ್ಯಮಂತ್ರಿ ಬೇಕಿತ್ತು. ಮುಖ್ಯಮಂತ್ರಿ ಆಯ್ಕೆಗೆ ಅವರು ನಾಲ್ಕು ದಿನ ತೆಗೆದುಕೊಂಡರಲ್ಲವೇ ಎಂದರು.

ಮುಂದಿನ ಹೋರಾಟದ ರೂಪುರೇಷೆಗಳನ್ನು ಇಂದಿನ ಸಭೆಯಲ್ಲಿ ನಿರ್ಧರಿಸಲಾಗುತ್ತದೆ. ಕಾಂಗ್ರೆಸ್ಸಿನ ಸರಕಾರದ ಅಭಿವೃದ್ಧಿ ಕಾರ್ಯಗಳಿಗೆ ನಮ್ಮ ಸಹಕಾರ ಇದೆ ಎಂದ ಅವರು, 22ರಿಂದ ಪಕ್ಷದ ನಾಯಕರ ಜಿಲ್ಲಾ ಪ್ರವಾಸ ಆರಂಭವಾಗಲಿದೆ. ಅದರಲ್ಲಿ ನಮ್ಮ ಕೇಂದ್ರ ಸರಕಾರದ 9 ವರ್ಷಗಳ ಅವಧಿಯ ಅಭಿವೃದ್ಧಿ, ಸಾಧನೆಗಳನ್ನು ತಿಳಿಸುತ್ತೇವೆ ಎಂದರು.

English summary

Nalin Kumar Kateel said that The Congress Government Will Fall In December,

Story first published: Monday, June 19, 2023, 17:17 [IST]

Source link